ETV Bharat / sports

ಉನಾದ್ಕತ್​ ಭರ್ಜರಿ ಬೌಲಿಂಗ್: ಸೌರಾಷ್ಟ್ರ ರಣಜಿ ಚಾಂಪಿಯನ್!

author img

By

Published : Feb 19, 2023, 12:39 PM IST

ಪಶ್ಚಿಮ ಬಂಗಾಲ ನೀಡಿದ 12 ರನ್​ಗಳ ಗುರಿಯನ್ನು ನಿರಾಯಾಸವಾಗಿ ತಲುಪಿದ ಸೌರಾಷ್ಟ್ರ 2ನೇ ಬಾರಿಗೆ ರಣಜಿ ಟ್ರೋಫಿ ಜಯಿಸಿತು.

ranji-trophy-saurashtra-won-by-9-wkts
ಉನಾದ್ಕತ್​ ಭರ್ಜರಿ ಬೌಲಿಂಗ್​ಗೆ ಸೌರಾಷ್ಟ್ರಕ್ಕೆ ಒಲಿದ ರಣಜಿ ಟ್ರೋಫಿ

ಕೋಲ್ಕತ್ತಾ: ಇಲ್ಲಿನ ಈಡನ್​ ಗಾರ್ಡನ್​ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿ ಫೈನಲ್​​ನಲ್ಲಿ ಸೌರಾಷ್ಟ್ರ ತಂಡ ಬಂಗಾಲವನ್ನು 9 ವಿಕೆಟ್​ಗಳಿಂದ ಮಣಿಸಿ ಕಪ್​ ಮುಡಿಗೇರಿಸಿಕೊಂಡಿತು. ಈ ಮೂಲಕ ಸೌರಾಷ್ಟ್ರ ಎರಡನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದೆ. ಫೈನಲ್‌ ಗೆಲ್ಲಲು ಕೇವಲ 12 ರನ್‌ಗಳ ಅಗತ್ಯವಿತ್ತು.

ಮನೋಜ್ ತಿವಾರಿ ಮತ್ತು ಅನುಸ್ತಪ್ ಮಜುಂದಾರ್ ಅವರ ಹೋರಾಟದಿಂದ ಬಂಗಾಲ 241 ರನ್ ಗಳಿಸಲಷ್ಟೇ ಶಕ್ತವಾಗಿ 11 ರನ್ ಮುನ್ನಡೆ ಸಾಧಿಸಿತು. ಇವರಿಬ್ಬರ ಅರ್ಧಶತಕ ಕಾಣಿಕೆ ನಂತರ ತಂಡಕ್ಕೆ ಮತ್ತಾರೂ ನೆರವಾಗಲಿಲ್ಲ. ಸೌರಾಷ್ಟ್ರ ನಾಯಕ ಜಯದೇವ್​ ಉನಾದ್ಕತ್​ 6 ಮತ್ತು ಚೇತನ್​ ಸಕಾರಿಯಾ 3 ವಿಕೆಟ್​ ಕಿತ್ತರು.

ಸೌರಾಷ್ಟ್ರಕ್ಕೆ ಗೆಲ್ಲಲು ಬೇಕಿದ್ದ 12 ರನ್ ಗುರಿಯನ್ನು 3 ಓವರ್​ನಲ್ಲಿ ಹರ್ವಿಕ್​ ದೇಸಾಯಿ(4) ಮತ್ತು ವಿಶ್ವರಾಜ್​ ಜಡೇಜಾ ​(10) ಸಾಧಿಸಿದರು. ಮೊದಲ ಎಸೆತಕ್ಕೆ ಜೇ ಗೋಹಿಲ್ ವಿಕೆಟ್​ ಕಳೆದು ಕೊಂಡಿದ್ದರಿಂದ ಸೌರಾಷ್ಟ್ರ 9 ವಿಕೆಟ್​ಗಳಿಂದ ಗೆದ್ದು ಸಂಭ್ರಮಿಸಿತು. ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಆಸೆಯಲ್ಲಿದ್ದ ಬಂಗಾಲ​ ರನ್ನರ್​ ಅಪ್​ಗೆ ತೃಪ್ತಿ ಪಟ್ಟುಕೊಂಡಿತು.

