ETV Bharat / sports

ಏಷ್ಯನ್​ ಗೇಮ್ಸ್​​: ಹಾಕಿಯಲ್ಲಿ ಬಂಗಾರ ಗೆದ್ದ ಭಾರತ; 2024ರ ಒಲಿಂಪಿಕ್ಸ್ ಪ್ರವೇಶ

author img

By ETV Bharat Karnataka Team

Published : Oct 6, 2023, 5:53 PM IST

Updated : Oct 6, 2023, 7:22 PM IST

ಏಷ್ಯನ್​ ಗೇಮ್ಸ್​ ಪುರುಷರ ಹಾಕಿ​ ಫೈನಲ್​ನಲ್ಲಿ ಭಾರತ ಚಿನ್ನದ ಪದಕ ಗೆದ್ದಿದೆ.

Hangzhou Asian Games
Hangzhou Asian Games

ಹ್ಯಾಂಗ್​ಝೌ (ಚೀನಾ): ಇಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ನಲ್ಲಿ ಭಾರತಕ್ಕೆ 22ನೇ ಚಿನ್ನದ ಪದಕ ಒಲಿದಿದೆ. ಇಂದು ಪುರುಷರ ಹಾಕಿ ತಂಡ ಜಪಾನ್ ವಿರುದ್ಧ 5-1 ಅಂತರದ ಗೆಲುವು ದಾಖಲಿಸಿತು. ಈ ಮೂಲಕ ಹಾಲಿ ಚಾಂಪಿಯನ್ನರನ್ನು ಮಣಿಸಿದ ಭಾರತ ಚಿನ್ನ ಮುಡಿಗೇರಿಸಿಕೊಂಡಿತು. ಇದರೊಂದಿಗೆ 2024ರ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ತನ್ನ ಸ್ಥಾನ ಖಚಿತಪಡಿಸಿದೆ.

1966 ಬ್ಯಾಂಕಾಕ್, 1998 ಬ್ಯಾಂಕಾಕ್ ಮತ್ತು 2014 ಇಂಚಿಯಾನ್‌ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಭಾರತಕ್ಕೆ ಇದು ನಾಲ್ಕನೇ ಪದಕ. ಇದುವರೆಗೆ ಏಷ್ಯಾಡ್​ನಲ್ಲಿ ಒಂಬತ್ತು ಬೆಳ್ಳಿ ಮತ್ತು ಮೂರು ಕಂಚಿನ ಪದಕವನ್ನು ಭಾರತ ಗೆದ್ದುಕೊಂಡಿದೆ. ಪುರುಷರ ಹಾಕಿಯಲ್ಲಿ ತಲಾ ನಾಲ್ಕು ಚಿನ್ನದ ಪದಕಗಳೊಂದಿಗೆ ಭಾರತ ಎರಡನೇ ಅತ್ಯಂತ ಯಶಸ್ವಿ ತಂಡವಾಗಿದೆ. ದಕ್ಷಿಣ ಕೊರಿಯಾದ ಜೊತೆಗೆ ಜಂಟಿಯಾಗಿ ಎರಡನೇ ಸ್ಥಾನವನ್ನು ಹಂಚಿಕೊಂಡಿದೆ. ಪಾಕಿಸ್ತಾನ ಎಂಟು ಚಿನ್ನದ ಪದಕ ಗೆದ್ದಿದ್ದು ಅಗ್ರಸ್ಥಾನದಲ್ಲಿದೆ.

ಶುಕ್ರವಾರ ನಡೆದ ಫೈನಲ್‌ನಲ್ಲಿ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ (32ನೇ, 59ನೇ ನಿಮಿಷ), ಮನ್‌ಪ್ರೀತ್‌ ಸಿಂಗ್‌ (25ನೇ ನಿ.), ಅಮಿತ್‌ ರೋಹಿದಾಸ್‌ (36ನೇ ನಿ.) ಮತ್ತು ಅಭಿಷೇಕ್‌ (48ನೇ ನಿ.) ಅವರ ಗೋಲುಗಳ ನೆರವಿನಿಂದ 5-1 ಅಂತರದಲ್ಲಿ ಜಪಾನ್‌ ತಂಡವನ್ನು ಸೋಲಿಸಿತು. 51ನೇ ನಿಮಿಷದಲ್ಲಿ ಪರೋಕ್ಷ ಪೆನಾಲ್ಟಿ ಕಾರ್ನರ್‌ನಲ್ಲಿ ಸೆರೆನ್ ತನಕಾ ಅವರು ಜಪಾನ್‌ ಪರ ಏಕೈಕ ಗೋಲು ದಾಖಲಿಸಿದರು.

ಮೊದಲ ಕ್ವಾರ್ಟರ್‌ ಅವಧಿಯಲ್ಲಿ ಎರಡೂ ತಂಡಗಳು ಅಂಕಕ್ಕಾಗಿ ಪರದಾಡಿದವು. ಜಪಾನ್ ಭಾರತದ ಫಾರ್ವರ್ಡ್‌ ಆಟಗಾರರ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸಿತು. ಭಾರತ ತನ್ನ ಮೊದಲ ಪೆನಾಲ್ಟಿ ಕಾರ್ನರ್ ಸೇರಿದಂತೆ ಒಂದೆರಡು ಅವಕಾಶಗಳನ್ನು ಹೊಂದಿತ್ತು. ಆದರೆ ಜಪಾನ್‌ ಗೋಲ್‌ಕೀಪರ್ ತುಕುಮಿ ಕಿಟಗಾವಾ ಹರ್ಮನ್‌ಪ್ರೀತ್ ಅವರ ಡ್ರ್ಯಾಗ್ ಫ್ಲಿಕ್ ತಡೆಯುವಲ್ಲಿ ಯಶಸ್ವಿಯಾದರು.

