ETV Bharat / sports

ವಿಶ್ವಕಪ್ 2023ರ ಫೈನಲ್​ ಪಂದ್ಯ: ಆಸ್ಟ್ರೇಲಿಯಾ ಮಣಿಸಲು ಸಜ್ಜಾದ ರೋಹಿತ್ ಶರ್ಮಾ ಅಂಡ್ ಟೀಂ

author img

By ETV Bharat Karnataka Team

Published : Nov 18, 2023, 10:44 AM IST

World cup final 2023: ಭಾರತ ಕ್ರಿಕೆಟ್ ತಂಡವು ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್ 2023ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

World Cup 2023
ವಿಶ್ವಕಪ್ 2023ರ ಫೈನಲ್​ ಪಂದ್ಯ: ಆಸ್ಟ್ರೇಲಿಯಾ ತಂಡಕ್ಕೆ ಸವಾಲು ಹಾಕಲು ಸಿದ್ಧವಾದ ರೋಹಿತ್ ಶರ್ಮಾ ಅಂಡ್ ಟೀಂ

ಅಹಮದಾಬಾದ್ (ಗುಜರಾತ್): ಪ್ರತಿಕೂಲ ಪರಿಸ್ಥಿತಿಯಲ್ಲೂ ಎಂದಿಗೂ ಛಲ ಬಿಡದ ಆಸ್ಟ್ರೇಲಿಯದ ವಿರುದ್ಧ ನಾಳೆ (ನ.19) ನಡೆಯಲಿರುವ ವಿಶ್ವಕಪ್ 2023ರ ಫೈನಲ್​ ಪಂದ್ಯದಲ್ಲಿ ಫಾರ್ಮ್‌ನಲ್ಲಿರುವ ಭಾರತ ತಂಡವು ಕಣಕ್ಕಿಳಿಯಲಿದೆ. ಭಾರತವು ಇಲ್ಲಿಯವರೆಗೆ ಮಾರ್ಕ್ಯೂ ಪಂದ್ಯಾವಳಿಯಲ್ಲಿ ಅಜೇಯ ತಂಡವಾಗಿದೆ. ಆದರೆ, ಆತಿಥೇಯ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಸೋತ ನಂತರ ಆಸ್ಟ್ರೇಲಿಯಾ ತಂಡವು ಗೆಲುವಿನ ಸರಣಿಯನ್ನು ಮುಂದುವರಿಸಿದೆ. ಭಾರತ ತಂಡವು ಪಂದ್ಯಾವಳಿಯಲ್ಲಿ ಬಲಿಷ್ಠವಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಜಯ ಗಳಿಸುವ ಮೂಲಕ ಉತ್ತಮ ಫಾರ್ಮ್​ನಲ್ಲಿದೆ ಎನ್ನುವುದು ಟೀಂ ಇಂಡಿಯಾ ಸಾಬೀತು ಮಾಡಿತ್ತು.

ಟೀಂ ಇಂಡಿಯಾದ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನ: ನಾಯಕ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡುತ್ತಿದ್ದು, ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಸ್ಟಾರ್ ಬ್ಯಾಟರ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ 50 ಓವರ್‌ಗಳ ಕ್ರಿಕೆಟ್‌ನ ಪಂದ್ಯದಲ್ಲಿ ಹೆಚ್ಚು ರನ್​ಗಳನ್ನು ಕಲೆ ಹಾಕುವ ಬಲಿಷ್ಠ ಆಟಗಾರ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಹೊಂದಿದ್ದಲ್ಲದೆ, ವಿರಾಟ್ ಕೊಹ್ಲಿ (711) ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. 'ಮುಂಬೈಕರ್' ಶ್ರೇಯಸ್ ಅಯ್ಯರ್ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೀಂ ಇಂಡಿಯಾದ ಬ್ಯಾಟಿಂಗ್ ಘಟಕವು ಅಸಾಧಾರಣ ಪ್ರದರ್ಶನ ನೀಡಿದೆ.

ಈ ಪಂದ್ಯಾವಳಿಯಲ್ಲಿ ಸ್ಪಿನ್ ಘಟಕವು ಕರಾಮತ್ತು ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ವೇಗದ ಬೌಲಿಂಗ್ ತಂಡಕ್ಕೆ ಆಶ್ಚರ್ಯಕರ ಪ್ಯಾಕೇಜ್ ಆಗಿ ಹೊರಹೊಮ್ಮಿದೆ. ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರು ಆಡಿದ ಪ್ರತಿ ಎದುರಾಳಿಗಳ ವಿರುದ್ಧ ಮಾರಕ ಬೌಲಿಂಗ್​ ಮೂಲಕ ಕಟ್ಟಿಹಾಕಿದ್ದಾರೆ. ಶಮಿ 23 ವಿಕೆಟ್‌ಗಳೊಂದಿಗೆ ಟೂರ್ನಿಯಲ್ಲಿ ಅಗ್ರ ವಿಕೆಟ್‌ ಪಡೆದ ಬೌಲರ್ ಆಗಿದ್ದರೆ, ಬುಮ್ರಾ ಈ ವಿಶ್ವಕಪ್​ನಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ.

