ETV Bharat / sports

US Open: ಕೊಕೊ ಗೌಫ್​ vs ಅರೀನಾ ಸಬಲೆಂಕಾ ಫೈನಲ್ಸ್​ ಹಣಾಹಣಿ.. ಯಾರ ಪಾಲಿಗೆ ಯುಎಸ್ ಓಪನ್‌ ಮಹಿಳೆಯರ ಸಿಂಗಲ್ಸ್?

author img

By ETV Bharat Karnataka Team

Published : Sep 8, 2023, 8:47 PM IST

US Open
US Open

Coco Gauff vs Aryna Sabalenka: ಅಮೆರಿಕ ಓಪನ್‌ ಮಹಿಳೆಯರ ಸಿಂಗಲ್ಸ್ ಫೈನಲ್ಸ್​ನಲ್ಲಿ ಕೊಕೊ ಗೌಫ್ ಮತ್ತು ಅರೀನಾ ಸಬಲೆಂಕಾ ಭಾನುವಾರ ಸೆಣಸಲಿದ್ದಾರೆ.

ನ್ಯೂಯಾರ್ಕ್: ಯುಎಸ್ ಓಪನ್‌ನಲ್ಲಿ ಕರೋಲಿನಾ ಮುಚೋವಾ ವಿರುದ್ಧ ನೇರ ಸೆಟ್‌ಗಳಿಂದ ಗೆದ್ದ ನಂತರ ಅಮೆರಿಕದ ಯುವ ಆಟಗಾರ್ತಿ ಕೊಕೊ ಗೌಫ್ ತಮ್ಮ ವೃತ್ತಿಜೀವನದಲ್ಲಿ ಎರಡನೇ ಗ್ರ್ಯಾಂಡ್ ಸ್ಲಾಮ್ ಫೈನಲ್‌ ಪ್ರವೇಶ ಪಡೆದುಕೊಂಡಿದ್ದಾರೆ. ಈ ವರ್ಷ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಅವರು ಗುರುವಾರ ರಾತ್ರಿ ಮುಚೋವಾ ಅವರನ್ನು 6-4, 7-5 ರಿಂದ ಸೋಲಿಸಿ ಮಹಿಳೆಯರ ಸಿಂಗಲ್ಸ್ ಫೈನಲ್‌ಗೆ ತಲುಪಿದರು.

ಆರನೇ ಶ್ರೇಯಾಂಕದ ಗೌಫ್ 11 ನೇರ ಪಂದ್ಯಗಳನ್ನು ಗೆದ್ದಿದ್ದಾರೆ, ಅಲ್ಲದೇ ಇದು ಅವರ ವೃತ್ತಿಜೀವನದ ಅತ್ಯುತ್ತಮ ಸರಣಿಯಾಗಿದೆ. ವಾಷಿಂಗ್ಟನ್ ಡಿ.ಸಿ ಮತ್ತು ಸಿನ್ಸಿನಾಟಿಯನ್ನು ಪ್ರಶಸ್ತಿಗಳನ್ನು ಗೌಫ್​ ಜಯಿಸಿದ್ದಾರೆ. 19 ವರ್ಷದ ಗೌಫ್​ 1999 ರಲ್ಲಿ ಸೆರೆನಾ ವಿಲಿಯಮ್ಸ್ ನಂತರ ಯುಎಸ್ ಓಪನ್‌ನ ಫೈನಲ್‌ನಲ್ಲಿ ಕಾಣಿಸಿಕೊಂಡ ಅತ್ಯಂತ ಕಿರಿಯ ಅಮೆರಿಕನ್ ಮಹಿಳಾ ಆಟಗಾರ್ತಿಯಾಗಿದ್ದಾರೆ. ಸೆರೆನಾ, ಅವರ ಸಹೋದರಿ ವೀನಸ್ ಮತ್ತು ಸ್ಲೋನ್ ಸ್ಟೀಫನ್ಸ್ ನಂತರ ಮಹಿಳಾ ಸಿಂಗಲ್ಸ್​ ಪ್ರಶಸ್ತಿ ಗೆದ್ದ ನಾಲ್ಕನೇ ಆಟಗಾರ್ತಿ ಎಂಬ ಖ್ಯಾತಿಯನ್ನು ಪಡೆಯಲು ಎದುರು ನೋಡುತ್ತಿದ್ದಾರೆ.

