ETV Bharat / sitara

ಕೊನೆಗೂ ಈಡೇರಲಿಲ್ಲ ಮೈಕಲ್ ಮಧು ಅವರ ನಿರ್ದೇಶನದ ಮೋಹ..

author img

By

Published : May 14, 2020, 10:07 AM IST

Mychel madhu dream being director never came true
ಕೊನೆಗೂ ಈಡೇರಲಿಲ್ಲ ಮೈಕಲ್ ಮಧು ಅವರ ನಿರ್ದೇಶನದ ಮೋಹ

‘ನೀನಾ ನಾನಾ’ ಕಾರ್ಯಕ್ರಮದಲ್ಲಿ ಲಕ್ಷ್ಮಿ ಅವರು ಮೈಕಲ್ ಮಧು ಅವರನ್ನು ನೋಡಿ ಹಾಲಿವುಡ್​ನ ಎಡ್ಡಿ ಮರ್ಫಿ ಹಾಸ್ಯ ನಟನಿಗೆ ಹೋಲಿಸಿದ್ದು ಇವರಿಗೆ ಮೈಸೂರು ಪಾಕು ತಿಂದಷ್ಟೇ ಖುಷಿ ಆಗಿತ್ತು. ಮೈಕಲ್ ಮಧು ಸಿನಿಜರ್ನಿಯಲ್ಲಿ 30 ವರ್ಷಗಳ ಕಾಲ ಶ್ರಮಿಸಿದ್ದರು. 300 ಸಿನಿಮಾ ಮುಗಿಸಿದ್ದಾರೆ. ಇವರ ಪೂರ್ವಿಕರ ಮನೆ ಚಾಮರಾಜಪೇಟೆ ಬಿಟ್ಟು ಅಲುಗಾಡಿಲ್ಲ..

ಹಾಸ್ಯ ನಟರುಗಳು ಬದುಕಿನಲ್ಲಿ ನಗುವುದು ಕಡಿಮೆ! ‘ಕಾಮಿಡಿಯನ್ಸ್ ಸೆಲ್ಡಮ್ ಲಾಫ್’ ಅಂತಾ ಹೇಳುತ್ತದೆ ಆಂಗ್ಲ ಗಾದೆ ಮಾತು.

ನಿನ್ನೆ ಸಂಜೆ ಹೃದಯಾಘಾತದಿಂದ ಅಸುನೀಗಿದ ಮೈಕಲ್ ಮಧು ಅವರು 300 ಚಿತ್ರಗಳ ಗಡಿ ದಾಟಿದವರು. ಆದರೆ, ಅವರ ನಿರ್ದೇಶನ ಮಾಡುವ ಆಸೆ ಕೊನೆಗೂ ಈಡೇರಲಿಲ್ಲ.

Mychel madhu dream being director never came true
ಕೊನೆಗೂ ಈಡೇರಲಿಲ್ಲ ಮೈಕಲ್ ಮಧು ಅವರ ನಿರ್ದೇಶನದ ಮೋಹ..

1980ರ ಮಧ್ಯದಲ್ಲಿ ಈ ಮೈಕಲ್ ಮಧು ಅಲಿಯಾಸ್ ಮಧುಸೂಧನ್ ಅವರನ್ನು ‘ಸೈಕಲ್ ಜಾಕ್ಸನ್’ ಎಂದು ಮಾಧ್ಯಮದಲ್ಲಿ ಬಾಲಕೃಷ್ಣ ಕಾಕ್ಕಥ್ಕರ್ ಬಳಸಿದ್ದರು. ಇವರಿಗೆ ಇನ್ನಿಲ್ಲದ ಖುಷಿ ತಂದಿತ್ತು. ಆ ಹೆಸರೇ ಇವರಿಗೆ ನಾಮಕರಣದ ರೀತಿ ಆಗಿಬಿಟ್ಟಿತ್ತು. ವಿಶ್ವ ಮಟ್ಟದ ನೃತ್ಯಗಾರ ಮೈಕಲ್ ಜಾಕ್ಸನ್ ಅಸುನೀಗಿದಾಗ ವಾಹಿನಿಗಳಲ್ಲಿ ಇವರನ್ನು ಕೂರಿಸಿ ಮಾತನಾಡಿಸಿದ್ದು ಇವರಿಗೆ ಒಂದು ಹೆಮ್ಮೆಯ ವಿಚಾರ. ಕಾರಣ ಇವರು ಹಾಸ್ಯ ನಟ ಆಗುವುದಕ್ಕೂ ಮುಂಚೆ ಕೊರಿಯೋಗ್ರಾಫರ್​ ಆಗಿ ಹೆಸರು ಮಾಡಿದವರು.