ಎಂಟು ಪಂದ್ಯಗಳನ್ನು ಗೆದ್ದ ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ಪಂದ್ಯಾವಳಿಯಲ್ಲಿ ಎರಡು ಸೋಲುಗಳೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿತು. ಆದರೆ, ಎಂಟು ಪಂದ್ಯಗಳನ್ನು ಗೆದ್ದ ನಂತರ ಗೆಲುವಿನ ವೇಗವನ್ನು ಪಡೆದುಕೊಂಡಿದೆ. ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಆಲ್-ರೌಂಡರ್ ಮಿಚೆಲ್ ಮಾರ್ಷ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮೂವರು ಐಸಿಸಿ ಪಂದ್ಯಗಳಲ್ಲಿ ಇದುವರೆಗೆ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಟೂರ್ನಿಯಲ್ಲಿ ವಾರ್ನರ್ 528 ರನ್ ಗಳಿಸಿದ್ದರೆ, ಮಾರ್ಷ್ 426 ರನ್ ಗಳಿಸಿದ್ದಾರೆ. ಪಂದ್ಯಾವಳಿಯ ಆರಂಭದಲ್ಲಿ ಮ್ಯಾಕ್ಸ್‌ವೆಲ್ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಆದರೆ, ವಾಂಖೆಡೆಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಅಜೇಯ 201 ರನ್ ಗಳಿಸುವ ಮೂಲಕ ತಮ್ಮ ಆಟವನ್ನು ಬದಲಾಯಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು.

ಪಂದ್ಯಾವಳಿಯಲ್ಲಿ ಆಡಮ್ ಝಂಪಾ ಇಲ್ಲಿಯವರೆಗೆ 22 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ ವೇಗಿ ಜೋಶ್ ಹ್ಯಾಜಲ್‌ವುಡ್ 10 ಇನ್ನಿಂಗ್ಸ್‌ಗಳಿಂದ 14 ವಿಕೆಟ್​ಗಳನ್ನು ಪಡೆದಿದ್ದಾರೆ. ಇಬ್ಬರೂ ಬೌಲಿಂಗ್ ಸರಾಸರಿ 30ಕ್ಕಿಂತ ಕಡಿಮೆ ಇದೆ. ಮೊಟೆರಾದಲ್ಲಿ ನಡೆಯಲಿರುವ ಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡವು ತಮ್ಮ ಲೆಗ್ ಸ್ಪಿನ್ನರ್​ಗೆ ಅವಕಾಶ ನೀಡುವ ಸಾಧ್ಯತೆಯಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರ ಸ್ಟಾರ್-ಸ್ಟಡ್ ಬ್ಯಾಟಿಂಗ್ ದಾಳಿಯನ್ನು ಎದುರಿಸಬೇಕಾದ ಸವಾಲು ಆಸ್ಟ್ರೇಲಿಯಾ ತಂಡದ ಮುಂದಿದೆ.

ಉಭಯ ತಂಡಗಳ ನಡುವೆ 150 ಏಕದಿನ ಪಂದ್ಯಗಳು: ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಪಂದ್ಯಗಳ ಬಗ್ಗೆ ತಿಳಿಯುವುದಾದರೆ, ಇದುವರೆಗೆ ಉಭಯ ತಂಡಗಳ ನಡುವೆ 150 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ ತಂಡ 57 ಮತ್ತು ಆಸ್ಟ್ರೇಲಿಯಾ 83 ಪಂದ್ಯಗಳನ್ನು ಗೆದ್ದಿವೆ. 10 ಪಂದ್ಯಗಳನ್ನು ರದ್ದುಗೊಳಿಸಲಾಗಿದೆ. ಇನ್ನು ವಿಶ್ವಕಪ್ ಪಂದ್ಯಗಳ ಬಗ್ಗೆ ಹೇಳುವುದಾದರೆ, ಉಭಯ ತಂಡಗಳ ನಡುವೆ ಇದುವರೆಗೆ 13 ಪಂದ್ಯಗಳು ನಡೆದಿವೆ. ಇದರಲ್ಲಿ ಆಸ್ಟ್ರೇಲಿಯಾ ಕೇವಲ 8 ಪಂದ್ಯಗಳನ್ನು ಗೆದ್ದಿದೆ ಮತ್ತು ಭಾರತ ತಂಡವು 5 ಪಂದ್ಯಗಳನ್ನು ಗೆದ್ದಿದೆ.

ಇದನ್ನೂ ಓದಿ: "ನನ್ನ ಬೌಲಿಂಗ್​ನಲ್ಲಿ ಯಾವುದೇ ವಿಶೇಷತೆ ಇಲ್ಲ": ಮೊಹಮ್ಮದ್ ಶಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.