ETV Bharat / sports

ಡೆಹ್ರಾಡೂನ್​ನಿಂದ ಮುಂಬೈಗೆ ರಿಷಭ್​ ಏರ್​ಲಿಫ್ಟ್: ಅಂಬಾನಿ ಆಸ್ಪತ್ರೆಗೆ ಪಂತ್​ ದಾಖಲು

author img

By

Published : Jan 4, 2023, 7:11 PM IST

ಟೀಂ ಇಂಡಿಯಾದ ಆಟಗಾರ ರಿಷಭ್​ ಪಂತ್ ಏರ್​ಲಿಫ್ಟ್ - ಡೆಹ್ರಾಡೂನ್​ನಿಂದ ಮುಂಬೈಗೆ ರಿಷಭ್​ ಸ್ಥಳಾಂತರ - ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ

rishabh-pant-airlifted-from-dehradun-to-mumbai-for-further-treatment
ಡೆಹ್ರಾಡೂನ್​ನಿಂದ ಮುಂಬೈಗೆ ರಿಷಭ್​ ಏರ್​ಲಿಫ್ಟ್: ಅಂಬಾನಿ ಆಸ್ಪತ್ರೆಗೆ ಪಂತ್​ ದಾಖಲು

ಡೆಹ್ರಾಡೂನ್​ನಿಂದ ಮುಂಬೈಗೆ ರಿಷಭ್​ ಏರ್​ಲಿಫ್ಟ್: ಅಂಬಾನಿ ಆಸ್ಪತ್ರೆಗೆ ಪಂತ್​ ದಾಖಲು

ಡೆಹ್ರಾಡೂನ್/ಮುಂಬೈ: ಕಾರು ಅಪಘಾತದಲ್ಲಿ ಗಾಯಗೊಂಡಿರುವ ಟೀಂ ಇಂಡಿಯಾದ ಆಟಗಾರ ರಿಷಭ್​ ಪಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉತ್ತರಾಖಂಡದ ಡೆಹ್ರಾಡೂನ್​ನಿಂದ ಮುಂಬೈಗೆ ಸ್ಥಳಾಂತರ ಮಾಡಲಾಗಿದೆ. ಇದುವರೆಗೆ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರಿಷಭ್​ ಪಂತ್ ಇಂದು ಮುಂಬೈಗೆ ಏರ್​ಲಿಫ್ಟ್​ ಮಾಡಲಾಯಿತು.

ಡಿ.30ರಂದು ದೆಹಲಿ ಮತ್ತು ಡೆಹ್ರಾಡೂನ್​ ಹೆದ್ದಾರಿಯಲ್ಲಿ ರಿಷಭ್​ ಪಂತ್​ ಕಾರು ಅಪಘಾತಕ್ಕೀಡಾಗಿತ್ತು. ಅಂದಿನಿಂದ 6 ದಿನಗಳ ಕಾಲ ಡೆಹ್ರಾಡೂನ್‌ನ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಿಂದ ರಿಷಭ್ ಪಂತ್ ಅವರನ್ನು ಡಿಸ್ಚಾರ್ಜ್​ ಮಾಡಲಾಯಿತು. ನಂತರ ಅವರನ್ನು ಆಂಬ್ಯುಲೆನ್ಸ್ ಮೂಲಕ ಜಾಲಿಗ್ರಾಂಟ್ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು.

ಇದನ್ನೂ ಓದಿ: ಪಂತ್‌ ಪ್ರಾಣ ರಕ್ಷಿಸಿದ ಬಸ್‌ ಚಾಲಕ, ನಿರ್ವಾಹಕನನ್ನು ಗೌರವಿಸಲಿದೆ ಉತ್ತರಾಖಂಡ್ ಸರ್ಕಾರ

ಜಾಲಿಗ್ರಾಂಟ್ ವಿಮಾನ ನಿಲ್ದಾಣದಿಂದ ರಿಷಭ್​​ ಪಂತ್ ಅವರನ್ನು ವಿಮಾನದಲ್ಲಿ ಮುಂಬೈಗೆ ಶಿಫ್ಟ್​ ಮಾಡಲಾಯಿತು. ರಿಷಭ್ ಪಂತ್ ಜೊತೆಗೆ ಅವರ ಕುಟುಂಬ ಸದಸ್ಯರು ಮುಂಬೈಗೆ ವಿಮಾನದಲ್ಲಿ ಬಂದರು. ಇದಕ್ಕೂ ಮುನ್ನ ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್​, ​​ರಿಷಭ್​ ಪಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂದು ಮುಂಬೈಗೆ ಸ್ಥಳಾಂತರಿಸಲಾಗುವುದು ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿತ್ತು.