‘ನೀನಾ ನಾನಾ’ ಕಾರ್ಯಕ್ರಮದಲ್ಲಿ ಲಕ್ಷ್ಮಿ ಅವರು ಮೈಕಲ್ ಮಧು ಅವರನ್ನು ನೋಡಿ ಹಾಲಿವುಡ್​ನ ಎಡ್ಡಿ ಮರ್ಫಿ ಹಾಸ್ಯ ನಟನಿಗೆ ಹೋಲಿಸಿದ್ದು ಇವರಿಗೆ ಮೈಸೂರು ಪಾಕು ತಿಂದಷ್ಟೇ ಖುಷಿ ಆಗಿತ್ತು. ಮೈಕಲ್ ಮಧು ಸಿನಿಜರ್ನಿಯಲ್ಲಿ 30 ವರ್ಷಗಳ ಕಾಲ ಶ್ರಮಿಸಿದ್ದರು. 300 ಸಿನಿಮಾ ಮುಗಿಸಿದ್ದಾರೆ. ಇವರ ಪೂರ್ವಿಕರ ಮನೆ ಚಾಮರಾಜಪೇಟೆ ಬಿಟ್ಟು ಅಲುಗಾಡಿಲ್ಲ. ಬಿಕ್ಷುಕನಾಗಿ ಸುಮಾರು 30 ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಇವರಿಗೆ ಹೆಚ್ಚಾಗಿ ಕೆಳಸ್ತರದ ಪಾತ್ರಗಳಲ್ಲೇ ಅಭಿನಯ ಮಾಡಿರುವುದಕ್ಕೆ ಸಾಕಷ್ಟು ಬೇಜಾರಿತ್ತು.

ನೃತ್ಯ ಇವರ ಅಚ್ಚುಮೆಚ್ಚಿನ ವಿಚಾರ. ವಿಜಯ ಫಿಲ್ಮ್ ಇನ್ಸ್‌ಟಿಟ್ಯೂಟ್‌ನಲ್ಲಿ ತರಬೇತಿ ಶುರು ಮಾಡಿ 300 ವಿದ್ಯಾರ್ಥಿಗಳನ್ನು ಒಂದು ಕಾಲದಲ್ಲಿ ತಯಾರು ಮಾಡುತ್ತಿದ್ದ ಮಧುಸೂಧನ್ ಅವರು ‘ಸಮಯಕ್ಕೊಂದು ಸುಳ್ಳು’ ಕನ್ನಡ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ಅವರಿಗೆ ನೃತ್ಯ ಹೇಳಿಕೊಟ್ಟವರು. ಆಗಲೇ ಬೇಸತ್ತು ಹೋಗಿದ್ದ ಸಿಲ್ಕ್ ಸ್ಮಿತಾ ಮಧು ಅವರಿಗೆ ತಮಿಳು ಭಾಷೆಗೆ ಬರುವುದಕ್ಕೆ ನೀಡಿದ ಆಹ್ವಾನವನ್ನು ಇವರು ನಯವಾಗಿ ತಿರಸ್ಕಾರ ಮಾಡಿದರು. ಕಾರಣ 300 ವಿದ್ಯಾರ್ಥಿಗಳ ತರಬೇತಿ ಇವರ ಜವಾಬ್ದಾರಿ ಆಗಿತ್ತು. ಸಿಲ್ಕ್ ಸ್ಮಿತಾ ಸಾವಿನ 15 ದಿವಸಕ್ಕೆ ಮುಂಚೆ ಮೈಕಲ್ ಅವರ ಬಳಿ ಮಾತನಾಡಿ ಬಹಳ ಬೇಜಾರು ಮಾಡಿಕೊಂಡಿದ್ದನ್ನು ಮಧು ಸ್ಮರಿಸಿಕೊಂಡಿದ್ದರು.

