ETV Bharat / international

ವಿಮಾನದಲ್ಲಿನ ತಾಂತ್ರಿಕ ದೋಷ ನಿವಾರಣೆ; ಇಂದು ಸ್ವದೇಶಕ್ಕೆ ಮರಳಲಿದ್ದಾರೆ ಕೆನಡಾ ಪ್ರಧಾನಿ ಟ್ರುಡೊ

author img

By ETV Bharat Karnataka Team

Published : Sep 12, 2023, 4:02 PM IST

ಕೆನಡಾ ಪ್ರಧಾನಿ ಇಂದು ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಕೆನಡಾದ ಪ್ರಧಾನ ಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

Justin Trudeau expected to depart for Canada today
Justin Trudeau expected to depart for Canada today

ನವದೆಹಲಿ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಮತ್ತು ಅವರ ನಿಯೋಗವು ಮಂಗಳವಾರ ಮಧ್ಯಾಹ್ನ ಸ್ವದೇಶಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆನಡಾದ ಪ್ರಧಾನ ಮಂತ್ರಿ ಕಚೇರಿಯ ಪತ್ರಿಕಾ ಕಾರ್ಯದರ್ಶಿ ಮೊಹಮ್ಮದ್ ಹುಸೇನ್ ಮಾಧ್ಯಮವೊಂದಕ್ಕೆ ಈ ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲಾಗಿದೆ ಮತ್ತು ಈಗ ವಿಮಾನ ಮತ್ತೆ ಹಾರಾಟ ನಡೆಸಬಹುದಾಗಿದೆ. ಕೆನಡಾದ ನಿಯೋಗ ಈ ವಿಮಾನದಲ್ಲಿ ಇಂದು ಮಧ್ಯಾಹ್ನ ಹೊರಡುವ ನಿರೀಕ್ಷೆಯಿದೆ ಎಂದು ಹುಸೇನ್ ತಿಳಿಸಿದರು.

ಜಿ 20 ಶೃಂಗಸಭೆಗಾಗಿ ಶುಕ್ರವಾರ ಭಾರತಕ್ಕೆ ಆಗಮಿಸಿದ ಕೆನಡಾದ ಪ್ರಧಾನಿ, ತಮ್ಮ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ನಂತರ ಸ್ವದೇಶಕ್ಕೆ ಹೊರಡುವುದು ವಿಳಂಬವಾಗಿದೆ. ಟ್ರುಡೊ ಅವರು ತಮ್ಮ ಮಗ ಕ್ಸೇವಿಯರ್ ಮತ್ತು ಕೆನಡಾದ ನಿಯೋಗದೊಂದಿಗೆ ಭಾನುವಾರ ರಾತ್ರಿ ಹೊರಡಬೇಕಿತ್ತು. ಆದರೆ, ವಿಮಾನದಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಅವರಿನ್ನೂ ನವದೆಹಲಿಯಲ್ಲೇ ಇದ್ದಾರೆ.

ಟ್ರುಡೊ ಅವರನ್ನು ಕರೆದೊಯ್ಯಲು ಕಳುಹಿಸಲಾದ ಬದಲಿ ವಿಮಾನವನ್ನು ಇಂಗ್ಲೆಂಡ್​ಗೆ ತಿರುಗಿಸಲಾಗಿದೆ ಮತ್ತು ಮಂಗಳವಾರ ಮುಂಜಾನೆ ಅದು (ಲಂಡನ್ ಸಮಯ) ಯುನೈಟೆಡ್​ ಕಿಂಗ್ಡಮ್​​​ನಿಂದ ಹೊರಡಲಿದೆ ಎಂದು ಕೆನಡಾದ ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಟ್ರುಡೊ ಸದ್ಯ ನವದೆಹಲಿಯಲ್ಲಿ ತಾವಿರುವ ಹೋಟೆಲ್​ನಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಜಸ್ಟಿನ್ ಟ್ರುಡೊ ಮತ್ತು ಕೆನಡಾದ ನಿಯೋಗವನ್ನು ಕರೆದೊಯ್ಯಲು ರಾಯಲ್ ಕೆನಡಿಯನ್ ವಾಯುಪಡೆ ಭಾನುವಾರ ರಾತ್ರಿ ಸಿಎಫ್​​ಟಿ ಟ್ರೆಂಟನ್​ನಿಂದ ಸಿಸಿ -150 ಪೊಲಾರಿಸ್ ಅನ್ನು ಭಾರತಕ್ಕೆ ಕಳುಹಿಸಿದೆ ಎಂದು ವರದಿಯಾಗಿತ್ತು. ಮಾಧ್ಯಮ ವರದಿಯ ಪ್ರಕಾರ, ತಪಾಸಣೆಯ ಸಮಯದಲ್ಲಿ 36 ವರ್ಷ ಹಳೆಯ ಸಿಸಿ -150 ಪೊಲಾರಿಸ್​ ವಿಮಾನದಲ್ಲಿ ತಾಂತ್ರಿಕ ದೋಷವಿರುವುದು ಪತ್ತೆಯಾಗಿತ್ತು. ಪೊಲಾರಿಸ್ ವಿಮಾನದಲ್ಲಿ ದೋಷ ಕಂಡು ಬಂದಿರುವುದು ಇದೇ ಮೊದಲ ಸಲವಲ್ಲ. 2016ರಲ್ಲಿಯೂ ಟ್ರುಡೊ ಅವರು ಪ್ರಯಾಣಿಸುತ್ತಿರುವ ಸಮಯದಲ್ಲಿ ಈ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.

ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಪ್ರಧಾನಿ ಟ್ರುಡೊ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ, ಭಾರತ-ಕೆನಡಾ ಸಂಬಂಧಗಳು ಪ್ರಜಾಪ್ರಭುತ್ವ ಮೌಲ್ಯಗಳು, ಕಾನೂನಿನ ನಿಯಮಕ್ಕೆ ಗೌರವ ಮತ್ತು ಜನರ ನಡುವಿನ ಬಲವಾದ ಸಂಬಂಧಗಳಲ್ಲಿ ನೆಲೆಗೊಂಡಿವೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. (ಎಎನ್ಐ)

ಇದನ್ನೂ ಓದಿ : 9/11 ದಾಳಿಗೆ 22 ವರ್ಷ: ಇನ್ನೂ ಪತ್ತೆಯಾಗದ ಸಾವಿರಾರು ಮೃತರ ಗುರುತು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.