ಮುಂಬೈನ ಅಂಬಾನಿ ಆಸ್ಪತ್ರೆಗೆ ದಾಖಲು: ಜಾಲಿಗ್ರಾಂಟ್ ವಿಮಾನ ನಿಲ್ದಾಣದಿಂದ ಮುಂಬೈಗೆ ಏರ್​ಶಿಫ್ಟ್ ಮಾಡಿದ ರಿಷಭ್​ ಪಂತ್ ಅವರನ್ನು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ದಾಖಲಿಸಲಾಗಿದೆ. ಇಲ್ಲಿ ಸ್ಪೋರ್ಟ್ಸ್ ಮೆಡಿಸಿನ್ ಕೇಂದ್ರದ ಮುಖ್ಯಸ್ಥ ಮತ್ತು ನಿರ್ದೇಶಕ, ಆರ್ತ್ರೋಸ್ಕೊಪಿ ಮತ್ತು ಭುಜದ ತಜ್ಞ ಡಾ.ದಿನ್‌ಶಾ ಪರ್ದಿವಾಲಾ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಡಾ.ದಿನ್‌ಶಾ ಪರ್ದಿವಾಲಾ ಅವರು ಪ್ರಸಿದ್ಧ ಶಸ್ತ್ರಚಿಕಿತ್ಸಕರಾಗಿದ್ದಾರೆ. ಅನೇಕ ಆಟಗಾರರಿಗೆ ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನೂ ಇವರು ಮಾಡಿದ್ದಾರೆ. ಇದೇ ಆಸ್ಪತ್ರೆಯಲ್ಲಿ ರಿಷಭ್​ ಲಿಗಮೆಂಟ್ ಟಿಯರ್ ಸರ್ಜರಿ ಸೇರಿ ಇನ್ನಿತರ ವೈದ್ಯಕೀಯ ಪ್ರಕ್ರಿಯೆಗಳು ನಡೆಯಲಿವೆ. ಜೊತೆಗೆ ಬಿಸಿಸಿಐ ವೈದ್ಯಕೀಯ ತಂಡವು ಪಂತ್​ ಆರೋಗ್ಯದ ಬಗ್ಗೆ ತನ್ನ ಮೇಲ್ವಿಚಾರಣೆಯನ್ನು ಮುಂದುವರಿಸಲಿದೆ.

ಇದನ್ನೂ ಓದಿ: ರಸ್ತೆ ಪಕ್ಕದ ಗುಂಡಿಯಿಂದಾಗಿ ಅಪಘಾತ: ಆಕ್ಸಿಡೆಂಟ್​ ಬಗ್ಗೆ ಸಿಎಂಗೆ ಮಾಹಿತಿ ನೀಡಿದ ಪಂತ್​

ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಆಗಿರುವ ರಿಷಭ್​ ಪಂತ್ ಅಪಘಾತದಲ್ಲಿ ಗಾಯಗೊಂಡ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಐವರು ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಗಂಭೀರ ಗಾಯಗಳಾಗಿದ್ದರಿಂದ ಅವರನ್ನು ಆರಂಭದಲ್ಲಿ ಐಸಿಯುಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರಿಗೆ ಪ್ಲಾಸ್ಟಿಕ್ ಸರ್ಜರಿ ಕೂಡ ಮಾಡಲಾಗಿತ್ತು. ಇದರ ನಡುವೆ ಪಂತ್ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದ ಹಿನ್ನೆಲೆಯಲ್ಲಿ ಐಸಿಯುನಿಂದ ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಅಪಘಾತದಲ್ಲಿ ರಿಷಭ್​ ಹಣೆ, ಮೊಣಕಾಲು, ಬೆನ್ನು ಹಾಗೂ ಬಲಗೈನ ಮಣಿಕಟ್ಟಿಗೆ ಗಾಯಗಳು ಆಗಿದೆ.

ಮ್ಯಾಕ್ಸ್ ಆಸ್ಪತ್ರೆಯಲ್ಲಿ ರಿಷಭ್​ ಪಂತ್ ಚಿಕಿತ್ಸೆ ನಡೆಯುತ್ತಿರುವಾಗ, ಅವರನ್ನು ಉತ್ತಮ ಚಿಕಿತ್ಸೆಗಾಗಿ ವಿದೇಶಕ್ಕೆ ರವಾನಿಸಬೇಕಾಗಿ ಬಂದರೆ, ಅದನ್ನೂ ಮಾಡಲಾಗುವುದು ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಸದ್ಯ ರಿಷಭ್​ ಪಂತ್ ಅವರ ಆರೋಗ್ಯದ ಸಾಮಾನ್ಯ ಸ್ಥಿತಿಯನ್ನು ನೋಡಿಕೊಂಡು ಮುಂಬೈನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕಾರು ಅಪಘಾತ ಪ್ರಕರಣ: ಮುಂಬೈಗೆ ಕ್ರಿಕೆಟಿಗ ರಿಷಭ್​ ಪಂತ್​ ಶಿಫ್ಟ್​ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.