"ನನ್ನ ಬೌಲಿಂಗ್​ನಲ್ಲಿ ಯಾವುದೇ ವಿಶೇಷತೆ ಇಲ್ಲ": ಮೊಹಮ್ಮದ್ ಶಮಿ

author img

By ETV Bharat Karnataka Team

Published : Nov 17, 2023, 11:03 PM IST

Mohammed Shami

'There is nothing extraordinary in my bowling - Mohammed Shami: "ನನ್ನ ಬೌಲಿಂಗ್​ನಲ್ಲಿ ಯಾವುದೇ ವಿಶೇಷತೆ ಇಲ್ಲ". ಸೆಮೀಸ್​ನಲ್ಲಿ 7 ವಿಕೆಟ್​ ಪಡೆದ ಶಮಿ ತಮ್ಮ ಬೌಲಿಂಗ್​ ಬಗ್ಗೆ ಹೇಳಿಕೊಂಡಿದ್ದು ಹೀಗೆ..

ಅಹಮದಾಬಾದ್: ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ತಮ್ಮ ಪ್ರದರ್ಶನ ಹಿಂದಿನ ರಹಸ್ಯವನ್ನು ಬಯಲು ಮಾಡಿದ್ದಾರೆ. ಶಮಿ ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಕೇವಲ ಆರು ಪಂದ್ಯಗಳಲ್ಲಿ 9.13 ಸರಾಸರಿಯಲ್ಲಿ 5.01ರ ಎಕಾನಮಿಯಲ್ಲಿ ಬೌಲಿಂಗ್​ ಮಾಡಿ ಮೂರು ಬಾರಿ 5 ವಿಕೆಟ್​ ಕಿತ್ತು ಪ್ರಸ್ತುತ ವಿಶ್ವಕಪ್​ನಲ್ಲಿ 23 ವಿಕೆಟ್​ ಪಡೆದಿದ್ದಾರೆ.

ಒಂದೇ ವಿಶ್ವಕಪ್​ನಲ್ಲಿ ಇಷ್ಟು ವಿಕೆಟ್​ಗಳನ್ನು ಕಬಳಿಸಿದ ಮೊದಲ ಭಾರತದ ಆಟಗಾರ ಆಗಿದ್ದಾರೆ. ಅಲ್ಲದೇ ಈ ವರ್ಷದ ಅತಿ ಹೆಚ್ಚು ವಿಕೆಟ್​ ಕಬಳಿಸಿದ ಆಟಗಾರ ಶಮಿ ಆಗಿದ್ದಾರೆ. ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆ್ಯಡಮ್​ ಝಂಪಾ ಮತ್ತು ಶಮಿ ನಡುವೆ ಅಗ್ರಸ್ಥಾನಕ್ಕಾಗಿ ಪೈಪೋಟಿ ಏರ್ಪಡಲಿದೆ. 22 ವಿಕೆಟ್​ ಪಡೆದ ಝಂಪಾ ಎರಡನೇ ಸ್ಥಾನದಲ್ಲಿದ್ದಾರೆ. ಅಂತಿಮ ಪಂದ್ಯದಲ್ಲಿ ಯಾರು ಪ್ರಬಾವ ಬೀರುತ್ತಾರೆ ಎಂಬುದರ ಮೇಲೆ ನಿಂತಿದೆ.

