ETV Bharat / state

24ನೇ ತಂತ್ರಜ್ಞಾನ ಶೃಂಗಕ್ಕೆ ಬೆಂಗಳೂರು ಸಜ್ಜು: 3 ದಿನ ಸಮಾವೇಶ, 30ಕ್ಕೂ ಹೆಚ್ಚು ದೇಶ, 300 ಕಂಪನಿಗಳು ಭಾಗಿ

author img

By

Published : Nov 16, 2021, 6:05 PM IST

ತಂತ್ರಜ್ಞಾನ ಶೃಂಗದಲ್ಲಿ ಜಾಗತಿಕ ಮಟ್ಟದ 300ಕ್ಕೂ ಹೆಚ್ಚು ಕಂಪನಿಗಳು ಮತ್ತು 5 ಸಾವಿರಕ್ಕೂ ಹೆಚ್ಚು ನವೋದ್ಯಮಗಳು ಸಕ್ರಿಯವಾಗಿ ಭಾಗವಹಿಸಲಿವೆ. ಇದರ ಜತೆಗೆ ವಾಣಿಜ್ಯ ವಲಯದ 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಹಾಜರಾಗುತ್ತಿದ್ದು, ವರ್ಚುವಲ್‌ ರೂಪದಲ್ಲಿ 5 ಲಕ್ಷಕ್ಕೂ ಹೆಚ್ಚು ಆಸಕ್ತರು ವೀಕ್ಷಿಸಲಿದ್ದಾರೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
24ನೇ ತಂತ್ರಜ್ಞಾನ ಶೃಂಗಕ್ಕೆ ಬೆಂಗಳೂರು ಸಜ್ಜು
24ನೇ ತಂತ್ರಜ್ಞಾನ ಶೃಂಗಕ್ಕೆ ಬೆಂಗಳೂರು ಸಜ್ಜು

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಶೃಂಗದ (ಬಿಟಿಎಸ್) 24ನೇ ವರ್ಷದ ಸಮಾವೇಶವನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಬುಧವಾರ ಉದ್ಘಾಟಿಸಲಿದ್ದಾರೆ. ನಾಳೆಯಿಂದ ಮೂರು ದಿನಗಳ ಈ ಶೃಂಗವು ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್​​​ನಲ್ಲಿ ನಡೆಯಲಿದೆ ಎಂದು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಬಿಟಿಎಸ್-2021ಕ್ಕೆ ಆಗಿರುವ ಸಿದ್ಧತೆಗಳನ್ನು ಮಂಗಳವಾರ ವೀಕ್ಷಿಸಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಶೃಂಗದಲ್ಲಿ 30ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ. ಯುಎಇ, ಐರೋಪ್ಯ ಒಕ್ಕೂಟ, ವಿಯಟ್ನಾಂ ಮತ್ತು ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದು, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನಟ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಸೇರಿದಂತೆ ಹಲವು ಗಣ್ಯರು ಶೃಂಗವನ್ನು ಉದ್ದೇಶಿಸಿ ವರ್ಚುಯಲ್ ರೂಪದಲ್ಲಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಈ ಶೃಂಗದಲ್ಲಿ ಜಾಗತಿಕ ಮಟ್ಟದ 300ಕ್ಕೂ ಹೆಚ್ಚು ಕಂಪನಿಗಳು ಮತ್ತು 5 ಸಾವಿರಕ್ಕೂ ಹೆಚ್ಚು ನವೋದ್ಯಮಗಳು ಸಕ್ರಿಯವಾಗಿ ಭಾಗವಹಿಸಲಿವೆ. ಜತೆಗೆ ವಾಣಿಜ್ಯ ವಲಯದ 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಹಾಜರಾಗುತ್ತಿದ್ದು, ವರ್ಚುಯಲ್ ರೂಪದಲ್ಲಿ 5 ಲಕ್ಷಕ್ಕೂ ಹೆಚ್ಚು ಆಸಕ್ತರು ವೀಕ್ಷಿಸಲಿದ್ದಾರೆ ಎಂದರು.

