ETV Bharat / sports

ಹರಿಣಗಳ ನಾಡಲ್ಲಿ ಸರಣಿ ಸಮಬಲದ ಗುರಿ: ಬ್ಯಾಟಿಂಗ್​ ವೈಫಲ್ಯದಿಂದ ಹೊರಬರುವುದೇ ಭಾರತ?

author img

By ETV Bharat Karnataka Team

Published : Jan 2, 2024, 1:54 PM IST

South Africa vs India 2nd Test Preview
South Africa vs India 2nd Test Preview

South Africa vs India 2nd Test: ದಕ್ಷಿಣ ಆಫ್ರಿಕಾ ನೆಲದಲ್ಲಿ ಉಭಯ ರಾಷ್ಟ್ರಗಳ ನಡುವೆ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಕೊನೆಯ ಟೆಸ್ಟ್ ಪಂದ್ಯ ಬುಧವಾರದಿಂದ ಕೇಪ್​ ಟೌನ್​ನಲ್ಲಿ ಆರಂಭವಾಗಲಿದೆ.

ಕೇಪ್ ಟೌನ್(ದಕ್ಷಿಣ ಆಫ್ರಿಕಾ): ಮೊದಲ ಟೆಸ್ಟ್‌ನಲ್ಲಿ ಇನಿಂಗ್ಸ್ ಸೋಲಿನ ನಂತರ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲುವಿನ ಕನಸು ನನಸಾಗಿಲ್ಲ. ಹೀಗಿದ್ದರೂ, ಬುಧವಾರದಿಂದ ಇಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್​ನಲ್ಲಿ ಭಾರತ ತಂಡವು ಸರಣಿ ಸಮಬಲಗೊಳಿಸುವ ಗುರಿ ಹೊಂದಿದೆ. ಆದರೆ, ವಿಶ್ವದ ಅತ್ಯಂತ ರಮಣೀಯ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಭಾರತದ ಇತಿಹಾಸ ಕಳಪೆಯಾಗಿದೆ. ಇಲ್ಲಿ ಆಡಿದ ಆರು ಟೆಸ್ಟ್​ಗಳಲ್ಲಿ ಸೋಲು ಕಂಡಿದೆ.

ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ದಕ್ಷಿಣ ಆಫ್ರಿಕಾದ ಅಸಾಧಾರಣ ಬೌಲಿಂಗ್ ದಾಳಿಯ ವಿರುದ್ಧ ಭಾರತೀಯರು ತತ್ತರಿಸಿ ಹೋದರು. ಸೆಂಚುರಿಯನ್​ನಲ್ಲಿ ಗಾಯಕ್ಕೆ ತುತ್ತಾಗಿ ವೇಗಿ ಜೆರಾಲ್ಡ್ ಕೊಯೆಟ್ಜಿ ಕೇಪ್​ ಟೌನ್​ ಟೆಸ್ಟ್​ನಿಂದ ಹೊರಗುಳಿದಿರುವುದು ಭಾರತಕ್ಕೆ ಲಾಭವಾಗುವ ಸಾಧ್ಯತೆ ಇದೆ. ಆದರೆ ಸೆಂಚುರಿಯನ್‌ನಲ್ಲಿ ಬೆಂಕಿ ಚೆಂಡುಗಳ ದಾಳಿ ನಡೆಸಿದ ಎಡಗೈ ವೇಗಿ ನಾಂದ್ರೆ ಬರ್ಗರ್ ಮತ್ತು ಬಲಗೈ ವೇಗಿ ಕಗಿಸೊ ರಬಾಡ ಮತ್ತೊಮ್ಮೆ ಕೇಪ್ ಟೌನ್‌ನಲ್ಲಿ ಕಠಿಣ ಸವಾಲಾಗಲಿದ್ದಾರೆ. ಇಲ್ಲಿನ ವಿಕೆಟ್​ ಸಹ ವೇಗಿಗಳಿಗೆ ಸಹಕಾರಿ ಆಗುವ ರೀತಿಯಲ್ಲೇ ಇದೆ. ಈ ಇಬ್ಬರು ವೇಗಿಗಳಿಗೆ ಲುಂಗಿ ಎನ್‌ಗಿಡಿ ಬೌಲಿಂಗ್​ ಹರಿಣಗಳಿಗೆ ಬಲ ತುಂಬಲಿದೆ.

ಕೆ.ಎಲ್.ರಾಹುಲ್ ಹೊರತುಪಡಿಸಿ, ಉಳಿದೆಲ್ಲಾ ಬ್ಯಾಟರ್​ಗಳು ಮೊದಲ ಟೆಸ್ಟ್‌ನಲ್ಲಿ ಹೀನಾಯವಾಗಿ ಪ್ರದರ್ಶನ ನೀಡಿದರು. ರಾಹುಲ್ ದ್ರಾವಿಡ್ ತರಬೇತಿ ಅಡಿಯಲ್ಲಿ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅಬ್ಬರಿಸಿದರೆ ಸರಣಿ ಸಮಬಲದ ಕನಸು ನನಸಾಗಲಿದೆ.

