ETV Bharat / science-and-technology

ಒಣ ಹೂ ಮತ್ತು ತ್ಯಾಜ್ಯದ ಮರು ಬಳಕೆ ಹೇಗೆ? ಇಲ್ಲಿದೆ ಮಾಹಿತಿ

author img

By ETV Bharat Karnataka Team

Published : Nov 15, 2023, 6:24 PM IST

ಒಣ ಹೂಗಳನ್ನು ಮರುಬಳಕೆ ಮಾಡುವುದು ಹೇಗೆ ಮತ್ತು ಅವುಗಳಿಂದ ಲಾಭದಾಯಕ ಉದ್ಯಮ ಆರಂಭಿಸುವುದು ಹೇಗೆಂಬ ಮಾಹಿತಿ ಇಲ್ಲಿದೆ.

Dry flowers and floral waste – A boon to Floriculture industry
Dry flowers and floral waste – A boon to Floriculture industry

ಭಾರತವು ವೈವಿಧ್ಯಮಯ ಮಣ್ಣು ಮತ್ತು ಹವಾಮಾನ ಪರಿಸ್ಥಿತಿಗಳನ್ನು ಹೊಂದಿದ್ದು, ಇದು ಹಣ್ಣು, ತರಕಾರಿ, ಹೂವು ಮತ್ತು ಮಸಾಲೆಗಳು ಮತ್ತು ಸಂಬಾರ ಪದಾರ್ಥಗಳಂತಹ ವಿವಿಧ ತೋಟಗಾರಿಕೆ ಬೆಳೆಗಳ ಕೃಷಿಗೆ ಅಪಾರ ಅವಕಾಶ ನೀಡುತ್ತದೆ. ಒಣ ಹೂವುಗಳಿಗೆ ಭಾರತೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಾಕಷ್ಟು ಬೇಡಿಕೆಯಿದೆ. ಒಣ ಹೂಗಳು ದೀರ್ಘಕಾಲ ಬಾಳಿಕೆ ಬರುವುದರಿಂದ, ನಿರ್ವಹಿಸಲು ಸುಲಭವಾಗಿರುವುದರಿಂದ ಮತ್ತು ತಾಜಾ ಹೂವುಗಳಿಗೆ ಹೋಲಿಸಿದರೆ ಅಗ್ಗವಾಗಿರುವುದರಿಂದ ಇವುಗಳಿಗೆ ಬೇಡಿಕೆ ಜಾಸ್ತಿ ಇದೆ. ಒಣ ಹೂಗಳನ್ನು ಭಾರತದಿಂದ ಅಮೆರಿಕ, ಜಪಾನ್ ಮತ್ತು ಯುರೋಪಿನಂಥ ದೇಶಗಳಿಗೆ ರಫ್ತು ಮಾಡಲಾಗುತ್ತದೆ.

ವೈವಿಧ್ಯಮಯ ಸಸ್ಯಗಳ ಲಭ್ಯತೆಯಿಂದಾಗಿ ಭಾರತವು ಒಣ ಹೂವುಗಳ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದೆ ಮತ್ತು 20 ದೇಶಗಳಿಗೆ 500 ಬಗೆಯ ಹೂವುಗಳನ್ನು ರಫ್ತು ಮಾಡುವ ಮೂಲಕ ವರ್ಷಕ್ಕೆ ಸುಮಾರು 100 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಭಾರತದಲ್ಲಿ ಅನೇಕ ಪೂಜಾ ಕೇಂದ್ರಗಳು ನಿತ್ಯ 20 ಟನ್ ಹೂವಿನ ತ್ಯಾಜ್ಯ ಉತ್ಪಾದಿಸುತ್ತವೆ. ಭಾರತದಲ್ಲಿ, ಗ್ಲೋಬೊಸಾ, ಹೆಲಿಕ್ರಿಸಮ್, ಅಕ್ರೋಲಿನಮ್, ಸೆಲೋಸಿಯಾ, ಕಾಕ್ಸ್ ಕೋಂಬ್, ಹತ್ತಿ, ಜಿಪ್ಸೊಫಿಲಾ, ಸ್ಟ್ಯಾಟಿಸ್, ಲ್ಯಾವೆಂಡರ್, ಲಾರ್ಕ್​ಸ್ಪರ್ ಮತ್ತು ಗುಲಾಬಿಗಳಂತಹ ಹೂವುಗಳು ಒಣಗಿಸಲು ಉತ್ತಮವಾಗಿವೆ. ಹೂವಿನ ವಿಧ ಮತ್ತು ಪ್ರದೇಶದ ವಾತಾವರಣ ಅವಲಂಬಿಸಿ ಒಣ ಹೂವುಗಳು 2 ರಿಂದ 4 ವರ್ಷಗಳವರೆಗೆ ಬಾಳಿಕೆ ಬರುತ್ತವೆ. ಹೂಗಳನ್ನು ಗಾಳಿಯಲ್ಲಿ ಒಣಗಿಸುವುದು, ಓವನ್​​​ನ ಬಿಸಿ ಗಾಳಿಯ ಮೂಲಕ ಒಣಗಿಸುವುದು, ಮೈಕ್ರೋವೇವ್ ಓವನ್ ವಿಧಾನದಲ್ಲಿ ಒಣಗಿಸುವುದು, ಗ್ಲಿಸರಿನ್ ವಿಧಾನ ಮತ್ತು ಫ್ರೀಜ್ ಡ್ರೈಯಿಂಗ್ ವಿಧಾನಗಳಿಂದ ಒಣಗಿಸಬಹುದು.

