ETV Bharat / sports

Eng vs Ind 4th Test: ಟೀಂ ಇಂಡಿಯಾಗೆ ಅಮೋಘ ವಿಜಯ; ಸರಣಿಯಲ್ಲಿ 2-1ರ ಮುನ್ನಡೆ

author img

By

Published : Sep 6, 2021, 9:17 PM IST

Updated : Sep 6, 2021, 9:34 PM IST

ಟೀಂ ಇಂಡಿಯಾ ಮಿಂಚಿನ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ತತ್ತರಿಸಿದ ಇಂಗ್ಲೆಂಡ್​ 4ನೇ ಟೆಸ್ಟ್​​ ಪಂದ್ಯದಲ್ಲಿ ಸೋಲು ಕಂಡಿದೆ. ಐತಿಹಾಸಿಕ ಗೆಲುವು ಪಡೆದ ಭಾರತ ಸರಣಿಯಲ್ಲಿ 2-1ರ ಅಂತರದಲ್ಲಿ ಮುನ್ನಡೆ ಸಾಧಿಸಿತು.

England vs India
England vs India

ಓವಲ್​(ಲಂಡನ್​​): ಆತಿಥೇಯ ಇಂಗ್ಲೆಂಡ್​ ವಿರುದ್ಧ ನಡೆದ 4ನೇ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ 157ರನ್​​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಐದು ಟೆಸ್ಟ್​​ ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಪಡೆ ಇದೀಗ 2-1 ಅಂತರದ ಮುನ್ನಡೆ ಗಳಿಸಿದೆ.

ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 191 ರನ್​ಗಳಿಗೆ ಆಲೌಟ್​ ಆಗಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​​ನಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿ ರೋಹಿತ್ ಶರ್ಮಾ ಆಕರ್ಷಕ ಶತಕ ಹಾಗೂ ಪಂತ್ ಹಾಗೂ ಠಾಕೂರ್​ ಅವರ ಅರ್ಧಶತಕದ ನೆರವಿನಿಂದ 466 ರನ್​ಗಳಿಕೆ ಮಾಡಿತ್ತು. ಜೊತೆಗೆ ಎದುರಾಳಿ ತಂಡದ ಗೆಲುವಿಗೆ 368 ರನ್​ ಟಾರ್ಗೆಟ್​ ನೀಡಿತ್ತು.

ಮೊದಲ ಇನ್ನಿಂಗ್ಸ್​​ನಲ್ಲಿ 290 ರನ್​ಗಳಿಕೆ ಮಾಡಿ 99 ರನ್​ಗಳ ಮುನ್ನಡೆ ಕಾಯ್ದುಕೊಂಡಿದ್ದ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್​​ನಲ್ಲಿ 210 ರನ್​ಗಳಿಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡು 157 ರನ್​ಗಳ ಸೋಲು ಕಂಡಿದೆ.

England vs India
ಓವಲ್ ಮೈದಾನದಲ್ಲಿ ನಡೆದ 4ನೇ ಟೆಸ್ಟ್​ ಪಂದ್ಯ

ಭೋಜನದ ಬಳಿಕ ಪತನಗೊಂಡ ಇಂಗ್ಲೆಂಡ್​

ಯಾವುದೇ ವಿಕೆಟ್​ ನಷ್ಟವಿಲ್ಲದೇ ನಿನ್ನೆ 77 ರನ್​ಗಳಿಕೆ ಮಾಡಿದ್ದ ಇಂಗ್ಲೆಂಡ್ ಇಂದು ತನ್ನ ಬ್ಯಾಟಿಂಗ್ ಮುಂದುವರೆಸಿತು. ಆರಂಭಿಕರಾದ ಬರ್ನ್ಸ್​​​ 50 ರನ್​ ಹಾಗೂ ಹಮೀದ್​​ 63 ರನ್​ಗಳ ಮೂಲಕ ತಂಡಕ್ಕೆ 100 ರನ್​ಗಳ ಜೊತೆಯಾಟವಾಡಿದರು. ಈ ವೇಳೆ 50 ರನ್​ಗಳಿಸಿದ್ದ ಬರ್ನ್ಸ್​​​ ವಿಕೆಟ್​​ ಪಡೆದುಕೊಳ್ಳುವಲ್ಲಿ ಠಾಕೂರ್​ ಯಶಸ್ವಿಯಾಗಿ ಭಾರತಕ್ಕೆ ಮೊದಲ ಮೇಲುಗೈ ತಂದುಕೊಟ್ಟರು. ಇದರ ಬೆನ್ನಲ್ಲೇ ಮಲನ್ (5) ಕೂಡ ರನೌಟ್ ಬಲೆಗೆ ಬಿದ್ದರು.

