ETV Bharat / sports

ಟಿ20: ಭಾರತ ವನಿತೆಯರಿಗೆ ಇಂಗ್ಲೆಂಡ್ ಸವಾಲು; ಸೋಲು-ಗೆಲುವಿನ ಲೆಕ್ಕಾಚಾರ ಹೀಗಿದೆ

author img

By ETV Bharat Karnataka Team

Published : Dec 5, 2023, 9:16 PM IST

INDW vs ENGW 1st T20: ಇಂಗ್ಲೆಂಡ್​ ಮತ್ತು ಭಾರತದ ಮಹಿಳೆಯರ ನಡುವಿನ ಮೂರು ಟಿ20 ಪಂದ್ಯಗಳ ಕ್ರಿಕೆಟ್ ಸರಣಿ ಬುಧವಾರ ಆರಂಭವಾಗಲಿದೆ.

India Women vs England Women 1st T20 Preview
India Women vs England Women 1st T20 Preview

ಮುಂಬೈ(ಮಹಾರಾಷ್ಟ್ರ): ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತೀಯ ವನಿತೆಯರಿಗೆ ಆಂಗ್ಲರು ಸವಾಲೊಡ್ಡಲು ಸಿದ್ಧರಾಗಿದ್ದಾರೆ. ನಾಳೆಯಿಂದ (ಬುಧವಾರ) ಇಂಗ್ಲೆಂಡ್​ ವಿರುದ್ಧದ ಮೂರು ಟಿ20 ಪಂದ್ಯಗಳ ಕ್ರಿಕೆಟ್ ಸರಣಿ ಆರಂಭವಾಗಲಿದ್ದು, ಚುಟುಕು ಮಾದರಿಯಲ್ಲಿ ಯಶಸ್ಸು ಕಂಡಿರುವ ಹರ್ಮನ್​ಪ್ರೀತ್​ ಕೌರ್​ ಪಡೆ ಗೆಲುವಿನ ಓಟ ಮುಂದುವರೆಸುವ ಲೆಕ್ಕಾಚಾರದಲ್ಲಿದೆ.

ಹರ್ಮನ್‌ಪ್ರೀತ್ ಕೌರ್ ನೇತೃತ್ವದಲ್ಲಿ ತಂಡ ಯಶಸ್ವಿ ಕ್ರಿಕೆಟ್ ವರ್ಷವನ್ನು ಕಂಡಿದೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ, ಬಾಂಗ್ಲಾದೇಶ ವಿರುದ್ಧದ 2-1 ಅಂತರದಲ್ಲಿ ಸರಣಿ ಜಯಿಸಿತ್ತು. ಅಲ್ಲದೇ ದಕ್ಷಿಣ ಆಫ್ರಿಕಾದಲ್ಲಿ ನಡೆದ ವೆಸ್ಟ್​​ ಇಂಡೀಸ್​ ಒಳಗೊಂಡ ತ್ರಿಕೋನ ಸರಣಿಯಲ್ಲಿ ಫೈನಲ್​​ ಪ್ರವೇಶಿಸಿತ್ತು.

ಇನ್ನೊಂದೆಡೆ, ಇಂಗ್ಲೆಂಡ್​ ವನಿತೆಯರು ತವರಿನಲ್ಲಿ ಶ್ರೀಲಂಕಾ ವಿರುದ್ಧ 1-2 ಅಂತರದಲ್ಲಿ ಸೋತ ನಿರಾಶೆ ನೀಗಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ ತಂಡವು ಭಾರತದಲ್ಲಿ ಉತ್ತಮ ಪ್ರದರ್ಶನ ನೀಡಿರುವ ದಾಖಲೆೆ​ ಹೊಂದಿದೆ. ಐಸಿಸಿ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿರುವ ಭಾರತವು ಇಂಗ್ಲೆಂಡ್​ ವಿರುದ್ಧ ತವರಿನಲ್ಲಿ 9 ಪಂದ್ಯಗಳನ್ನಾಡಿದ್ದು, ಕೇವಲ 2ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆಂಗ್ಲ ವನಿತೆಯರು ಇದೇ ಭರವಸೆಯಲ್ಲಿ ಮೈದಾನಕ್ಕಿಳಿಯಲಿದ್ದಾರೆ. ಇದಲ್ಲದೇ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್​ 27 ಬಾರಿ ಮುಖಾಮುಖಿಯಾಗಿದ್ದು ಕೇವಲ 7ರಲ್ಲಿ ಗೆದ್ದಿದೆ.

