ETV Bharat / sports

ಸ್ಪೇನ್ ಮಣಿಸಿ ಹಾಕಿ ನೇಷನ್ಸ್​ ಕಪ್ ಗೆದ್ದ ಭಾರತದ ವನಿತೆಯರು, ಪ್ರೊ ಲೀಗ್​ಗೆ ಅರ್ಹತೆ

author img

By

Published : Dec 18, 2022, 7:30 AM IST

ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ನೇಷನ್ಸ್​ ಕಪ್ ಫೈನಲ್​ ಹಣಾಹಣಿಯಲ್ಲಿ ಭಾರತದ ಮಹಿಳಾ ತಂಡವು ಸ್ಪೇನ್​ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದೆ.

ಸ್ಪೇನ್ ಮಣಿಸಿ ಹಾಕಿ ನೇಷನ್ಸ್​ ಕಪ್ ಗೆದ್ದ ಭಾರತದ ವನಿತೆಯರು, ಪ್ರೊ ಲೀಗ್​ಗೆ ಅರ್ಹತೆ
India down Spain to win Womens Nations

ವೇಲೆನ್ಸಿಯಾ(ಸ್ಪೇನ್​): ಶನಿವಾರ ಇಲ್ಲಿ ನಡೆದ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಹೆಚ್) ನೇಷನ್ಸ್​ ಕಪ್ ಫೈನಲ್​ ಹಣಾಹಣಿಯಲ್ಲಿ ಭಾರತದ ವನಿತೆಯರ ತಂಡವು 1-0 ಗೋಲುಗಳ ಅಂತರದಿಂದ ಸ್ಪೇನ್​ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಈ ಗೆಲುವಿನೊಂದಿಗೆ 2023-24ರ ಪ್ರೊ ಲೀಗ್‌ನಲ್ಲಿ ಭಾರತದ ಸ್ಥಾನ ಖಚಿತವಾಗಿದೆ.

ಆರನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಪೆನಾಲ್ಟಿ ಕಾರ್ನರ್‌ನಿಂದ ಪಂದ್ಯದ ಏಕೈಕ ಅತ್ಯಮೂಲ್ಯ ಗೋಲು ಗಳಿಸಿ ತಂಡಕ್ಕೆ ಮೇಲುಗೈ ಒದಗಿಸಿದರು. ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಭಾರತವು 8 ರಾಷ್ಟ್ರಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಐದು ಗೆಲುವು ದಾಖಲಿಸಿರುವುದು ಗಮನಾರ್ಹ ಸಾಧನೆಯಾಗಿದೆ.

ಜನ್ನೆಕೆ ಸ್ಕೋಪ್‌ಮನ್ ತರಬೇತಿಯಲ್ಲಿ ಮುನ್ನಡೆದ ಭಾರತ ಶುಕ್ರವಾರ ಸೆಮಿಫೈನಲ್‌ನಲ್ಲಿ ಶೂಟೌಟ್ ಮೂಲಕ 2-1 ಗೋಲುಗಳಿಂದ ಐರ್ಲೆಂಡ್​ ಅನ್ನು ಮಣಿಸಿತ್ತು. ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಚಾರ್ಟ್‌ನಲ್ಲಿ ಭಾರತವು ಸ್ಪೇನ್‌ (ಏಳನೇ) ನಂತರದ ಸ್ಥಾನ ಪಡೆದಿದೆ.

ನೇಷನ್ಸ್ ಕಪ್ ಗೆಲ್ಲುವ ಮೂಲಕ 2023-24ರ ಎಫ್‌ಐಹೆಚ್ ಹಾಕಿ ಮಹಿಳಾ ಪ್ರೊ ಲೀಗ್‌ಗೆ ಭಾರತ ತಂಡಕ್ಕೆ ಬಡ್ತಿ ಸಿಕ್ಕಿದೆ. ಈ ಟೂರ್ನಿಯು ಮುಂದಿನ ವರ್ಷದ ಏಷ್ಯನ್ ಗೇಮ್ಸ್ ಮತ್ತು 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ನಡೆಯುವ ಮಹತ್ವದ ಟೂರ್ನಿಯಾಗಿದೆ.

2021-22 ಋತುವಿನಲ್ಲಿ ಕೋವಿಡ್​ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ತಂಡಗಳು ಹೊರಗುಳಿದ ಕಾರಣ ಭಾರತ ಮತ್ತು ಸ್ಪೇನ್ ಬದಲಿ ತಂಡಗಳಾಗಿ ಆಡಿದ್ದವು. ಆಗ ಭಾರತವು ಮೂರನೇ ಸ್ಥಾನ ಗಳಿಸಿತ್ತು. ಅಲ್ಲದೆ, 2022-23ರ ಪ್ರೊ ಲೀಗ್ ಸೀಸನ್‌ಗೆ ಅರ್ಹತೆ ಪಡೆದಿರಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.