ETV Bharat / sports

IPLನಲ್ಲಿ ಈ ರೋಚಕ ಕ್ಷಣಗಳನ್ನು ಮಿಸ್‌ ಮಾಡಿದ್ದೀರಾ? ಹಾಗಿದ್ರೆ, ಫೋಟೋ ಸಮೇತ ನೋಡಿ!

author img

By

Published : May 29, 2023, 1:22 PM IST

ಶುಭಮನ್​ ಗಿಲ್​ 3 ಶತಕ, ಕೊಹ್ಲಿ ಟೂರ್ನಿಯ ಅತ್ಯಧಿಕ ಶತಕ, ಯಶಸ್ವಿ ಜೈಸ್ವಾಲ್​ ಫಾಸ್ಟೆಸ್ಟ್​ ಫಿಫ್ಟಿ, ಧೋನಿಯಿಂದ ಹಸ್ತಾಕ್ಷರ ಪಡೆದ ಹಿರಿಯ ಕ್ರಿಕೆಟಿಗ ಸುನೀಲ್​ ಗವಾಸ್ಕರ್..ಇಂತಹ ಹತ್ತು ಹಲವು ಅದ್ಭುತ ಕ್ಷಣಗಳು 16 ನೇ ಆವೃತ್ತಿಯ ಐಪಿಎಲ್​ನಲ್ಲಿ ದಾಖಲಾಗಿವೆ.

ರೋಚಕ ಐಪಿಎಲ್​ ಟೂರ್ನಿಯ ಅದ್ಭುತ ಕ್ಷಣಗಳು
ರೋಚಕ ಐಪಿಎಲ್​ ಟೂರ್ನಿಯ ಅದ್ಭುತ ಕ್ಷಣಗಳು

ಅಂದುಕೊಂಡಂತೆ ಆಗಿದ್ದರೆ, ನಿನ್ನೆ ರಾತ್ರಿಯೇ ಇಂಡಿಯನ್​ ಪ್ರೀಮಿಯರ್​ ಲೀಗ್​ನ(ಐಪಿಎಲ್​) 16ನೇ ಆವೃತ್ತಿಯ ಚಾಂಪಿಯನ್​ ಯಾರೆಂಬುದು ಘೋಷಣೆಯಾಗಬೇಕಿತ್ತು. ಆದರೆ, ವರುಣರಾಯ ಇದಕ್ಕೆ ಒಂದು ದಿನದ ಮಟ್ಟಿಗೆ ಬ್ರೇಕ್​ ಹಾಕಿದ್ದಾನೆ. ನಿನ್ನೆಯ ಫೈನಲ್​ ಪಂದ್ಯ ಮಳೆಗೆ ಆಹುತಿಯಾಗಿದ್ದು, ಮೀಸಲು ದಿನವಾದ ಇಂದು ನಡೆಯಲಿದೆ. ಈ ಮೂಲಕ ರೋಚಕ ಟೂರ್ನಿ ಸಮಾಪ್ತವಾಗಲಿದೆ. ಎರಡು ತಿಂಗಳ ಕಾಲ ನಡೆದ ಕ್ರಿಕೆಟ್​ ಹಬ್ಬ ಹತ್ತು ಹಲವು ರಸದೌತಣಗಳನ್ನು ನೀಡಿದೆ.

ಟೂರ್ನಿಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ 'ಇಂಪ್ಯಾಕ್ಟ್ ಪ್ಲೇಯರ್​' ಕೆಲ ಪಂದ್ಯಗಳಲ್ಲಿ ಇಂಪ್ಯಾಕ್ಟ್​ ಮಾಡಿದರೆ, ಹಲವರು ಠುಸ್​ ಆದರು. ಸೋತೇ ಬಿಟ್ಟಿತು ಎಂಬ ತಂಡ ಕೊನೆಯಲ್ಲಿ ಪುಟಿದೆದ್ದು ಗೆದ್ದು ಅಚ್ಚರಿ ಮೂಡಿಸಿವೆ. ಶುಭಮನ್​ ಗಿಲ್​ 3 ಶತಕ, ಕೊಹ್ಲಿ ಅತ್ಯಧಿಕ ಶತಕ, ಯಶಸ್ವಿ ಜೈಸ್ವಾಲ್​ ಫಾಸ್ಟೆಸ್ಟ್​ ಫಿಫ್ಟಿ, ಧೋನಿಯಿಂದ ಆಟೋಗ್ರಾಫ್​ ಪಡೆದ ಹಿರಿಯ ಕ್ರಿಕೆಟಿಗ ಸುನೀಲ್​ ಗವಾಸ್ಕರ್.. ಇವೆಲ್ಲಾ ಟೂರ್ನಿಯಲ್ಲಿ ಮೂಡಿಬಂದ ಅದ್ಭುತಗಳು.