ಭಾರತ ಕೊನೆಯದಾಗಿ ತವರು ಮೈದಾನದಲ್ಲಿ ಟಿ20 ಪಂದ್ಯದಲ್ಲಿ ಗೆಲುವು ದಾಖಲಿಸಿದ್ದು ಎರಡು ವರ್ಷಗಳ ಹಿಂದೆ ಅಂದರೆ 2021ರಲ್ಲಿ. ಲಖನೌದಲ್ಲಿ ದಕ್ಷಿಣ ಆಫ್ರಿಕಾವನ್ನು ಒಂಬತ್ತು ವಿಕೆಟ್‌ಗಳಿಂದ ಭಾರತೀಯರು ಗೆದ್ದಿದ್ದರು. ಅಲ್ಲಿಂದೀಚೆಗೆ ತವರಿನಲ್ಲಿ ಆಡುವಾಗ ಭಾರತ ನಾಲ್ಕು ಪಂದ್ಯಗಳಲ್ಲಿ ಸೋತಿದೆ ಮತ್ತು ಒಂದು ಪಂದ್ಯವನ್ನು ಟೈ ಮಾಡಿಕೊಂಡಿದೆ.

ತವರಿನಲ್ಲಿ ವನಿತೆಯರ ತಂಡ ಈವರೆಗೆ 50 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಈ ಪೈಕಿ 30 ಸೋಲು, 19 ಗೆಲುವು ಕಂಡರೆ ಒಂದನ್ನು ಟೈ ಮಾಡಿಕೊಂಡಿದೆ. ಈ ಸರಣಿಯಲ್ಲಿ ಟೀಮ್​ ಇಂಡಿಯಾ ವನಿತೆಯರು ತಮ್ಮ ನಿರಾಶಾದಾಯಕ ತವರಿನ ದಾಖಲೆಯನ್ನು ಸುಧಾರಿಸುವ ಪ್ರಯತ್ನದಲ್ಲಿದ್ದಾರೆ.

ಈ ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕೊನೆಯ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಸೆಮಿಫೈನಲ್​ ತಲುಪಿ ಟೂರ್ನಿಯಿಂದ ಹೊರಬಿದ್ದಿತ್ತು. 2024ರ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿರುವ ಮಹಿಳೆಯರ ಟಿ20 ವಿಶ್ವಕಪ್​​​ಗೆ ಈ ಸರಣಿ ಸಿದ್ಧತೆ ಎಂದೇ ಪರಿಗಣಿಸಬಹುದು.

ಭಾರತ ಬಲಿಷ್ಠ ತಂಡ: ದೀಪ್ತಿ ಶರ್ಮಾ 16 ಪಂದ್ಯಗಳಿಂದ 19 ವಿಕೆಟ್‌ ಪಡೆದು ಭಾರತದ ಪ್ರಮುಖ ಬೌಲರ್​ ಆಗಿದ್ದಾರೆ. ಹರ್ಮನ್‌ಪ್ರೀತ್ 13 ಟಿ20 ಪಂದ್ಯಗಳಿಂದ 35.88 ಸರಾಸರಿಯಲ್ಲಿ ಬ್ಯಾಟಿಂಗ್​ ಮಾಡಿ 3 ಅರ್ಧಶತಕಸಹಿತ 323 ರನ್ ಗಳಿಸಿದ್ದಾರೆ. ಜೆಮಿಮಾ ರೋಡ್ರಿಗಸ್ 16 ಪಂದ್ಯಗಳಲ್ಲಿ 34.20 ಸರಾಸರಿಯಲ್ಲಿ ಒಂದು ಅರ್ಧಶತಕದೊಂದಿಗೆ 342 ರನ್ ಬಾರಿಸಿದ್ದಾರೆ, ಉಪ ನಾಯಕಿ ಸ್ಮೃತಿ ಮಂಧಾನ 15 ಪಂದ್ಯಗಳಲ್ಲಿ ಮೂರು ಅರ್ಧಶತಕಗಳೊಂದಿಗೆ 369 ರನ್ ಕಲೆಹಾಕಿದ್ದಾರೆ.