ಮೈಕಲ್ ಮಧು ಅವರ ವೃತ್ತಿ ಜೀವನದಲ್ಲಿ ಪ್ರಕಾಶ್​ ರಾಯ್, ಸುದೀಪ್, ದಿಲೀಪ್, ವಿಜಯಲಕ್ಷ್ಮಿ ಅಂತಹವರೂ ತರಬೇತಿಗಾಗಿ ಜೆ ಪಿ ನಗರದ ಶಾಲೆಗೆ ಬರುತ್ತಿದ್ದರು. ಐದು ವರ್ಷಗಳ ಕಾಲ ಸಂಪೂರ್ಣವಾಗಿ ನೃತ್ಯ ತರಬೇತಿಯಲ್ಲಿ ಸವೆದ ಇವರ ಜೀವನ ಮುಂದೆ ಹಾಸ್ಯ ನಟನ ವೃತ್ತಿಗೆ ಹರಡಿಕೊಂಡಿತು. 1989ರಲ್ಲಿ ‘ಸಿಂಗಾರಿ ಬಂಗಾರಿ’ ಸಿನಿಮಾದಿಂದ ಇವರ ಪಯಣ ಶುರುವಾಯಿತು. ಈ ಸಿನಿಮಾದಲ್ಲಿ ಇವರು ಹಾಸ್ಯ ನಟನಾಗಿ ಬರಲು ಕಾರಣ ಸ್ನೇಹಿತ ವಿನೋದ್ ಆಳ್ವಾ. ಆ ಸಮಯದಲ್ಲಿ ವಿನೋದ್ ಆಳ್ವಾ ಕೂಡ ಬೆಳಗಿನ ಜಾವ ಮೋಟಾರ್ ಬೈಕ್ ಮೇಲೆ ಬಂದು ಇವರ ಬಳಿ ನೃತ್ಯ ಕಲಿಯುತ್ತಿದ್ದರು. ಆ ಸ್ನೇಹವೇ ಇವರನ್ನ ಸಿನಿಮಾಗೂ ಎಳೆತಂದಿತ್ತು.

