ETV Bharat / state

ಬಿಜೆಪಿಯಲ್ಲಿ ಸಿದ್ಧಾಂತ ಇಲ್ಲ, ಗೆಲ್ಲೋದಿದ್ದರೆ ಸೋನಿಯಾ ಗಾಂಧಿಗೂ ಟಿಕೆಟ್​ ಕೊಡ್ತಾರೆ: ಮುತಾಲಿಕ್​​

author img

By

Published : Jul 23, 2022, 1:58 PM IST

Updated : Jul 23, 2022, 2:28 PM IST

ಬಿಎಸ್​​ವೈ ಕ್ಷೇತ್ರ ತ್ಯಾಗ ವಿಚಾರ-ಅದು ಅವರ ಪಕ್ಷಕ್ಕೆ ಬಿಟ್ಟದ್ದು-ಬಾಗಲಕೋಟೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​​ ಮುತಾಲಿಕ್​​ ಹೇಳಿಕೆ

Sri Ram Sena leader Pramod Muthalik
ಶ್ರೀರಾಮ ಸೇನೆ ಮುಖಂಡ ಪ್ರಮೋದ್​​ ಮುತಾಲಿಕ್​​

ಬಾಗಲಕೋಟೆ: ಶ್ರೀರಾಮ ಸೇನೆ ಮತ್ತು ಬಿಜೆಪಿಗೆ ಏನು ಸಂಬಂಧ ಇಲ್ಲ ಎಂದು ಕಟೀಲ್​​ ಹೇಳಿದ್ದಾರೆ. ನಾನೂ ಕೂಡ ಹೇಳಿದ್ದೇನೆ. ನಾನೇನು ಬಿಜೆಪಿ ಸದಸ್ಯನಲ್ಲ. ಯಾವ ಪಕ್ಷದ ಸಂಬಂಧವೂ ನಮ್ಮ ಸಂಘಟನೆಗೆ ಇಲ್ಲ. ಅವರೇನು ನಿರ್ಧಾರ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂಪ್ಪ ಅವರು ತಮ್ಮ ಪುತ್ರನಿಗೆ ಕ್ಷೇತ್ರ ತ್ಯಾಗ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​​ ಮುತಾಲಿಕ್ ಪ್ರತಿಕ್ರಿಯಿಸಿದರು. ​​

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​​

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೇನು ಬಿಜೆಪಿ ಸದಸ್ಯನಲ್ಲ ಎಂದರು. ಬಿಎಸ್​​ವೈ ಅವರನ್ನ ರಾಜಕೀಯವಾಗಿ ಮುಗಿಸುವ ತಂತ್ರ ನಡೆಯಿತಾ? ಎಂಬ ಪ್ರಶ್ನೆಗೆ ಉತ್ತರಿಸುತ್ತ, ಬಿಜೆಪಿಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ ಶ್ರೇಷ್ಠ ವ್ಯಕ್ತಿ ಯಡಿಯೂರಪ್ಪ. ಬಿಜೆಪಿ ಕೇವಲ ಬ್ರಾಹ್ಮಣರಿಗೆ ಅನ್ನೋದಿತ್ತು. ಆದರೆ ಅದನ್ನ ಸರ್ವವ್ಯಾಪಿ ಬೆಳೆಸಿದ್ದೇ ಬಿ.ಎಸ್ ಯಡಿಯೂರಪ್ಪ. ನಾನು ದುಃಖ ಮತ್ತು ನೋವಿನಿಂದ ಹೇಳುತ್ತೇನೆ. ಅವರು ತಮ್ಮ ಮಗನಿಗಾಗಿ ಕ್ಷೇತ್ರ ಬಿಟ್ಟುಕೊಡುವುದರಿಂದ ಎಲ್ಲೋ ಒಂದು ಕಡೆ ಎಡುವುತ್ತಿದ್ದಾರೆ ಎಂದರು.

ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು, ಪಕ್ಷದ ನಿರ್ಣಯ. ಬಿಜೆಪಿಯಲ್ಲಿ ಏನೇನೋ ಬದಲಾವಣೆ ನಡೆಯುತ್ತಿದೆ. ಸಂಬಂಧಿಗಳಿಗೆ ಟಿಕೆಟ್ ಇಲ್ಲ ಅಂದ್ರು. ಆದರೆ ಸುರೇಶ್​ ಅಂಗಡಿಯವರ ಪತ್ನಿಗೆ ಲೋಕಸಭಾ ಕ್ಷೇತ್ರದ ಟಿಕೆಟ್​ ಕೊಟ್ಟರು. ಬಳಿಕ ವಯಸ್ಸಿನ ಆಧಾರದ ಮೇಲೆ ಕೊಡೋಲ್ಲ ಎಂದರು. ಆದ್ರೆ ಹೊರಟ್ಟಿಗೆ ಕೊಟ್ಟರು. ಬಿಜೆಪಿಯಲ್ಲಿ ಸಿದ್ಧಾಂತ, ನಿಯಮ ಇಲ್ಲ, ಗೆಲ್ಲಬೇಕು ಅಷ್ಟೇ. ಗೆಲ್ಲುವಂತವರಿದ್ದರೆ 80 ವರ್ಷದ ಮುದುಕನಿಗೂ, ಸೋನಿಯಾ ಗಾಂಧಿಗೂ ಟಿಕೆಟ್ ಕೊಡ್ತಾರೆ ಎಂದು ವ್ಯಂಗ್ಯವಾಡಿದರು.