ಸಿಎಸ್​ಕೆ ಪರ ಆಡುತ್ತಿರುವ ತುಷಾರ್​ ದೇಶಪಾಂಡೆ ಚೊಚ್ಚಲ ಇಂಪ್ಯಾಕ್ಟ್​ ಪ್ಲೇಯರ್ ಆಗಿ ಕಣಕ್ಕಿಳಿದರು. ಅಧಿಕ ರನ್​ ನೀಡಿ ದುಬಾರಿಯಾಗಿ ಮೊದಲ ಪ್ರಯತ್ನವೇ ವಿಫಲವಾಯಿತು. ಸಿಎಸ್​ಕೆ ಮತ್ತು ಲಖನೌ ಮಧ್ಯೆ ನಡೆದ ಪಂದ್ಯದಲ್ಲಿ ಯಶಸ್ವಿ ನಾಯಕ ಮಹೇಂದ್ರ ಸಿಂಗ್​ ದೋನಿ 2 ಸಿಕ್ಸರ್ ಸಿಡಿಸಿ ರಂಜಿಸಿದರು. ಕೆಕೆಆರ್​ ಮತ್ತು ಆರ್​ಸಿಬಿ ನಡುವಿನ ಪಂದ್ಯದಲ್ಲಿ ಸ್ಪಿನ್ನರ್​ ಸುಯಾಶ್​ ಶರ್ಮಾ ಚೊಚ್ಚಲ ಪಂದ್ಯದಲ್ಲಿ 3 ವಿಕೆಟ್​ ಪಡೆದು ಮಿಂಚಿದರು.

ಅಜಿಂಕ್ಯಾ ರಹಾನೆ ಕಮ್​ಬ್ಯಾಕ್​: ಐಪಿಎಲ್​ ಹಲವು ಆಟಗಾರರಿಗೆ 'ಜೀವದಾನ' ನೀಡಿದೆ ಎಂಬುದು ಮತ್ತೆ ಸಾಬೀತಾಯಿತು. ಭಾರತ ಟೆಸ್ಟ್​ ತಂಡದ ಭಾಗವಾಗಿದ್ದ ಅಜಿಂಕ್ಯಾ ರಹಾನೆ ಕಳಪೆ ಆಟದಿಂದಾಗಿ ತಂಡದಿಂದ ಹೊರಬಿದ್ದಿದ್ದರು. ಸಿಎಸ್​ಕೆ ಪರ ಆಡುವ ರಹಾನೆ ಮುಂಬೈ ಎದುರಿನ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತನ್ನ ಬ್ಯಾಟಿಂಗ್​ ಬಲ ಕುಂದಿಲ್ಲ ಎಂದು ತೋರಿಸಿದರು. ಇದಲ್ಲದೇ, ಟೆಸ್ಟ್​ ವಿಶ್ವ ಚಾಂಪಿಯನ್​ಶಿಪ್​ ಫೈನಲ್​ಗೆ ಆಯ್ಕೆ ಕೂಡ ಆಗಿದ್ದಾರೆ.

'ಸಿಕ್ಸರ್​' ರಿಂಕು ಸಿಂಗ್​
'ಸಿಕ್ಸರ್​' ರಿಂಕು ಸಿಂಗ್​

'ಸಿಕ್ಸರ್​' ಸಿಂಗ್​: ಕೆಕೆಆರ್​ ತಂಡದ ರಿಂಕು ಸಿಂಗ್​ ಬಲಿಷ್ಠ ಗುಜರಾತ್​ ಟೈಟಾನ್ಸ್​ನ ಯಶ್ ದಯಾಳ್​ಗೆ ಕೊನೆಯ ಓವರ್​ನಲ್ಲಿ ಸತತ 5 ಸಿಕ್ಸರ್​ ಬಾರಿಸಿ ಸೋತಿದ್ದ ಪಂದ್ಯವನ್ನು ಗೆಲ್ಲಿಸಿಕೊಟ್ಟು ರಾತ್ರೋರಾತ್ರಿ ಹೀರೋ ಆದರು. ಇದಾದ ಬಳಿಕವೂ ಹಲವು ಪಂದ್ಯಗಳಲ್ಲಿ ರಿಂಕು ಮಿಂಚು ಹರಿಸಿದ್ದಾರೆ.