ಪಾತ್ರದ ಗಾತ್ರ ಹೆಚ್ಚು ಆಗದೆ ಇದ್ದರೂ ಮೈಕಲ್ ಮಧು ಅವರಿಗೆ ಅವಕಾಶಗಳಿಗೇನು ಕಡಿಮೆ ಆಗಲಿಲ್ಲ. ಕುಮಾರ್ ಬಂಗಾರಪ್ಪ ಅವರ ‘ಅಶ್ವಮೇಧ’ ಮೈಕಲ್ ಮಧು ಅವರ ಪಾಲಿಗೆ ದೊಡ್ಡ ಅವಕಾಶವಾಯಿತು. ಆಮೇಲೆ ಬಿ. ರಾಮಮೂರ್ತಿ ನಿರ್ದೇಶನ, ಉಪೇಂದ್ರ ಚಿತ್ರಕಥೆಯ ‘ಲವ್ ಟ್ರೈನಿಂಗ್’ನಲ್ಲಿ ಇವರ ಸಂಭಾಷಣೆಯೇ ಬೇಕು ಎಂಬುವ ಮಟ್ಟಕ್ಕೆ ಬಂದು ತಲುಪಿದರು. ಎ, ಶ್....ಓಂ, ನೀಲಾಂಬರಿ, ಯಜಮಾನ, ನಂ ಯಜಮಾನರು, ಅಸುರ, ಸೂರ್ಯವಂಶ, ಜೋಕ್‌ಫಾಲ್ಸ್, ಕುಶಲವೇ ಕ್ಷೇಮವೇ, ತಾಯಿ ಇಲ್ಲದ ತಬ್ಬಲಿ, ಗೋಕರ್ಣ, ಜೂಟ್, ಕಂಬಳ ಹಳ್ಳಿ, ನಾಗರಹಾವು, ಅಮ್ಮ ನಿನ್ನ ತೋಳಿನಲ್ಲಿ, ಅಪ್ಸರ, ಗ್ರಾಮ ದೇವತೆ, ರಾಷ್ಟ್ರಗೀತೆ, ಯಾರಿಗೆ ಬೇಡ ದುಡ್ಡು, ಪೊಲೀಸ್ ಆಫೀಸರ್, ವಾಲಿ, ಇಂಧ್ರಧನುಷ್ ಹೀಗೆ ಇವರ ಪಟ್ಟಿ ಬೆಳೆಯುತ್ತದೆ. ಡಾ ವಿಷ್ಣುವರ್ಧನ್​ ನಂತಹವರು ಮೈಕಲ್ ಮಧು ಅಭಿನಯ ಚೆನ್ನಾಗಿ ಮಾಡ್ತಾರೆ ಅವರನ್ನು ಹಾಕಿಕೊಳ್ಳಿ ಅಂತ ಶಿಫಾರಸು ಮಾಡುತ್ತಾ ಇದ್ದದ್ದು ಉಂಟು.

ಅಲ್ಲಿ ಸಿಕ್ಕಿದ್ದು ಇಲ್ಲಿ ಸಿಗಲಿಲ್ಲ : ಏನದು ಅಂತೀರಾ.. ಅದೇ ಗೌರವ, ಹಣ ಹಾಗೂ ವೃತ್ತಿಯಲ್ಲಿ ಸಮಾಧಾನ. ಮೈಕಲ್ ಮಧು ಅವರು ಹಾಸ್ಯ ನಟನಾಗಿ ಅಭಿನಯ ಮಾಡಿದ್ದು ಕೇವಲ ಒಂದು ಹಿಂದಿ ಸಿನಿಮಾ ‘ಬರ್ಸಾತ್’. ಬಾಬಿ ಡಿಯೋಲ್, ಟ್ವಿಂಕಲ್ ಖನ್ನ ಅಭಿನಯ, ಡಿಂಪಲ್ ಕಪಾಡಿಯ ನಿರ್ಮಾಣದ ಚಿತ್ರ. ಆ ಹಿಂದಿ ಸಿನಿಮಾಕ್ಕೆ ಐದು ಲಕ್ಷ ಸಂಭಾವನೆ ಸಿಕ್ಕಿದ್ದು ಒಂದು ಕಡೆಯಾದರೆ. ಕೇವಲ 350 ರೂಪಾಯಿ ಇಟ್ಟುಕೊಂಡು ಮುಂಬೈಗೆ ಹೋದ ಮೈಕಲ್ ಮಧು ಅವರನ್ನು ಸ್ವತಃ ಡಿಂಪಲ್ ಕಾಪಾಡಿಯಾ ಗೌರವಿಸಿದ ರೀತಿ.. ಚಿತ್ರೀಕರಣ ಒಂದು ಹಂತ ತಲುಪಿದಾಗ ಇವರ ಕೈಗೆ 50,000 ರೂಪಾಯಿ ನೀಡಿದ್ದು ಇವರಿಗೆ ಗಾಬರಿ ಜೊತೆ ಸೊಂತೋಷ ಉಕ್ಕಿ ಬಂದಂತಹ ಸಮಯ.

