ETV Bharat / sports

IND vs AUS: ಆಸೀಸ್​ ವಿರುದ್ಧ ಐದು ವಿಕೆಟ್​ ಪಡೆದು ಮಿಂಚಿದ ಶಮಿ.. ಭಾರತಕ್ಕೆ 277 ರನ್​ ಸ್ಪರ್ಧಾತ್ಮಕ ಗುರಿ

author img

By ETV Bharat Karnataka Team

Published : Sep 22, 2023, 5:44 PM IST

Updated : Sep 22, 2023, 6:51 PM IST

ಪಂಜಾಬ್​ನ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯದ ಸರಣಿಯ ಮೊದಲ ಪಂದ್ಯ ​ನಡೆಯುತ್ತಿದೆ. ಭಾರತಕ್ಕೆ ಆಸ್ಟ್ರೇಲಿಯಾ 277 ರನ್​ ಗುರಿಯನ್ನು ನೀಡಿದೆ.

India vs Australia 1st ODI Score update
India vs Australia 1st ODI Score update

ಮೊಹಾಲಿ (ಪಂಜಾಬ್)​: ವಿಶ್ವಕಪ್​ಗೆ ತಯಾರಿ ಹಿನ್ನೆಲೆಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್​ ಶಮಿ ಐದು ವಿಕೆಟ್​ ಪಡೆದು ಅದ್ಭುತ ಪ್ರದರ್ಶನ ನೀಡಿದರು. ಡೇವಿಡ್​ ವಾರ್ನರ್​ ಅರ್ಧಶತಕ ಮತ್ತು ಸ್ಟೀವನ್ ಸ್ಮಿತ್​, ಜೋಶ್ ಇಂಗ್ಲಿಸ್​​ ಅವರ ಸಾಧಾರಣ ಆಟದ ನೆರವಿನಿಂದ 50 ಓವರ್​ಗಳಲ್ಲಿ ಆಸೀಸ್​ 276 ರನ್​ಗೆ ಸರ್ವಪತನ ಕಂಡಿತು.

ಉಭಯ ತಂಡಗಳು ವಿಶ್ವಕಪ್​ನ ಕೊನೆಯ ತಯಾರಿಯಲ್ಲಿವೆ. ಅಲ್ಲದೇ ಎರಡೂ ತಂಡಗಳು ವಿಶ್ವಕಪ್​ ತಂಡವನ್ನೇ ಮೈದಾನಕ್ಕಿಳಿಸಿದೆ. ಭಾರತದ ನಾಯಕ ಕೆ. ಎಲ್.​ ರಾಹುಲ್​ ಟಾಸ್​ ಫಿಲ್ಡಿಂಗ್​ ಆಯ್ಕೆ ಮಾಡಿಕೊಂಡರು. ಅಲ್ಲದೇ, ಪಂದ್ಯದಲ್ಲಿ ಉತ್ತಮ ಬೌಲಿಂಗ್​ ದಾಳಿಯನ್ನು ಕಾಂಗರೂ ಪಡೆಯ ವಿರುದ್ಧ ಮಾಡಿದರು. ಇದರಿಂದ ಆಸೀಸ್​ನ ವಾರ್ನರ್​ ಹೊರತಾಗಿ ಯಾರಿಗೂ ಅರ್ಧಶತಕದ ಇನ್ನಿಂಗ್ಸ್​ ಕಟ್ಟಲು ಸಾಧ್ಯವಾಗಲಿಲ್ಲ.

ಆರಂಭಿಕ ಮಿಚಲ್​ ಮಾರ್ಷ 4 ರನ್​ ಗಳಿಸಿ ಹೊರನಡೆದರೆ, ಎರಡನೇ ವಿಕೆಟ್​ಗೆ ಜೊತೆಯಾದ ಅನುಭವಿಗಳಾದ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ 94 ರನ್​ ಜೊತೆಯಾಟ ಮಾಡಿದರು. 53 ಬಾಲ್​ನಲ್ಲಿ 2 ಸಿಕ್ಸರ್​​ ಮತ್ತು 6 ಬೌಂಡರಿಗಳೊಂದಿಗೆ 52 ರನ್​ ಗಳಿಸಿದ್ದ ವಾರ್ನರ್​ ರವೀಂದ್ರ ಜಡೇಜಾ ಅವರಿಗೆ ವಿಕೆಟ್​ ಕೊಟ್ಟರು. ವಾರ್ನರ್​ ಬೆನ್ನಲ್ಲೆ 41 ರನ್​ ಗಳಿಸಿದ್ದ ಸ್ಮಿತ್​ ವಿಕೆಟ್​ ಒಪ್ಪಿಸಿದರು. ಮಾರ್ನಸ್ ಲ್ಯಾಬುಷೇನ್​ (39) ಮತ್ತು ಕ್ಯಾಮೆರಾನ್ ಗ್ರೀನ್ (31) ಅಲ್ಪ ಜೊತೆಯಾಟ ನೀಡಿದರು.

