ETV Bharat / state

ಸಿಲಿಂಡರ್​ಗೆ 50% ಸಬ್ಸಿಡಿ, ಆಟೋ ಚಾಲಕರಿಗೆ ಮಾಸಿಕ 2000 ರೂ. ಆರ್ಥಿಕ ನೆರವು : ಜೆಡಿಎಸ್ ಘೋಷಣೆ

author img

By

Published : Mar 28, 2023, 7:10 PM IST

ಜೆಡಿಎಸ್​ ಸರ್ಕಾರ ಅಧಿಕಾರಕ್ಕೆ ಬಂದರೆ ಹೆಚ್​ ಡಿ ಕುಮಾರಸ್ವಾಮಿ ಬಂಪರ್​ ಆಫರ್ ನೀಡುವುದಾಗಿ​ ಘೋಷಣೆ ಮಾಡಿದ್ದಾರೆ.

Former Chief Minister HD Kumaraswamy
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅಡುಗೆ ಅನಿಲ ಸಿಲಿಂಡರ್ ಗೆ ಶೇ.50ರಷ್ಟು ಸಬ್ಸಿಡಿ ನೀಡುವ ಮಹತ್ವದ ಘೋಷಣೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾಡಿದ್ದಾರೆ. ಯಶವಂತಪುರ ಕ್ಷೇತ್ರದಲ್ಲಿ ಇಂದು ನಡೆದ ಜೆಡಿಎಸ್ ಪಂಚರತ್ನ ರಥಯಾತ್ರೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪುಕ್ಕಟ್ಟೆ ಗ್ಯಾಸ್ ನೀಡುವುದಾಗಿ ಹೇಳಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದೆ. ಇದನ್ನು ನಂಬಿದ ಮಹಿಳೆಯರಿಗೆ ಒಂದು ಸಿಲಿಂಡರ್ ಕೊಟ್ಟ ಮೇಲೆ ಬೆಲೆ ಏರಿಕೆಯ ಶಾಕ್ ನೀಡಿತು. ಈಗ ಸಿಲಿಂಡರ್ ಬೆಲೆ 1100 ರೂಪಾಯಿ ದಾಟಿದ್ದು, ಬಡಜನರು ಜೀವನ ಸಾಗಿಸುವುದೇ ದುಸ್ತರವಾಗಿದೆ ಎಂದು ಕಿಡಿಕಾರಿದರು.

ನಮ್ಮ ರಾಜ್ಯದಲ್ಲಿ ಅಡುಗೆ ಅನಿಲ ರಿಯಾಯಿತಿ ಒಂದೇ ಯೋಜನೆ ಅಲ್ಲ, ಇನ್ನೂ ಹಲವಾರು ಯೋಜನೆಗಳು ಇವೆ. ನಮ್ಮ ಜೆಡಿಎಸ್​ ಸರ್ಕಾರ ಅಧಿಕಾರಕ್ಕೆ ಬಂದರೇ ವರ್ಷಕ್ಕೆ ಐದು ಸಿಲಿಂಡರ್ ಉಚಿತವಾಗಿ ಸಿಗಲಿದ್ದು, 10 ಸಿಲಿಂಡರ್​ಗೆ ಅರ್ಧ ಹಣ ಪಡೆಯಲಿದ್ದೇವೆ. ಇನ್ನು ಆಟೋ ಚಾಲಕರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಕೊಡಲಾಗುವುದು. ಹಾಗೆಯೇ, ಅಂಗನವಾಡಿ ಕಾರ್ಯಕರ್ತರ ಶಾಶ್ವತ ಬೇಡಿಕೆ ಏನಿದೆಯೋ ಅದನ್ನು ಈಡೇರಿಸುವ ಕೆಲಸ ಮಾಡುತ್ತೇವೆ. ಈ ಬಗ್ಗೆ ಆರ್ಥಿಕ ತಜ್ಞರ ಜೊತೆ ಚರ್ಚೆ ಮಾಡಲಾಗುತ್ತದೆ ಎಂದು ಹೆಚ್ ​ಡಿ ಕುಮಾರಸ್ವಾಮಿ ಘೋಷಣೆ ಮಾಡಿದರು.

