ETV Bharat / state

ಗೋಹತ್ಯೆ, ಮತಾಂತರ ನಿಷೇಧ ಬಿಲ್ ಮರು ಪರಿಶೀಲನೆ, ಶಾಂತಿ ಕದಡುವ ಸಂಘಟನೆಗಳ ವಿರುದ್ಧ ಕ್ರಮ: ಪ್ರಿಯಾಂಕ್ ಖರ್ಗೆ

author img

By

Published : May 24, 2023, 5:37 PM IST

ಬಿಜೆಪಿ ಸರ್ಕಾರ ಜಾರಿಗೆ ತಂದ ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
Priyank Kharge
Priyank Kharge

ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಹಿಂದಿನ ಸರ್ಕಾರ ಜಾರಿಗೆ ತಂದಿರುವ ಎಲ್ಲ ವಿಧೇಯಕಗಳನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಲಾಗುತ್ತದೆ, ಕೋಮು ಸಾಮರಸ್ಯ ಕದಡುವ ಕೆಲಸವನ್ನು ಯಾವುದೇ ಸಮುದಾಯಕ್ಕೆ ಸೇರಿದ ಸಂಘಟನೆಗಳು ಮಾಡಿದರೂ ಅವನ್ನು ನಿಯಂತ್ರಣ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಮರು ಜಾರಿ ವಿಚಾರದಲ್ಲಿ ನನಗೆ ಮಾಹಿತಿ ಇಲ್ಲ. ಹಿಂದಿನ ಸರ್ಕಾರ ಯಾವ ಜಯಂತಿ ಮಾಡಬೇಕು ಬೇಡ ಎನ್ನುವುದನ್ನು ತಂದಿದ್ದಾರೆ ಎಂಬುದನ್ನು ನೋಡಬೇಕು. ಅಷ್ಟು ಮಾತ್ರವಲ್ಲ ಪಠ್ಯಪುಸ್ತಕ, ಗೋಹತ್ಯೆ, ಮತಾಂತರ ಬಿಲ್​ಗಳನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡುತ್ತೇವೆ. ಯಾವ ಯಾವ ಬಿಲ್​ನಿಂದ ಕನ್ನಡಿಗರಿಗೆ ತೊಂದರೆಯಾಗುತ್ತದೆಯೋ ಅದನ್ನು ವಾಪಸ್ ಪಡೆದು, ಮತ್ತೊಮ್ಮೆ ರಾಜ್ಯವನ್ನು ನಂಬರ್ ಒನ್ ಮಾಡುತ್ತೇವೆ ಎಂದರು.

ಕೆಲ ಹಿಂದೂಪರ ಸಂಘಟನೆಗಳು ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದು, ರಾಜ್ಯದಲ್ಲಿ ಇಸ್ಲಾಮಿಕ್ ಸರ್ಕಾರವಿದೆ ಎಂದು ಟೀಕಿಸಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ಯಾವುದೇ ಸಂಘಟನೆ ಕೋಮು ವಿಷಬೀಜ ಬಿತ್ತುವ ವಿಚಾರ ಹರಡಿದರೆ, ಶಾಂತಿ ಕದಡುವ ಪ್ರಯತ್ನ ಮಾಡಿದರೆ ಅವರನ್ನು ಯಾವುದೇ ಸಮುದಾಯಕ್ಕೆ ಸೇರಿದ್ದರೂ ನಿಯಂತ್ರಣ ಮಾಡುವ ಕೆಲಸವನ್ನು ಮಾಡುತ್ತೇವೆ. ಇದೇ ರೀತಿ ಸಾಮಾಜಿಕ ಜಾಲತಾಣ ದುರುಪಯೋಗಪಡಿಸಿಕೊಂಡು ಬಿಜೆಪಿ ಸರ್ಕಾರ ಮತ್ತು ಅವರ ಸಂಘಟನೆಗಳು ರಾಜ್ಯವನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿವೆ, ಪ್ರಚೋದನಾಕಾರಿ ಭಾಷಣ ಮಾಡುವುದು, ಸಂವಿಧಾನವನ್ನು ಗಾಳಿಗೆ ತೂರುವುದು, ಬಸವ ತತ್ವದ ಬಗ್ಗೆ ಹಗುರವಾಗಿ ಮಾತನಾಡುವುದು ಸೇರಿದಂತೆ ನಮ್ಮ ಪ್ರಗತಿಗೆ ವಿರುದ್ಧವಾದ ಎಲ್ಲದಕ್ಕೂ ನಾವು ಕಡಿವಾಣ ಹಾಕುತ್ತೇವೆ ಎಂದು ನೇರವಾಗಿ ಸಂಘ ಪರಿವಾರ ಮತ್ತು ಹಿಂದೂಪರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಎಚ್ಚರಿಕೆ ನೀಡಿದರು.

