ETV Bharat / international

ಪೆಲೋಸಿ ಭೇಟಿಗೆ ಚೀನಾ ಪ್ರಬಲ ವಿರೋಧ: ತೈವಾನ್‌ನ ಸುತ್ತ 'ಮಿಲಿಟರಿ' ಕ್ರಮಕ್ಕೆ ಡ್ರ್ಯಾಗನ್​ ಸನ್ನದ್ಧ

author img

By

Published : Aug 3, 2022, 7:14 AM IST

China to begin military drills around Taiwan
ತೈವಾನ್‌ನ ಸುತ್ತ ಚೀನಾ ಮಿಲಿಟರಿ ಕಾರ್ಯಾಚರಣೆ

ಚೀನಾದ ಎಚ್ಚರಿಕೆಯ ನಡುವೆಯೂ ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಮಂಗಳವಾರ ರಾತ್ರಿ ತೈವಾನ್‌ಗೆ ಬಂದಿಳಿದಿದ್ದಾರೆ. ಇದೇ ವೇಳೆ, ತೈವಾನ್‌ ಜಲಸಂಧಿಯ ಸಮೀಪ ಚೀನಾದದ ಯುದ್ಧ ವಿಮಾನಗಳು ಹಾರಾಟ ನಡೆಸಿರುವುದಾಗಿ ವರದಿಯಾಗಿದೆ

ಬೀಜಿಂಗ್: ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಗೆ ಪ್ರತಿಕ್ರಿಯೆಯಾಗಿ ಉದ್ದೇಶಿತ ಮಿಲಿಟರಿ ಕ್ರಮಗಳನ್ನು ಪ್ರಾರಂಭಿಸುವುದಾಗಿ ಚೀನಾ ಹೇಳಿದೆ. "ಚೀನಿ ಪೀಪಲ್ಸ್ ಲಿಬರೇಶನ್ ಆರ್ಮಿಯು ಹೆಚ್ಚಿನ ಎಚ್ಚರಿಕೆ ವಹಿಸಿದ್ದು, ರಾಷ್ಟ್ರೀಯ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ದೃಢವಾಗಿ ರಕ್ಷಿಸಲು, ಬಾಹ್ಯ ಹಸ್ತಕ್ಷೇಪ ಹಾಗೂ ಪ್ರತ್ಯೇಕತಾವಾದಿ ಪ್ರಯತ್ನಗಳನ್ನು ದೃಢವಾಗಿ ತಡೆಯಲು ಉದ್ದೇಶಿತ ಮಿಲಿಟರಿ ಕಾರ್ಯಾಚರಣೆಗಳ ಸರಣಿಯನ್ನು ಪ್ರಾರಂಭಿಸಲಾಗುವುದು ಎಂದು ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿಯನ್ನು ಖಂಡಿಸಿ ನೀಡಿದ ಪ್ರಕಟಣೆಯಲ್ಲಿ ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ವು ಕಿಯಾನ್ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ತೈವಾನ್‌ಗೆ ಅಮೆರಿಕದ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಬಂದಿಳಿದ ಕೆಲವೇ ನಿಮಿಷಗಳಲ್ಲಿ, ತೈವಾನ್‌ನಲ್ಲಿ ದೀರ್ಘ-ಶ್ರೇಣಿಯ ಜೀವಂತ ಮದ್ದುಗುಂಡುಗಳನ್ನು ಬಳಸುವುದು ಸೇರಿದಂತೆ ದ್ವೀಪದಾದ್ಯಂತ ಜಂಟಿ ಮಿಲಿಟರಿ ಕಾರ್ಯಾಚರಣೆಗಳ ಸರಣಿಯನ್ನು ತಕ್ಷಣವೇ ಪ್ರಾರಂಭಿಸುವುದಾಗಿ ಚೀನಾ ಹೇಳಿದೆ.