ಇವತ್ತಿನ ಬಿಜೆಪಿಯಲ್ಲಿ ಶೇ.70ರಷ್ಟು ಕಾಂಗ್ರೆಸ್​​ ಮತ್ತು ಜೆಡಿಎಸ್​​​ನವರು ಬಂದು ಸೇರಿದ್ದಾರೆ. ಇವರಿಗೆ ಅಧಿಕಾರ ಅಷ್ಟೇ ಬೇಕು. ಸಿದ್ಧಾಂತವನ್ನು ಗಾಳಿಗೆ ತೂರಿದ್ದಾರೆ. ಏನು ಉಳಿದಿಲ್ಲ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಬಾಂಗ್ಲಾದೇಶದ ವಲಸಿಗರ ಬಗ್ಗೆ ಕಿಡಿ: ದೇಶದೆಲ್ಲೆಡೆ ಕ್ಷೌರಿಕ ಸಮಾಜ ಇದೆ. ಅವರಿಗೆ ಕ್ಷೌರ ಬಿಟ್ಟರೆ ಬೇರೆ ಉದ್ಯೋಗ ಗೊತ್ತಿಲ್ಲ. ಅವರ ಜೀವನ ಕ್ಷೌರ ಉದ್ಯೋಗದ ಮೇಲೆ ನಿಂತಿದೆ. ಬಾಂಗ್ಲಾ ದೇಶದಿಂದ ವಲಸೆ ಬಂದಿರುವ ಮುಸ್ಲಿಮರು ಅವರ ಹೊಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಮುತಾಲಿಕ್ ಕಿಡಿಕಾರಿದರು​.

ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ. ಆದರೆ ಯಾವುದೇ ಕ್ರಮ ಆಗಿಲ್ಲ. ಇದು ಬಹಳ ಅಪಾಯಕಾರಿ. ಎಲ್ಲಿಂದಲೋ ಬಂದು ದಾಖಲೆ ಇಲ್ಲದೆ ಇವರು ಅಂಗಡಿ ಹೇಗೆ ಹಾಕ್ತಾರೆ?. ಅವರಿಗೆ ಬಂಡವಾಳ ಹೇಗೆ ಸಿಗುತ್ತಿದೆ‌?. ಆರು ಅಂಗಡಿ ಆಗಿವೆ ಅಂತಾ ಹೇಳುತ್ತಿದ್ದಾರೆ. ಒಂದು ವಾರದಲ್ಲಿ ಅವರು ಬಂದ್ ಮಾಡದಿದ್ದರೆ ನಾವೇ ಉಡಾಯಿಸಿ ಬಿಸಾಕ್ತೀವಿ. ಎಸ್​ಪಿ, ಡಿಸಿ ಅವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕೂಡಲೇ ಅಂಗಡಿಗಳನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದರು.

ರಾಕ್ಷಸಿ ಪ್ರವೃತ್ತಿ: ಕೆರೂರ ಘಟನೆ ಬಗ್ಗೆ ಮಾತನಾಡಿ, ದುರಾದೃಷ್ಟ ಮತ್ತು ಖಂಡನೀಯ. ಹುಡುಗಿ ಚುಡಾಯಿಸಿದ್ದನ್ನು ವಿರೋಧಿಸಿದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಇದೊಂದು ರಾಕ್ಷಸಿ ಪ್ರವೃತ್ತಿ. ಗೂಂಡಾಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ, ಹುಷಾರಾಗಿರಿ. ಇನ್ಮುಂದೆ ಈ ರೀತಿಯ ಆಟ ನಡೆಯಲ್ಲ. ನಿಮಗೆ ತೊಂದರೆಯಾದರೆ ಕಂಪ್ಲೆಂಟ್ ಕೊಡಿ. ಧರಣಿ ಮಾಡಿ. ಚಾಕು, ಚೂರಿ ತೋರಿಸಲು ತಾಲಿಬಾನ್, ಪಾಕಿಸ್ತಾನ ಅಲ್ಲ ಎಂದು ಮುತಾಲಿಕ್​ ಗುಡುಗಿದರು.

ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ: ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟ ಮಾಜಿ ಸಿಎಂ

Last Updated : Jul 23, 2022, 2:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.