ಇದಲ್ಲದೇ, ಗೌಫ್ ಅವರು ಮಾರಿಯಾ ಶರಪೋವಾ (2004 ವಿಂಬಲ್ಡನ್ ಮತ್ತು 2006 ಯುಎಸ್ ಓಪನ್) ನಂತರ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್‌ಗಳಲ್ಲಿ (2020 ರೋಲ್ಯಾಂಡ್ ಗ್ಯಾರೋಸ್ ಸೇರಿದಂತೆ) ಕಾಣಿಸಿಕೊಂಡ ಅತ್ಯಂತ ಕಿರಿಯ ಮಹಿಳೆ ಮತ್ತು 1990-93 ರಿಂದ ಮೋನಿಕಾ ಸೆಲೆಸ್ ನಂತರ ಫೈನಲ್ಸ್​ ಪ್ರವೇಶಿಸಿದ ಅತ್ಯಂತ ಕಿರಿಯ ಅಮೆರಿಕನ್​ ಮಹಿಳೆ ಎಂಬ ದಾಖಲೆಯನ್ನು ಮಾಡಿದ್ದಾರೆ.

ಕೊಕೊ ಗೌಫ್ ವಿಶ್ವದ ನಂ.1 ಆಟಗಾರ್ತಿ ಅರೀನಾ ಸಬಲೆಂಕಾ ಫೈನಲ್ಸ್​ನಲ್ಲಿ ಫೈಟ್​ ಕೊಡಲಿದ್ದಾರೆ. ಸೆಮಿಫೈನಲ್​ನಲ್ಲಿ ಅರೀನಾ ಸಬಲೆಂಕಾ ಕೀಸ್ ವಿರುದ್ಧ 0-6, 7-6(1), 7-6(5) ರಿಂದ ಜಯ ದಾಖಲಿಸಿದರು. ಅಮೆರಿಕ ಓಪನ್ ನಂತರ ಅಧಿಕೃತವಾಗಿ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರುತ್ತಿರುವ 25 ವರ್ಷ ವಯಸ್ಸಿನ ಬೆಲಾರಸ್​ನ ಸಬಲೆಂಕಾ ಈ ವರ್ಷ ತನ್ನ ಎರಡನೇ ಗ್ರಾಂಡ್​​ ಸ್ಲಾಮ್ ಫೈನಲ್‌ ಪ್ರವೇಶಿಸಿದ್ದಾರೆ. 2016 ರಲ್ಲಿ ಸೆರೆನಾ ನಂತರ ಒಂದೇ ವರ್ಷದಲ್ಲಿ ಎಲ್ಲಾ ನಾಲ್ಕು ಗ್ರ್ಯಾಂಡ್ ಸ್ಲಾಮ್ ಪಂದ್ಯಗಳ ಸೆಮಿಫೈನಲ್ ತಲುಪಿದ ಮೊದಲ ಆಟಗಾರ್ತಿ ಎಂಬ ಕೀರ್ತಿಯನ್ನು ಸಬಲೆಂಕಾ ಪಡೆದುಕೊಂಡಿದ್ದಾರೆ. ಈ ವರ್ಷದ ಪ್ರವಾಸದಲ್ಲಿ ಸಬಲೆಂಕಾ 50ನೇ ಪಂದ್ಯವನ್ನು ಜಯಿಸಿದರು. ಅಮೆರಿಕದ ಯುವ ಆಟಗಾರ್ತಿ ಕೊಕೊ ಗೌಫ್ ಮತ್ತು ಬೆಲರಸ್​ನ ಅರೀನಾ ಸಬಲೆಂಕಾ ನಡುವೆ ಭಾನುವಾರ ಫೈನಲ್​ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಯುಎಸ್​ ಓಪನ್‌ ಡಬಲ್ಸ್‌: ಫೈನಲ್​ ಪ್ರವೇಶಿಸಿದ ಬೋಪಣ್ಣ​ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.