6ನೇ ವಿಕೆಟ್​ಗೆ ಒಂದಾದ ಕೆಳ ಕ್ರಮಾಂಕದ ಜೋಶ್ ಇಂಗ್ಲಿಸ್ ಮತ್ತು ಮಾರ್ಕಸ್ ಸ್ಟೊಯ್ನಿಸ್ 62 ರನ್​ ಜೊತೆಯಾಟ ಮಾಡಿ ತಂಡದ ಮೊತ್ತವನ್ನು 250ರ ಸಮೀಪಕ್ಕೆ ತಂದರು. ಇಂಗ್ಲಿಸ್​ 100 ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್​ ಬೀಸಿ 3 ಬೌಂಡರಿ ಮತ್ತು 2 ಸಿಕ್ಸರ್​ ಸಹಾಯದಿಂದ 45 ರನ್​ ಕಲೆ ಹಾಕಿದರು. ಶಮಿ ತಮ್ಮ ಕೊನೆಯ ಓವರ್​ಗಳಲ್ಲಿ ಸ್ಟೊಯ್ನಿಸ್, ಅಬಾಟ್, ಶಾರ್ಟ್ ಔಟ್​ ಮಾಡಿ ಪಂದ್ಯದಲ್ಲಿ ಐದು ವಿಕೆಟ್​ ಪಡೆದರು. ನಾಯಕ ಪ್ಯಾಟ್​ ಕಮಿನ್ಸ್​ ಕೊನೆಯ ಓವರ್​ಗಳಲ್ಲಿ ವೇಗವಾಗಿ ರನ್​ ಗಳಿಸಿದ ಪರಿಣಾಮ 275ರ ಗಡಿಯನ್ನು ಆಸೀಸ್​ ತಲುಪಿತು.

ಅಜಿತ್​ ಅಗರ್ಕರ್​ ದಾಖಲೆ ಮುರಿದ ಶಮಿ: ಮೊಹಮ್ಮದ್​ ಶಮಿ ಏಕದಿನ ಕ್ರಿಕೆಟ್​ನಲ್ಲಿ ಎರಡನೇ ಬಾರಿಗೆ ಐದು ವಿಕೆಟ್​ ಪಡೆದ ಸಾಧನೆ ಮಾಡಿದರು. ಆಸ್ಟ್ರೇಲಿಯಾ ವಿರುದ್ಧ ಕಪಿಲ್​ ದೇವ್​ ನಂತರ ಅತಿ ಹೆಚ್ಚು ವಿಕೆಟ್​ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೂ ಶಮಿ ಪಾತ್ರರಾಗಿದ್ದಾರೆ. ಕಪಿಲ್​ ದೇವ್​ ಆಸೀಸ್​ನ 45 ವಿಕೆಟ್​ ಪಡೆದಿದ್ದರೆ, ಶಮಿ 37 ವಿಕೆಟ್ ಪಡೆದಿದ್ದಾರೆ. ಶಮಿ ಬಿಸಿಸಿಐನ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ ದಾಖಲೆ ಮುರಿದಿದ್ದಾರೆ. ಅಗರ್ಕರ್ ಆಸೀಸ್​ ವಿರುದ್ಧ 36 ವಿಕೆಟ್ ಕಿತ್ತಿದ್ದರು.

ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಟಾಸ್​ ಗೆದ್ದ ಭಾರತ ಬೌಲಿಂಗ್; ಅಯ್ಯರ್​, ಸೂರ್ಯಗೆ ಪರೀಕ್ಷೆ

Last Updated : Sep 22, 2023, 6:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.