ಎರಡನೇ 15 ನಿಮಿಷದ ಆಟದಲ್ಲೂ ಯಾವುದೇ ಅಂಕಗಳು ಕಂಡುಬರಲಿಲ್ಲ. ಎರಡು ತಂಡಗಳು ಪ್ರಬಲ ಫೈಪೋಟಿ ನೀಡಿದವು. 25ನೇ ನಿಮಿಷದಲ್ಲಿ ಮನ್‌ಪ್ರೀತ್‌ ಸಿಂಗ್‌ ಅವರ ಪ್ರಯತ್ನ ಯಶಸ್ಸು ಕಂಡಿತು. ಅರ್ಧ ಪಂದ್ಯದ ಅಂತ್ಯಕ್ಕೆ ತಂಡ 1 -0ಯ ಮುನ್ನಡೆ ಪಡೆದುಕೊಂಡಿತ್ತು.

ಎರಡನೇ ವಿರಾಮದ ನಂತರ ಮೈದಾನದಲ್ಲಿ ಭಾರತೀಯ ಆಟಗಾರರು ಸಂಚಲನ ಮೂಡಿಸಿದರು. ಹರ್ಮನ್‌ಪ್ರೀತ್ ಸಿಂಗ್ ಮತ್ತು ಅಮಿತ್‌ ರೋಹಿದಾಸ್‌ ಅವರಿಂದ 4 ನಿಮಿಷದ ಅಂತರದಲ್ಲಿ ಎರಡು ಗೋಲ್​ಗಳು ದಾಖಲಾದವು. ಇದರಿಂದಾಗಿ ಭಾರತ 3-0ಯ ಮುನ್ನಡೆಯೊಂದಿಗೆ ಮೂರನೇ ಕ್ವಾರ್ಟರ್​ ಅಂತ್ಯಗೊಳಿಸಿತು. ಎದುರಾಳಿ ಜಪಾನ್​ಗೆ ಅಂಕ ಗಳಿಸುವ ಒತ್ತಡ ಹೆಚ್ಚಾಗಿತ್ತು.

ಕೊನೆಯ 15 ನಿಮಿಷದ ಆಟದಲ್ಲಿ ಭಾರತ ಅಂಕಗಳನ್ನು ಬಿಟ್ಟುಕೊಡದೇ ಹೆಚ್ಚು ರಕ್ಷಣಾತ್ಮಕ ಆಟಕ್ಕೆ ಮುಂದಾಯಿತು. ಸಿಕ್ಕ ಅವಕಾಶವನ್ನು ಅಂಕಕ್ಕೆ ಪರಿವರ್ತಿಸುವ ಚಿಂತನೆಗಿಳಿಯಿತು. ಈ ಒತ್ತಡರಹಿತ ಆಟದಲ್ಲಿ ಅಭಿಷೇಕ್‌ ಭಾರತಕ್ಕೆ 4ನೇ ಗೋಲ್​ ತಂದರು. 51ನೇ ನಿಮಿಷದಲ್ಲಿ ಸಿಕ್ಕ ಫೆನಾಲ್ಟಿ ಕಾರ್ನರ್​ ಅವಕಾಶವನ್ನು ಜಪಾನ್​ ಯಶಸ್ವಿಯಾಗಿ ಪೂರ್ಣಗೊಳಿಸಿ ಖಾತೆ ತೆರೆಯಿತು. ಆದರೆ ಭಾರತವನ್ನು ತಲುಪಲು ಇನ್ನೂ ಮೂರು ಗೋಲಿನ ಅಗತ್ಯವಿತ್ತು. ಪಂದ್ಯ ಮುಕ್ತಾಯಕ್ಕೆ 1 ನಿಮಿಷ ಬಾಕಿ ಇರುವಾಗ ಹರ್ಮನ್‌ಪ್ರೀತ್ ಸಿಂಗ್ ಒಂದು ಗೋಲ್​ ಗಳಿಸಿ ವಿಜಯ ದಾಖಲಿಸಿದ್ದಲ್ಲದೇ 2024ರ ಒಲಿಂಪಿಕ್ಸ್​ ಪ್ರವೇಶ ಖಚಿತಪಡಿಸಿದರು.

ಇದನ್ನೂ ಓದಿ: ಏಷ್ಯನ್​ ಗೇಮ್ಸ್​ನಲ್ಲಿ ಪ್ರಚಂಡ ಪ್ರದರ್ಶನ; ಇದೇ ಮೊದಲ ಬಾರಿಗೆ 'ಶತಕ' ಪದಕ ದಾಖಲೆಯ ಹೊಸ್ತಿಲಲ್ಲಿ ಭಾರತ

Last Updated : Oct 6, 2023, 7:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.