ETV Bharat / sports

ಐಸಿಸಿ ಟಿ20 ರ‍್ಯಾಂಕಿಂಗ್‌: ಬ್ಯಾಟಿಂಗ್‌ನಲ್ಲಿ ಬಾಬರ್‌ಗೆ ಅಗ್ರಸ್ಥಾನ, ಹಸರಂಗ ನಂ1 ಬೌಲರ್‌, ಕೊಹ್ಲಿ ಯಥಾಸ್ಥಿತಿ

author img

By

Published : Nov 3, 2021, 4:33 PM IST

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯುತ್ತಿರುವ ವೇಳೆ ನೂತನ ವಿಶ್ವ ಕ್ರಿಕೆಟ್‌ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆಯಾಗಿದೆ.

icc-mens-t20-rankings-issued-on-wednesday
ಐಸಿಸಿ ಟಿ20 ರ‍್ಯಾಂಕಿಂಗ್‌ ಪ್ರಕಟ

ದುಬೈ: ಐಸಿಸಿ ಪ್ರಕಟಿಸಿರುವ ನೂತನ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ 23ನೇ ಸ್ಥಾನಕ್ಕೇರಿದ್ದಾರೆ. ಬೌಲರ್ ಜಸ್ಪ್ರೀತ್ ಬುಮ್ರಾ 10 ಸ್ಥಾನ ಏರಿಕೆ ಕಂಡು 24ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ಮೊದಲು ಪಟ್ಟಿಯಲ್ಲಿದ್ದ ಐದನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಹಾಗೂ 8ನೇ ಸ್ಥಾನದಲ್ಲಿ ಕೆ.ಎಲ್.ರಾಹುಲ್ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್​ ವಿಶ್ವಕಪ್​ನಲ್ಲಿ ಸಿಡಿಸಿದ ಎರಡು ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್​​ನ ಡೇವಿನ್ ಮಲನ್ ಹಿಂದಿಕ್ಕಿ ಟಿ20 ಬ್ಯಾಟಿಂಗ್​​​​​ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇದು ಬಾಬರ್ ವೃತ್ತಿ ಜೀವನದಲ್ಲಿ 6ನೇ ಬಾರಿ ಮೊದಲ ಸ್ಥಾನ ಅಲಂಕರಿಸಿದಂತಾಗಿದೆ. ಜೊತೆಗೆ, ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲೂ ಬಾಬರ್ ಮೊದಲ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್​ನ ಮಲನ್​​ಗಿಂತಲೂ 36 ಅಂಕ ಹೆಚ್ಚು ಪಡೆದು ಒಟ್ಟು 834 ಅಂಕಗಳ ಮೂಲಕ ಮೊದಲ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ಜೋ ಬಟ್ಲರ್ ಮತ್ತು ಜೇಸನ್ ರಾಯ್​​ ಪಟ್ಟಿಯಲ್ಲಿ ಮೇಲ್ದರ್ಜೆಗೇರಿದ್ದಾರೆ. ಟಿ20ಯಲ್ಲಿ ಮೊದಲ ಶತಕ ಸಿಡಿಸಿದ ಜೋಸ್ ಬಟ್ಲರ್ 8 ಸ್ಥಾನ ಏರಿಕೆ ಕಂಡು 9ನೇ ಸ್ಥಾನ ಪಡೆದಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಶ್ರೀಲಂಕಾದ ವಾನಿಂದು ಹಸರಂಗ 776 ಅಂಕಗಳ ಮೂಲಕ ಮೊದಲ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ದಕ್ಷಿಣ ಆಫ್ರಿಕದ ಅನ್ರಿಚ್ ನೋರ್ಟ್ಜೆ 18 ಸ್ಥಾನ ಏರಿಕೆ ಕಂಡು 7ನೇ ಸ್ಥಾನ ತಲುಪಿದ್ದಾರೆ.

ಆಲ್​ರೌಂಡರ್ಸ್ ವಿಭಾಗದಲ್ಲಿ ಭಾರತದ ಯಾವೊಬ್ಬ ಆಟಗಾರನೂ ಸಹ 10ರ ಪಟ್ಟಿಯಲ್ಲಿ ಕಂಡುಬಂದಿಲ್ಲ. ಬಾಂಗ್ಲಾದ ಶಕಿಬ್ ಅಲ್ ಹಸನ್ ಎಂದಿನಂತೆ 271 ಅಂಕಗಳ ಮೂಲಕ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. ಇಂಗ್ಲೆಂಡ್​ನ ಲಿಯಮ್ ಲಿವಿಂಗ್​ಸ್ಟೋನ್ ಬರೋಬ್ಬರಿ 57 ಸ್ಥಾನಗಳ ಏರಿಕೆಕಂಡು 10ನೇ ಸ್ಥಾನ ಅಲಂಕರಿಸಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್.. ಕೊಹ್ಲಿ-ಧೋನಿ-ಶಾಸ್ತ್ರಿ ಸುದೀರ್ಘ ಚರ್ಚೆ.. ಒತ್ತಡದ ನಡುವೆ ತಂತ್ರಗಾರಿಕೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.