ಇದೇ ಮೊದಲ ಬಾರಿಗೆ ಶೃಂಗದಲ್ಲಿ ಭಾರತೀಯ ನಾವೀನ್ಯತಾ ಮೈತ್ರಿಕೂಟ (ಜಿಐಎ) ಉಪಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಇದರ ಜತೆಗೆ ಜಾಗತಿಕ ನಾವೀನ್ಯತಾ ಮೈತ್ರಿಕೂಟ (ಜಿಐಎ)ದ ಅಂಗವಾಗಿ ಜರ್ಮನಿ, ಜಪಾನ್, ಫಿನ್ಲೆಂಡ್, ಲಿಥುವೇನಿಯಾ, ಸ್ವೀಡನ್, ಸ್ವಿಟ್ಜರ್ಲೆಂಡ್ ಮುಂತಾದ ದೇಶಗಳೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಡ್ರೈವಿಂಗ್ ದಿ ನೆಕ್ಸ್ಟ್’ ಘೋಷವಾಕ್ಯದಡಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಪ್ರಧಾನವಾಗಿ ಐಟಿ, ಬಿಟಿ, ಕೃಷಿ, ಆರೋಗ್ಯ, ಲಸಿಕೆ, ಸೈಬರ್ ಸೆಕ್ಯುರಿಟಿ, ವೈದ್ಯಕೀಯ ಮತ್ತು ಆರ್ಥಿಕ ತಂತ್ರಜ್ಞಾನಗಳಿಗೆ ಒತ್ತು ಕೊಡಲಾಗುತ್ತಿದೆ. ಈ ಮೂಲಕ ಡಿಜಿಟಲೀಕರಣ, ಹೈಬ್ರಿಡ್ ಮಲ್ಟಿ ಕ್ಲೌಡ್, ಸೆಲ್ ಥೆರಪಿ ಮತ್ತು ಜೀನ್ ಎಡಿಟಿಂಗ್ ಕ್ಷೇತ್ರಗಳಲ್ಲಿ ರಾಜ್ಯವು ಹೊಸ ಛಾಪು ಮೂಡಿಸಲಿದ್ದು, ರೈತ ಸಮುದಾಯ ಮತ್ತು ಮಹಿಳಾ ಉದ್ಯಮಿಗಳ ಸಬಲೀಕರಣಕ್ಕೆ ಹೆಜ್ಜೆ ಇಡಲಾಗುವುದು ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಪಾಲರು, ಸಿಎಂ, ಕೇಂದ್ರ ಸಚಿವರು ಭಾಗಿ :

ಶೃಂಗಸಭೆಯ ಉದ್ಘಾಟನೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಐಟಿ ವಿಷನ್ ಗ್ರೂಪ್ ಮುಖ್ಯಸ್ಥರಾದ ಕ್ರಿಸ್ ಗೋಪಾಲಕೃಷ್ಣನ್, ಬಿಟಿ ವಿಷನ್ ಗ್ರೂಪ್ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಷಾ, ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಎಸ್ ಟಿಪಿಐ ನಿರ್ದೇಶಕ ಶೈಲೇಂದ್ರಕುಮಾರ್ ತ್ಯಾಗಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಅಮೆರಿಕ, ಐರೋಪ್ಯ ಒಕ್ಕೂಟ, ಆಸ್ಟ್ರೇಲಿಯಾ ಭಾಗಿ:

ಸಮಾವೇಶದಲ್ಲಿ ಭಾರತ-ಅಮೆರಿಕ ವಾಣಿಜ್ಯ ಸಮಿತಿ ಇದೇ ಮೊದಲ ಬಾರಿಗೆ ಸಹಭಾಗಿತ್ವ ನೀಡುತ್ತಿದೆ. ಜೊತೆಗೆ, ಐರೋಪ್ಯ ಒಕ್ಕೂಟ ಕೂಡ ಪಾಲ್ಗೊಳ್ಳುತ್ತಿದೆ. ಅಮೆರಿಕದಲ್ಲಿ ಜೀವವಿಜ್ಞಾನ ಮತ್ತು ಐಟಿ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಆವಿಷ್ಕಾರಗಳ ಲಾಭವನ್ನು ರಾಜ್ಯವು ಪಡೆದುಕೊಳ್ಳಲಿದೆ. ಹಾಗೆಯೇ ಐರೋಪ್ಯ ಒಕ್ಕೂಟದೊಂದಿಗೆ ನವೋದ್ಯಮ ವಲಯ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಬಿಟಿಎಸ್-2021 ನಡೆಯುತ್ತಿರುವ ಸಮಯದಲ್ಲೇ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇಂತಹುದೇ ಶೃಂಗಸಭೆ (ಸಿಡ್ನಿ ಡೈಲಾಗ್ ಕಾನ್ಫರೆನ್ಸ್) ನಡೆಯುತ್ತಿದೆ. ಇದನ್ನು ಉದ್ದೇಶಿಸಿ ನ.18ರಂದು (ಗುರುವಾರ) ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ಆಗಿ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಟಿಎಸ್ ನಲ್ಲಿ ನಡೆಯುವ ಎರಡು ಮತ್ತು ಸಿಡ್ನಿಯಲ್ಲಿ ನಡೆಯುವ ಒಂದು ಕಾರ್ಯಕ್ರಮದ ನೇರ ಪ್ರಸಾರ (ಲೈವ್ ಸ್ಟ್ರೀಮಿಂಗ್) ಇರಲಿದೆ ಎಂದು ಅವರು ಹೇಳಿದರು.

