ETV Bharat / science-and-technology

ಭಾರತದ ವೈಜ್ಞಾನಿಕ ಸಂಶೋಧನಾ ಕ್ಷೇತ್ರಕ್ಕೆ ಬೇಕಿದೆ ಕಾಯಕಲ್ಪ.. ಏಕೆ ಗೊತ್ತಾ?

author img

By ETV Bharat Karnataka Team

Published : Oct 11, 2023, 2:28 PM IST

ಪ್ರಸಕ್ತ ಸಾಲಿನ ನೊಬೆಲ್ ಪ್ರಶಸ್ತಿಗಳು ಪ್ರಕಟವಾಗಿದ್ದು, ಈ ವರ್ಷದ ಪಟ್ಟಿಯಲ್ಲಿ ಭಾರತೀಯರ‍್ಯಾರು ಇಲ್ಲದಿರುವುದು ನಿರಾಸೆ ಮೂಡಿಸಿದೆ.

Nobel laureates released
Nobel laureates released

ಪ್ರಸಕ್ತ ಸಾಲಿನ ಬಹು ನಿರೀಕ್ಷಿತ ನೊಬೆಲ್ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಈ ವಿಷಯ ಈಗ ಸಾಮಾಜಿಕ ಮತ್ತು ವಿದ್ಯುನ್ಮಾನ ಮಾಧ್ಯಮ ವೇದಿಕೆಗಳಲ್ಲಿ ಉತ್ಸಾಹದ ಚರ್ಚೆಗಳನ್ನು ಹುಟ್ಟುಹಾಕಿದೆ. ವಿವಿಧ ಕ್ಷೇತ್ರಗಳ ಬಗ್ಗೆ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿದ ಬೌದ್ಧಿಕ ದೈತ್ಯರನ್ನು ಗುರುತಿಸಲು ವಿಶ್ವದ ಗಮನ ಸೆಳೆಯುವ ಕ್ಷಣ ಇದು.

ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಅಮೆರಿಕದ ಪ್ರೊಫೆಸರ್ ಕ್ಲೌಡಿಯಾ ಗೋಲ್ಡಿನ್ ಅವರು ಪ್ರಶಸ್ತಿ ವಿಜೇತರಲ್ಲಿ ಒಬ್ಬರು. ಅವರ ಅದ್ಭುತ ಸಂಶೋಧನೆ ಮತ್ತು ಮಹಿಳಾ ಕಾರ್ಮಿಕ ಮಾರುಕಟ್ಟೆ ಫಲಿತಾಂಶಗಳ ಅಧ್ಯಯನಕ್ಕೆ ಅಚಲ ಸಮರ್ಪಣೆ ಅವರಿಗೆ ಈ ಪ್ರತಿಷ್ಠಿತ ಗೌರವವನ್ನು ಗಳಿಸಿಕೊಟ್ಟಿದೆ. ಇರಾನಿನ ಮಾನವ ಹಕ್ಕುಗಳ ಹೋರಾಟಗಾರ್ತಿ ನರ್ಗೆಸ್ ಮೊಹಮ್ಮದಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ.

ಇರಾನ್​ನಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆಯನ್ನು ಎದುರಿಸುವಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳನ್ನು ಪ್ರತಿಪಾದಿಸುವಲ್ಲಿ ಅವರ ದಣಿವರಿಯದ ಪ್ರಯತ್ನಗಳು ವಿಶ್ವದ ಗಮನ ಸೆಳೆದಿವೆ. ಜೈಲುವಾಸ ಅನುಭವಿಸುತ್ತಿದ್ದರೂ ಅವರ ಅಚಲ ಧೈರ್ಯವು ನೊಬೆಲ್ ಶಾಂತಿ ಪ್ರಶಸ್ತಿಯ ಸ್ಫೂರ್ತಿಯನ್ನು ಸಾಕಾರಗೊಳಿಸುತ್ತದೆ.

