ETV Bharat / sports

ಎರಡು ಟೆಸ್ಟ್​ ಗೆದ್ದಿದ್ದರೂ ಅಗ್ರಪಟ್ಟ ಕಳೆದುಕೊಂಡ ಪಾಕ್​: ನಿಧಾನಗತಿ ಬೌಲಿಂಗ್​​ಗೆ​ ದಂಡ

author img

By ETV Bharat Karnataka Team

Published : Dec 18, 2023, 7:20 PM IST

Pakistan lose WTC25 points: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಅಂಕಪ​ಟ್ಟಿಯಲ್ಲಿ ಪಾಕಿಸ್ತಾನ ತಂಡ ಎರಡು ಟೆಸ್ಟ್​ ಪಂದ್ಯಗಳನ್ನು ಗೆದ್ದಿದ್ದರೂ ಆಸ್ಟ್ರೇಲಿಯಾ ವಿರುದ್ಧ ನಿಧಾನಗತಿಯ ಬೌಲಿಂಗ್​ ನಿರ್ವಹಣೆಯಿಂದ ಸ್ಥಾನ ಕುಸಿತ ಅನುಭವಿಸಿದೆ.

Pakistan
Pakistan

ಪರ್ತ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಪಾಕಿಸ್ತಾನಕ್ಕೆ ತಮ್ಮ ಪಂದ್ಯದ ಶುಲ್ಕದ ಶೇಕಡಾ 10ರಷ್ಟು ದಂಡ ಮತ್ತು ಎರಡು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳನ್ನು ದಂಡವಾಗಿ ವಿಧಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ ಪ್ರಕಟಿಸಿದೆ.

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ 2 ಅಂಕ ಕಳೆದುಕೊಂಡ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಳೆದುಕೊಂಡಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಸೋಲಿನ ನಂತರ ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ಗೆಲುವು ಸಾಧಿಸಿರುವ ಭಾರತ 66.67 ಅಂಕಗಳನ್ನು ಪಡೆದುಕೊಂಡು ಅಗ್ರಸ್ಥಾನಕ್ಕೆ ಏರಿದೆ.

"ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಿಧಾನಗತಿಯ ಓವರ್‌ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಪಾಕಿಸ್ತಾನಕ್ಕೆ ದಂಡ ವಿಧಿಸಲಾಗಿದೆ. ಪಾಕ್​ ತಂಡಕ್ಕೆ ಅವರ ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ ಮತ್ತು ಎರಡು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳನ್ನು ಅವರ ಒಟ್ಟು ಮೊತ್ತದಿಂದ ಕಡಿತಗೊಳಿಸಲಾಗಿದೆ" ಎಂದು ಐಸಿಸಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಪಾಕಿಸ್ತಾನವು ಎರಡು ಓವರ್​​​ ಅಷ್ಟು ಸಮಯವನ್ನು ಹೆಚ್ಚಾಗಿ ಬಳಸಿಕೊಂಡಿದೆ ಎಂದು ತಿಳಿಸಿದ್ದರು. ಅದರ ಅನ್ವಯ "ಆಟಗಾರರು ಮತ್ತು ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದೆ, ಆಟಗಾರರು ತಮ್ಮ ತಂಡವು ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲವಾದ ಪ್ರತಿ ಓವರ್‌ಗೆ ಅವರ ಪಂದ್ಯದ ಶುಲ್ಕದ ಐದು ಶೇಕಡಾ ದಂಡವನ್ನು ವಿಧಿಸಲಾಗುತ್ತದೆ."

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ಮೊದಲ ಟೆಸ್ಟ್​ ಪಂದ್ಯದಲ್ಲಿ 360 ರನ್​ಗಳ ಹೀನಾಯ ಸೋಲನುಭವಿಸಿತು. ಇದರಿಂದ ಪಾಕಿಸ್ತಾನವು ಡಬ್ಲ್ಯುಟಿಸಿ 2025 ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಇಳಿಯಿತು ಮತ್ತು ಪೆನಾಲ್ಟಿಯಿಂದಾಗಿ ಅವರ ಶೇಕಡಾವಾರು ಅಂಕಗಳು 66.67 ರಿಂದ 61.11ಕ್ಕೆ ಕುಸಿದಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆಟದ ನಿಯಮಗಳ ಆರ್ಟಿಕಲ್ 16.11.2ರ ಪ್ರಕಾರ ಪ್ರತಿ ಓವರ್‌ಗೆ ಒಂದು ಅಂಕವನ್ನು ದಂಡ ವಿಧಿಸಲಾಗಿದೆ.

ಪಾಕಿಸ್ತಾನ ತಂಡದ ನಾಯಕ ಶಾನ್ ಮಸೂದ್ ಅವರು ತಪ್ಪು ಒಪ್ಪಿಕೊಂಡಿದ್ದರಿಂದ ಯಾವುದೇ ವಿಚಾರಣೆ ಇಲ್ಲದೇ ಶಿಕ್ಷೆಯನ್ನು ಸೂಚಿಸಲಾಗಿದೆ. ಆನ್ ಫೀಲ್ಡ್ ಅಂಪೈರ್‌ಗಳಾದ ಜೋಯಲ್ ವಿಲ್ಸನ್ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್, ಮೂರನೇ ಅಂಪೈರ್ ಮೈಕೆಲ್ ಗಾಫ್ ಮತ್ತು ನಾಲ್ಕನೇ ಅಂಪೈರ್ ಡೊನೊವನ್ ಕೋಚ್ ಅವರು ಸಹ ಜಾವಗಲ್​ ಶ್ರೀನಾಥ್​ ಅವರ ಆರೋಪಕ್ಕೆ ಸಮ್ಮತಿಸಿದ್ದಾರೆ. ಹೀಗಾಗಿ ವಿಚಾರಣಾ ರಹಿತ ದಂಡ ವಿಧಿಸಲಾಗಿದೆ.

ಇದನ್ನೂ ಓದಿ: ಯಶಸ್ವಿ ಬೌಲಿಂಗ್ ರಹಸ್ಯ ಹಂಚಿಕೊಂಡ ಅರ್ಶದೀಪ್​, ಅವೇಶ್​ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.