75ಕ್ಕೂ ಹೆಚ್ಚು ಗೋಷ್ಠಿಗಳು, 7 ಸಂವಾದಗಳು :

ಬಿಟಿಎಸ್-2021ರ ಅಂಗವಾಗಿ ನಾಲ್ಕು ವೇದಿಕೆಗಳಲ್ಲಿ ಒಟ್ಟು 75 ಗೋಷ್ಠಿಗಳನ್ನು ಮತ್ತು 7 ಸಂವಾದಗಳನ್ನು ಏರ್ಪಡಿಸಲಾಗಿದೆ. ಇವುಗಳಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಮೂಲಕ ನಾವೀನ್ಯತೆಯ ಬೆಳವಣಿಗೆ, ಫಿನ್-ಟೆಕ್ ಭವಿಷ್ಯದ ಹೆಜ್ಜೆಗಳು, ಕೃಷಿ, ಜೀವವಿಜ್ಞಾನ ಸಂಶೋಧನೆ, ಮಹಿಳಾ ಉದ್ಯಮಶೀಲತೆಯ ಸವಾಲುಗಳು, ಶೈಕ್ಷಣಿಕ ತಂತ್ರಜ್ಞಾನ, ಮುಂದಿನ ತಲೆಮಾರಿನ ವೈದ್ಯಕೀಯ ತಂತ್ರಜ್ಞಾನ, ವಂಶವಾಹಿ ಆಧಾರಿತ ಔಷಧಿಗಳು, ಜೀನ್ ಎಡಿಟಿಂಗ್, ಸೆಮಿಕಂಡಕ್ಟರ್, ಕ್ಯಾನ್ಸರ್ ಚಿಕಿತ್ಸೆ, ಸೆಲ್ ಥೆರಪಿ, ಸೈಬರ್ ಸೆಕ್ಯುರಿಟಿ, ವೈಮಾಂತರಿಕ್ಷ ಮುಂತಾದ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವಂತಹ ವಿಚಾರ ವಿನಿಮಯ ನಡೆಯಲಿವೆ ಎಂದು ಸಚಿವರು ವಿವರಿಸಿದರು.

ಜೈಶಂಕರ್, ಚೇತನ್ ಭಗತ್, ಶಿವನ್ ಉಪನ್ಯಾಸ:

ಶೃಂಗದಲ್ಲಿ ಏರ್ಪಡಿಸಿರುವ ಗೋಷ್ಠಿಗಳನ್ನು ಉದ್ದೇಶಿಸಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮಾರಿಸ್ ಪೇನ್, ಇಸ್ರೋ ಅಧ್ಯಕ್ಷ ಕೆ.ಶಿವನ್, ಭಾರತ ಮೂಲದ ನೊಬೆಲ್ ಪುರಸ್ಕೃತ ವಿಜ್ಞಾನಿ ವೆಂಕಿ ರಾಮಕೃಷ್ಣನ್, ಹೆಸರಾಂತ ಲೇಖಕ ಚೇತನ್ ಭಗತ್, ಜಗದ್ವಿಖ್ಯಾತ ಕ್ಯಾನ್ಸರ್ ವೈದ್ಯ-ವಿಜ್ಞಾನಿ ಡಾ.ಸಿದ್ಧಾರ್ಥ ಮುಖರ್ಜಿ, ವಿಶ್ವ ಆರ್ಥಿಕ ವೇದಿಕೆಯ ಸ್ಥಾಪಕ ಪ್ರೊ.ಕ್ಲಾಸ್ ಶ್ವಾಬ್, ಮೈಕ್ರೋಸಾಫ್ಟ್ ಇಂಡಿಯಾದ ಮುಖ್ಯಸ್ಥ ಅನಂತ್ ಮಹೇಶ್ವರಿ, ಆಪಲ್ ಇಂಕ್ ಸಮೂಹದ ಉಪಾಧ್ಯಕ್ಷೆ ಪ್ರಿಯಾ ಬಾಲಸುಬ್ರಹ್ಮಣ್ಯಂ, ಕ್ರಿಂಡೈಲ್ ಕಂಪನಿಯ ಸಿಇಒ ಮಾರ್ಟಿನ್ ಶ್ರೋಟರ್, ಟೆಲ್ಸ್ಟ್ರಾ ಕಂಪನಿಯ ಪಾಲುದಾರ ಗ್ಯಾವೆನ್ ಸ್ಟ್ಯಾಂಡನ್ ಮುಂತಾದವರು ಮಾತನಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.