ETV Bharat / sports

ವಿರಾಟ್ ಯಾವಾಗಲೂ ಅಡೆತಡೆಗಳನ್ನು ಮೀರಲು ಬಯಸುವ ವ್ಯಕ್ತಿ : ಸಂಜಯ್ ಬಂಗಾರ್

author img

By

Published : Apr 26, 2023, 5:42 PM IST

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಆರ್​ಸಿಬಿ ಕೆಕೆಆರ್​ ವಿರುದ್ಧ ಕಣಕ್ಕಿಳಿಯುತ್ತಿದೆ. ಇದಕ್ಕೂ ಮುನ್ನ ಬೆಂಗಳೂರು ತಂಡದ ಮುಖ್ಯ ಕೋಚ್​ ಮಾಧ್ಯಮಗಳ ಜೊತೆ ಮಾತನಾಡಿದ್ದು, ವಿರಾಟ್​ ಅವರ ಕಠಿಣ ಅಭ್ಯಾಸದ ಬಗ್ಗೆ ಮಾತನಾಡಿದ್ದಾರೆ.

Virat Kohli is someone who always wanted to push barriers Sanjay Bangar
ವಿರಾಟ್ ಯಾವಾಗಲೂ ಅಡೆತಡೆಗಳನ್ನು ಮೀರಲು ಬಯಸುವ ವ್ಯಕ್ತಿ : ಸಂಜಯ್ ಬಂಗಾರ್

ಬೆಂಗಳೂರು: ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತವರಿನ ಪಂದ್ಯಕ್ಕೆ ಮುನ್ನ, ತಂಡದ ಮುಖ್ಯ ಕೋಚ್ ಸಂಜಯ್ ಬಂಗಾರ್ ಅವರು ವಿರಾಟ್ ಕೊಹ್ಲಿ ಅವರ ತರಬೇತಿ ಬಗ್ಗೆ ಮಾತನಾಡಿದ್ದಾರೆ. ಅವರ ಅಭ್ಯಾಸವೇ ಅವರನ್ನು ಅತ್ಯುತ್ತಮ ಆಟಗಾರರನ್ನಾಗಿ ಮಾಡಿದೆ ಎಂದು ಹೇಳಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ವಿರಾಟ್​ ಕೊಹ್ಲಿ ಟ್ರೆಂಟ್ ಬೌಲ್ಟ್​ಗೆ ಗೋಲ್ಡನ್​ ಡಕ್​ ಆಗಿದ್ದರು. ಇದರಿಂದ ಹೊರ ಬರಲು ಅವರು ಪ್ರಯತ್ನಿಸುತ್ತಿದ್ದಾರೆ. ಅದನ್ನು ಅವರ ವೀಕ್​​ನೆಸ್​ ಆಗಿ ಉಳಿಸಿಕೊಳ್ಳಲು ಅವರು ಇಚ್ಛಿಸುವುದಿಲ್ಲ ಎಂದು ಬಂಗಾರ್​ ತಿಳಿಸಿದ್ದಾರೆ. ವಿರಾಟ್​ ಕೊಹ್ಲಿ ಸದ್ಯ ನಡೆಯುತ್ತಿರುವ ಐಪಿಎಲ್ 2023 ರಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಲೀಗ್​ ಅರ್ಧ ಹಂತದ ಏಳು ಪಂದ್ಯಗಳಲ್ಲಿ 141.62 ಸ್ಟ್ರೈಕ್ ರೇಟ್‌ನಲ್ಲಿ ನಾಲ್ಕು ಅರ್ಧಶತಕಗಳನ್ನು ಒಳಗೊಂಡಂತೆ 279 ರನ್ ಗಳಿಸಿದ್ದಾರೆ.

"ಅವರು ತರಬೇತಿಗೆ ಯಾವಾಗಲೇ ಬಂದರೂ ನೂರಕ್ಕೆ ನೂರರಷ್ಟು ತಮ್ಮ ಕೆಲಸವನ್ನು ಮಾಡುತ್ತಾರೆ. ಅವರಿಗೆ ಯಾವುದು ಸಮಸ್ಯೆಯಾಗಿ ಕಾಡುತ್ತಿದೆಯೋ ಆ ಬಗ್ಗೆ ಹೆಚ್ಚು ಗಮನವನ್ನು ಕೇಂದ್ರೀಕರಿಸಿ ಅಭ್ಯಾಸ ನಡೆಸುತ್ತಾರೆ. ಅದು ಅವರ ಅಭ್ಯಾಸದ ವಿಶಿಷ್ಟ ಲಕ್ಷಣವಾಗಿದೆ. ವಿರಾಟ್ ಯಾವಾಗಲೂ ಅಡೆತಡೆಗಳನ್ನು ಮೀರಲು ಬಯಸುವ ವ್ಯಕ್ತಿ. ಹೀಗಾಗಿ ಅವರು ಈ ರೀತಿಯ ಪ್ರದರ್ಶನವನ್ನು ನೀಡುತ್ತಿದ್ದಾರೆ" ಎಂದು ಸಂಜಯ್​ ಬಂಗಾರ್​ ಹೇಳಿದ್ದಾರೆ.

