ETV Bharat / sports

ZIM vs IND: ಆರು ವರ್ಷಗಳ ಬಳಿಕ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ

author img

By

Published : Jul 20, 2022, 4:23 PM IST

India to tour Zimbabwe
India to tour Zimbabwe

2016ರ ಬಳಿಕ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು, ಉಭಯ ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ.

ನವದೆಹಲಿ: ಬರೋಬ್ಬರಿ ಆರು ವರ್ಷಗಳ ಬಳಿಕ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು, ಉಭಯ ತಂಡಗಳ ನಡುವೆ ಆಗಸ್ಟ್​ ತಿಂಗಳಲ್ಲಿ ಮೂರು ಏಕದಿನ ಪಂದ್ಯಗಳ ಸರಣಿ ಆಯೋಜನೆಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಜಿಂಬಾಬ್ವೆ ಕ್ರಿಕೆಟ್ ಬೋರ್ಡ್​ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಈ ಸರಣಿಗೋಸ್ಕರ ಟೀಂ ಇಂಡಿಯಾ ಹೊಸ ಹೊಸ ಪ್ರತಿಭೆಗಳಿಗೆ ಚಾನ್ಸ್ ನೀಡುವ ಸಾಧ್ಯತೆ ದಟ್ಟವಾಗಿದೆ.

ಐಸಿಸಿ ಸೂಪರ್ ಲೀಗ್​ ಭಾಗವಾಗಿ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ಕನ್ನಡಿಗ ಕೆಎಲ್​ ರಾಹುಲ್ ತಂಡ ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ. ಉಭಯ ತಂಡಗಳ ನಡುವೆ ಹರಾರೆ ಮೈದಾನದಲ್ಲಿ ಆಗಸ್ಟ್​ 18,20 ಹಾಗೂ 22ರಂದು ಪಂದ್ಯಗಳು ನಡೆಯಲಿವೆ. ಐಸಿಸಿ ಪುರುಷರ ಕ್ರಿಕೆಟ್​ ವಿಶ್ವಕಪ್​ ಸೂಪರ್ ಲೀಗ್​ನ ಭಾಗವಾಗಿ ಈ ಸರಣಿ ನಡೆಯಲಿದ್ದು, ವಿಶ್ವಕಪ್​​​ಗೆ ನೇರ ಅರ್ಹತೆ ಪಡೆದುಕೊಳ್ಳಲು ಜಿಂಬಾಬ್ವೆಗೆ ಈ ಸರಣಿ ಮಹತ್ವ ಪಡೆದುಕೊಂಡಿದೆ. ಐಸಿಸಿ ಲೀಗ್​​​ ಶ್ರೇಯಾಂಕದಲ್ಲಿ ಜಿಂಬಾಬ್ವೆ ಪ್ರಸ್ತುತ 12ನೇ ಸ್ಥಾನದಲ್ಲಿದೆ.

ಈ ಹಿಂದೆ ಮಹೇಂದ್ರ ಸಿಂಗ್​ ಧೋನಿ ನೇತೃತ್ವದಲ್ಲಿ ಕೊನೆಯದಾಗಿ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. 2016ರ ಜೂನ್​-ಜುಲೈ ತಿಂಗಳಲ್ಲಿ ಮೂರು ಏಕದಿನ ಹಾಗೂ ಟಿ20 ಪಂದ್ಯಗಳು ನಡೆದಿದ್ದವು. ಇದೀಗ ಟೀಂ ಇಂಡಿಯಾ ಮತ್ತೊಮ್ಮೆ ಜಿಂಬಾಬ್ವೆ ಪ್ರವಾಸ ಹಮ್ಮಿಕೊಳ್ಳಲಿದೆ. ಸದ್ಯ ಟೀಂ ಇಂಡಿಯಾ ಜುಲೈ 22ರಿಂದ ವೆಸ್ಟ್​ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಭಾಗಿಯಾಗಲಿದ್ದು, ಇದಾದ ಬಳಿಕ ಉಭಯ ತಂಡಗಳ ನಡುವೆ ಟಿ20 ಸರಣಿ ನಡೆಯಲಿದೆ.

ಇದನ್ನೂ ಓದಿರಿ: ದಕ್ಷಿಣ ಆಫ್ರಿಕಾ ಚೊಚ್ಚಲ ಟಿ -20 ಲೀಗ್​... ಎಲ್ಲ ಆರು ತಂಡ ಖರೀದಿ ಮಾಡಿದ ಐಪಿಎಲ್​ ಫ್ರಾಂಚೈಸಿ!

ಭಾರತ ವಿರುದ್ಧದ ಸರಣಿ ನಂತರ ಜಿಂಬಾಬ್ವೆ ಬಾಂಗ್ಲಾದೇಶದೊಂದಿಗೆ ಕಣಕ್ಕಿಳಿಯಲಿದ್ದು, ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.