ಭಾರತದಲ್ಲಿ ಹೂವಿನ ತ್ಯಾಜ್ಯವನ್ನು ಎಸೆಯುವುದರಿಂದ ಅನೇಕ ನದಿಗಳು ಮತ್ತು ಸರೋವರಗಳು ಕಲುಷಿತಗೊಳ್ಳುತ್ತಿವೆ. ಇದು ನೀರಿನ ಹರಿವಿಗೆ ತಡೆ ಒಡ್ಡುವುದಲ್ಲದೇ ರಾಸಾಯನಿಕಗಳನ್ನು ನೀರಿಗೆ ಬಿಡುಗಡೆ ಮಾಡುತ್ತದೆ. ಅಲ್ಲದೇ ಇದು ಜೀವಂತ ಸಸ್ಯ ಮತ್ತು ಪ್ರಾಣಿಗಳ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಭಾರತದಲ್ಲಿ ಹೂವಿನ ತ್ಯಾಜ್ಯವು ಭೂಮಿ ಮತ್ತು ನೀರಿನ ಮೇಲಿನ ಅತಿದೊಡ್ಡ ಮಾಲಿನ್ಯಕಾರಕಗಳಲ್ಲಿ ಒಂದಾಗಿದೆ. ಪೂಜೆಗೆ ಬಳಸಿದ ಹೂಗಳನ್ನು ಪವಿತ್ರ ಎಂದು ಪರಿಗಣಿಸಲಾಗುವುದರಿಂದ ಅವನ್ನು ಕಸದ ಜೊತೆಗೆ ವಿಲೇವಾರಿ ಮಾಡುವುದಿಲ್ಲ. ಭಾರತೀಯರು ಪೂಜೆಗೆ ಬಳಸಿದ ಹೂಗಳನ್ನು ಸಾಮಾನ್ಯವಾಗಿ ನೀರಿನಲ್ಲಿ ವಿಲೇವಾರಿ ಮಾಡುತ್ತಾರೆ. ಅವುಗಳನ್ನು ಹತ್ತಿರದ ಜಲ ಮೂಲಕ್ಕೆ, ಸಾಮಾನ್ಯವಾಗಿ ನದಿ ಅಥವಾ ಸರೋವರಕ್ಕೆ ಎಸೆಯಲಾಗುತ್ತದೆ.