ನಾರ್ವೇಜಿಯನ್ ಪ್ರಜೆ ಜಾನ್ ಒಲಾವ್ ಫೋಸ್ ಅವರನ್ನು ಸಾಹಿತ್ಯದ ನೊಬೆಲ್ ಪ್ರಶಸ್ತಿಗೆ ಗುರುತಿಸಿರುವುದನ್ನು ವಿಶ್ವದಾದ್ಯಂತದ ಸಾಹಿತ್ಯ ಪ್ರೇಮಿಗಳು ಸಂಭ್ರಮಿಸುತ್ತಿದ್ದಾರೆ. ತಮ್ಮ ಸೃಜನಶೀಲ ನಾಟಕಗಳು ಮತ್ತು ಬರಹಗಳ ಮೂಲಕ ದಮನಿತರಿಗೆ ಧ್ವನಿ ನೀಡುವ ಅವರ ಅಸಾಧಾರಣ ಪ್ರತಿಭೆ ಪ್ರೇಕ್ಷಕರು ಮತ್ತು ವಿಮರ್ಶಕರನ್ನು ಸಮಾನವಾಗಿ ಆಕರ್ಷಿಸಿದೆ.

ವೈಜ್ಞಾನಿಕ ಆವಿಷ್ಕಾರದ ಕ್ಷೇತ್ರವನ್ನು ನೋಡುವುದಾದರೆ ಕ್ವಾಂಟಮ್ ಡಾಟ್ಸ್, ನ್ಯಾನೊ ತಂತ್ರಜ್ಞಾನದ ಅದ್ಭುತ ಟಿವಿಗಳು ಮತ್ತು ಎಲ್ಇಡಿ ದೀಪಗಳಂತಹ ಉತ್ಪನ್ನಗಳಲ್ಲಿ ತಮ್ಮ ಅನ್ವಯಿಕೆಗಳಿಗೆ ಹೆಸರುವಾಸಿಯಾಗಿವೆ. 2023 ರ ರಸಾಯನಶಾಸ್ತ್ರ ಪ್ರಶಸ್ತಿಯನ್ನು ಮೌಂಗಿ ಜಿ. ಬಾವೆಂಡಿ, ಲೂಯಿಸ್ ಇ. ಬ್ರೂಸ್ ಮತ್ತು ಅಲೆಕ್ಸಿ ಐ. ಎಕಿಮೊವ್ ಅವರಿಗೆ ನೀಡಲಾಗಿದೆ. ಕ್ವಾಂಟಮ್ ಡಾಟ್ಸ್​ ಕ್ಷೇತ್ರದಲ್ಲಿ ಇವರ ಸಾಧನೆ ಅನನ್ಯವಾಗಿದೆ. ಬಾವೆಂಡಿ ಫ್ರಾನ್ಸ್​ ಮೂಲದವರಾದರೆ, ಎಕಿಮೊವ್ ರಷ್ಯಾ ಮೂಲದವರಾಗಿದ್ದಾರೆ. ಇನ್ನು ಬ್ರೂಸ್ ಅಮೆರಿಕದವರಾಗಿದ್ದಾರೆ. ಇವರ ನ್ಯಾನೊ ತಂತ್ರಜ್ಞಾನದ ಸಂಶೋಧನೆಯು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಭರವಸೆಯನ್ನು ಮೂಡಿಸಿದೆ.