'ಆವೇಶ' ಖಾನ್​: ಆರ್​ಸಿಬಿಯ ವಿರಾಟ್​ ಕೊಹ್ಲಿ ಮತ್ತು ಲಖನೌ ನಡುವೆ ತೀವ್ರ ತಿಕ್ಕಾಟಕ್ಕೆ ಟೂರ್ನಿ ಸಾಕ್ಷಿಯಾಯಿತು. ಆರ್​ಸಿಬಿ ನೀಡಿದ್ದ 212 ರನ್​ಗಳ ಬೃಹತ್​ ಮೊತ್ತವನ್ನು ಲಖನೌ ಗೆದ್ದಾಗ ಆವೇಶ್​ಖಾನ್​ ಹೆಲ್ಮೆಟ್​ ನೆಲಕ್ಕೆ ಬಿಸಾಡಿ ಸಂಭ್ರಮಾಚರಣೆ ಮಾಡಿದ್ದರು. ಇದಾದ ಬಳಿಕ ವಿರಾಟ್​, ಗೌತಮ್​ ಗಂಭೀರ್​, ನವೀನ್​ ಉಲ್​ ಹಕ್​ ಮಧ್ಯೆ ಮೈದಾನದಲ್ಲೇ ತೀವ್ರ ಕಿತ್ತಾಟ ನಡೆದಿತ್ತು. ಬಳಿಕ ವಿರಾಟ್ ಅಭಿಮಾನಿಗಳು ನವೀನ್​ ಉಲ್​ ಹಕ್​ರನ್ನು ಹಲವು ಬಾರಿ ಕಿಚಾಯಿಸಿದ್ದೂ ಇದೆ.

ಸ್ಟಂಪ್​ ಮುರಿದ ಅರ್ಷದೀಪ್ ಸಿಂಗ್​
ಸ್ಟಂಪ್​ ಮುರಿದ ಅರ್ಷದೀಪ್ ಸಿಂಗ್​

ಸ್ಟಂಪ್​ ಮುರಿದ ಅರ್ಷದೀಪ್ ಸಿಂಗ್​​: ಪಂಜಾಬ್​ ಕಿಂಗ್ಸ್​ ತಂಡದ ಅರ್ಷದೀಪ್​ ಸಿಂಗ್​ ಮುಂಬೈ ಎದುರಿನ ಪಂದ್ಯದಲ್ಲಿ ಸತತ ಎರಡು ಎಸೆತಗಳಲ್ಲಿ ವಿಕೆಟ್​ಗಳನ್ನು ಮುರಿದು ಹಾಕಿ ಭಾರೀ ಸುದ್ದಿಯಾಗಿದ್ದರು. ಇದರಿಂದ ಬಿಸಿಸಿಐಗೆ 58 ಲಕ್ಷ ರೂಪಾಯಿ ನಷ್ಟ ಉಂಟಾಗಿತ್ತು.

ಜೈಸ್ವಾಲ್​ 'ಯಶಸ್ವಿ' ಬ್ಯಾಟಿಂಗ್​
ಜೈಸ್ವಾಲ್​ 'ಯಶಸ್ವಿ' ಬ್ಯಾಟಿಂಗ್​

ಜೈಸ್ವಾಲ್​ 'ಯಶಸ್ವಿ'!​: ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್​ ಈ ಆವೃತ್ತಿಯ ಎಮರ್ಜಿಂಗ್​ ಪ್ಲೇಯರ್​ ಆಗಲಿದ್ದಾರೆ. ರಾಜಸ್ಥಾನ ರಾಯಲ್ಸ್​ ಪರ ಆಡುತ್ತಿರುವ ಜೈಸ್ವಾಲ್​ ಕೆಕೆಆರ್​ ವಿರುದ್ಧ 13 ಎಸೆತಗಳಲ್ಲಿ 50 ರನ್​ ಬಾರಿಸಿ ಐಪಿಎಲ್​ ಇತಿಹಾಸದಲ್ಲಿಯೇ ಫಾಸ್ಟೆಸ್ಟ್​ ಫಿಫ್ಟಿ ಬಾರಿಸಿ ದಾಖಲೆ ಬರೆದರು.

