ETV Bharat / sports

ಭಾರತದ ಅದೃಷ್ಟದ ಮೈದಾನದಲ್ಲಿ ಕಿವೀಸ್​ಗೆ ಅಗ್ನಿಪರೀಕ್ಷೆ.. ಇಂದೋರ್​ನಲ್ಲಿ ಸೋಲೇ ಕಾಣದ ಟೀಂ ಇಂಡಿಯಾ

author img

By

Published : Jan 23, 2023, 7:57 PM IST

Team India five ODI Record at Holkar
ಇಂದೋರ್​ನಲ್ಲಿ ಸೋಲೇ ಕಾಣದ ಟೀಂ ಇಂಡಿಯಾ

ಇಂದೋರ್​ ಮೈದಾನದಲ್ಲಿ ಸೋಲರಿಯದ ಭಾರತ- ಗೆಲುವಿನ ಜೈತ್ರಯಾತ್ರೆ ಮುಂದುವರಿಸುವತ್ತ ಚಿತ್ತ - ಟೀಂ ಇಂಡಿಯಾಗೆ ಹೋಳ್ಕರ್​ ಅದೃಷ್ಟದ ಮೈದಾನ - 5 ಪಂದ್ಯಗಳಲ್ಲಿ ಗೆದ್ದಿರುವ ಭಾರತ- ಇಂದೋರ್​ ಮೈದಾನದಲ್ಲಿ ಭಾರತ ಅದ್ಭುತ ದಾಖಲೆ

ನವದೆಹಲಿ: ನಾಳೆ ನ್ಯೂಜಿಲ್ಯಾಂಡ್​ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಮಧ್ಯಪ್ರದೇಶದ ಇಂದೋರ್​ನ ಹೋಳ್ಕರ್​ ಮೈದಾನದಲ್ಲಿ ನಡೆಯಲಿದೆ. ಹೋಲ್ಕರ್​ ಮೈದಾನ ಭಾರತದ ಪಾಲಿಗೆ ಅದೃಷ್ಟವೇ ಸರಿ. ಇಲ್ಲಿ ಆಡಿದ 5 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಭಾರತದ ಆಟಗಾರರು ಈ ಮೈದಾನದಲ್ಲಿ ಅತ್ಯುತ್ತಮ ದಾಖಲೆಗಳನ್ನೂ ನಿರ್ಮಿಸಿದ್ದಾರೆ. ಹೀಗಾಗಿ ಕಿವೀಸ್​ ಪಾಲಿಗೆ ಭಾರತ ಸವಾಲಾಗುವ ಎಲ್ಲ ಲಕ್ಷಣಗಳಿವೆ.

ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸರಣಿ ಜಯಿಸಿರುವ ಭಾರತ ಈ ಪಂದ್ಯವನ್ನು ಜಯಿಸಿ, ಸರಣಿ ವೈಟ್​ವಾಷ್​ ಮಾಡುವ ಉತ್ಸಾಹದಲ್ಲಿದೆ. ಇನ್ನು ಕೊನೆಯ ಪಂದ್ಯವನ್ನು ಗೆದ್ದು ಮಾನ ಉಳಿಸಿಕೊಳ್ಳಲು ಟಾಮ್​ ಲಾಥಮ್​ ಪಡೆ ಅಭ್ಯಾಸ ನಡೆಸಿದೆ. ಮೈದಾನದ ಅದೃಷ್ಟ ಮತ್ತು ತಂಡದ ಸಾಮರ್ಥ್ಯದ ಆಧಾರದ ಮೇಲೆ ಪಂದ್ಯ ಭಾರತದ ಪಾಲಾಗುವ ಸಾಧ್ಯತೆ ಹೆಚ್ಚಿದೆ.

ಇಂದೋರ್‌ನಲ್ಲಿ ಭಾರತದ ದಾಖಲೆಗಳಿವು: ಹೋಳ್ಕರ್​ ಸ್ಟೇಡಿಯಂನಲ್ಲಿ ನಡೆದ 5 ಏಕದಿನ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ 6 ನೇ ಏಕದಿನ ಸಂಗ್ರಾಮಕ್ಕೆ ಸಜ್ಜಾಗಿದೆ. ಇನ್ನು ಈ ಮೈದಾನದಲ್ಲಿ ಮೊದಲ ಬಾರಿಗೆ ಏಕದಿನ ಪಂದ್ಯವನ್ನಾಡುತ್ತಿರುವ ನ್ಯೂಜಿಲ್ಯಾಂಡ್​ಗೆ ದೊಡ್ಡ ಸವಾಲು ಎದುರಾಗಲಿದೆ.