ಏತನ್ಮಧ್ಯೆ, ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಮೆರಿಕ ಮೂಲದ ಪಿಯರೆ ಅಗೋಸ್ಟಿನಿ, ಜರ್ಮನಿಯ ಮ್ಯೂನಿಚ್​ನಲ್ಲಿ ಜನಿಸಿದ ಫೆರೆಂಕ್ ಕ್ರೌಜ್ ಮತ್ತು ಸ್ವೀಡಿಷ್ ಮೂಲದ ಅನ್ನಿ ಎಲ್'ಹುಲಿಯರ್ ಅವರಿಗೆ ನೀಡಲಾಗಿದೆ. ಬೆಳಕಿನ ಅಟೋಸೆಕೆಂಡ್ ಪಲ್ಸ್​ಗಳನ್ನು ಉತ್ಪಾದಿಸುವ ಅವರ ಕ್ರಾಂತಿಕಾರಿ ಪ್ರಾಯೋಗಿಕ ತಂತ್ರಗಳು, ದ್ರವ್ಯದೊಳಗೆ, ವಿಶೇಷವಾಗಿ ಪರಮಾಣುಗಳು ಮತ್ತು ಅಣುಗಳಲ್ಲಿ ಎಲೆಕ್ಟ್ರಾನ್ ಡೈನಾಮಿಕ್ಸ್ ಅನ್ನು ಅಧ್ಯಯನ ಮಾಡಲು ಅಭೂತಪೂರ್ವ ದೃಷ್ಟಿಕೋನಗಳನ್ನು ತೆರೆದಿವೆ. ಜೀವ ವಿಜ್ಞಾನ ಕ್ಷೇತ್ರದಲ್ಲಿ, ಕಟಾಲಿನ್ ಕರಿಕೊ ಮತ್ತು ಡ್ರೂ ವೈಸ್ಮನ್ ಜಂಟಿಯಾಗಿ ಕೋವಿಡ್ -19 ಲಸಿಕೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಎಂಆರ್​ಎನ್​ಎ ತಂತ್ರಜ್ಞಾನದಲ್ಲಿ ಪ್ರವರ್ತಕ ಕೆಲಸಕ್ಕಾಗಿ ಶರೀರಶಾಸ್ತ್ರ ಅಥವಾ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ.

ಮೂಲತಃ ಹಂಗೇರಿಯವರಾದ ಮತ್ತು ಈಗ ಯುನೈಟೆಡ್ ಸ್ಟೇಟ್ಸ್​ನಲ್ಲಿ ವಾಸಿಸುತ್ತಿರುವ ಕಟಾಲಿನ್ ಮತ್ತು ಅಮೆರಿಕ ಮೂಲದ ವೈಸ್ಮನ್ ಈ ಕ್ಷೇತ್ರಕ್ಕೆ ಎಂದೂ ಮರೆಯಲಾಗದ ಕೊಡುಗೆಗಳನ್ನು ನೀಡಿದ್ದಾರೆ, ಸಾಂಕ್ರಾಮಿಕ ರೋಗದ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಭರವಸೆಯ ಆಶಾಕಿರಣವನ್ನು ಇವರು ಮೂಡಿಸಿದ್ದಾರೆ. ವಿದೇಶದಲ್ಲಿ ಜನಿಸಿ ತಾವಿರುವ ದೇಶದಲ್ಲಿ ಸಾಧನೆ ಮಾಡಿ ನೊಬೆಲ್ ಪ್ರಶಸ್ತಿ ಪಡೆದ ಅತ್ಯಧಿಕ ವ್ಯಕ್ತಿಗಳು ಅಮೆರಿಕದವರು ಎಂಬುದು ಇಲ್ಲಿ ಗಮನಾರ್ಹ. ಭವಿಷ್ಯದ ಪ್ರಶಸ್ತಿ ವಿಜೇತರಿಗಾಗಿ ಜಗತ್ತು ಕಾಯುತ್ತಿರುವ ಈ ಸಮಯದಲ್ಲಿ ಈ ವರ್ಷದ ನೊಬೆಲ್ ಪ್ರತಿಷ್ಠಿತ ಸಾಲಿನಲ್ಲಿ ಭಾರತೀಯ ವ್ಯಕ್ತಿಗಳಾರೂ ಇಲ್ಲದಿರುವ ಕೊರಗು ನಮ್ಮನ್ನು ಕಾಡದೆ ಇರದು.

