ETV Bharat / sports

ಸಿನ್ಸಿನಾಟಿ ಮಾಸ್ಟರ್ಸ್​: ನಂ. 1 ಅಲ್ಕರಾಜ್ ಮಣಿಸಿದ ಜೊಕೊವಿಕ್.. ಗೌಫ್​ಗೆ​​ ಮಹಿಳಾ ಚಾಂಪಿಯನ್​ ಪಟ್ಟ

author img

By

Published : Aug 21, 2023, 11:54 AM IST

Cincinnati Masters Title: ವಿಶ್ವ ನಂಬರ್​ 1 ಆಟಗಾರ ಕಾರ್ಲೋಸ್ ಅಲ್ಕರಾಜ್ ವಿರುದ್ಧ ಭರ್ಜರಿ ಆಟ ಪ್ರದರ್ಶಿಸಿದ ನೊವಾಕ್​ ಜೊಕೊವಿಕ್​ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ಮಹಿಳಾ ವಿಭಾಗದಲ್ಲಿ ಅಮೆರಿಕದ ಕೊಕೊ ಗೌಫ್ ಪ್ರಶಸ್ತಿ ಜಯಿಸಿದ್ದಾರೆ.

novak-djokovic-beat-carlos-alcaraz-to-won-cincinnati-masters-title
ಸಿನ್ಸಿನಾಟಿ ಮಾಸ್ಟರ್ಸ್​: ನಂ. 1 ಅಲ್ಕರಾಜ್ ಮಣಿಸಿದ ಜೊಕೊವಿಕ್.. ಗೌಫ್​​ ಮಹಿಳಾ ಚಾಂಪಿಯನ್​ ಪಟ್ಟ

ಸಿನ್ಸಿನಾಟಿ : ಇಲ್ಲಿನ ಸೆಂಟರ್ ಕೋರ್ಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ 23 ಬಾರಿಯ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳ ಒಡೆಯ ಸರ್ಬಿಯಾದ ನೊವಾಕ್ ಜೊಕೊವಿಕ್ ಅವರು ವಿಶ್ವ ನಂಬರ್​ 1 ಆಟಗಾರ ಕಾರ್ಲೋಸ್ ಅಲ್ಕರಾಜ್ ಮಣಿಸಿ ಸಿನ್ಸಿನಾಟಿ ಮಾಸ್ಟರ್ಸ್ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ. ರೋಚಕ ಫೈನಲ್​ ಹಣಾಹಣಿಯಲ್ಲಿ ಯುವ ಆಟಗಾರ ಅಲ್ಕರಾಜ್​ಗೆ ತಿರುಗೇಟು ನೀಡಿದ ಜೊಕೊವಿಕ್ 5-7, 7-6(7), 7-6(4) ಸೆಟ್​ಗಳ ಅಂತರದ ಗೆಲುವು ಸಾಧಿಸಿದರು.

ಅತ್ಯದ್ಭುತ ಪ್ರದರ್ಶನ ನೀಡಿದ ಜೊಕೊವಿಕ್ ಇತ್ತೀಚಿನ ದಿನಗಳಲ್ಲಿನ ಅತಿ ರೋಚಕ ಪಂದ್ಯವೊಂದರಲ್ಲಿ ಮೇಲುಗೈ ಸಾಧಿಸಿ ಅಲ್ಕರಾಜ್​ ವಿರುದ್ಧ ವಿಂಬಲ್ಡನ್​ ಓಪನ್​ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. 36 ವರ್ಷದ ಹಿರಿಯ ಆಟಗಾರ ತಮ್ಮ 39ನೇ ಎಟಿಪಿ ಮಾಸ್ಟರ್ಸ್ 1000 ಪ್ರಶಸ್ತಿ ಜಯಿಸಿ ಸಂಭ್ರಮಿಸಿದರು. ಅಲ್ಕರಾಜ್ ವಿರುದ್ಧ ಮೊದಲ ಸೆಟ್​​ನ ಹಿನ್ನಡೆ ಬಳಿಕ ಸಿಡಿದೆದ್ದು, ನಂತರದ ಎರಡೂ ಸೆಟ್​ಗಳಲ್ಲಿ ಪ್ರಾಬಲ್ಯ ಸಾಧಿಸಿದರು.

ನಿರ್ಣಾಯಕ ಮೂರನೇ ಸೆಟ್‌ನಲ್ಲಿ 5-4ರ ಮುನ್ನಡೆಯೊಂದಿಗೆ ಪ್ರಶಸ್ತಿಯ ಸಮೀಪದಲ್ಲಿದ್ದ ನೊವಾಕ್​ ಸರ್ವ್​ ಮಾಡುವಾಗ ಕೊಂಚ ಎಡವಿದರು. ಒಟ್ಟಾರೆ ಮೂರು ಗಂಟೆ 49 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಕೊನೆಗೂ ಜೊಕೊವಿಕ್ ಗೆಲುವಿನ ನಗೆ ಬೀರಿದರು. ಇಬ್ಬರೂ ಆಟಗಾರರು ಅದ್ಭುತ ಶಾಟ್‌ಮೇಕಿಂಗ್ ಮತ್ತು ಮಾನಸಿಕ ಸಾಮರ್ಥ್ಯ ಪ್ರದರ್ಶಿಸಿದರು.