ಗಂಗಾನದಿಗೆ ಎಂಟು ಮಿಲಿಯನ್​​​ ಮೆಟ್ರಿಕ್​ ಟನ್​ ಹೂವಿನ ತ್ಯಾಜ್ಯ: ಗಂಗಾ ನದಿಗೆ ಪ್ರತಿವರ್ಷ ದೇವಾಲಯಗಳು ಮತ್ತು ಪ್ರಾರ್ಥನಾ ಮಂದಿರಗಳಿಂದ ಸುಮಾರು ಎಂಟು ಮಿಲಿಯನ್ ಮೆಟ್ರಿಕ್ ಟನ್ ಹೂವಿನ ತ್ಯಾಜ್ಯ ಎಸೆಯಲಾಗುತ್ತಿದೆ ಎಂದು ಯುಎನ್ ಹವಾಮಾನ ಬದಲಾವಣೆ ವರದಿ ಹೇಳಿದೆ. ಹೈದರಾಬಾದ್ ಒಂದರಲ್ಲೇ ಸುಮಾರು 1000 ಮೆಟ್ರಿಕ್ ಟನ್ ಹೂವಿನ ತ್ಯಾಜ್ಯವು ಪೂಜಾ ಸ್ಥಳಗಳಲ್ಲಿ ಉತ್ಪತ್ತಿಯಾಗುತ್ತದೆ. ನದಿಗಳು ಅಥವಾ ನೀರಿನ ಮೂಲ ಇಲ್ಲದ ಪ್ರದೇಶಗಳಲ್ಲಿ ಹೂವಿನ ತ್ಯಾಜ್ಯವನ್ನು ಸುಮ್ಮನೆ ಬೀದಿಗಳಲ್ಲಿ ರಾಶಿಯಾಗಿ ಎಸೆಯಲಾಗುತ್ತದೆ. ಇದು ಹಲವಾರು ರೀತಿಯ ಮಾಲಿನ್ಯಕ್ಕೆ ಕಾರಣವಾಗುತ್ತದೆ.

ಕಳೆದ ಕೆಲ ವರ್ಷಗಳಿಂದ ಭಾರತದ ವಿವಿಧ ಭಾಗಗಳ ಉದ್ಯಮಿಗಳು ಈ ತ್ಯಜಿಸಿದ ಹೂವುಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸುವ ಮೂಲಕ ಅವುಗಳನ್ನು ಸಾವಯವ ಗೊಬ್ಬರ ಮತ್ತು ಹೆಚ್ಚು ಮೌಲ್ಯಯುತವಾದ ಸಾಬೂನುಗಳು, ಮೇಣದ ಬತ್ತಿಗಳು, ಮಡಕೆಗಳು, ಫೋಟೋಫ್ರೇಮ್​ಗಳು, ಧೂಪದ್ರವ್ಯ ಕಡ್ಡಿಗಳು, ಗ್ರೀಟಿಂಗ್ ಕಾರ್ಡ್​ಗಳು, ಸುಗಂಧ ದ್ರವ್ಯಗಳು, ಕೈಯಿಂದ ತಯಾರಿಸಿದ ಕಾಗದ, ರೋಸ್ ವಾಟರ್, ರೋಸ್ ಆಯಿಲ್ ಮುಂತಾದ ಉಪಯುಕ್ತ ಉತ್ಪನ್ನಗಳಾಗಿ ಪರಿವರ್ತಿಸುವ ಮೂಲಕ ಮಾಲಿನ್ಯ ಕಡಿಮೆ ಮಾಡುವ ಯತ್ನಕ್ಕೆ ಕೈಜೋಡಿಸಿದ್ದಾರೆ.

ಹೂವಿನ ಮರು ಬಳಕೆ ಹೇಗೆ?: ಒಣಗಿದ ಹೂವುಗಳ ಬಳಕೆಯಾಗದ ಭಾಗಗಳನ್ನು ಮಿಶ್ರಗೊಬ್ಬರಗಳನ್ನು ತಯಾರಿಸಲು ಬಳಸಬಹುದು. ಮಹುವಾ ಹೂವುಗಳ ಸಾರವನ್ನು ಆಹಾರ ಉದ್ಯಮಗಳಲ್ಲಿ ಜಾಮ್, ಜೆಲ್ಲಿ, ಬಿಸ್ಕತ್ತು ಮತ್ತು ಇತರ ಆಹಾರ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ. ಗುಲಾಬಿ, ಮಲ್ಲಿಗೆ, ಕ್ರಿಸಾಂಥೆಮಮ್ ಮುಂತಾದ ಹೂವಿನ ದಳಗಳು ಉತ್ಕರ್ಷಣ ನಿರೋಧಕ ರುಚಿಗಳಿಂದ ಸಮೃದ್ಧವಾಗಿವೆ.

