ETV Bharat / sports

ಚಿತ್ತಗಾಂಗ್​ ಟೆಸ್ಟ್: ಬಾಂಗ್ಲಾ ವಿರುದ್ಧ ರಾಹುಲ್​ ಪಡೆಗೆ 188 ರನ್​ಗಳ ಜಯ

author img

By

Published : Dec 18, 2022, 10:05 AM IST

Updated : Dec 18, 2022, 12:11 PM IST

ಚಿತ್ತಗಾಂಗ್​ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ತಂಡವು 188 ರನ್​ಗಳ ಜಯಭೇರಿ ಬಾರಿಸಿದ್ದು, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

India beat Bangladesh by 188 runs in Chattogram test
ಚಿತ್ತಗಾಂಗ್​ ಟೆಸ್ಟ್: ಬಾಂಗ್ಲಾ ವಿರುದ್ಧ ರಾಹುಲ್​ ಪಡೆಗೆ 188 ರನ್​ಗಳ ಜಯ

ಚಿತ್ತಗಾಂಗ್​: ಇಲ್ಲಿನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 188 ರನ್​ಗಳ ಜಯ ದಾಖಲಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಅಂತರದ ಮುನ್ನಡೆ ಗಳಿಸಿತು.

ಭಾರತ ನೀಡಿದ 513 ರನ್​ಗಳ ಬೃಹತ್​​ ಗೆಲುವಿನ ಗುರಿ ಬೆನ್ನಟ್ಟಿದ ಬಾಂಗ್ಲಾ ನಾಲ್ಕನೇ ದಿನದಾಟಕ್ಕೆ ಅಂತ್ಯಕ್ಕೆ 6 ವಿಕೆಟ್​ ನಷ್ಟಕ್ಕೆ 272 ರನ್​ ಗಳಿಸಿತ್ತು. ಅಂತಿಮ ದಿನದಲ್ಲಿ 50 ನಿಮಿಷಗಳಲ್ಲೇ ಉಳಿದ ನಾಲ್ಕು ವಿಕೆಟ್​ ಕಬಳಿಸಿದ ಟೀಮ್​ ಇಂಡಿಯಾ ಭರ್ಜರಿ ಗೆಲುವಿನ ನಗೆ ಬೀರಿತು. 40 ರನ್ ಗಳಿಸಿ ಬ್ಯಾಟಿಂಗ್​ 5ನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದ ನಾಯಕ ಶಕಿಲ್ ಅಲ್ ಹಸನ್ 84 ರನ್​​ ಬಾರಿಸಿ ಕುಲದೀಪ್​ ಬೌಲಿಂಗ್​ನಲ್ಲಿ ಬೌಲ್ಡ್​ ಆದರು. ಮೆಹದಿ ಹಸನ್ ಮಿರಾಜ್ 13, ತೈಜುಲ್​ ಇಸ್ಲಾಮ್​ 4 ಹಾಗೂ ಎಬಾಡೋಟ್ ಹೊಸೈನ್ ಶೂನ್ಯಕ್ಕೆ ಔಟಾಗುವ ಮೂಲಕ ಬಾಂಗ್ಲಾ ಸೋಲೊಪ್ಪಿಕೊಂಡಿತು.

ಭಾರತ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 404 ರನ್‌ಗಳನ್ನು ಪೇರಿಸಿತ್ತು. ಬಳಿಕ ಬಾಂಗ್ಲಾದೇಶ ಕೇವಲ 150 ರನ್​ಗಳಿಗೆ ಸರ್ವಪತನ ಕಂಡಿತ್ತು. ತದನಂತರ ಟೀಮ್​ ಇಂಡಿಯಾ ಎರಡನೇ ಇನ್ನಿಂಗ್ಸ್​ನಲ್ಲಿ ​2 ವಿಕೆಟ್​ ನಷ್ಟಕ್ಕೆ 258 ರನ್​ ಪೇರಿಸಿ ಶುಕ್ರವಾರ ಡಿಕ್ಲೇರ್​ ಮಾಡಿಕೊಂಡಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ 254 ರನ್​ಗಳ ಹಿನ್ನಡೆಯಿಂದಾಗಿ ಬಾಂಗ್ಲಾ ಗೆಲುವಿಗೆ ಒಟ್ಟಾರೆ 513 ರನ್​ಗಳ​ ಬೃಹತ್​ ಟಾರ್ಗೆಟ್​ ನೀಡಲಾಗಿತ್ತು.

ಎರಡೂ ಇನ್ನಿಂಗ್ಸ್​ಗಳಲ್ಲಿ ಬಿಗುವಿನ ದಾಳಿ ನಡೆಸಿ 8 ವಿಕೆಟ್​ ಪಡೆದ ಸ್ಪಿನ್ನರ್​ ಕುಲದೀಪ್​ ಯಾದವ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯವು ಡಿ. 22ರಿಂದ ಢಾಕಾದಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್​:

  • ಭಾರತ ಮೊದಲ ಇನ್ನಿಂಗ್ಸ್​: 404/10​​ - ಚೇತೇಶ್ವರ ಪೂಜಾರ 90, ಶ್ರೇಯಸ್​ ಅಯ್ಯರ್​ 86, ಆರ್​. ಅಶ್ವಿನ್​ 58 ರನ್​ ; ಮೆಹದಿ ಹಸನ್ ಮಿರಾಜ್ 4 ವಿಕೆಟ್​​, ತೈಜುಲ್​ ಇಸ್ಲಾಮ್​ 4 ವಿಕೆಟ್​
  • ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್​: 150/10 ​​- ಮುಷ್ಫಿಕರ್​ ರಹೀಮ್​ 28, ಮೆಹದಿ ಹಸನ್ ಮಿರಾಜ್ 25 ; ಕುಲದೀಪ್​ ಯಾದವ್​ 5 ವಿಕೆಟ್​, ಮೊಹಮ್ಮದ್ ಸಿರಾಜ್​ 3 ವಿಕೆಟ್​​
  • ಭಾರತ ದ್ವಿತೀಯ ಇನ್ನಿಂಗ್ಸ್​: 258/2 - ಶುಭಮನ್​ ಗಿಲ್ 110, ಚೇತೇಶ್ವರ ಪೂಜಾರ 102 ರನ್​
  • ಬಾಂಗ್ಲಾದೇಶ ದ್ವಿತೀಯ ಇನ್ನಿಂಗ್ಸ್: 324/10​ - ನಜ್ಮುಲ್ ಹೊಸೈನ್ ಶಾಂತೋ 67, ಝಾಕಿರ್​ ಹಸನ್​ 100, ಶಕಿಬ್​ ಅಲ್​ ಹಸನ್​ 84; ಅಕ್ಷರ್​ ಪಟೇಲ್​ 4 ವಿಕೆಟ್​, ಕುಲದೀಪ್​ ಯಾದವ್​ 3 ವಿಕೆಟ್​

ಇದನ್ನೂ ಓದಿ: ಸ್ಪೇನ್ ಮಣಿಸಿ ಹಾಕಿ ನೇಷನ್ಸ್​ ಕಪ್ ಗೆದ್ದ ಭಾರತದ ವನಿತೆಯರು, ಪ್ರೊ ಲೀಗ್​ಗೆ ಅರ್ಹತೆ

Last Updated :Dec 18, 2022, 12:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.