1901 ರಲ್ಲಿ ನೊಬೆಲ್ ಪ್ರಶಸ್ತಿಗಳನ್ನು ನೀಡಲು ಆರಂಭಿಸಿದ ನಂತರ ಇಲ್ಲಿಯವರೆಗೆ ಭಾರತವು ಒಂಬತ್ತು ಪ್ರಶಸ್ತಿ ವಿಜೇತರೊಂದಿಗೆ ವಿಶ್ವ ವೇದಿಕೆಯಲ್ಲಿ ಛಾಪು ಮೂಡಿಸಿದೆ. ಆದರೂ ಈ ವಿಷಯದಲ್ಲಿ ಅಸಮಾನತೆ ಇರುವುದು ಮಾತ್ರ ಕಟು ವಾಸ್ತವವಾಗಿದೆ. ರವೀಂದ್ರನಾಥ ಟ್ಯಾಗೋರ್ ಅವರ ಸಾಹಿತ್ಯ ಮೇರುಕೃತಿ 'ಗೀತಾಂಜಲಿ' ಅವರಿಗೆ 1913 ರಲ್ಲಿ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಸಿ.ವಿ. ರಾಮನ್ ಭೌತಶಾಸ್ತ್ರದಲ್ಲಿ, ಅಮರ್ತ್ಯ ಸೇನ್ ಅರ್ಥಶಾಸ್ತ್ರದಲ್ಲಿ ಮತ್ತು ಕೈಲಾಸ್ ಸತ್ಯಾರ್ಥಿ ಶಾಂತಿ ಮತ್ತು ನ್ಯಾಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಇವರೆಲ್ಲರೂ ಭಾರತೀಯ ಮೂಲದ ನೊಬೆಲ್ ಪ್ರಶಸ್ತಿ ವಿಜೇತರು. ಆದಾಗ್ಯೂ, ನಾವು ನೊಬೆಲ್ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಆಳವಾಗಿ ಪರಿಶೀಲಿಸಿದಾಗ ಕುತೂಹಲಕಾರಿ ಸೂಕ್ಷ್ಮ ವಿಷಯವೊಂದು ನಮಗೆ ಗೋಚರಿಸುತ್ತದೆ.

ವೈದ್ಯಕೀಯ ಶಾಸ್ತ್ರದಲ್ಲಿ ಹರ್ಗೋಬಿಂದ್ ಖೋರಾನಾ, ಭೌತಶಾಸ್ತ್ರದಲ್ಲಿ ಸುಬ್ರಮಣ್ಯನ್ ಚಂದ್ರಶೇಖರ್, ರಸಾಯನಶಾಸ್ತ್ರದಲ್ಲಿ ವೆಂಕಟರಾಮನ್ ರಾಮಕೃಷ್ಣನ್ ಮತ್ತು ಅರ್ಥಶಾಸ್ತ್ರದಲ್ಲಿ ಅಭಿಜಿತ್ ಬ್ಯಾನರ್ಜಿ ಅವರಂತಹ ಪ್ರಸಿದ್ಧ ವ್ಯಕ್ತಿಗಳು ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಭಾರತೀಯ ಮೂಲದವರಾಗಿದ್ದರೂ ಅವರ ಪೌರತ್ವದ ಕಾರಣದಿಂದಾಗಿ ಅವರನ್ನು ಆಯಾ ದೇಶದ ಪ್ರಶಸ್ತಿ ವಿಜೇತರೆಂದು ಗುರುತಿಸಲಾಗಿದೆ.

ಮದರ್ ತೆರೇಸಾ ಮೂಲತಃ ಅಲ್ಬೇನಿಯಾದವರಾಗಿದ್ದು, ತಮ್ಮ ಇಡೀ ಜೀವನವನ್ನು ಕೋಲ್ಕತ್ತಾದ ನಿರ್ಗತಿಕರ ಸೇವೆಗಾಗಿ ಮುಡಿಪಾಗಿಟ್ಟರು. ಅವರು 1979 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾದರು. ಭಾರತೀಯ ಮೂಲದ ವ್ಯಕ್ತಿಗಳು, ಸ್ವಾಭಾವಿಕ ನಾಗರಿಕರು ಮತ್ತು ದೇಶದ ಗಡಿಯೊಳಗೆ ಜನಿಸಿದವರನ್ನು ಒಳಗೊಳ್ಳಲು ನಾವು ನಮ್ಮ ದೃಷ್ಟಿಕೋನವನ್ನು ವಿಸ್ತರಿಸಿದರೂ, ನೊಬೆಲ್ ವಿಜೇತರ ಸಂಖ್ಯೆ ನಿರಾಶಾದಾಯಕವಾಗಿ ಒಂದೇ ಅಂಕಿಯೊಳಗೆ ಉಳಿದಿದೆ. ಸುಮಾರು 1.4 ಬಿಲಿಯನ್ ಜನಸಂಖ್ಯೆಯ ರಾಷ್ಟ್ರಕ್ಕೆ ಈ ಅಂಕಿಅಂಶವು ಗಮನಾರ್ಹವಾಗಿ ಕಡಿಮೆಯಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ಸಣ್ಣ ದೇಶಗಳು ಆಶ್ಚರ್ಯ ಎನಿಸುವಷ್ಟು ಸಂಖ್ಯೆಯ ನೊಬೆಲ್ ಪ್ರಶಸ್ತಿಗಳನ್ನು ಗಳಿಸಿವೆ. ಸರಿಸುಮಾರು 9 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಆಸ್ಟ್ರಿಯಾ 25 ಪ್ರಶಸ್ತಿ ವಿಜೇತರನ್ನು ಹೊಂದಿದೆ. 17 ಮಿಲಿಯನ್ ನಾಗರಿಕರನ್ನು ಹೊಂದಿರುವ ನೆದರ್ಲ್ಯಾಂಡ್ಸ್ 22 ಪ್ರಶಸ್ತಿಗಳನ್ನು ಪಡೆದಿದೆ ಮತ್ತು 60 ಮಿಲಿಯನ್​ಗಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಇಟಲಿ 21 ನೊಬೆಲ್ ಪ್ರಶಸ್ತಿ ವಿಜೇತರನ್ನು ಹೊಂದಿದೆ.