ಮಿಂಚಿದ ಜಡೇಜಾ, ಶಾರ್ದೂಲ್, ಬುಮ್ರಾ, ಉಮೇಶ್​​

63 ರನ್​ಗಳಿಕೆ ಮಾಡಿ ಉತ್ತಮವಾಗಿ ಬ್ಯಾಟಿಂಗ್ ಮಾಡ್ತಿದ್ದ ಹಮೀದ್​ಗೆ ಶಾಕ್​ ನೀಡಿದ ಜಡೇಜಾ ಕ್ಲೀನ್ ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ ಪೋಪ್​​(2) ಹಾಗೂ ಬೈರ್​ಸ್ಟೋ ವಿಕೆಟ್ ಪಡೆದುಕೊಂಡ ಬುಮ್ರಾ ತಂಡಕ್ಕೆ ಮತ್ತಷ್ಟು ಮುನ್ನಡೆ ತಂದುಕೊಟ್ಟರು. 147 ರನ್​ಗಳಿಕೆ ಮಾಡಿದ್ದ ವೇಳೆ 6 ವಿಕೆಟ್​​ ಕಳೆದುಕೊಂಡಿದ್ದ ಇಂಗ್ಲೆಂಡ್​ಗೆ ಮತ್ತೊಮ್ಮೆ ಶಾಕ್​ ನೀಡಿದ ಜಡೇಜಾ ಖಾತೆ ತೆರೆಯುವ ಮೊದಲೇ ಉಪನಾಯಕ ಮೊಯಿನ್​ ಅಲಿ ಅವರನ್ನು ಪೆವಿಲಿಯನ್​ಗೆ ಅಟ್ಟಿದರು.

ವಿಫಲರಾದ ಕ್ಯಾಪ್ಟನ್​​ ರೂಟ್​

ಈ ವೇಳೆ ಒಂದಾದ ಕ್ಯಾಪ್ಟನ್​ ರೂಟ್​ ಹಾಗೂ ಅನುಭವಿ ವೋಕ್ಸ್​​​ ತಂಡಕ್ಕೆ ಚೇತರಿಕೆ ನೀಡುವ ಕೆಲಸ ಮಾಡಲು ಮುಂದಾದರು. ಆದರೆ ಟೀಂ ಇಂಡಿಯಾ ಬೌಲಿಂಗ್ ಮುಂದೆ ಇವರ ಆಟ ನಡೆಯಲಿಲ್ಲ. 18 ರನ್​ಗಳಿಸಿದ್ದ ವೋಕ್ಸ್​ ವಿಕೆಟ್​ ಪಡೆದುಕೊಳ್ಳುವಲ್ಲಿ ಉಮೇಶ್ ಯಾದವ್ ಯಶಸ್ವಿಯಾದರೆ, 36 ರನ್​ಗಳಿಸಿದ್ದ ಕ್ಯಾಪ್ಟನ್​ ರೂಟ್​ ವಿಕೆಟ್ ಪಡೆಯುವಲ್ಲಿ ಠಾಕೂರ್ ಯಶಸ್ವಿಯಾದರು. ಈ ಮೂಲಕ ತಂಡ 193 ರನ್​ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಇದಾದ ಬಳಿಕ ಓವರ್​ಟನ್​ 10 ರನ್​ ಹಾಗೂ ಆ್ಯಂಡರ್ಸನ್​​ 2ರನ್ ​ಗಳಿಸಿದ್ದಾಗ ಇವರ ವಿಕೆಟ್ ಪಡೆದುಕೊಳ್ಳುವಲ್ಲಿ ಉಮೇಶ್ ಯಾದವ್ ಯಶಸ್ವಿಯಾಗಿದ್ದರಿಂದ ತಂಡ ಗೆಲುವು ದಾಖಲು ಮಾಡಿತು.

England vs India
ಗೆಲುವಿನ ಸಂಭ್ರಮದಲ್ಲಿ ಟೀಂ ಇಂಡಿಯಾ

ಮೊದಲ ಇನ್ನಿಂಗ್ಸ್​​ನಲ್ಲಿ ಉಮೇಶ್​ 3 ವಿಕೆಟ್​, ಬುಮ್ರಾ, ಜಡೇಜಾ ತಲಾ 2 ವಿಕೆಟ್​​​ ಪಡೆದುಕೊಂಡರೆ, ಠಾಕೂರ್ ಹಾಗೂ ಸಿರಾಜ್​ 1 ವಿಕೆಟ್ ಪಡೆದುಕೊಂಡಿದ್ದರು. ಎರಡನೇ ಇನ್ನಿಂಗ್ಸ್​ನಲ್ಲಿ ಶಾರ್ದೂಲ್​, ಜಡೇಜಾ ಹಾಗೂ ಬುಮ್ರಾ 2 ವಿಕೆಟ್​ ಹಾಗೂ ಯಾದವ್​ 3 ವಿಕೆಟ್ ಪಡೆದುಕೊಂಡಿದ್ದಾರೆ.

ಐದು ಟೆಸ್ಟ್​​ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 2 ಪಂದ್ಯ ಗೆದ್ದಿದ್ದು, ಇಂಗ್ಲೆಂಡ್​ 1ರಲ್ಲಿ ಜಯ ಸಾಧಿಸಿದೆ. ಹೀಗಾಗಿ ಕೊಹ್ಲಿ ಪಡೆ 2-1 ಅಂತರದ ಮುನ್ನಡೆ ಪಡೆದಿದೆ. ಫೈನಲ್​ ಪಂದ್ಯ ಇದೇ ತಿಂಗಳ 10ರಿಂದ ಮ್ಯಾಂಚೆಸ್ಟರ್​ನಲ್ಲಿ ಆರಂಭಗೊಳ್ಳಲಿದೆ.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನ್ನಿಂಗ್ಸ್​​ 191/10

ಭಾರತ ಎರಡನೇ ಇನ್ನಿಂಗ್ಸ್​​ 466/10

ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​​​ 290/10

ಎರಡನೇ ಇನ್ನಿಂಗ್ಸ್​​​ 210/10

ಭಾರತಕ್ಕೆ 157 ರನ್​ಗಳ ಗೆಲುವು, ಸರಣಿಯಲ್ಲಿ 2-1 ಅಂತರದ ಮುನ್ನಡೆ

Last Updated :Sep 6, 2021, 9:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.