ಫೈನಲ್​ ಪಂದ್ಯಕ್ಕಾಗಿ ಆಸ್ಟ್ರೇಲಿಯಾದ ವಿರುದ್ಧದ ಬಾರ್ಡರ್​-ಗವಾಸ್ಕರ್​ ಟ್ರೋಫಿಯಿಂದ ಬಿಡುಗಡೆ ಪಡೆದು ತಂಡ ಸೇರಿದ್ದ ಜಯದೇವ್​ ಉನಾದ್ಕತ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಉನಾದ್ಕತ್​ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿದ್ದ ಅರ್ಪಿತ್ ವಾಸವಾಡ 10 ಪಂದ್ಯಗಳಲ್ಲಿ 2 ಶತಕ ಮತ್ತು ಒಂದು ದ್ವಿಶತಕ ಸಹಿತ 907 ರನ್​ ಗಳಿಸಿ ಪ್ಲೇಯರ್​ ಆಫ್​ ಸೀರಿಸ್​ ಪ್ರಶಸ್ತಿ ಗಳಿಸಿದರು.

ಟಾಸ್​ ಗೆದ್ದು ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡ ಸೌರಾಷ್ಟ್ರ ಮೊದಲ ಇನ್ನಿಂಗ್ಸ್​ನಲ್ಲಿ ಬಂಗಾಲವನ್ನು 174 ರನ್​ಗಳಿಗೆ ಕಟ್ಟಿಹಾಕಿತು. ಉನಾದ್ಕತ್​ ಮತ್ತು ಸಕಾರಿಯಾ ತಲಾ 3 ವಿಕೆಟ್​ ಪಡೆದರೆ, ಚಿರಾಗ್ ಜಾನಿ ಹಾಗೂ ಜಡೇಜ ತಲಾ ಎರಡು ವಿಕೆಟ್​ ಉರುಳಿಸಿದರು. ಬಂಗಾಲ ಪರ ಶಹಬಾಜ್ ಅಹ್ಮದ್ (69) ಮತ್ತು ಅಭಿಷೇಕ್ ಪೊರೆಲ್ (50) ಅರ್ಧಶತಕ ಗಳಿಸಿ ತಂಡವನ್ನು ನೂರೈವತ್ತರ ಗಡಿ ದಾಟಿಸಿದ್ದರು.

174 ರನ್​ ಬೆನ್ನತ್ತಿದ ಸೌರಾಷ್ಟ್ರ ತಂಡವು ಹಾರ್ವಿಕ್ ದೇಸಾಯಿ(50), ಶೆಲ್ಡನ್ ಜಾಕ್ಸನ್ (59), ಅರ್ಪಿತ್ ವಾಸವಾಡ (81) ಮತ್ತು ಚಿರಾಗ್ ಜಾನಿ (60) ಅವರ ಅರ್ಧಶತಕದ ನೆರವಿನಿಂದ 404 ರನ್​ಗಳಿಸಿ 230 ರನ್​ಗಳ ಮುನ್ನಡೆ ಗಳಿಸಿತು. ಬಂಗಾಲ​ ಪರ ಮುಖೇಶ್ ಕುಮಾರ್ 4 ವಿಕೆಟ್ ಪಡೆದರೆ, ಇಶಾನ್ ಪೊರೆಲ್ ಮತ್ತು ಆಕಾಶ್ ದೀಪ್ ತಲಾ 3 ವಿಕೆಟ್ ಹಂಚಿಕೊಂಡರು.

ಎರಡನೇ ಇನ್ನಿಂಗ್ಸ್​ನಲ್ಲಿ ಬಂಗಾಲವನ್ನು ಉನಾದ್ಕತ್​ ಕಾಡಿದರು. 230 ರನ್​ ಹಿನ್ನಡೆ ಹೊಂದಿದ್ದ ಬಂಗಾಲ​ ಮತ್ತೆ ಬ್ಯಾಟಿಂಗ್​ ವೈಫಲ್ಯ ಅನುಭವಿಸಿತು. ಮನೋಜ್ ತಿವಾರಿ (68) ಮತ್ತು ಅನುಸ್ತಪ್ ಮಜುಂದಾರ್ (61) ಅವರ ಅರ್ಧಶತಕದ ನೆರವಿನಿಂದ 11 ರನ್​ಗಳ ಮುನ್ನಡೆ ಸಾಧಿಸಿತು. ಈ ಗುರಿಯನ್ನು ಸೌರಾಷ್ಟ್ರ ನಿರಾಯಾಸವಾಗಿ ಮೀರಿ ವಿಜಯದ ಕೇಕೆ ಹಾಕಿತು.

ಇದನ್ನೂ ಓದಿ: 2ನೇ ಟೆಸ್ಟ್ ಗೆಲುವಿನತ್ತ ಭಾರತ ದಿಟ್ಟ ಹೆಜ್ಜೆ; ಜಡೇಜಾ-ಅಶ್ವಿನ್ ಬಿರುಗಾಳಿಗೆ ನಡುಗಿದ ಆಸೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.