ETV Bharat / sports

ಏಕದಿನ ನಿವೃತ್ತಿ ವಾಪಸ್ ಪಡೆಯಲ್ಲ ಎಂದ ಬೆನ್​ ಸ್ಟ್ರೋಕ್ಸ್​; ಇಂಗ್ಲೆಂಡ್ ​ಕ್ರಿಕೆಟ್​ ಅಭಿಮಾನಿಗಳಿಗೆ ಭಾರಿ ನಿರಾಸೆ

author img

By

Published : Jul 27, 2023, 6:18 PM IST

ಇಂಗ್ಲೆಂಡ್​ ಟೆಸ್ಟ್​ ತಂಡದ ನಾಯಕ ಬೆನ್​ ಸ್ಟೋಕ್ಸ್​ ಏಕದಿನ ಮಾದರಿಗೆ ನೀಡಿರುವ ನಿವೃತ್ತಿ ವಾಪಸ್​ ಪಡೆಯುವ ಗುಸುಗುಸು ಸುದ್ದಿಗೆ ಬ್ರೇಕ್ ಬಿದ್ದಿದೆ. ತಾವು ಮತ್ತೆ ನಿವೃತ್ತಿಯಿಂದ ಯು - ಟರ್ನ್​ ಪಡೆಯಲ್ಲ ಎಂದು ಹೇಳಿದ್ದಾರೆ.

ಏಕದಿನ ನಿವೃತ್ತಿ ವಾಪಸ್ ಪಡೆಯಲ್ಲ ಎಂದ ಬೆನ್​ ಸ್ಟ್ರೋಕ್ಸ್​
ಏಕದಿನ ನಿವೃತ್ತಿ ವಾಪಸ್ ಪಡೆಯಲ್ಲ ಎಂದ ಬೆನ್​ ಸ್ಟ್ರೋಕ್ಸ್​

ನವದೆಹಲಿ: ಇಂಗ್ಲೆಂಡ್​ ಕ್ರಿಕೆಟ್​ ತಂಡದ ಆಪತ್ಬಾಂಧವ ಎಂದೇ ಗುರುತಿಸಿಕೊಂಡಿರುವ ಟೆಸ್ಟ್​ ತಂಡದ ನಾಯಕ ಬೆನ್​ ಸ್ಟೋಕ್ಸ್​ ಏಕದಿನ ಮಾದರಿಗೆ ವಿದಾಯ ಹೇಳಿ ವರ್ಷವಾಗಿದೆ. ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್​ಗೆ ಅವರು ಮರಳಿದ್ದಾರೆ ಎಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. 'ಏಕದಿನ ಮಾದರಿಗೆ ವಾಪಸ್​ ಬರುವುದಿಲ್ಲ' ಎಂದು ಬೆನ್​ ಅವರೇ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿರುವ ಬೆನ್​, 'ತಾವು ಇನ್ನು ಏಕದಿನ ಮಾದರಿಗೆ ವಾಪಸ್​ ಆಗುವುದಿಲ್ಲ. ದೀರ್ಘಕಾಲದಿಂದ ಮೊಣಕಾಲು ನೋವಿಗೆ ತುತ್ತಾಗಿದ್ದೇನೆ. ಮುಂದಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಚಿಂತನೆ ಇದೆ. ನಿವೃತ್ತಿಯನ್ನು ವಾಪಸ್​ ಪಡೆಯುವ ಪ್ರಮೇಯವೇ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಏಕದಿನ ಮಾದರಿಗೆ ಕಳೆದ ವರ್ಷವೇ ಗುಡ್​​ಬೈ ಹೇಳಿದ್ದೇನೆ. ಆಶಸ್​ ಸರಣಿಯ 2 ನೇ ಪಂದ್ಯ ಮುಗಿದ ಬಳಿಕ ದೀರ್ಘ ರಜೆ ತೆಗೆದುಕೊಳ್ಳಲಿದ್ದೇನೆ. ಮೊಣಕಾಲು ಗಾಯದಿಂದ ಚೇತರಿಸಿಕೊಳ್ಳಲು ಯತ್ನಿಸುತ್ತಿದ್ದೇನೆ. ಇಂಗ್ಲೆಂಡ್​ ತಂಡ ಮುಂದಿನ ವರ್ಷ ಭಾರತದ ವಿರುದ್ಧ ಟೆಸ್ಟ್​ ಸರಣಿ ಆಡಲಿದೆ. ಅಲ್ಲಿಯವರೆಗೂ ದೀರ್ಘ ರಜೆ ಪಡೆಯಲಿದ್ದೇನೆ ಎಂದು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ನ್ಯೂಜಿಲ್ಯಾಂಡ್​ ಪ್ರವಾಸದ ವೇಳೆ ಸ್ಟೋಕ್ಸ್ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು. ಇದು ಉಲ್ಬಣವಾಗಿ 2023 ರ ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದರು. ಇತ್ತ ನಡೆಯುತ್ತಿರುವ ಆಶಸ್​ ಟೆಸ್ಟ್​ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಸ್ಟೋಕ್ಸ್​​ ಗಾಯದ ಕಾರಣ ಬೌಲಿಂಗ್​ ಮಾಡಲೂ ಸಾಧ್ಯವಾಗಿಲ್ಲ. ಸ್ಟಾರ್​ ಆಲ್​ರೌಂಡರ್​ 4 ಪಂದ್ಯಗಳಲ್ಲಿ ಕೇವಲ 29 ಓವರ್​ ಮಾತ್ರ ಎಸೆದಿದ್ದಾರೆ. ಹೆಡಿಂಗ್ಲಿ ಮತ್ತು ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಬೌಲಿಂಗೇ ಮಾಡಿರಲಿಲ್ಲ. ಬ್ಯಾಟಿಂಗ್​​ನಲ್ಲಿ ನಾಯಕ ಮಿಂಚು ಹರಿಸುತ್ತಿದ್ದಾರೆ. 5 ಪಂದ್ಯಗಳ ಆಶಸ್​ ಸರಣಿಯಲ್ಲಿ 2-1 ರಿಂದ ಹಿನ್ನಡೆ ಅನುಭವಿಸಿದೆ. ಜುಲೈ 27 ರಿಂದ ಕೊನೆಯ, 5ನೇ ಟೆಸ್ಟ್​ ಆರಂಭವಾಗಿದೆ.

