ETV Bharat / international

ಪಾಕಿಸ್ತಾನದ ಆರ್ಥಿಕತೆಗೆ ಮತ್ತೊಂದು ಹೊಡೆತ: ತಲಾದಾಯ 1,399 ಡಾಲರ್​ಗೆ ಇಳಿಕೆ

author img

By

Published : Apr 16, 2023, 2:53 PM IST

ಈಗಾಗಲೇ ವಿಪರೀತ ಹಣಕಾಸು ಬಿಕ್ಕಟ್ಟಿನಿಂದ ನರಳುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ಎದುರಾಗಿದೆ. ದೇಶದ ಜಿಡಿಪಿ ತಲಾದಾಯದಲ್ಲಿ ಕುಸಿತ ಉಂಟಾಗಲಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.

World Bank estimates decline in Pakistan's GDP per capita income to USD 1,399
World Bank estimates decline in Pakistan's GDP per capita income to USD 1,399

ಇಸ್ಲಾಮಾಬಾದ್ (ಪಾಕಿಸ್ತಾನ) : ಪ್ರಸಕ್ತ ವರ್ಷದಲ್ಲಿ ಪಾಕಿಸ್ತಾನದ ಜಿಡಿಪಿ ತಲಾದಾಯ ದೊಡ್ಡಮಟ್ಟದಲ್ಲಿ ಕುಸಿತವಾಗಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. 2021-22 ರಲ್ಲಿ ಇದ್ದ 1,613.8 ಡಾಲರ್ ತಲಾದಾಯ 2022-23 ರಲ್ಲಿ 1,399.1 ಡಾಲರ್​ಗಳಿಗೆ ಕುಸಿಯಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. 'ಪಾಕಿಸ್ತಾನ ಮ್ಯಾಕ್ರೋ ಪಾವರ್ಟಿ ಔಟ್‌ಲುಕ್: ಏಪ್ರಿಲ್ 2023' ಎಂಬ ತನ್ನ ವರದಿಯಲ್ಲಿ, 2021-22ರಲ್ಲಿ ಇದ್ದ ಶೇಕಡಾ 4.2ಕ್ಕೆ ಹೋಲಿಸಿದರೆ 2022-23ರಲ್ಲಿ ಜಿಡಿಪಿ ತಲಾ ಬೆಳವಣಿಗೆಯು ಶೇಕಡಾ ಮೈನಸ್​ 1.5 ಆಗಿರಲಿದೆ ಎಂದು ವಿಶ್ವಬ್ಯಾಂಕ್ ಅಂದಾಜು ನೀಡಿದೆ. ವಿಶ್ವ ಬ್ಯಾಂಕ್ ಪಾಕಿಸ್ತಾನದ ಜಿಡಿಪಿ ಬೆಳವಣಿಗೆ ಮುನ್ಸೂಚನೆಯನ್ನು ಶೇಕಡಾ 0.4 ಕ್ಕೆ ಕಡಿತಗೊಳಿಸಿದೆ.

ಪಾಕಿಸ್ತಾನದಲ್ಲಿ ನಿರುದ್ಯೋಗ ದರವು 2022-23 ರಲ್ಲಿ ಶೇಕಡಾ 10.2ಕ್ಕೆ ಏರಲಿದೆ. ಇದು 2021-22 ರಲ್ಲಿ ಶೇಕಡಾ 10.1 ಕ್ಕೆ ಆಗಿತ್ತು. ದುರ್ಬಲ ಕಾರ್ಮಿಕ ಮಾರುಕಟ್ಟೆಗಳು ಮತ್ತು ಹೆಚ್ಚಿನ ಹಣದುಬ್ಬರದಿಂದ ಬಡತನ ಹೆಚ್ಚಾಗಲಿದೆ. ಸಾಮಾಜಿಕ ಕ್ಷೇತ್ರಕ್ಕಾಗಿ ತುಂಬಾ ಕಡಿಮೆ ಪ್ರಮಾಣದಲ್ಲಿ ವೆಚ್ಚ ಮಾಡುತ್ತಿರುವುದರಿಂದ ಕಡಿಮೆ-ಮಧ್ಯಮ-ಆದಾಯದ ಬಡತನದ ದರವು ಹಣಕಾಸು ವರ್ಷ 2023 ರಲ್ಲಿ ಶೇಕಡಾ 37.2 ಕ್ಕೆ ಏರುವ ನಿರೀಕ್ಷೆಯಿದೆ. ಬಡ ಕುಟುಂಬಗಳು ಕೃಷಿ ಮತ್ತು ಸಣ್ಣ ಪ್ರಮಾಣದ ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಯ ಮೇಲೆ ಅವಲಂಬಿತವಾಗಿವೆ. ಈ ವರ್ಗದ ಜನತೆ ಆರ್ಥಿಕ ಬಿಕ್ಕಟ್ಟು ಮತ್ತು ಹವಾಮಾನ ಬದಲಾವಣೆಗಳಿಂದ ಅತಿ ಹೆಚ್ಚು ಬಾಧಿತರಾಗಲಿದ್ದಾರೆ.