ಪೊಲೀಸರು ಸಂಘದ ಕಚೇರಿಯಲ್ಲಿ ಕೆಲಸ ಮಾಡ್ತಾರಾ?: ಬಿಜೆಪಿ ಸರ್ಕಾರದಲ್ಲಿ ಕೇಸರೀಕರಣ ಯಾವ ಮಟ್ಟಕ್ಕೆ ಹೋಗಿ ಮುಟ್ಟಿತ್ತು ಎಂದರೆ ಖಾಕಿ ಹಾಕಿಕೊಳ್ಳಬೇಕಾದ ಪೊಲೀಸರು ಕೇಸರಿ ಶಾಲು ಹಾಕಿಕೊಂಡು ಫೋಟೋ ತೆಗೆಸಿಕೊಂಡಿದ್ದರು. ಸಂವಿಧಾನದ ಪ್ರಕಾರ ಅವರು ಇದನ್ನು ಮಾಡಬಹುದಾ? ಹಾಗಾದರೆ ಖಾಕಿ ಯಾಕೆ ಇರಬೇಕು? ಕಾನೂನು ಯಾಕೆ ಇರಬೇಕು? ಇವರೆಲ್ಲಾ ಏನು ಆರ್​ಎಸ್​ಎಸ್​ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರಾ? ಅಥವಾ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದರಾ? ಅದಕ್ಕಾಗಿ ನಿನ್ನೆ ಸಭೆಯಲ್ಲಿ ನಮ್ಮ ಡಿಸಿಎಂ ಸ್ಪಷ್ಟವಾಗಿ ಪೊಲೀಸರಿಗೆ ತಾಕೀತು ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಇರುವವರ ರಾಜಕೀಯ ಹಿತಾಸಕ್ತಿ ಯಾವುದೇ ಇರಬಹುದು. ಆ ಬಣ್ಣವನ್ನು ನೀವು ಮತದಲ್ಲಿ ತೋರಿಸಿ. ಆದರೆ, ಕರ್ತವ್ಯ ಸಂವಿಧಾನದ ಪರವಾಗಿ ಮಾಡಿ, ಕಾನೂನು ಪ್ರಕಾರ ಮಾಡಿ ಎಂದು ಪೊಲೀಸ್ ಇಲಾಖೆಗೆ ತಾಕೀತು ಮಾಡಿರುವ ಡಿಸಿಎಂ ಡಿ ಕೆ ಶಿವಕುಮಾರ್ ನಡೆಯನ್ನು ಸಚಿವ ಖರ್ಗೆ ಸಮರ್ಥಿಸಿಕೊಂಡರು.