ಸ್ಟೋಕ್ಸ್​​ ಕ್ರಿಕೆಟ್​ ಸಾಧನೆ : ಕಳೆದ ಏಕದಿನ ಮತ್ತು ಟಿ20 ವಿಶ್ವಕಪ್​ ಟೂರ್ನಿಗಳಲ್ಲಿ ಬೆನ್​ ಸ್ಟೋಕ್ಸ್​ ಇಂಗ್ಲೆಂಡ್​ ತಂಡಕ್ಕೆ ಆಧಾರವಾಗಿ ನಿಂತು ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರು. ಮಹತ್ವದ ಪಂದ್ಯಗಳಲ್ಲಿ ಆಲ್​ರೌಂಡ್​ ಆಟವಾಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟು ಆಪತ್ಬಾಂಧವನಾಗಿದ್ದರು.

ಸ್ಟಾರ್​ ಆಲ್​ರೌಂಡರ್​ ಸ್ಟೋಕ್ಸ್​ ಈವರೆಗೂ ಇಂಗ್ಲೆಂಡ್​ ಪರವಾಗಿ 105 ಏಕದಿನ ಪಂದ್ಯವಾಡಿದ್ದು, 2924 ರನ್​ ಗಳಿಸಿದ್ದಾರೆ. ಇದರಲ್ಲಿ 3 ಶತಕ, 21 ಅರ್ಧಶತಕಗಳಿವೆ. 43 ಟಿ20 ಪಂದ್ಯಗಳಲ್ಲಿ 585 ರನ್​ ಗಳಿಸಿದ್ದಾರೆ. ಟೆಸ್ಟ್​ ಮಾದರಿಯಲ್ಲಿ 96 ಪಂದ್ಯಗಳಾಡಿದ್ದು, 6072 ರನ್​ ಮಾಡಿದ್ದಾರೆ. 13 ಶತಕ, 30 ಅರ್ಧಶತಕ ಬಾರಿಸಿದ್ದಾರೆ. ಪ್ರಸ್ತುತ ತಂಡದ ನಾಯಕರಾಗಿದ್ದಾರೆ.

ಇದನ್ನೂ ಓದಿ: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಗಳಿಂದ ಹೊರಬಂದ ಮೊಹಮ್ಮದ್ ಸಿರಾಜ್‌: ಆರಂಭಕ್ಕೂ ಮುನ್ನ ಆಘಾತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.