ಹೊಸ ಮುಖಗಳಿಗೆ ಅವಕಾಶ: ಈ ಸರಣಿಗೆ ಭಾರತವು ಮೂರು ಹೊಸ ಮುಖಗಳನ್ನು ಪರಿಚಯಿಸಿದೆ. ಕರ್ನಾಟಕದ ಬಲಗೈ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್, ಪಂಜಾಬ್‌ನ ಎಡಗೈ ಸ್ಪಿನ್ನರ್ ಮನ್ನತ್ ಕಶ್ಯಪ್ ಮತ್ತು ಬಂಗಾಳದ ಸೈಕಾ ಇಶಾಕ್ ತಂಡ ಸೇರಿಕೊಂಡಿದ್ದಾರೆ. ಪಾಟೀಲ್ ಚೊಚ್ಚಲ ವುಮೆನ್ಸ್​ ಪ್ರೀಮಿಯರ್​ ಲೀಗ್‌ನಲ್ಲಿ (ಡಬ್ಲ್ಯೂಪಿಎಲ್​) ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ಉತ್ತಮವಾಗಿ ಆಡಿದ್ದರು. ಅಲ್ಲದೇ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯರಾಗಿದ್ದು, ಅಲ್ಲಿ ಐದು ಪಂದ್ಯಗಳಲ್ಲಿ ಒಂಬತ್ತು ವಿಕೆಟ್​ ಪಡೆದರು. ಕಶ್ಯಪ್ ಐಸಿಸಿ ಅಂಡರ್​ 19 ಮಹಿಳಾ ಟಿ20 ವಿಶ್ವಕಪ್‌ ತಂಡದಲ್ಲಿ ಆಡಿದ್ದರೆ, ಇಶಾಕ್ ಡಬ್ಲ್ಯೂಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡಿ 15 ವಿಕೆಟ್‌ ಕಬಳಿಸಿದ್ದರು.

ಚೊಚ್ಚಲ ಡಬ್ಲ್ಯೂಪಿಎಲ್​ನಲ್ಲಿ ಇಂಗ್ಲೆಂಡ್​ ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡಿದ್ದರು. ಅನುಭವಿ ನ್ಯಾಟ್ ಸ್ಕೈವರ್ ಬ್ರಂಟ್‌ ಆಲ್‌ರೌಂಡ್ ಆಟ ಆಡಿದ್ದು, ಮುಂಬೈನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಲೀಗ್​ನಲ್ಲಿ 140.08 ಸ್ಟ್ರೈಕ್ ರೇಟ್‌ನಲ್ಲಿ 332 ರನ್ ಮತ್ತು 10 ವಿಕೆಟ್‌ ಕಬಳಿಸಿದ್ದರು. ಇವರಲ್ಲದೇ ಡ್ಯಾನಿ ವ್ಯಾಟ್ 11 ಪಂದ್ಯಗಳಲ್ಲಿ 278 ರನ್​, ಸೋಫಿ ಎಕ್ಲೆಸ್ಟೋನ್ ಬೌಲಿಂಗ್​ನಲ್ಲಿ 16 ವಿಕೆಟ್ ಮತ್ತು ಸಾರಾ ಗ್ಲೆನ್ 13 ವಿಕೆಟ್​ ಉರುಳಿಸಿದ್ದರು.

ಉಭಯ ತಂಡಗಳ ಬಲಾಬಲ ಹೆಚ್ಚೂ ಕಡಿಮೆ ಒಂದೇ ರೀತಿಯಾಗಿದ್ದು ಯಾರ ಪಾಲಿಗೆ ಜಯದ ಮಾಲೆ ಬೀಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ಪಂದ್ಯ ಎಲ್ಲಿ, ಯಾವಾಗ?: ಮುಂಬೈನ ವಾಂಖೆಡೆ ಕ್ರೀಡಾಂಗಣ, ಸಂಜೆ 7ಕ್ಕೆ

ಇಲ್ಲಿ ವೀಕ್ಷಿಸಬಹುದು: ಜಿಯೋಸಿನಿಮಾ ಡಿಜಿಟಲ್​ ವೇದಿಕೆ, 18 ಸ್ಪೋರ್ಟ್ಸ್​ ಚಾನೆಲ್​.

ಇದನ್ನೂ ಓದಿ: ಈ ಬಾರಿ ದುಬೈನಲ್ಲಿ ಐಪಿಎಲ್‌ ಹರಾಜು: ದುಬಾರಿ ಆಟಗಾರರು ಯಾರು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.