ಅಸಾಧಾರಣವಾದದ್ದೇನೂ ಇಲ್ಲ: ಸೆಮೀಸ್​ನಲ್ಲಿ 7 ವಿಕೆಟ್​ ಪಡೆದ ಶಮಿ ಸ್ಟಾರ್​​​ಸ್ಪೋರ್ಟ್ಸ್​ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಬೌಲಿಂಗ್​ ರಹಸ್ಯವನ್ನು ತಿಳಿಸಿದ್ದಾರೆ. "ನನ್ನ ಬೌಲಿಂಗ್‌ನಲ್ಲಿ ಅಸಾಧಾರಣವಾದದ್ದೇನೂ ಇಲ್ಲ, ನಾನು ಸ್ಟಂಪ್‌ ಟು ಸ್ಟಂಪ್ ಬೌಲಿಂಗ್​ ಮಾಡುತ್ತೇನೆ. ಹಾಗೇ ಲೆಂತ್​ ಕಡೆ ಗಮನ ಹರಿಸುತ್ತೇನೆ ಮತ್ತು ವಿಕೆಟ್‌ಗಳನ್ನು ಪಡೆಯಲು ಒಂದೇ ಜಾಗದಲ್ಲಿ ಪಿಚ್​ ಆಗುವಂತೆ ನೋಡಿಕೊಳ್ಳುತ್ತೇನೆ. ನಾನು ಯಾವಾಗಲೂ ಪರಿಸ್ಥಿತಿ, ಪಿಚ್ ಮತ್ತು ಬಾಲ್ ಹೇಗೆ ವರ್ತಿಸುತ್ತಿದೆ ಎಂಬುದನ್ನು ಗಮನಿಸುತ್ತೇನೆ. ಚೆಂಡು ಸ್ವಿಂಗ್ ಆಗುತ್ತಿದೆಯೇ ಅಥವಾ ಇಲ್ಲವೇ ಮತ್ತು ಚೆಂಡು ಸ್ವಿಂಗ್ ಆಗದಿದ್ದರೆ, ನಾನು ಸ್ಟಂಪ್‌ಗೆ ಬೌಲ್ ಮಾಡಲು ಪ್ರಯತ್ನಿಸುತ್ತೇನೆ. ಬಾಲ್ ಬ್ಯಾಟ್​ನ ಅಂಚಿಗೆ ಬಡಿದು ಕ್ಯಾಚ್​ ಆಗುವಂತೆ ಮಾಡಲು ಪ್ರಯತ್ನಿಸುತ್ತೇನೆ. ಬ್ಯಾಟರ್​ ಕ್ರೀಸ್​ನಲ್ಲಿ ತೆಗೆದುಕೊಳ್ಳುವ ಕಾಲಿನ ಚಲನೆಯನ್ನು ಗಮನಿಸಿ ಬೌಲಿಂಗ್​ ಮಾಡುತ್ತೇನೆ" ಎಂದಿದ್ದಾರೆ.

2023 ವಿಶ್ವಕಪ್​ನಲ್ಲಿ ಮೊದಲ ನಾಲ್ಕು ಪಂದ್ಯಗಳಲ್ಲಿ ಮೊಹಮ್ಮದ್​ ಶಮಿ ಆಡಲಿಲ್ಲ. ಹಾರ್ದಿಕ್​ ಪಾಂಡ್ಯ ಗಾಯಕ್ಕೆ ತುತ್ತಾದ ನಂತರ ಶಮಿ ಮೈದಾನಕ್ಕಿಳಿದರು. ನ್ಯೂಜಿಲೆಂಡ್​ ವಿರುದ್ಧ ಆಡಿದ ಅವರ ಮೊದಲ ಪಂದ್ಯದಲ್ಲೇ ಐದು ವಿಕೆಟ್​ ಪಡೆದು ದಾಖಲೆ ಮಾಡಿದರು. ತಂಡದಲ್ಲಿ ಮೂರನೇ ಪ್ರಮುಖ ಬೌಲರ್​ ಆಗಿ ಬಂದ ಶಮಿ ಮಧ್ಯಮ ಕ್ರಮಾಂಕದಲ್ಲಿ ಎದುರಾಳಿಗಳನ್ನು ಯಶಸ್ವಿಯಾಗಿ ಕಾಡಿದರು.

ಶಮಿ ಗೇಮ್​ ಚೇಂಜರ್​: ಫೈನಲ್​ ಪಂದ್ಯದ ಬಗ್ಗೆ ಮಾತನಾಡಿದ ಮಾಜಿ ಕೋಚ್​ ರವಿಶಾಸ್ತ್ರಿ," ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಹಣಾಹಣಿಯಲ್ಲಿ ಶಮಿಯ ಬೌಲಿಂಗ್​ ಅತ್ಯಂತ ಪರಿಣಾಮಕಾರಿ ಆಗಿರಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2023; ಭಾರತವೇ ಗೆಲ್ಲುವ ಫೇವರಿಟ್ ತಂಡ : ಮಾಜಿ ಕೋಚ್ ರವಿಶಾಸ್ತ್ರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.