ಏಕದಿನ ವಿಶ್ವಕಪ್​ನಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದ ವಿರಾಟ್​, ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಗಳಿಸಿದರು. ಎರಡನೇ ಟೆಸ್ಟ್​ನಲ್ಲಿ ಅದೇ ಇನ್ನಿಂಗ್ಸ್​ ಅನ್ನು ವಿರಾಟ್​ ಮುಂದುವರೆಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಕೆಎಲ್ ರಾಹುಲ್ ಮೊದಲ ಟೆಸ್ಟ್‌ನಲ್ಲಿ ಬ್ಯಾಟಿಂಗ್​ನಲ್ಲಿ ಶತಕ ಗಳಿಸಿ ಮಿಂಚಿದ್ದಲ್ಲದೇ ಕ್ಷೇತ್ರ ರಕ್ಷಣೆ ವೇಳೆ ಕೈಗವಸು ತೊಟ್ಟು ವಿಕೆಟ್​ ಕೀಪರ್​ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಭಾರತದ ಬೌಲಿಂಗ್​ ಆತಂಕ: ಹರಿಣಗಳ ನಾಡಿನಲ್ಲಿ ವೇಗಿಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ ಎದುರಾಳಿ ತಂಡ ಆಲೌಟ್​ಗೆ ಶರಣಾದರೂ 400ಕ್ಕೂ ಹೆಚ್ಚು ರನ್​ ಗಳಿಸುವಲ್ಲಿ ಯಶಸ್ವಿ ಆಗಿತ್ತು. ಕಳೆದ ಪಂದ್ಯದಲ್ಲಿ ಚೊಚ್ಚಲ ಅವಕಾಶವನ್ನು ಪಡೆದುಕೊಂಡಿದ್ದ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಈ ಪಂದ್ಯದಲ್ಲಿ ಹೊರಗುಳಿಯುವ ಸಾಧ್ಯತೆ ಇದೆ. ಅವರ ಸ್ಥಾನದಲ್ಲಿ ಮಧ್ಯಪ್ರದೇಶದ ಸೀಮರ್ ಅವೇಶ್ ಖಾನ್ ತಮ್ಮ ಟೆಸ್ಟ್ ಪಾದಾರ್ಪಣೆ ಪಂದ್ಯ ಆಡುವ ನಿರೀಕ್ಷೆ ಇದೆ.

ಸ್ಪಿನ್​ ವಿಭಾಗದಲ್ಲೂ ಅಶ್ವಿನ್​ ಬದಲಾಗಿ ಜಡೇಜ ಕಣಕ್ಕಿಳಿಯುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಗಂಟೆಗೆ 100 ಕಿ.ಮೀ. ವೇಗದಲ್ಲಿ ಬೌಲಿಂಗ್​ ಮಾಡುವ ಜಡೇಜ ಸ್ಪಿನ್​ ಜೊತೆಗೆ ಕಮಾಲ್​ ಮಾಡುವ ನಿರೀಕ್ಷೆ ಇದೆ. ಬೆನ್ನು ನೋವಿನ ಕಾರಣಕ್ಕೆ ಜಡೇಜ ಮೊದಲ ಪಂದ್ಯ ತಪ್ಪಿಸಿಕೊಂಡಿದ್ದರು.

ಎಲ್ಗರ್​ಗೆ ವಿದಾಯದ ಪಂದ್ಯ: ಮೊದಲ ಪಂದ್ಯದಲ್ಲಿ ಕಾಡಿದ ನಾಯಕ ಡೀನ್ ಎಲ್ಗರ್ ಅವರನ್ನು ರೋಹಿತ್​ ಶರ್ಮಾ ಅವರ ವೇಗದ ದಾಳಿ ಕಟ್ಟಿಹಾಕಲೇ ಬೇಕಿದೆ. ಅದ್ಭುತ ಫಾರ್ಮ್​ನಲ್ಲಿರುವ ಎಲ್ಗರ್​ ತಮ್ಮ ಅಂತಿ ಟೆಸ್ಟ್​ನ್ನು ಗೆಲುವಿನೊಂದಿಗೆ ಕೊನೆಯಾಗಿಸಲು ಶತಾಯಗತಾಯ ಪ್ರಯತ್ನವನ್ನು ಮಾಡುತ್ತಾರೆ. ಭಾರತೀಯ ನಾಲ್ವರು ವೇಗಿಗಳು ಪ್ರೋಟೀಸ್​ ಬ್ಯಾಟಿಂಗ್​ ಬಲವನ್ನು ಕಟ್ಟಿ ಹಾಕಲು ಪಿಚ್‌ನ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕಿದೆ.

ತಂಡಗಳು ಇಂತಿದೆ-ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ (ವಿಕೆಟ್​ ಕೀಪರ್​​), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ರವೀಂದ್ರ ಜಡೇಜಾ, ಶ್ರೀಕರ್ ಭರತ್, ಅಭಿಮನ್ಯು ಈಶ್ವರನ್, ಮುಖೇಶ್ ಕುಮಾರ್, ಅವೇಶ್ ಖಾನ್.

ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಏಡೆನ್ ಮಾರ್ಕ್ರಾಮ್, ಟೋನಿ ಡಿ ಜೊರ್ಜಿ, ಕೀಗನ್ ಪೀಟರ್ಸನ್, ಕೈಲ್ ವೆರ್ರೆನ್ (ವಿಕೆಟ್-ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ನಾಂದ್ರೆ ಬರ್ಗರ್, ಮಾರ್ಕೊ ಜಾನ್ಸೆನ್, ವಿಯಾನ್ ಮಲ್ಡರ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಡೇವಿಡ್ ಬೆಡಿಂಗ್‌ಹ್ಯಾಮ್.

ಪಂದ್ಯ: ಕೇಪ್​ ಟೌನ್​ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣ, ಭಾರತೀಯ ಕಾಲಮಾನ ಗಂಟೆ 2ಕ್ಕೆ ಆರಂಭ.

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​ ಮತ್ತು ಡಿಸ್ನಿ + ಹಾಟ್​ ಸ್ಟಾರ್​​

ಇದನ್ನೂ ಓದಿ: ಕ್ಲೀನ್​ ಸ್ವೀಪ್​ನಿಂದ ತಪ್ಪಿಸಿಕೊಳ್ಳುತ್ತಾ ಕೌರ್ ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.