ಮೊದಲ ಸೆಟ್​ನಿಂದಲೂ ಉಭಯ ಆಟಗಾರರು ಪ್ರತಿ ಅಂಕಕ್ಕೂ ಬಿಗುವಿನ ಪ್ರದರ್ಶನ ತೋರಿದರು. 62 ನಿಮಿಷಗಳ ಅವಧಿಯಲ್ಲಿ, ಇಬ್ಬರೂ ಮುನ್ನಡೆ ಸಾಧಿಸುವ ಅವಕಾಶ ಪಡೆದರು. 2-4 ರಿಂದ ಹಿನ್ನಡೆ ಅನುಭವಿಸಿದ್ದ ಅಲ್ಕರಾಜ್ 7-5ರ ಅಂತರದಲ್ಲಿ ಸೆಟ್ ಗೆದ್ದರು. ಬಳಿಕ ತಿರುಗೇಟು ನೀಡಿದ ಜೊಕೊವಿಕ್​ ತಮ್ಮ ಸುದೀರ್ಘ ಅನುಭವದೊಂದಿಗೆ ಆಕ್ರಮಣಕಾರಿ ಆಟ ತೋರಿದರು. 7-6(7)ರಿಂದ ಎರಡನೇ ಸೆಟ್​ ಜಯಿಸಿ ಪಂದ್ಯವನ್ನು ನಿರ್ಣಾಯಕ ಸೆಟ್​​ ಹಂತಕ್ಕೆ ಕೊಂಡೊಯ್ದರು. ಅಂತಿಮ ಸೆಟ್​​ ಕೂಡ ಒಮ್ಮೆ 3-3ರಲ್ಲಿ ಸಮಬಲದಲ್ಲಿ ಮುಂದುವರೆದಿತ್ತು, ಅಂತಿಮವಾಗಿ 7-6(4) ರ ಅಂತರದ ಗೆಲುವು ದಾಖಲಿಸಿದ ಜೊಕೊವಿಕ್​ ಅಂಗಳದಲ್ಲಿ ಮಲಗಿ ಸಂಭ್ರಮಿಸಿದರು.

ಮಹಿಳಾ ಚಾಂಪಿಯನ್ ಕೊಕೊ ಗೌಫ್ :​ ಮಹಿಳಾ ವಿಭಾಗದಲ್ಲಿ ಅಮೆರಿಕದ ಆಟಗಾರ್ತಿ ಏಳನೇ ಶ್ರೇಯಾಂಕದ ಕೊಕೊ ಗೌಫ್ ಅವರು ಜೆಕ್​ ಗಣರಾಜ್ಯದ ಕರೋಲಿನಾ ಮುಚೋವಾ ವಿರುದ್ಧ 6-3, 6-4 ಅಂತರದ ಜಯ ಸಾಧಿಸಿದರು. ಈ ಮೂಲಕ 50 ವರ್ಷಗಳ ಬಳಿಕ ವೆಸ್ಟರ್ನ್ ಮತ್ತು ಸದರ್ನ್ ಓಪನ್ ಗೆದ್ದ ಮೊದಲ ಯುವ ಆಟಗಾರ್ತಿ ಎಂಬ ಶ್ರೇಯಕ್ಕೆ ಪಾತ್ರರಾದರು.

19ರ ಹರೆಯದ ಗೌಫ್, 2022ರ ಫ್ರೆಂಚ್ ಓಪನ್ ರನ್ನರ್ - ಅಪ್ ಆಗಿದ್ದು, ಮುಚೋವಾ ವಿರುದ್ಧ ಆಕರ್ಷಕ ಆಟ ಪ್ರದರ್ಶಿಸಿ ನೇರ ಸೆಟ್​ಗಳ ಜಯ ದಾಖಲಿಸಿದರು. ಸುಮಾರು 1 ಗಂಟೆ, 56 ನಿಮಿಷಗಳ ಕಾಲ ನಡೆದ ಪಂದ್ಯವನ್ನು ಜಯಿಸಿ ಸಂಭ್ರಮದಿಂದ ನಲಿದಾಡಿದರು.

ಗೌಫ್ ಪಂದ್ಯಾವಳಿಯ ಫೈನಲ್​ ತಲುಪಿದ ನಾಲ್ಕನೇ ಹದಿಹರೆಯದ ಆಟಗಾರ್ತಿಯಾಗಿದ್ದಾರೆ. 2004ರಲ್ಲಿ ಫೈನಲ್​ಗೇರಿದ್ದ ವೆರಾ ಜ್ವೊನಾರೆವಾ ಅವರು ಮೊದಲಿಗರಾಗಿದ್ದಾರೆ. 1968 ರಲ್ಲಿ 17 ವರ್ಷ ವಯಸ್ಸಿನ ಲಿಂಡಾ ಟ್ಯುರೊ ಪ್ರಶಸ್ತಿ ಜಯಿಸಿದ್ದು, ಸುಮಾರು 50 ವರ್ಷಗಳ ಬಳಿಕ ಇದೀಗ ಗೌಫ್ ಎರಡನೇ ಅತಿ ಕಿರಿಯ ಚಾಂಪಿಯನ್ ಆಗಿದ್ದಾರೆ.

ಇದನ್ನೂ ಓದಿ: ಐರ್ಲೆಂಡ್​ ವಿರುದ್ಧ ಮಿಂಚಿದ ರಿಂಕು.. 'ನನ್ನೆಲ್ಲ ಪ್ರಯತ್ನಕ್ಕೆ ಸಿಕ್ಕ ಫಲ' ಎಂದ ಯುವ ಬ್ಯಾಟರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.