ಆರ್‌ಸಿಬಿಯ ಮೂವರು ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಸತತವಾಗಿ ರನ್‌ ಗಳಿಸುತ್ತಿದ್ದಾರೆ, ಮಧ್ಯಮ ಕ್ರಮಾಂಕವು ಇಲ್ಲಿಯವರೆಗೆ ಸ್ಥಿರವಾದ ಪ್ರದರ್ಶನ ನೀಡುವುದರಲ್ಲಿ ವಿಫಲವಾಗಿದೆ. ಈ ಬಗ್ಗೆ ಮಾತನಾಡಿದ ಕೋಚ್​ ಬ್ಯಾಟರ್​ಗಳ ಪರವಾಗಿಯೇ ಮಾತನಾಡಿದ್ದಾರೆ. "ಅಗ್ರ ಕ್ರಮಾಂಕದಲ್ಲಿ ನಿರರ್ಗಳತೆಯಿಂದ ರನ್​ ಬರುತ್ತಿರುವುದರಿಂದ ನಂತರ ಬರುವ ಬ್ಯಾಟರ್​ಗಳಿಗೆ ಹೆಚ್ಚು ಕೊಡುಗೆ ನೀಡಲು ಅವಕಾಶ ಸಿಗುತ್ತಿಲ್ಲ" ಎಂದು ಸಮಜಾಯಿಷಿ ನೀಡಿದ್ದಾರೆ.

"ಇದು ಮೊದಲಿಗೆ ಟಿ 20 ಪಂದ್ಯವಾಗಿದೆ, ಅಗ್ರ ನಾಲ್ಕು ಬ್ಯಾಟ್ಸ್‌ಮನ್‌ಗಳಲ್ಲಿ ಮೂವರು ಸಾಕಷ್ಟು ಚೆಂಡುಗಳನ್ನು ಆಡಿದರೆ, ನಂತರ ಬರುವ ಬ್ಯಾಟರ್​ಗಳಿಗೆ ಅವಕಾಶ ಕಡಿಮೆ ಇರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಖಂಡಿತವಾಗಿಯೂ ಕೆಳ ಕ್ರಮಾಂಕದಿಂದ ರನ್​ಗಳು ಬರಬೇಕಾದ ಅಗತ್ಯ ಇದೆ. ಆದರೆ ಅವರು ಏನು ಕೊಡುಗೆ ನೀಡಿಲ್ಲ ಎಂದು ಅಲ್ಲಗಳೆಯುವುದು ಸೂಕ್ತವಲ್ಲ" ಎಂದಿದ್ದಾರೆ.

"ನಾವು ಗಮನಿಸಬೇಕಾದ ಒಂದು ವಿಷಯವೆಂದರೆ ಎಲ್ಲಾ ದಿನದ ಪಂದ್ಯಗಳು, ವಿಕೆಟ್‌(ಪಿಚ್​) ತೀವ್ರವಾಗಿ ನಿಧಾನಗೊಂಡಿವೆ. ಆದ್ದರಿಂದ ಕೆಳ ಕ್ರಮಾಂಕದಲ್ಲಿ ಬರುವ ಬ್ಯಾಟರ್​ಗಳಿಗೆ ರನ್ ಮಾಡುವುದು ಸುಲಭವಾಗುತ್ತಿಲ್ಲ. ಇದನ್ನು ನಮ್ಮ ತಂಡದ ಬ್ಯಾಟರ್​ಗಳಲ್ಲಿ ಮಾತ್ರ ಅಲ್ಲ, ಎದುರಾಳಿ ತಂಡದ ಆಟಗಾರರಲ್ಲೂ ನೀವು ಗಮನಿಸಬಹುದು. ಆದ್ದರಿಂದ ಇನ್ನಿಂಗ್ಸ್‌ನ ಕೊನೆಯ ಓವರ್​ಗಳಲ್ಲಿ ಬೌಲರ್‌ಗಳು ಹೆಚ್ಚು ಪರಿಣಾಮ ಬೀರುತ್ತಿದ್ದಾರೆ ಮತ್ತು ಪಂದ್ಯಕ್ಕೆ ನಿರ್ಣಾಯಕವಾಗುತ್ತಿದ್ದಾರೆ" ಎಂದು ಮುಖ್ಯ ಕೋಚ್ ಹೇಳಿದರು.

ಆರ್​ಸಿಬಿ ಅವರು ಐದು ತವರು ಪಂದ್ಯಗಳನ್ನು ಇದುವರೆಗೆ ಆಡಿದ್ದು, ಇಂದಿನ ಕೆಕೆಆರ್​ ವಿರುದ್ಧದ ಪಂದ್ಯ ಆರನೇಯದ್ದಾಗಲಿದೆ. ಇನ್ನು ಮುಂದಿನ ಎಲ್ಲಾ ಪಂದ್ಯಗಳು ಪ್ರವಾಸಿ ಪಿಚ್​ನಲ್ಲಿ ಬೆಂಗಳೂರು ಆಡಬೇಕಿದೆ. ಮೇ 21 ರಂದು ನಡೆಯುವ ಲೀಗ್​ನ ಕೊನೆಯ ಪಂದ್ಯ ಗುಜರಾತ್ ಜೈಂಟ್ಸ್ ಜೊತೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಇದನ್ನೂ ಓದಿ: IPLನಲ್ಲಿ ಇಂದು: ಸೋಲಿನ ಸೇಡು ತೀರಿಸಿಕೊಳ್ಳಲು ರೆಡ್​ ಆರ್ಮಿ ರೆಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.