ಜಾತಿಗಳ ಮಧ್ಯೆ ಸಂಘರ್ಷ- ಹೆಚ್​ಡಿಕೆ : ಈ ಘೋಷಣೆ ಮಾಡುವ ಮುನ್ನ ಅಂದ್ರಹಳ್ಳಿಯಲ್ಲಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಮೀಸಲಾತಿ ಸಂಬಂಧ ಬಿಜೆಪಿ ಸರ್ಕಾರ ಕೈಗೊಂಡಿರುವ ನಿರ್ಣಯ ಜಾತಿ ಜಾತಿಗಳ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು. ಚುನಾವಣಾ ಸಮಯದಲ್ಲಿ ಬಿಜೆಪಿ ಸರ್ಕಾರ ವೋಟಿಗಾಗಿ ಕೀಳು ಮಟ್ಟದ ಕುತಂತ್ರ ರಾಜಕಾರಣ ಮಾಡುತ್ತಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಆಶಯದ ವಿರುದ್ಧ ಮೀಸಲಾತಿ ನಿರ್ಣಯ ಕೈಗೊಂಡು ಸಮಾಜದ ಸಾಮರಸ್ಯವನ್ನು ಹಾಳು ಮಾಡುತ್ತಿದೆ. ಮುಸ್ಲಿಂ ಸಮುದಾಯಕ್ಕಿದ್ದ ಶೇ. 4 ರಷ್ಟು ಮೀಸಲಾತಿಯನ್ನು ಕಿತ್ತು ಒಕ್ಕಲಿಗ ಹಾಗೂ ಲಿಂಗಾಯತ ಸಮಾಜಗಳಿಗೆ ಹಂಚಿಕೆ ಮಾಡಿ ವೋಟು ಪಡೆಯಲು ಮುಂದಾಗಿದೆ. ವಾಸ್ತವದಲ್ಲಿ ಬಿಜೆಪಿಯ ಈ ತಂತ್ರ ಫಲಿಸುವುದಿಲ್ಲ ಎಂದು ಹೆಚ್​ ಡಿಕೆ ಹರಿಹಾಯ್ದರು.

ಮೀಸಲಾತಿ ನಿರ್ಣಯಕ್ಕೆ ನನ್ನ ಬೆಂಬಲವಿಲ್ಲ- ಕುಮಾರಸ್ವಾಮಿ : ಮೀಸಲಾತಿ ವಿಚಾರದಲ್ಲಿ ಆತಂಕಗೊಂಡಿರುವ ಬಂಜಾರ ಸಮಾಜ ಬೀದಿಗಿಳಿದು ಸಂಘರ್ಷ ನಡೆಸುವಂತಾಗಿದೆ. ಅದೇ ರೀತಿ ಭೋವಿ ಜನಾಂಗ ನ್ಯಾಯಾಲಯದ ಮೆಟ್ಟಿಲೇರಲು ಮುಂದಾಗಿದೆ. ಮುಸ್ಲಿಂ ಸಮುದಾಯದವರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗಾಗಿ, ಸಂವಿಧಾನ ವಿರೋಧಿ ಬಿಜೆಪಿ ಸರ್ಕಾರದ ಮೀಸಲಾತಿ ನಿರ್ಣಯಕ್ಕೆ ನನ್ನ ಬೆಂಬಲವಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ನಿರ್ಣಯವನ್ನು ರದ್ದು ಮಾಡುವುದಾಗಿ ಘೋಷಿಸಿದರು.

ಮೀಸಲಾತಿ ಆಧಾರದಲ್ಲಿ ಬಿಜೆಪಿ ಸರ್ಕಾರ ಉದ್ಯೋಗ ನೀಡುತ್ತಿಲ್ಲ. ಲಕ್ಷ, ಕೋಟಿ ಲೆಕ್ಕದಲ್ಲಿ ಲಂಚ ಪಡೆದು ಉದ್ಯೋಗ ಕೊಟ್ಟಿರುವುದು ಸಬ್​ಇನ್ಸ್​ಪೆಕ್ಟರ್ ಹಾಗೂ ಇತರೆ ಹುದ್ದೆಗಳ ನೇಮಕಾತಿಯಲ್ಲಿ ಜಗಜ್ಜಾಹೀರಾಗಿದೆ. ಹಾಗಾಗಿ, ಸರ್ಕಾರ ಯಾವುದೇ ನಿರ್ಣಯ ಕೈಗೊಂಡರೂ ಮೀಸಲಾತಿಗೆ ಅರ್ಥವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇನ್ನು ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಟಿ.ಎನ್. ಜವರಾಯಿಗೌಡ, ಮುಖಂಡರಾದ ಪಂಚಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ :'ಜೆಡಿಎಸ್ ಅಧಿಕಾರಕ್ಕೆ ಬಂದರೆ ಹಣ ಫಿಕ್ಸ್ ಮಾಡಿ ಸರ್ಕಾರಿ ನೌಕರಿ ಕೊಡುವ ವ್ಯವಸ್ಥೆಗೆ ಇತಿಶ್ರೀ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.