ETV Bharat / sports

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಡೀನ್ ಎಲ್ಗರ್

author img

By ETV Bharat Karnataka Team

Published : Dec 22, 2023, 9:45 PM IST

Dean Elgar retires from international cricket: ಭಾರತ ವಿರುದ್ಧದ ಟೆಸ್ಟ್ ಸರಣಿಯ ನಂತರ ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಪ್ರಕಟಿಸಿದ್ದಾರೆ.

Dean Elgar
Dean Elgar

ಜೋಹಾನ್ಸ್‌ಬರ್ಗ್(ದಕ್ಷಿಣ ಆಫ್ರಿಕಾ): ಡಿಸೆಂಬರ್ 26ರಂದು ಸೆಂಚುರಿಯನ್‌ನಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಎರಡು ಟೆಸ್ಟ್‌ ಪಂದ್ಯಗಳ ಸರಣಿಯ ನಂತರ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಡೀನ್ ಎಲ್ಗರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಶುಕ್ರವಾರ ಪ್ರಕಟಿಸಿದರು.

ಎಲ್ಗರ್ 2012ರಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 84 ಟೆಸ್ಟ್ ಪಂದ್ಯಗಳನ್ನಾಡಿದ್ದು 13 ಶತಕ ಮತ್ತು 23 ಅರ್ಧಶತಕಗಳೊಂದಿಗೆ 37.28 ಸರಾಸರಿಯಲ್ಲಿ 5,146 ರನ್ ಗಳಿಸಿದ್ದಾರೆ. ಎಂಟು ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2018ರಲ್ಲಿ ವೈಟ್-ಬಾಲ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ದಕ್ಷಿಣ ಆಫ್ರಿಕಾದ ಟೆಸ್ಟ್ ನಾಯಕರಾಗಿ 19 ಪಂದ್ಯಗಳನ್ನು ಮುನ್ನಡೆಸಿದ್ದು, ಈ ಪೈಕಿ 9 ಗೆಲುವು, 7 ಸೋಲು ಮತ್ತು 4 ಪಂದ್ಯಗಳು ಡ್ರಾ ಕಂಡಿದೆ.

"ಎಲ್ಗರ್ ಅವರು ಭಾರತ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ನಂತರ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನ ಕೊನೆಗೊಳಿಸುತ್ತಾರೆ. ಮೊದಲನೆಯ ಪಂದ್ಯ ಸೆಂಚುರಿಯನ್‌ನಲ್ಲಿ ಡಿಸೆಂಬರ್ 26-30ರವರೆಗೆ ಅವರ ತವರು ಮೈದಾನದಲ್ಲಿ ಮತ್ತು ಎರಡನೆಯದು ತಮ್ಮ ಚೊಚ್ಚಲ ಟೆಸ್ಟ್​ ಪಂದ್ಯವನ್ನಾಡಿದ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ಜನವರಿ 3-7ರವರೆಗೆ ಪಂದ್ಯ ನಡೆಯಲಿದೆ" ಎಂದು ಕ್ರಿಕೆಟ್ ಸೌತ್ ಆಫ್ರಿಕಾ (CSA) ಹೇಳಿಕೆಯಲ್ಲಿ ತಿಳಿಸಿದೆ.

"12 ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್​ ಆಡುವುದು ನನ್ನ ಹುಚ್ಚು ಕನಸುಗಳನ್ನೂ ಮೀರಿದ ವಿಷಯವಾಗಿದೆ. ಇದೊಂದು ರೀತಿಯಲ್ಲಿ ನಂಬಲಾಗದ ಪ್ರಯಾಣ. ಇದನ್ನು ಅನುಭವಿಸಲು ನಾನು ಸಾಕಷ್ಟು ಅದೃಷ್ಟಶಾಲಿಯಾಗಿದ್ದೇನೆ. ಭಾರತ ವಿರುದ್ಧದ ತವರಿನ ಸರಣಿಯ ನಂತರ ಈ ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳುತ್ತವೆ. ಏಕೆಂದರೆ ನಾನು ಸುಂದರ ಆಟದಿಂದ ನಿವೃತ್ತಿಯಾಗುವ ನಿರ್ಧಾರ ಮಾಡಿದ್ದೇನೆ. ವಿಶ್ವದ ನನ್ನ ನೆಚ್ಚಿನ ಕ್ರೀಡಾಂಗಣ ಕೇಪ್ ಟೌನ್. ನಾನು ನ್ಯೂಜಿಲೆಂಡ್ ವಿರುದ್ಧ ನನ್ನ ಮೊದಲ ಟೆಸ್ಟ್ ರನ್ ಗಳಿಸಿದ ಸ್ಥಳ ಮತ್ತು ನನ್ನ ಕೊನೆಯದು ಕೂಡ ಅದೇ ಸ್ಥಳದಲ್ಲಿ ನಡೆಯಲಿದೆ" ಎಂದು ಎಲ್ಗರ್ ಭಾವುಕರಾದರು.

ದಕ್ಷಿಣ ಆಫ್ರಿಕಾದ ಕ್ರಿಕೆಟ್ ನಿರ್ದೇಶಕ ಎನೋಚ್, "ಎಲ್ಗರ್​ ನಿಜವಾದ ಹಳೆಯ-ಶಾಲಾ ಕ್ರಿಕೆಟಿಗರಾಗಿದ್ದಾರೆ. ಅವರಲ್ಲಿ ಬಹಳಷ್ಟು ಅನುಭವವಿದೆ. ಕ್ರಿಕೆಟ್​ ಅವರನ್ನು ಕಳೆದುಕೊಳ್ಳುತ್ತದೆ ಎಂದರೆ ತಪ್ಪಾಗದು. ಅವರು ಯಾವಾಗಲೂ ತಮ್ಮ ದೇಶಕ್ಕಾಗಿ ಯಾವುದೇ ಭಯ ತೋರದೇ, ವಿರೋಧವನ್ನೂ ಲೆಕ್ಕಿಸದೇ ಆಡಿದ್ದಾರೆ. ತಂಡಕ್ಕೆ ಅಗತ್ಯವಿದ್ದಾಗ ನಾಯಕತ್ವವನ್ನು ನಿಭಾಯಿಸಿದ್ದರು" ಎಂದರು.

ಇದನ್ನೂ ಓದಿ: ಮಹಿಳಾ ಕ್ರಿಕೆಟ್ ಟೆಸ್ಟ್​​: ದೀಪ್ತಿ, ಪೂಜಾ ಆಸರೆಯ ಇನ್ನಿಂಗ್ಸ್​; ಭಾರತಕ್ಕೆ ಭಾರಿ ಮುನ್ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.