ETV Bharat / international

ಜಪಾನ್​, ದಕ್ಷಿಣ ಕೊರಿಯಾ ಕಡೆಗೆ ಕ್ಷಿಪಣಿ ಹಾರಿಬಿಟ್ಟ ಉತ್ತರ ಕೊರಿಯಾ

author img

By

Published : Apr 13, 2023, 9:42 AM IST

ಕ್ಷಿಪಣಿ ಹಾರಿಬಿಟ್ಟ ಉತ್ತರ ಕೊರಿಯಾ
ಕ್ಷಿಪಣಿ ಹಾರಿಬಿಟ್ಟ ಉತ್ತರ ಕೊರಿಯಾ

ಉತ್ತರ ಕೊರಿಯಾವು ಮತ್ತೊಂದು ಕ್ಷಿಪಣಿ ಪ್ರಯೋಗ ಮಾಡಿದೆ. ಅದು ಜಪಾನ್​ ಮತ್ತು ದಕ್ಷಿಣ ಕೊರಿಯಾದ ಮಧ್ಯೆ ಅಪ್ಪಳಿಸಿದೆ. ಕೊರಿಯಾ ಈವರೆಗೂ 30 ಕ್ಕೂ ಅಧಿಕ ಕ್ಷಿಪಣಿಗಳನ್ನು ಹಾರಿಬಿಟ್ಟಿದೆ.

ಸಿಯೋಲ್ (ದಕ್ಷಿಣ ಕೊರಿಯಾ): ಅಮೆರಿಕದ ಜೊತೆ ದಕ್ಷಿಣ ಕೊರಿಯಾ ಮಿಲಿಟರಿ ಅಭ್ಯಾಸ ನಡೆಸಿದ ಬಳಿಕ ಮಿಸೈಲ್​ ದಾಳಿ ಹೆಚ್ಚಿಸಿರುವ ಉತ್ತರ ಕೊರಿಯಾ ಮತ್ತೊಂದು ಖಂಡಾಂತರ ಕ್ಷಿಪಣಿ ಉಡಾಯಿಸಿದೆ. ಅದು ಜಪಾನ್ ಮತ್ತು ದಕ್ಷಿಣ ಕೊರಿಯಾದ ಸಮುದ್ರದ ಮಧ್ಯೆ ಬಿದ್ದಿದೆ. ಇದು ಉಭಯ ರಾಷ್ಟ್ರಗಳ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಿದೆ. ಕೊರಿಯಾದ ನಡೆಯನ್ನು ಜಪಾನ್​ ಖಂಡಿಸಿದ್ದು, ತನ್ನ ನಾಗರಿಕರಿಗೆ ಎಚ್ಚರಿಕೆಯಿಂದಿರಲು ಸೂಚಿಸಿತ್ತು.

ಉತ್ತರ ಕೊರಿಯಾದ ಕ್ಷಿಪಣಿಯು ರಾಜಧಾನಿ ಪೊಂಗ್ಯಾಂಗ್ ಬಳಿಯಿಂದ ಉಡಾವಣೆಗೊಂಡಿದ್ದು, ಅದು ಕೊರಿಯನ್ ಪರ್ಯಾಯ ದ್ವೀಪ ಮತ್ತು ಜಪಾನ್ ನಡುವಿನ ಸಮುದ್ರದಲ್ಲಿ ಬಿದ್ದಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ. ಆದರೆ, ಕ್ಷಿಪಣಿ ಎಷ್ಟು ದೂರ ಹಾರಿ ಬಿದ್ದಿದೆ ಎಂಬುದು ಗೊತ್ತಾಗಿಲ್ಲ. ಇದಾದ ಬಳಿಕ ದಕ್ಷಿಣ ಕೊರಿಯಾದ ಸೇನೆಯು ಗಡಿಯಲ್ಲಿ ತನ್ನ ಕಣ್ಗಾವಲು ಪಡೆಯನ್ನು ಹೆಚ್ಚಿಸಿದೆ.

ಕ್ಷಿಪಣಿ ಜಪಾನ್​ ಸಮುದ್ರ ಗಡಿಯಲ್ಲಿ ಬಿದ್ದಿದೆ ಎಂದು ತಿಳಿದ ಬಳಿಕ ಸುತ್ತಲಿನ ಜನರು ಎಚ್ಚರಿಕೆ ವಹಿಸಲು ಸರ್ಕಾರ ಹೇಳಿದೆ. ಇದಾದ ನಂತರ ಕ್ಷಿಪಣಿ ಬಿದ್ದ ಸ್ಥಳವು ದೇಶದ ಗಡಿಭಾಗಕ್ಕೆ ಹೊಂದಿಕೊಂಡಿಲ್ಲ ಎಂದು ಗೊತ್ತಾದ ಬಳಿಕ ಸರ್ಕಾರ ನೀಡಿದ ಆದೇಶವನ್ನು ವಾಪಸ್​ ಪಡೆದಿದೆ.

ಕಳೆದ ಅಕ್ಟೋಬರ್‌ನಲ್ಲಿ ಉತ್ತರ ಕೊರಿಯಾದ ಮಧ್ಯಂತರ ಶ್ರೇಣಿಯ ಕ್ಷಿಪಣಿಯು ಜಪಾನ್‌ನ ಗಡಿ ಭಾಗದಲ್ಲಿ ಬಿದ್ದಿತ್ತು. ಇದರಿಂದ ಜಪಾನ್​ ಸರ್ಕಾರ ಈಶಾನ್ಯ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಮತ್ತು ರೈಲು ಸಂಚಾರವನ್ನು ನಿಲ್ಲಿಸಲು ಸೂಚಿಸಿತ್ತು. ಆದರೆ ಯಾವುದೇ ಹಾನಿಗಳು ಸಂಭವಿಸಿದ ಬಗ್ಗೆ ವರದಿಯಾಗಿರಲಿಲ್ಲ.

