ETV Bharat / state

ದೊಡ್ಡಬಳ್ಳಾಪುರ ನಗರಸಭೆ ಬಜೆಟ್ .. 2023-24ನೇ ಸಾಲಿಗೆ 70 ಕೋಟಿ ರೂ.ಗಳ ಆಯವ್ಯಯ ಮಂಡನೆ

author img

By

Published : Mar 1, 2023, 11:53 AM IST

Updated : Mar 1, 2023, 1:10 PM IST

ನಿನ್ನೆ 2023-24ನೇ ಸಾಲಿನ ದೊಡ್ಡಬಳ್ಳಾಪುರ ನಗರಸಭೆ ಬಜೆಟ್ ಮಂಡನೆ ಮಾಡಲಾಯಿತು. ಈ ಬಾರಿ ಬಜೆಟ್​ನಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಒಟ್ಟು ಬಜೆಟ್​ ಗಾತ್ರ 70 ಕೋಟಿ.

doddaballapura city municipal council
ದೊಡ್ಡಬಳ್ಳಾಪುರ ನಗರಸಭೆ

ದೊಡ್ಡಬಳ್ಳಾಪುರ ನಗರಸಭೆ ಬಜೆಟ್ ಮಂಡನೆ

ದೊಡ್ಡಬಳ್ಳಾಪುರ: ಮೊದಲು ಪುರಸಭೆಯೊಂದಿಗೆ ದೊಡ್ಡಬಳ್ಳಾಪುರದಲ್ಲಿ ಸ್ಥಳೀಯ ಆಡಳಿತ ಜಾರಿಗೆ ಬಂದಿತ್ತು. ಪ್ರಾರಂಭದಲ್ಲಿ ದೊಡ್ಡಬಳ್ಳಾಪುರ ನಗರದ ಬಜೆಟ್ ಗಾತ್ರ 7 ಲಕ್ಷ ಮಾತ್ರ ಇತ್ತು. ಆದ್ರೆ, ಇದೀಗ ದೊಡ್ಡಬಳ್ಳಾಪುರ ಬೃಹತ್ ನಗರವಾಗಿ ಬೆಳೆದಿದ್ದು, 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಾಯಿತು. ಈ ಬಾರಿ 70 ಕೋಟಿಯ ಬಜೆಟ್ ಮಂಡನೆ ಮಾಡಲಾಗಿದೆ. ಇದರಲ್ಲಿ 1.5 ಕೋಟಿ ಉಳಿತಾಯದ ಬಜೆಟ್ ಅನ್ನು ನಗರಸಭೆ ಅಧ್ಯಕ್ಷೆ ಎಸ್ ಸುಧಾರಾಣಿ ಲಕ್ಷ್ಮಿನಾರಾಯಣ್ ಮಂಡಿಸಿದರು.

ನಗರಸಭೆ ಸಭಾಂಗಣದಲ್ಲಿ ನಿನ್ನೆ 2023 24ನೇ ಸಾಲಿನ ಬಜೆಟ್ ಮಂಡನೆ ಮಾಡಲಾಗಿದ್ದು, ನಗರಸಭೆಯ ಸ್ವಂತ ಆದಾಯ 19.63 ಕೋಟಿ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನಗಳಿಂದ 37.68 ಕೋಟಿ ಮತ್ತು ಅಸಾಮಾನ್ಯ ಖಾತೆಗಳ ಜಮೆಯಿಂದ 3.54 ಕೋಟಿ ಸೇರಿ ಒಟ್ಟು 60.87 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ. ರಾಜಸ್ವ ವೆಚ್ಚ 35.84 ಕೋಟಿ, ಬಂಡವಾಳ ವೆಚ್ಚ 26.12 ಕೋಟಿ ಮತ್ತು ಅಸಾಮಾನ್ಯ ಖಾತೆಗಳ ಪಾವತಿ 8.38 ಕೋಟಿಯೊಂದಿಗೆ ಒಟ್ಟು ವೆಚ್ಚ 70.35 ಕೋಟಿಯ ಅಂದಾಜು ಬಜೆಟ್ ಮಂಡನೆ ಮಾಡಲಾಯಿತು.

ಈ ಸಾಲಿನ ಬಜೆಟ್​ನಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಅಮೃತ ಯೋಜನೆಯಡಿ 10 ಕೋಟಿ ವೆಚ್ಚದಲ್ಲಿ ಮನೆ ಮನೆಗೂ ಕುಡಿಯುವ ನೀರಿನ ಸಂಪರ್ಕ, ಕಲ್ಯಾಣಿಗಳ ಅಭಿವೃದ್ಧಿ, ನಗರದ ಪ್ರಮುಖ ವೃತ್ತಗಳಲ್ಲಿ ಖಾಸಗಿ ಸಹಬಾಗಿತ್ವದಲ್ಲಿ ಬಸ್ ತಂಗುದಾಣಗಳ ನಿರ್ಮಾಣ, ನಗರೋತ್ಧಾನ ಯೋಜನೆಯಡಿ ಬಂದ 30 ಕೋಟಿಯಲ್ಲಿ ನಗರದ ರಸ್ತೆಗಳ ಅಭಿವೃದ್ಧಿ ಮತ್ತು ರಾಜಕಾಲುವೆ ನಿಮಾರ್ಣಕ್ಕೆ ಒತ್ತು ನೀಡಲಾಗಿದೆ.