ನೊಬೆಲ್ ಪ್ರಶಸ್ತಿಗಳನ್ನು ಪಡೆಯುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ಯುನೈಟೆಡ್ ಸ್ಟೇಟ್ಸ್ 400 ಕ್ಕೂ ಹೆಚ್ಚು ನೊಬೆಲ್ ಪ್ರಶಸ್ತಿಗಳನ್ನು ಗಳಿಸಿದೆ. ಈ ಎಲ್ಲ ಅಂಕಿ - ಅಂಶಗಳ ಆಚೆಗೆ ಸಮಸ್ಯೆಯೊಂದು ಕಾಣಿಸುತ್ತದೆ. ವ್ಯಾಪಕ ಸಂಶೋಧನೆಯ ವಿಚಾರಕ್ಕೆ ಬಂದಾಗ ವಿಶೇಷವಾಗಿ ಭೌತ, ರಾಸಾಯನಿಕ, ವೈದ್ಯಕೀಯ ಮತ್ತು ಆರ್ಥಿಕ ವಿಜ್ಞಾನಗಳ ಕ್ಷೇತ್ರಗಳಲ್ಲಿ ಸಂಘಟಿತ ಪ್ರಯತ್ನದ ಕೊರತೆಯಿಂದಾಗಿ ಭಾರತದ ಖ್ಯಾತಿ ಹಾಳಾಗಿದೆ. 40,000 ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು 1,200 ವಿಶ್ವವಿದ್ಯಾಲಯಗಳನ್ನು ಹೊಂದಿದ್ದರೂ, ಅವುಗಳಲ್ಲಿ ಕೇವಲ 1% ಮಾತ್ರ ಸಕ್ರಿಯ ಸಂಶೋಧನಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ವಿಶ್ಲೇಷಣೆಗಳು ಹೇಳಿವೆ.

ದೇಶದ ಮೂರನೇ ಎರಡರಷ್ಟು ವಿಶ್ವವಿದ್ಯಾಲಯಗಳು ಮತ್ತು ಶೇಕಡಾ 90 ರಷ್ಟು ಕಾಲೇಜುಗಳು ಸಂಶೋಧನಾ ಉತ್ಕೃಷ್ಟತೆಯ ಕನಿಷ್ಠ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿವೆ. ಎಂಜಿನಿಯರಿಂಗ್ ಪದವೀಧರರಲ್ಲಿ ಕೇವಲ ಕಾಲು ಭಾಗದಷ್ಟು ಜನ ಮಾತ್ರ ಉದ್ಯೋಗ ಮಾಡಲು ಅರ್ಹರು ಎಂದು ಪರಿಗಣಿಸಲ್ಪಡುತ್ತಿರುವುದು ಮತ್ತೊಂದು ನಿರಾಶಾದಾಯಕ ವಿಷಯವಾಗಿದೆ. ಇದು ಶೈಕ್ಷಣಿಕ ವಲಯದಲ್ಲಿನ ಬಹು ಮುಖ್ಯ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಭಾರತದ ಮಹತ್ವಾಕಾಂಕ್ಷಿ ವಿಜ್ಞಾನಿಗಳು ಮತ್ತು ಸಂಶೋಧಕರು ತಮ್ಮ ಶೈಕ್ಷಣಿಕ ಮತ್ತು ವೃತ್ತಿಪರ ಜೀವನದ ಪ್ರತಿಯೊಂದು ಹಂತದಲ್ಲೂ ಹಲವಾರು ಅಡೆತಡೆಗಳನ್ನು ಎದುರಿಸುತ್ತಿದ್ದಾರೆ.