ಈಗ ಪೊಲೀಸ್ ಇಲಾಖೆಯನ್ನು ಕಾಂಗ್ರೆಸ್ಸೀಕರಣ ಮಾಡಲಾಗುತ್ತಿದೆ ಎನ್ನುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ? ಕಾಂಗ್ರೆಸ್ಸೀಕರಣ ಎಂದರೆ ಬಸವತತ್ವ, ಗುರುನಾರಾಯಣ ತತ್ವ, ಸಂವಿಧಾನ ಅನುಷ್ಠಾನಕ್ಕೆ ತರುವವರು ಎಂದರ್ಥ. ಇದನ್ನು ವಿರೋಧಿಸುತ್ತಿರುವವರನ್ನು ನೋಡಿದರೆ ಸಂವಿಧಾನ ಅನುಷ್ಠಾನಕ್ಕೆ ತರಬಾರದಾ? ಎನ್ನುವ ಅನುಮಾನ ಮೂಡುತ್ತಿದೆ. ಆರಗ ಜ್ಞಾನೇಂದ್ರ ಗೃಹ ಸಚಿವರಿದ್ದಾಗ ಕಾನೂನು ಸುವ್ಯವಸ್ಥೆ ಯಾವ ಮಟ್ಟಕ್ಕೆ ಕುಸಿದಿತ್ತು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು, ಜನರು ಇಂದು ತೀರ್ಮಾನ ಕೊಟ್ಟಿದ್ದಾರೆ. ಬಿಜೆಪಿಯವರು ಇವತ್ತು ಪ್ರತಿಪಕ್ಷದಲ್ಲಿ ಕೂತಿದ್ದಾರೆ. ಜನ ಅವರನ್ನು ಯಾಕೆ ಪ್ರತಿಪಕ್ಷದಲ್ಲಿ ಕೂರಿಸಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಡಳಿತ ಹೇಗೆ ನಡೆಸುವುದು, ಏನು ಮಾಡಬೇಕು ಎನ್ನುವುದು ನಮಗೆ ಗೊತ್ತಿದೆ. ನಾವೇನಿದ್ದರೂ ಕಾನೂನು ಚೌಕಟ್ಟಿನಲ್ಲೇ ಮಾಡುತ್ತೇವೆ, ನಿಮ್ಮ ರೀತಿ ನಾವು ನಾಗಪುರದಿಂದ ಸಲಹೆ ಪಡೆದುಕೊಳ್ಳುವುದಿಲ್ಲ. ಸಂವಿಧಾನ ಬದ್ಧವಾಗಿ ಏನು ಮಾಡಬೇಕೋ ಅದನ್ನು ಮಾಡಲಾಗುತ್ತದೆ ಎಂದು ಬಿಜೆಪಿಗೆ ಸಚಿವ ಪ್ರಿಯಾಂಕ್​ ಟಾಂಗ್ ನೀಡಿದರು.

ನಮ್ಮ ಗ್ಯಾರಂಟಿಗಳಿಗೆ ನಾವು ಬದ್ಧರಿದ್ದೇವೆ, ಗ್ಯಾರಂಟಿ ಜಾರಿ ವಿಳಂಬ ಕುರಿತು ಜೆಡಿಎಸ್ ನಾಯಕ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಕುಮಾರಸ್ವಾಮಿ ಕೂಡ ಸರ್ಕಾರ ನಡೆಸಿದವರೇ, ಅವರಿಗೂ ಎಲ್ಲ ಗೊತ್ತು. ಒಂದು ಯೋಜನೆ ಅನುಷ್ಠಾನಕ್ಕೆ ಎಷ್ಟು ಸಮಯ ಬೇಕು ಎನ್ನುವುದು ಗೊತ್ತಿದೆ. ಆರ್ಥಿಕ ಮತ್ತು ಅನುಷ್ಠಾನ ಕಾರ್ಯಸೂಚಿ ಮಾಡಿ ಮುಂದಿನ ಸಚಿವ ಸಂಪುಟದಲ್ಲಿ ಅದರ ಬಗ್ಗೆ ನಿರ್ಧಾರ ಕೈಗೊಂಡು ಜನರ ಮುಂದೆ ಇಡುತ್ತೇವೆ. ನಮ್ಮ ಗ್ಯಾರಂಟಿಗಳಿಗೆ ನಾವು ಬದ್ಧರಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

ಪವರ್ ಶೇರಿಂಗ್ ಎಲ್ಲವೂ ಅಪ್ರಸ್ತುತ ವಿಚಾರ, ನಮ್ಮ ಉದ್ದೇಶ ರಾಜ್ಯಕ್ಕೆ ಒಳ್ಳೆಯ ಆಡಳಿತ ಕೊಡಬೇಕು ಅನ್ನೋದು. ಆ ನಿಟ್ಟಿನಲ್ಲಿ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಯಾರಿಗೆ ಯಾವ ಖಾತೆ ಎಲ್ಲವನ್ನೂ ವರಿಷ್ಠರು ನಿರ್ಧರಿಸುತ್ತಾರೆ. ಇಲ್ಲಿ ಯಾರೂ ಬೇರೆಯವರು ಅದನ್ನು ನಿರ್ಧಾರ ಮಾಡಲ್ಲ ಎಂದು ಎಲ್ಲದಕ್ಕೂ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದರು.

ಇದನ್ನೂ ಓದಿ: ಹೈಕಮಾಂಡ್ ಎದುರು ಸಚಿವ ಸಂಪುಟ ವಿಸ್ತರಣೆ ಕಸರತ್ತು.. ದೆಹಲಿಯತ್ತ ದೌಡಾಯಿಸಿದ ಸಚಿವಾಕಾಂಕ್ಷಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.