ಇಂದು ಉಡಾವಣೆಯಾದ ಕ್ಷಿಪಣಿಯು ಉತ್ತರ ಕೊರಿಯಾ ನಡೆಸಿದ ಶಸ್ತ್ರಾಸ್ತ್ರಗಳ ಪರೀಕ್ಷೆಗಳಲ್ಲಿ ಹೊಸದಾಗಿದೆ. ಅಧ್ಯಕ್ಷ ಕಿಮ್ ಜಾಂಗ್ ಉನ್ ತನ್ನ ಪರಮಾಣು ಶಸ್ತ್ರಾಗಾರವನ್ನು ಹೆಚ್ಚು ಪ್ರಾಯೋಗಿಕ ಮತ್ತು ಆಕ್ರಮಣಕಾರಿಯಾಗಿ ಸನ್ನದ್ಧಗೊಳಿಸಲು ಸೂಚಿಸಿದ ಬೆನ್ನಲ್ಲೇ ಕ್ಷಿಪಣಿ ಉಡಾವಣೆಗಳು ನಡೆಯುತ್ತಿವೆ.

ಈ ವರ್ಷದ ಆರಂಭದಲ್ಲಿ ದಕ್ಷಿಣ ಕೊರಿಯಾ ಮತ್ತು ಅಮೆರಿಕ ಜಂಟಿಯಾಗಿ ಮಿಲಿಟರಿ ಅಭ್ಯಾಸ ನಡೆಸಿದ್ದವು. ಇದು ಉತ್ತರ ಕೊರಿಯಾದ ಕಣ್ಣನ್ನು ಕೆಂಪಾಗಿಸಿದೆ. ಇದಾದ ಬಳಿಕ ಕ್ಷಿಪಣಿಗಳ ಪರೀಕ್ಷೆ ಹೆಚ್ಚಿಸಿರುವ ಕಿಮ್​ ಜಾಂಗ್​ ಉನ್​ ಸರ್ಕಾರ ಈವರೆಗೂ ಸುಮಾರು 30 ಮಿಸೈಲ್​ಗಳನ್ನು ಉಡಾಯಿಸಿದೆ. ಇದನ್ನು ಆಕ್ರಮಣಕ್ಕೆ ಪೂರ್ವಾಭ್ಯಾಸವೆಂದು ಪರಿಗಣಿಸಲಾಗಿದೆ. ಗಡಿಯಲ್ಲಿ ಉಪಟಳ ಹೆಚ್ಚಿದ ಕಾರಣ ದಕ್ಷಿಣ ಕೊರಿಯಾ ಮತ್ತು ಅಮೆರಿಕ ಸೇನಾಪಡೆಗಳು ಹೆಚ್ಚುತ್ತಿರುವ ಪರಮಾಣು ಮತ್ತು ಕ್ಷಿಪಣಿ ಬೆದರಿಕೆಗಳಿಗೆ ದಿಟ್ಟ ಪ್ರತಿಕ್ರಿಯೆ ನೀಡಲು ವ್ಯವಸ್ಥೆ ಮಾಡಿಕೊಳ್ಳುತ್ತಿವೆ.

ಕಳೆದ ತಿಂಗಳು 2 ಕ್ಷಿಪಣಿ ಪರೀಕ್ಷೆ: ಕಳೆದ ತಿಂಗಳು ಮಾರ್ಚ್​ 27 ರಂದು ಉತ್ತರ ಕೊರಿಯಾ 2 ಅಲ್ಪ ಶ್ರೇಣಿಯ ಮಿಸೈಲ್​ಗಳನ್ನು ಹಾರಿಸಿತ್ತು. ಜೆಜು ದ್ವೀಪದ ದಕ್ಷಿಣದ ಸಮುದ್ರದಲ್ಲಿ ಯುಎಸ್ ವಿಮಾನವಾಹಕ ನೌಕೆಯು ದಕ್ಷಿಣ ಕೊರಿಯಾದೊಂದಿಗೆ ಜಂಟಿ ಸಮರಾಭ್ಯಾಸವನ್ನು ನಡೆಸುವ ಮುನ್ನ ಅದು ಕ್ಷಿಪಣಿಗಳನ್ನು ಉಡಾಯಿಸಿತ್ತು.

ಉತ್ತರ ಕೊರಿಯಾದ ಪೂರ್ವ ಸಮುದ್ರದ ಕಡೆಗೆ ಎರಡು ಅಲ್ಪ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಲಾದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಉತ್ತರ ಹ್ವಾಂಗೇ ಪ್ರಾಂತ್ಯದ ಚುಂಗ್ವಾ ಕೌಂಟಿ ಪ್ರದೇಶದಿಂದ ಕ್ಷಿಪಣಿ ಉಡಾವಣೆಯಾಗಿದ್ದನ್ನು, ಪತ್ತೆ ಮಾಡಿರುವುದಾಗಿ ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ (ಜೆಎಸ್‌ಸಿ) ಹೇಳಿತ್ತು. ಕ್ಷಿಪಣಿಗಳು 370 ಕಿ.ಮೀ ದೂರ ಕ್ರಮಿಸಿ ಸಮುದ್ರಕ್ಕೆ ಅಪ್ಪಳಿಸಿದ್ದವು.

ಓದಿ: ಮುಗಿಯದ ಇಸ್ರೇಲ್​-ಸಿರಿಯಾ ವಾರ್​; ಇಂದು ಮತ್ತೆ ಸಿರಿಯಾ ಮೇಲೆ ಪ್ರತಿ​ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.