ಉದ್ಯಾನಗಳ ಅಭಿವೃದ್ಧಿಗೆ 50 ಲಕ್ಷ, ನಿರ್ವಹಣೆಗೆ 10.8 ಲಕ್ಷ ಮೀಸಲಿಡಲಾಗಿದೆ. ನೈರ್ಮಲ್ಯ ಹಾಗೂ ಸ್ವಚ್ಛತಾ ಕಾರ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆ ಕಾಮಗಾರಿಗಳಿಗಾಗಿ 4.10 ಕೋಟಿಗಳನ್ನ ತೆಗೆದಿರಿಸಲಾಗಿದೆ. ಸ್ವಚ್ಛ ಭಾರತ ಅಭಿಯಾನ 2.0 ಯೋಜನೆಯಡಿ ಕಸ ಸಂಸ್ಕರಣಾ ಘಟಕ ಹಾಗೂ ಒಣಕಸ ವಿಲೇವಾರಿ ಘಟಕ ನಿರ್ಮಾಣ ಮತ್ತು ಪಾರಂಪರಿಕ ತ್ಯಾಜ್ಯ ವಿಲೇವಾರಿಗಾಗಿ 37.50 ಕೋಟಿ, ಟ್ರಾಫಿಕ್ ಸಿಗ್ನಲ್ ಮತ್ತು ಸಿಸಿ ಕ್ಯಾಮರಾಗಳ ಅಳವಡಿಕೆಗಾಗಿ 40 ಲಕ್ಷ ಹಾಗೂ ನೂತನ ಕೆ.ಆರ್.ಮಾರುಕಟ್ಟೆ ಮಳಿಗೆಗಳ ನಿರ್ಮಾಣಕ್ಕೆ 1 ಕೋಟಿ ಹಾಗೂ ಡಿ.ಕ್ರಾಸ್‌ ರಸ್ತೆಯಲ್ಲಿ ನೂತನ ವಾಣಿಜ್ಯ ನಿರ್ಮಾಣಕ್ಕಾಗಿ 2 ಕೋಟಿ ತೆಗೆದಿರಿಸಲಾಗಿದೆ.

ಇದನ್ನೂ ಓದಿ: ಅನಧಿಕೃತ ವಾಣಿಜ್ಯ ಮಳಿಗೆ‌: ಮಾಹಿತಿ ನೀಡದ ನಗರಸಭೆ ಪೌರಾಯುಕ್ತರಿಗೆ ₹25 ಸಾವಿರ ದಂಡ

ಎಸ್​ಸಿ, ಎಸ್​ಟಿ ಹಾಗೂ ಇತರೆ ವರ್ಗಗಳ ಬಡಜನರ ಕಲ್ಯಾಣಕ್ಕಾಗಿ 60 ಲಕ್ಷ, ಇತರೆ ವರ್ಗದ ಬಡ ಜನಾಂಗದವರ ಅಭಿವೃದ್ಧಿಗಾಗಿ 9.43 ಲಕ್ಷ ಮತ್ತು ಅಂಗವಿಕಲರ ಕಲ್ಯಾಣಕ್ಕಾಗಿ 6.50 ಲಕ್ಷ ಸೇರಿದಂತೆ ಒಟ್ಟಾರೆ ಕಲ್ಯಾಣ ಕಾರ್ಯಕ್ರಮಗಳಿಗೆ 75.93 ಲಕ್ಷ ಮೀಸಲಿಡಲಾಗಿದೆ. ನಗರ ವ್ಯಾಪ್ತಿಯ ಸ್ಮಶಾನಗಳ ಕಾಂಪೌಂಡ್ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗೆ 31.82 ಲಕ್ಷ, ನೂತನವಾಗಿ ಚಿತಾಗಾರ ನಿರ್ಮಾಣಕ್ಕಾಗಿ 25 ಲಕ್ಷಗಳನ್ನು ಮೀಸಲಿಡಲಾಗಿದೆ. ಮುಖ್ಯಮಂತ್ರಿ ನಗರೋತ್ಥಾನ 4ನೇ ಹಂತದ ಯೋಜನೆಯಡಿ ನಗರಸಭೆಗೆ 30 ಕೋಟಿಯ ಕ್ರಿಯಾ ಯೋಜನೆ ರೂಪಿಸಲಾಗಿದೆ. ನಗರದ ಎಸ್‌ಟಿಪಿ ಘಟಕವನ್ನು ಮೇಲ್ದರ್ಜೆಗೇರಿಸಲು 2.78 ಕೋಟಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 13.97 ಕೋಟಿ ಹಾಗೂ ರಾಜಕಾಲುವೆ ಅಭಿವೃದ್ಧಿಗೆ 1.59 ಕೋಟಿ ಯೋಜನೆ ರೂಪಿಸಲಾಗಿದೆ.

Last Updated : Mar 1, 2023, 1:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.