ಪೀಪಲ್ಸ್ ಲಿಬರೇಶನ್ ಆರ್ಮಿ ಈಸ್ಟರ್ನ್ ಥಿಯೇಟರ್ ಕಮಾಂಡ್‌ನ ಪ್ರಕಟಣೆಯು ಮಂಗಳವಾರ ರಾತ್ರಿಯಿಂದ ಸಮುದ್ರದಲ್ಲಿ ಮತ್ತು ತೈವಾನ್ ಸುತ್ತಮುತ್ತಲಿನ ಪ್ರದೇಶ ಮಿಲಿಟರಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಚೀನಾ ಘೋಷಿಸಿದೆ. ಈಸ್ಟರ್ನ್ ಥಿಯೇಟರ್ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ಐದು ಜಂಟಿ ಕಮಾಂಡ್‌ಗಳಲ್ಲಿ ಒಂದಾಗಿದೆ. ಇದು ಚೀನಾದ ಪೂರ್ವ ಕರಾವಳಿ ಪ್ರಾಂತ್ಯಗಳಾದ ಫುಜಿಯಾನ್ ಮತ್ತು ಝೆಜಿಯಾಂಗ್‌ನ ಮೇಲೆ ಅಧಿಕಾರ ವ್ಯಾಪ್ತಿ ಹೊಂದಿದೆ.

ನ್ಯಾನ್ಸಿ ಪೆಲೋಸಿ ಅವರು ತಮ್ಮ ಏಷ್ಯಾ ಪ್ರವಾಸದ ವೇಳೆ ತೈವಾನ್‌ಗೆ ಭೇಟಿ ನೀಡುವುದಕ್ಕೆ, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಚೀನಾ, ಅಮೆರಿಕ 'ತಕ್ಕ ಬೆಲೆ' ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ತೈವಾನ್‌ ಸುತ್ತುವರೆದಿರುವ ಆರು ಪ್ರಮುಖ ವಲಯಗಳಲ್ಲಿ ಚೀನಾ ಸೇನೆಯು ಸಮರಾಭ್ಯಾಸ ನಡೆಸುವುದಾಗಿ ಚೀನಾ ಸೇನೆ ಹೇಳಿದೆ. ಯುದ್ಧ ಅಭ್ಯಾಸಗಳು, ತರಬೇತಿ ಚಟುವಟಿಕೆಗಳು ಹಾಗೂ ಫೈರಿಂಗ್‌ ಸಹ ನಡೆಸುವುದಾಗಿ ತಿಳಿಸಿದೆ.

ಗುರುವಾರದಿಂದ ಭಾನುವಾರದವರೆಗೂ ಈ ಚಟುವಟಿಕೆಗಳು ನಡೆಯಲಿವೆ.'ಚೀನಾ ತನ್ನ ಭೌಗೋಳಿಕ ಸಮಗ್ರತೆಯ ರಕ್ಷಣೆಗಾಗಿ ಎಲ್ಲ ಅಗತ್ಯ ಕ್ರಮಗಳನ್ನು ವಹಿಸಲಿದೆ. ಮುಂದಿನ ಎಲ್ಲ ಪರಿಣಾಮಗಳಿಗೂ ಅಮೆರಿಕ, ತೈವಾನ್‌ ಪ್ರತ್ಯೇಕತಾ ಪಡೆಗಳು ಹೊಣೆಯಾಗಿರುತ್ತವೆ' ಎಂದು ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಎಚ್ಚರಿಕೆ ಕೂಡಾ ನೀಡಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಬೆಂಬಲ ನೀಡುವ ಉದ್ದೇಶ: ತೈವಾನ್‌ಗೆ ಭೇಟಿ ನೀಡಿದ ನಂತರ ನ್ಯಾನ್ಸಿ ಪೆಲೋಸಿ ಟ್ವೀಟ್ ಮಾಡಿದ್ದಾರೆ. "ತೈವಾನ್‌ಗೆ ನಮ್ಮ ನಿಯೋಗದ ಭೇಟಿ ತೈವಾನ್‌ನ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಅಮೆರಿಕದ ಅಚಲ ಬದ್ಧತೆಯನ್ನು ಗೌರವಿಸುತ್ತದೆ. ನಮ್ಮ ಭೇಟಿ ತೈವಾನ್‌ನೊಂದಿಗೆ ಸುದೀರ್ಘ ಒಡನಾಟದ ಭಾಗವಾಗಿದೆ. 1979 ರ ತೈವಾನ್ ಸಂಬಂಧಗಳ ಕಾಯಿದೆಯನ್ನು ತಾನು ವಿರೋಧಸಿಲ್ಲ, ಪ್ರಜಾಪ್ರಭುತ್ವಕ್ಕೆ ಬೆಂಬಲ ನೀಡುವ ಉದ್ದೇಶದಿಂದ ತೈವಾನ್‌ಗೆ ಭೇಟಿ ನೀಡಿದ್ದೇನೆ ಎಂದು ನ್ಯಾನ್ಸಿ ಪೆಲೋಸಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