ಜಾಗತಿಕ ವೇದಿಕೆಯಲ್ಲಿ ರಾಷ್ಟ್ರದ ಸ್ಥಾನಮಾನವನ್ನು ಎತ್ತರಿಸಲು, ಸಂಶೋಧನೆ ಮತ್ತು ಆವಿಷ್ಕಾರಗಳಲ್ಲಿ ಸಮಗ್ರ ಸುಧಾರಣೆ ತರುವುದು ಇಂದಿನ ಅಗತ್ಯವಾಗಿದೆ. ದೇಶದ ಬಜೆಟ್​ನಲ್ಲಿ ಇದಕ್ಕಾಗಿ ಸಾಕಷ್ಟು ಪ್ರಮಾಣದ ಹಣವನ್ನು ಮೀಸಲಿಡುವುದರ ಮೂಲಕ ಈ ಸುಧಾರಣೆಯನ್ನು ಆರಂಭಿಸಬಹುದಾಗಿದೆ. ಈ ಮೂಲಕ ವಿಜ್ಞಾನ ಮತ್ತು ಸಂಶೋಧನೆಗೆ ಅಗತ್ಯವಾದ ಅನುಕೂಲಗಳನ್ನು ಕಲ್ಪಿಸಬಹುದಾಗಿದೆ.

ವೈಜ್ಞಾನಿಕ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಮತ್ತು ಅಧಿಕಾರಶಾಹಿ ವಿಳಂಬವನ್ನು ಕಡಿಮೆ ಮಾಡಲು ಸರ್ಕಾರಗಳು ಸಕ್ರಿಯವಾಗಿ ಕೆಲಸ ಮಾಡಬೇಕಿದೆ. ಇದು ವೈಜ್ಞಾನಿಕ ಸಮುದಾಯವು ಅಭಿವೃದ್ಧಿ ಹೊಂದಲು ಮತ್ತು ಮುಕ್ತವಾಗಿ ಆವಿಷ್ಕಾರ ಮಾಡಲು ಅನುವು ಮಾಡಿಕೊಡುತ್ತದೆ. ಒಟ್ಟಾರೆಯಾಗಿ ವೈಜ್ಞಾನಿಕ ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟದಲ್ಲಿ ಮೂಲಭೂತ ಬದಲಾವಣೆ ಆದಾಗ ಮಾತ್ರವೇ ದೇಶದ ವೈಜ್ಞಾನಿಕ ಆವಿಷ್ಕಾರ ಕ್ಷೇತ್ರದಲ್ಲಿ ನಿಜವಾದ ಬದಲಾವಣೆ ಬರಲು ಸಾಧ್ಯ. ಆಗ ಮಾತ್ರ ನಮ್ಮ ದೇಶದಲ್ಲಿ ಅತ್ಯಾಧುನಿಕ ಸಂಶೋಧನೆಯ ಉತ್ಸಾಹ ಇಮ್ಮಡಿಯಾಗಿ ದೇಶ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗಬಹುದು!

ಇದನ್ನೂ ಓದಿ : ಗೂಗಲ್​ ಸೈನ್​ಇನ್​ಗೆ ಕಡ್ಡಾಯವಾಗಲಿದೆ ಪಾಸ್​ ಕೀ.. ಏನಿದು ಹೊಸ ವಿಧಾನ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.