ETV Bharat / sports

ಫಿಂಚ್, ಸ್ಮಿತ್ ಶತಕದಾಟ, ಮ್ಯಾಕ್ಸ್​ವೆಲ್ ಸ್ಫೋಟಕ ಬ್ಯಾಟಿಂಗ್.. ಭಾರತಕ್ಕೆ 375 ರನ್​ಗಳ ಬೃಹತ್ ಟಾರ್ಗೆಟ್

author img

By

Published : Nov 27, 2020, 1:31 PM IST

ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ ಆಸೀಸ್​ ದಾಂಡಿಗರು ಭಾರತ ತಂಡಕ್ಕೆ 375 ರನ್​ಗಳ ಬೃಹತ್ ಗುರಿ ನೀಡಿದ್ದಾರೆ.

India vs Australia 1st ODI
ಭಾರತಕ್ಕೆ 375 ರನ್​ಗಳ ಬೃಹತ್ ಟಾರ್ಗೆಟ್

ಸಿಡ್ನಿ(ಆಸ್ಟ್ರೇಲಿಯಾ): ನಾಯಕ ಆ್ಯರೋನ್ ಫಿಂಚ್, ಸ್ಟೀವ್ ಸ್ಮಿತ್ ಶತಕ ಮತ್ತು ಮ್ಯಾಕ್ಸ್​ವೆಲ್​ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸೀಸ್ ತಂಡ 374 ರನ್​​ಗಳ ಬೃಹತ್ ಮೊತ್ತ ಪೇರಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಬಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಆ್ಯರೋನ್ ಫಿಂಚ್ ಉತ್ತಮ ಆರಂಭ ಒದಗಿಸಿದ್ರು. ಈ ಜೋಡಿ ಮೊದಲ ವಿಕೆಟ್​ಗೆ 156 ರನ್​ ಪೇರಿಸಿತು.

ಏಕದಿನ ಕ್ರಿಕೆಟ್​​ನಲ್ಲಿ 22ನೇ ಅರ್ಧಶತಕ ಸಿಡಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ವಾರ್ನರ್ ಮೊಹಮ್ಮದ್ ಶಮಿ ಎಸೆತದಲ್ಲಿ ರಾಹುಲ್​ಗೆ ಕ್ಯಾಚ್​ ನೀಡಿ ಪೆವಿಲಿಯನ್ ಸೇರಿಕೊಂಡ್ರು. ನಂತರ ಜೊತೆಯಾದ ಸ್ಟೀವ್ ಸ್ಮಿತ್ ಮತ್ತು ಫಿಂಚ್ ಜೋಡಿ ಭಾರತೀಯ ಬೌಲರ್​ಗಳ ಬೆವರಿಳಿಸಿದ್ರು. ಈ ನಡುವೆ ನಾಯಕ ಆ್ಯರೋನ್ ಫಿಂಚ್​ ಏಕದಿನ ಕ್ರಿಕೆಟ್​ನಲ್ಲಿ 17ನೇ ಶತಕ ಸಿಡಿಸಿ ಮಿಂಚಿದ್ರು.

ಆಸೀಸ್ ಬ್ಯಾಟ್ಸ್​ಮನ್​ಗಳಿಗೆ ಕಡಿವಾಣ ಹಾಕಲು ದಾಳಿಗಿಳಿದ ಬುಮ್ರಾ ಫಿಂಚ್ ವಿಕೆಟ್ ಪಡೆಯುವಲ್ಲಿ ಸಫಲರಾದರು. ನಂತರ ಬಂದ ಮಾರ್ಕಸ್ ಸ್ಟೊಯ್ನೀಸ್ ಸೊನ್ನೆ ಸುತ್ತಿದ್ರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಇಳಿದ ಮ್ಯಾಕ್ಸ್​ವೆಲ್ ಸ್ಫೋಟಕ ಬ್ಯಾಟಿಂಗ್​ನ ಮೊರೆ ಹೋದ್ರು. ಕೇವಲ 19 ಎಸೆತಗಳಲ್ಲಿ 3 ಸಿಕ್ಸರ್, 5 ಬೌಂಡರಿಗಳ ನೆರವಿನಿಂದ 45 ರನ್​ ಸಿಡಿಸಿ ಶಮಿ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದ್ರು.

ತನ್ನ ಸ್ಫೋಟಕ ಆಟ ಮುಂದುವರೆಸಿದ ಸ್ಟೀವ್ ಸ್ಮಿತ್, 62 ಎಸೆತಗಳಲ್ಲೆ ಶತಕ ಸಿಡಿಸಿ ಮಿಂಚಿದ್ರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 50 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 374 ರನ್ ಪೇರಿಸಿತು. ಭಾರತದ ಪರ ಮೊಹಮ್ಮದ್​ ಶಮಿ 3, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ ಮತ್ತು ಯಜುವೇಂದ್ರ ಚಹಾಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದ್ರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.