25 ವರ್ಷಗಳ ಬಳಿಕ ಅಮೆರಿಕದ ಉನ್ನತ ಮಟ್ಟದ ಪ್ರತಿನಿಧಿಯೊಬ್ಬರು ತೈವಾನ್‌ಗೆ ಭೇಟಿ ನೀಡಿದ್ದಾರೆ. ನ್ಯಾನ್ಸಿ ಪೆಲೋಸಿ ಅವರು ಪ್ರಯಾಣಿಸುತ್ತಿದ್ದ ಅಮೆರಿಕದ ವಿಶೇಷ ವಿಮಾನಕ್ಕೆ ತೈವಾನ್‌ ವಾಯುಪಡೆಯ ಯುದ್ಧ ವಿಮಾನಗಳು ರಕ್ಷಣೆ ಒದಗಿಸಿದವು.

ತೈವಾನ್ ಅನ್ನು ತನ್ನ ಪ್ರದೇಶದ ಭಾಗವೆಂದು ಪರಿಗಣಿಸುವ ಚೀನಾ, 25 ವರ್ಷಗಳಲ್ಲಿ ಅತ್ಯುನ್ನತ ಶ್ರೇಣಿಯ ಅಮೆರಿಕ ರಾಜತಾಂತ್ರಿಕ ಭೇಟಿಯನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಇದೆ. ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿತ್ತು. ಎಚ್ಚರಿಕೆ ನೀಡಿದ್ದರೂ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿರುವುದು ಚೀನಾ ಕಣ್ಣನ್ನು ಕೆಂಪಾಗಿಸಿದೆ.

ಎಚ್ಚರಿಕೆಗೆ ಹೆದರಲ್ಲ ಎಂದ ಅಮೆರಿಕ: ಚೀನಾ ಎಚ್ಚರಿಕೆಗೆ ಹೆದರುವುದಿಲ್ಲ ಎಂದು ಅಮೆರಿಕ ಹೇಳಿದೆ. ವಾಷಿಂಗ್ಟನ್ ಅಧಿಕೃತವಾಗಿ ತೈವಾನ್‌ನೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ. ಆದರೆ, ದ್ವೀಪವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಾಯ ಮಾಡಲು ಅಮೆರಿಕ ಕಾನೂನಿನ ಪ್ರಕಾರ ನೆರವು ನೀಡಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ತೈವಾನ್​ಗೆ ಪೆಲೋಸಿ ಭೇಟಿ - ಕೆರಳಿದ ಚೀನಾ... ಆಫ್ರಿಕಾಕ್ಕೆ ಹಾರಲಿರುವ ಅಮೆರಿಕ ವಿದೇಶಾಂಗ ಸಚಿವ ಬ್ಲಿಂಕೆನ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.