ಅತ್ಯಧಿಕ ಸ್ಕೋರ್: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 5 ವಿಕೆಟ್​ಗೆ 418 ರನ್​ಗಳ ಬೃಹತ್​ ಮೊತ್ತ ದಾಖಲಿಸಿತ್ತು. ಬಳಿಕ ಪಂದ್ಯದಲ್ಲಿ ಹೆಚ್ಚಿನ ಮೊತ್ತದಲ್ಲಿ ಗೆದ್ದಿತ್ತು. ಇನ್ನು ಸಿಂಹದಮರಿ ಎಂದೇ ಖ್ಯಾತಿಯಾಗಿದ್ದ ವೀರೇಂದ್ರ ಸೆಹ್ವಾಗ್​ ಈ ಮೈದಾನದಲ್ಲಿ 220 ದ್ವಿಶತಕ ಸಾಧನೆ ಮಾಡಿದ್ದರು. ಇಂದಿಗೂ ಅದು ದಾಖಲೆಯಾಗಿಯೇ ಉಳಿದಿದೆ. ಯಾವೊಬ್ಬ ಬ್ಯಾಟರ್​ ಕೂಡ ವೈಯಕ್ತಿಕವಾಗಿ ಈ ರನ್​ ಶಿಖರವನ್ನು ದಾಟಿಲ್ಲ.

ಮಾಜಿ ವೇಗಿ ಶ್ರೀಶಾಂತ್​ ಬೆಂಕಿ ಬೌಲಿಂಗ್​: ಭಾರತ ತಂಡದ ಮಾಜಿ ವೇಗಿ ಕೇರಳದ ಎಸ್​ ಶ್ರೀಶಾಂತ್​ ಪಂದ್ಯವೊಂದರಲ್ಲಿ 6 ವಿಕೆಟ್​ ಕಿತ್ತಿದ ದಾಖಲೆ ಬರೆದಿದ್ದಾರೆ. ಇದು ಕೂಡ ಬೌಲಿಂಗ್​ ವಿಭಾಗದಲ್ಲಿ ದಾಖಲೆಯಾಗಿ ಉಳಿದಿದೆ. ಕೊನೆಯದಾಗಿ ಭಾರತ ತಂಡ ಇಲ್ಲಿ ಆಡಿದ 5 ಪಂದ್ಯಗಳಲ್ಲೂ ಗೆಲುವಿನ ಜೈತ್ರಯಾತ್ರೆ ಮುಂದುವರೆಸಿದೆ. ಸೋಲಿಲ್ಲದೇ ಮುನ್ನುಗ್ಗುತ್ತಿರುವ ಭಾರತ ಕಿವೀಸ್​ ಎದುರೂ ಇದೇ ದಾಖಲೆಯನ್ನು ಕಾಪಾಡಿಕೊಳ್ಳಲಿದೆಯಾ ಎಂಬುದು ಪ್ರಶ್ನೆಯಾಗಿದೆ.

2006 ರ ಏಪ್ರಿಲ್ 15 ರಂದು ಇಂಗ್ಲೆಂಡ್​ ಮತ್ತು ಭಾರತ ಮಧ್ಯೆ ಮೊದಲ ಏಕದಿನ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತ, ಆಂಗ್ಲರನ್ನು 7 ವಿಕೆಟ್‌ಗಳಿಂದ ಮಣಿಸಿತ್ತು. ಆ ನಂತರ ಟೀಂ ಇಂಡಿಯಾ ಮುಂದಿನ ನಾಲ್ಕು ಪಂದ್ಯಗಳಲ್ಲಿ ಇನ್ನೊಂದು ಬಾರಿ ಇಂಗ್ಲೆಂಡ್​ಗೆ ಸೋಲಿನ ಕಹಿ ತೋರಿಸಿದ್ದರೆ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾವನ್ನು ತಲಾ ಒಂದು ಬಾರಿ ಸೋಲಿಸಿದೆ.

ಪಂದ್ಯ ಗೆದ್ದರೆ ಭಾರತ ಅಗ್ರೇಸರ: ಸತತ ಸರಣಿ ಗೆಲುವು ಸಾಧಿಸುತ್ತಿರುವ ಭಾರತ ಏಕದಿನ ಮಾದರಿಯಲ್ಲಿ ಅಗ್ರಸ್ಥಾನಿಯಾಗುವತ್ತ ದಾಪುಗಾಲು ಇಟ್ಟಿದೆ. 113 ಅಂಕ ಪಡೆದಿರುವ ಭಾರತ ಇಷ್ಟೇ ಅಂಕ ಗಳಿಸಿರುವ ಇಂಗ್ಲೆಂಡ್​, ನ್ಯೂಜಿಲ್ಯಾಂಡ್​ಗಿಂತ ರೇಟಿಂಗ್​ ಪಾಯಿಂಟ್​ಗಳಲ್ಲಿ ತುಸು ಕಡಿಮೆ ಇದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ಏಕಮೇವವಾಗಿ ಅಗ್ರಜನಾಗಿ ಮೆರೆಯಲಿದೆ.

ಓದಿ: ಆರು ವರ್ಷಗಳ ಬಳಿಕ ಈ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ.. ಈ ಮ್ಯಾಚ್​ ಗೆದ್ದು ಅಗ್ರಸ್ಥಾನಕ್ಕೇರುವುದೇ ಭಾರತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.