ಒಟ್ಟು ಹೂಡಿಕೆ 2021-22 ರಲ್ಲಿದ್ದ ಶೇಕಡಾ 13.3ಕ್ಕೆ ಹೋಲಿಸಿದರೆ 2022-23 ರಲ್ಲಿ ಒಟ್ಟು ಹೂಡಿಕೆಯು ಶೇಕಡಾ 10.6 ಕ್ಕೆ ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಒಟ್ಟು ಸಾರ್ವಜನಿಕ ವಲಯದ ಹೂಡಿಕೆಯು 2021-22ರಲ್ಲಿದ್ದ ಶೇಕಡಾ 3.4ಕ್ಕೆ ಹೋಲಿಸಿದರೆ 2022-23ರಲ್ಲಿ ಶೇಕಡಾ 2.8ಕ್ಕೆ ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಏತನ್ಮಧ್ಯೆ, 2021-22ರಲ್ಲಿನ ಶೇಕಡಾ 10ಕ್ಕೆ ಹೋಲಿಸಿದರೆ 2022-23ರಲ್ಲಿ ಖಾಸಗಿ ಬಳಕೆಯ ಬೆಳವಣಿಗೆಯು ಶೇಕಡಾ 1.3ಕ್ಕೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ. ವರದಿಯ ಪ್ರಕಾರ, 2021-22ರಲ್ಲಿದ್ದ ಪಾಕಿಸ್ತಾನದ ಆದಾಯವು ಶೇಕಡಾ 12.1ಕ್ಕೆ ಹೋಲಿಸಿದರೆ 2022-23ರಲ್ಲಿ ಜಿಡಿಪಿಯ ಶೇಕಡಾ 10.9 ಕ್ಕೆ ಇಳಿಯುತ್ತದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ.

ವಿಶ್ವ ಬ್ಯಾಂಕ್ ಪ್ರಕಾರ, ಪಾಕಿಸ್ತಾನದ ಆರ್ಥಿಕತೆಯು ವಿದೇಶಿ ಮೀಸಲು ಕೊರತೆ ಮತ್ತು ಹೆಚ್ಚಿನ ಹಣದುಬ್ಬರದಿಂದ ಒತ್ತಡದಲ್ಲಿದೆ. ನೀತಿ ನಿರ್ಬಂಧಗಳು, ಪ್ರವಾಹ ಪರಿಣಾಮಗಳು, ಆಮದು ನಿಯಂತ್ರಣಗಳು, ಹೆಚ್ಚಿನ ಸಾಲ, ಇಂಧನ ವೆಚ್ಚಗಳು, ಕಡಿಮೆ ವಿಶ್ವಾಸ ಮತ್ತು ರಾಜಕೀಯ ಅನಿಶ್ಚಿತತೆಯ ಕಾರಣಗಳಿಂದ ಚಟುವಟಿಕೆಯು ಕಡಿಮೆಯಾಗಿದೆ. ವರದಿಯ ಪ್ರಕಾರ, ಕೆಲವು ಯೋಜಿತ ಚೇತರಿಕೆಯ ಹೊರತಾಗಿಯೂ ಮಧ್ಯಮ ಅವಧಿಯಲ್ಲಿ ಬೆಳವಣಿಗೆಯು ಸಾಮರ್ಥ್ಯಕ್ಕಿಂತ ಕೆಳಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಏತನ್ಮಧ್ಯೆ, ಹೆಚ್ಚಿನ ಇಂಧನ ಮತ್ತು ಆಹಾರದ ಬೆಲೆಗಳು ಮತ್ತು ದುರ್ಬಲ ರೂಪಾಯಿಯಿಂದಾಗಿ 2023 ರ ಆರ್ಥಿಕ ವರ್ಷದಲ್ಲಿ ಪಾಕಿಸ್ತಾನದ ಹಣದುಬ್ಬರವು ಶೇಕಡಾ 29.5 ಕ್ಕೆ ಮತ್ತಷ್ಟು ಏರಿಕೆಯಾಗಲಿದೆ ಎಂದು ವಿಶ್ವ ಬ್ಯಾಂಕ್ ಎಚ್ಚರಿಸಿದೆ.

ಇದನ್ನೂ ಓದಿ : ಸುಡಾನ್​ನಲ್ಲಿ ಸೇನಾಪಡೆಗಳ ಘರ್ಷಣೆ: ಓರ್ವ ಭಾರತೀಯ ಸೇರಿ 56 ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.