30 ವರ್ಷಗಳ ವೃತ್ತಿ ಜೀವನದ ನಂತರ ಮೈಕಲ್ ಮಧು ಅವರಿಗೆ ನಿರ್ದೇಶಕನ ಪಟ್ಟ ಏರುವ ತವಕ. ಇವರ ಸ್ನೇಹಿತ ಕಪಿಲ್ ಅವರ ‘ಹಳ್ಳಿ ಸೊಗಡು’ ಇವರ 250ನೇ ಸಿನಿಮಾ. ಇವರ ಬಳಿ ಹಲವಾರು ಕಥೆಗಳಿದ್ದವು. ಇಲ್ಲಿ ಗೌರವ ಅರ್ಧ ಸಿಕ್ಕಿದೆ. ಒಂದು ದೊಡ್ಡ ಕೆಲಸ ಮಾಡಿದರೆ ಆ ಗೌರವ ಸಿಕ್ಕೀತು ಎಂದು ಆ ಸಮಯಕ್ಕಾಗಿ ಕಾಯುತ್ತಾ ಇದ್ದವಾರು ಮೈಕಲ್ ಮಧು. ಮಡದಿ ಕವಿತಾ, ನಯನ ಹಾಗೂ ನಿಸರ್ಗ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದ ಕುಟುಂಬ ಇವರದಾಗಿತ್ತು. ಅನೇಕ ಬೆಗ್ಗರ್ ಪಾತ್ರಗಳನ್ನು ಮಾಡಿದ್ದೇನೆ. ಆದರೆ, ನಿರ್ದೇಶನದ ವಿಚಾರ ಬಂದಾಗ ಬೆಗ್ ಮಾಡುವುದು ಯಾಕೋ ಚೆನ್ನಾಗಿ ಕಾಣುತ್ತಾ ಇಲ್ಲ ಎಂದು ಹೇಳಿಕೊಂಡಿದ್ದರು.

ಮೊದಲೇ ಹಾಸ್ಯ ಕಲಾವಿದರನ್ನು ಡಿಗ್ರೇಡ್ ಮಾಡಿ ನೋಡುತ್ತಾರೆ. ಆದರೂ ಜೀವನದಲ್ಲಿ ಮತ್ತೊಂದು ಬ್ರೇಕ್ ಬೇಕು ಎಂದು ಮೈಕಲ್ ಮಧು ಮನಸ್ಸು ಹಾತೊರೆಯುತ್ತಾ ಇತ್ತು. ಹಿರಿಯ ನಿರ್ದೇಶಕ ಕೆ ವಿ ರಾಜು ಅವರು ನನ್ನನ್ನು ಇಟ್ಟುಕೊಂಡು ಒಬ್ಬ ಸೈಲೆಂಟ್ ಕಿಲ್ಲರ್ ಅಪ್ಪನ ಪಾತ್ರ ಮಾಡಿಸಲಿ ಎಂದು ಹೇಳಿರುವುದು ಉಂಟು. ನಮ್ಮಂತಹ ಕಲಾವಿದರ ಬದುಕು ನಡೆಯುತ್ತಾ ಇರುವುದಕ್ಕೆ ಉತ್ತರ ಕರ್ನಾಟಕದ ಕಲಾಭಿಮಾನಿಗಳು ಕಾರಣ. ಅಲ್ಲಿಯ ಜನರಿಗೆ ಕನ್ನಡದ ಬಗ್ಗೆ ಇರುವ ಅಭಿಮಾನ ಅಂತಿಂತಹುದಲ್ಲ. ಅಲ್ಲಿ ಕಾರ್ಯಕ್ರಮಗಳಿಗೆ ಹೋದರೆ ಫ್ರೀ ಆಗಿ ಕೂರುವ ಹಾಗಿಲ್ಲ. ಒಳ್ಳೆಯ ಮರ್ಯಾದೆ ಜೊತೆಗೆ ಒಳ್ಳೆಯ ಸಂಭಾವನೆ ದೊರೆಯುತ್ತದೆ. ಪ್ರೀತಿ ಸಿಕ್ಕುವುದೇ ಅಲ್ಲಿ ಎಂದು ಮೈಕಲ್ ಮಧು ಬಾಯಿ ತುಂಬಾ ಹೊಗಳುತ್ತಾ ಇದ್ದದ್ದು ನೆನಪಿಗೆ ಬರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.