ETV Bharat / state

ಒಂದಲ್ಲ ಎರಡಲ್ಲ ಬರೋಬ್ಬರಿ 187 ನಾಣ್ಯ ನುಂಗಿದ ಭೂಪ.. ವ್ಯಕ್ತಿಯ ಪ್ರಾಣ ಉಳಿಸಿದ ಬಾಗಲಕೋಟೆ ವೈದ್ಯರು

author img

By

Published : Nov 27, 2022, 7:45 PM IST

Updated : Nov 27, 2022, 8:14 PM IST

ಬಾಗಲಕೋಟೆಯಲ್ಲಿ ವ್ಯಕ್ತಿಯೋರ್ವ ಬರೋಬ್ಬರಿ 187 ನಾಣ್ಯಗಳನ್ನು ನುಂಗಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

doctors-successfully-removed-187-coins-from-a-man-stomach
ಒಂದಲ್ಲ ಎರಡಲ್ಲ ಬರೋಬ್ಬರಿ 187 ನಾಣ್ಯ ನುಂಗಿದ ವ್ಯಕ್ತಿ : ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು

ಬಾಗಲಕೋಟೆ : ವ್ಯಕ್ತಿಯೋರ್ವ ಒಂದಲ್ಲ ಎರಡಲ್ಲ ಬರೋಬ್ಬರಿ 187 ನಾಣ್ಯಗಳನ್ನು ನುಂಗಿರುವ ವಿಚಿತ್ರ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ವ್ಯಕ್ತಿಗೆ ಹೆಚ್​ಎಸ್​ಕೆ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ನಾಣ್ಯಗಳನ್ನು ಹೊರತೆಗೆದು ಮರುಜೀವ ನೀಡಿದ್ದಾರೆ.

58 ವರ್ಷದ ದ್ಯಾಮಪ್ಪ ಹರಿಜನ ಎಂಬವರು 187 ನಾಣ್ಯಗಳನ್ನು ನುಂಗಿದ್ದರು. ವ್ಯಕ್ತಿಯು 5 ರೂಪಾಯಿಯ 56 ನಾಣ್ಯ, 2 ರೂಪಾಯಿಯ 51 ನಾಣ್ಯ ಹಾಗೂ 1ರ 80 ನಾಣ್ಯಗಳು ಸೇರಿ ಒಟ್ಟು 187 ನಾಣ್ಯಗಳನ್ನು ನುಂಗಿದ್ದರು. ವೈದ್ಯರು ಎಂಡೋಸ್ಕೋಪಿ ಮೂಲಕ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ಸು ಕಂಡಿದ್ದಾರೆ. ಬಸವೇಶ್ವರ ವಿದ್ಯಾವರ್ಧಕ ಸಂಘದ ಹಾನಗಲ್ ಶ್ರೀಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಗಿದೆ.

ಒಂದಲ್ಲ ಎರಡಲ್ಲ ಬರೋಬ್ಬರಿ 187 ನಾಣ್ಯ ನುಂಗಿದ ಭೂಪ.. ವ್ಯಕ್ತಿಯ ಪ್ರಾಣ ಉಳಿಸಿದ ಬಾಗಲಕೋಟೆ ವೈದ್ಯರು

ದ್ಯಾಮಪ್ಪ ಮೂಲತಃ ರಾಯಚೂರು ಜಿಲ್ಲೆಯ ಸಂತೆ ಕೆಲ್ಲೂರು ಗ್ರಾಮದ ನಿವಾಸಿ. ಇವರು ಸುಮಾರು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎನ್ನಲಾಗ್ತಿದೆ. ಆಗಾಗ ಮದ್ಯ ಸೇವಿಸುತ್ತಿದ್ದ ಈತ ತನಗೆ ಗೊತ್ತಿಲ್ಲದೇ ಒಂದು, ಎರಡು, ಐದು ಹೀಗೆ ಬೇರೆ ಬೇರೆ ನಾಣ್ಯ ನುಂಗುತ್ತ ಬಂದಿದ್ದಾನೆ. 187 ನಾಣ್ಯಗಳು ಆತನ ಹೊಟ್ಟೆ ಸೇರಿದ್ದವು.

ಆದರೆ ಹೊಟ್ಟೆ ನೋವು ಆರಂಭವಾದಾಗ ದ್ಯಾಮಪ್ಪ ಮನೆಯವರಿಗೆ ತಿಳಿಸಿದ್ದಾನೆ. ಬಳಿಕ ರಾಯಚೂರಿನ ಖಾಸಗಿ ಆಸ್ಪತ್ರೆಗೆ ತೋರಿಸಲಾಗಿತ್ತು. ಅಲ್ಲಿಂದ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದ್ಯಾಮಪ್ಪನನ್ನು ಕರೆತರಲಾಗಿತ್ತು. ಎಕ್ಸ್ ರೆ, ಎಂಡೋಸ್ಕೊಪಿ ಮೂಲಕ ದ್ಯಾಮಪ್ಪನ ಪರೀಕ್ಷೆ ನಡೆಸಿದ ವೈದ್ಯರಿಗೆ ಅಚ್ಚರಿ ಆಗಿತ್ತು.

ನಾಣ್ಯಗಳು ಕರುಳಿಗೆ ಹೋಗದೇ, ನೇರವಾಗಿ ಹೊಟ್ಟೆ ಭಾಗಕ್ಕೆ ಹೋಗಿದ್ದರಿಂದ ವ್ಯಕ್ತಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಎಲ್ಲಾ ನಾಣ್ಯಗಳು ಸೇರಿ ಸುಮಾರು 1.2 ಕೆ.ಜಿ ತೂಕ ಇದ್ದು, ಗ್ಯಾಸ್ಟ್ರೋಟಾಮಿ ಎಂಬ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ನಾಣ್ಯ ಹೊರತೆಗೆದಿದ್ದಾರೆ. ಸುಮಾರು ಒಂದು ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಾದ ಡಾ.ಈಶ್ವರ ಕಲಬುರಗಿ, ಡಾ.ಪ್ರಕಾಶ ಕಟ್ಟಿಮನಿ, ಅರವಳಿಕೆ ತಜ್ಞರಾದ ಡಾ.ಅರ್ಚನಾ, ಡಾ.ರೂಪಾ ಹುಲಕುಂದೆ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಬಡ ವೃದ್ಧನ ಪಾಲಿಗೆ ದೇವರಾಗಿದ್ದಾರೆ.

ಸದ್ಯ ಶಸ್ತ್ರಚಿಕಿತ್ಸೆ ಬಳಿಕ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ಕಾರ್ಯಕ್ಕೆ ವ್ಯಕ್ತಿಯ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ : ಸಿಬ್ಬಂದಿ ನಿರ್ಲಕ್ಷ್ಯ ಆರೋಪ: ಆಸ್ಪತ್ರೆ ಒಳಾಂಗಣ ದಾರಿಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

Last Updated : Nov 27, 2022, 8:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.