ಹೂವಿನ ಮರುಬಳಕೆಯು ಜಲಮೂಲಗಳನ್ನು ಮಾಲಿನ್ಯದಿಂದ ಮುಕ್ತಗೊಳಿಸುವುದಲ್ಲದೇ, ಒಣಗಿದ ಹೂವುಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಉದ್ಯೋಗಾವಕಾಶವನ್ನು ಒದಗಿಸುತ್ತದೆ. ತಿನ್ನಬಹುದಾದ ಒಣಗಿದ ಹೂವುಗಳು ಕೇಕ್ ಮತ್ತು ಇತರ ಸಿಹಿತಿಂಡಿಗಳಲ್ಲಿ ಬಳಸಬಹುದು. ಅನೇಕ ಒಣ ಹೂವುಗಳನ್ನು ಗಿಡಮೂಲಿಕೆ ಚಹಾಗಳನ್ನು ತಯಾರಿಸಲು ಬಳಸಲಾಗುತ್ತದೆ. ಒಣ ಹೂಗಳು ದೀರ್ಘಕಾಲ ಬಾಳಿಕೆ ಬರುತ್ತವೆ ಮತ್ತು ತಾಜಾ ಹೂಗಳಿಗೆ ಹೋಲಿಸಿದರೆ ನಿರ್ವಹಿಸಲು ಸುಲಭ ಮತ್ತು ಅಗ್ಗವಾಗಿವೆ.

ಒಣಗಿದ ಹೂವಿನ ವ್ಯಾಪಾರದ ಒಟ್ಟು ಲಾಭಾಂಶವು ಸಾಮಾನ್ಯವಾಗಿ ಸುಮಾರು 65% ರಷ್ಟಿದೆ. ಹೀಗಾಗಿ ಈ ಉದ್ಯಮದಲ್ಲಿ ಹೊಸ ಬಂಡವಾಳ ಹೂಡುವುದು ಮತ್ತು ಲಾಭದಾಯಕತೆ ಕಾಪಾಡಿಕೊಳ್ಳುವುದು ಸವಾಲಾಗಿದೆ. ಹೂವಿನ ತ್ಯಾಜ್ಯಗಳು ಜೈವಿಕ ಹೀರಿಕೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರ ಹೊಂದಿವೆ ಮತ್ತು ತ್ಯಾಜ್ಯ ನೀರು ಮತ್ತು ಇತರ ಕೈಗಾರಿಕಾ ತ್ಯಾಜ್ಯಗಳನ್ನು ಸಂಸ್ಕರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಒಣ ಹೂವುಗಳು ವಿಶೇಷವಾಗಿ ನಿರುದ್ಯೋಗಿ ಯುವಕರು, ಗೃಹಿಣಿಯರು ಮತ್ತು ಗ್ರಾಮೀಣ ಮಹಿಳೆಯರಿಗೆ ಉದ್ಯೋಗವಕಾಶ ಸೃಷ್ಟಿಸಲು ವ್ಯಾಪಕ ಅವಕಾಶ ನೀಡಬಹುದು.

(ಲೇಖನ : ಡಾ. ಗದ್ದೆಜ್ಯೋತಿ, ವಿಜ್ಞಾನಿ (ತೋಟಗಾರಿಕೆ ವಿಭಾಗ), ತೋಟಗಾರಿಕಾ ಸಂಶೋಧನಾ ಕೇಂದ್ರ, ಕೊಂಡಮಲ್ಲೇಪಲ್ಲಿ, ನಲ್ಗೊಂಡ (ಜಿಲ್ಲೆ) ಮತ್ತು ಕೊಂಡ ಲಕ್ಷ್ಮಣ್, ತೆಲಂಗಾಣ ರಾಜ್ಯ ತೋಟಗಾರಿಕೆ ವಿಶ್ವವಿದ್ಯಾಲಯ.)

ಇದನ್ನೂ ಓದಿ: AIನಿಂದ ಬದಲಿಸಲಾದ/ಸೃಷ್ಟಿಸಲಾದ ವಿಡಿಯೋ ತೆಗೆದುಹಾಕಲಿದೆ ಯೂಟ್ಯೂಬ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.