ವಿರಾಟ್ ಕೊಹ್ಲಿ ಶತಕಗಳ ದಾಖಲೆ
ವಿರಾಟ್ ಕೊಹ್ಲಿ ಶತಕಗಳ ದಾಖಲೆ

'ವಿರಾಟ್' ಪ್ರದರ್ಶನ: ರನ್​ ಮಶಿನ್​ ವಿರಾಟ್​ ಕೊಹ್ಲಿ ಸತತ ಎರಡು ಶತಕ ಬಾರಿಸಿದ್ದಲ್ಲದೇ, ಐಪಿಎಲ್​ನಲ್ಲಿಯೇ ಅತ್ಯಧಿಕ ಶತಕ(7) ಬಾರಿಸಿದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆದರು. ಈ ಮೊದಲು ಯೂನಿವರ್ಸ್​ ಬಾಸ್ ಕ್ರಿಸ್​​ಹಗೇಲ್​ ಹೆಸರಿನಲ್ಲಿ ಈ ದಾಖಲೆ ಇತ್ತು. ಅವರು 6 ಶತಕ ಬಾರಿಸಿದ್ದರು.

ಶುಭಮನ್​ ಗಿಲ್​ ಶತಕಗಳ ವೈಭವ
ಶುಭಮನ್​ ಗಿಲ್​ ಶತಕಗಳ ವೈಭವ

ಗುಜರಾತ್​ 'ಗಿಲ್'ಖುಷ್!​: ಅದ್ಭುತ ಲಯದಲ್ಲಿರುವ ಗುಜರಾತ್​ ತಂಡದ ಶುಭಮನ್​ ಗಿಲ್​ ಈ ಆವೃತ್ತಿಯಲ್ಲಿ ತಮ್ಮ ಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಸತತ 2 ಶತಕ ಸೇರಿ ಒಟ್ಟಾರೆ 3 ಹಂಡ್ರೆಡ್​ ಬಾರಿಸಿದರು. ಇದು ಕೂಡ ದಾಖಲೆಯಾಗಿದೆ. ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರ ಪಟ್ಟಿಯಲ್ಲೂ ಗಿಲ್​ ಇದ್ದಾರೆ.

ದೋನಿ ಹಸ್ತಾಕ್ಷರ ಪಡೆದ ಗವಾಸ್ಕರ್
ದೋನಿ ಹಸ್ತಾಕ್ಷರ ಪಡೆದ ಗವಾಸ್ಕರ್

ದೋನಿ ಹಸ್ತಾಕ್ಷರ ಪಡೆದ ಗವಾಸ್ಕರ್​: ಚೆಪಾಕ್​ ಮೈದಾನದಲ್ಲಿ ಸಿಎಸ್​ಕೆ ತಂಡವಾಡಿದ ಕೊನೆಯ ಲೀಗ್​ ಪಂದ್ಯದಲ್ಲಿ ಹಿರಿಯ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅವರು, ಮಹೇಂದ್ರ ಸಿಂಗ್​ ದೋನಿ ಅವರ ಹಸ್ತಾಕ್ಷರ ಪಡೆದುಕೊಂಡರು. ಇದು ಟೂರ್ನಿಯ ಅಮೂಲ್ಯ ಕ್ಷಣವಾಗಿತ್ತು. ಗವಾಸ್ಕರ್ ಅವರು ಸಿಎಸ್‌ ಕೆ ನಾಯಕ ಧೋನಿ ಬಳಿ ಓಡಿ ಬಂದು ಅವರ ಶರ್ಟ್​ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡರು.

ಇದನ್ನೂ ಓದಿ: IPL​ ಫೈನಲ್​ಗೆ ವರುಣ ಅಡ್ಡಿ: ಇಂದೂ ಮಳೆ ಸುರಿದರೆ ಫಲಿತಾಂಶ ನಿರ್ಣಯ ಹೀಗೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.