ETV Bharat / international

ಪಾಕ್ ಉಗ್ರರಿಗೆ ಚೀನಾ ಬೆಂಬಲ: ವಿಶ್ವಸಂಸ್ಥೆ ಭಯೋತ್ಪಾದಕರ ಪಟ್ಟಿಗೆ ತಡೆ

author img

By

Published : Aug 11, 2022, 12:38 PM IST

ಉಗ್ರವಾದಿ ಸಂಘಟನೆ ಜೈಶ್ಎ ಮೊಹಮ್ಮದ್ ಮುಖಸ್ಥನ ಸಹೋದರನೂ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿ. ಉಗ್ರ ಮಸೂದ್ ಅಜರ್ ಸಹೋದರನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಚೀನಾ ತಡೆ. ಭಾರತದ ವಿರುದ್ಧ ಚೀನಾ ಹುನ್ನಾರ

ಜೈಶ್ ಉಗ್ರ ಮಸೂದ್ ಸಹೋದರನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಪ್ರಸ್ತಾವನೆಗೆ ಚೀನಾ ತಡೆ
China blocks proposal to include Jaish militant Masood's brother in terrorist list

ವಿಶ್ವಸಂಸ್ಥೆ: ಪಾಕಿಸ್ತಾನದಲ್ಲಿ ಕುಳಿತು ವಿವಿಧ ರಾಷ್ಟ್ರಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗುತ್ತಿರುವ, ಉಗ್ರವಾದಿ ಸಂಘಟನೆ ಜೈಶ್-ಎ-ಮೊಹಮ್ಮದ್ (Jaish-e Mohammed -JEM) ಮುಖ್ಯಸ್ಥ ಮಸೂದ್ ಅಜರ್ ಸಹೋದರ ಅಬ್ದುಲ್ ರವೂಫ್ ಅಜರ್ ಈತನನ್ನು ವಿಶ್ವಸಂಸ್ಥೆಯ ಕಪ್ಪುಪಟ್ಟಿಗೆ ಸೇರಿಸುವ ಭಾರತ ಹಾಗೂ ಅಮೆರಿಕದ ಪ್ರಸ್ತಾವನೆಯನ್ನು ವಿಶ್ವಸಂಸ್ಥೆಯಲ್ಲಿ ಚೀನಾ ತಡೆ ಹಿಡಿದಿದೆ. 1974ರಲ್ಲಿ ಪಾಕಿಸ್ತಾನದಲ್ಲಿ ಜನಿಸಿರುವ ಅಬ್ದುಲ್ ರವೂಫ್ ಅಜರ್ ವಿರುದ್ಧ ಡಿಸೆಂಬರ್ 2020 ರಲ್ಲಿಯೇ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ.

ಅಜರ್ ಒಬ್ಬ ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸುವ ಹಾಗೂ ಆತನ ಆಸ್ತಿ ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ, ಪ್ರಯಾಣ ನಿರ್ಬಂಧಿಸುವ, ಶಸ್ತ್ರಾಸ್ತ್ರ ನಿರ್ಬಂಧಿಸುವ ಭಾರತ ಮತ್ತು ಅಮೆರಿಕಗಳು ಮಂಡಿಸಿದ್ದ ಪ್ರಸ್ತಾವನೆಗೆ ಬುಧವಾರ ಚೀನಾ ತಡೆ ಒಡ್ಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿಯಡಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕನನ್ನು ಕಪ್ಪುಪಟ್ಟಿಗೆ ಸೇರಿಸಲು ಅಮೆರಿಕ ಮತ್ತು ಭಾರತವು ಮಾಡಿದ ಪಟ್ಟಿಯನ್ನು ಚೀನಾ ತಡೆ ಹಿಡಿದಿರುವುದು ಎರಡು ತಿಂಗಳೊಳಗೆ ಇದು ಎರಡನೇ ಬಾರಿಯಾಗಿದೆ.

ಈ ವರ್ಷದ ಜೂನ್‌ನಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಅಲ್-ಖೈದಾ ನಿರ್ಬಂಧಗಳ ಸಮಿತಿಯ ಅಡಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಪಟ್ಟಿ ಮಾಡಲು ಭಾರತ ಮತ್ತು ಅಮೆರಿಕಗಳ ಜಂಟಿ ಪ್ರಸ್ತಾವನೆಯನ್ನು ಚೀನಾ ಕೊನೆಯ ಕ್ಷಣದಲ್ಲಿ ತಡೆಹಿಡಿದಿತ್ತು. ಮಕ್ಕಿ ಅಮೆರಿಕದಿಂದ ಘೋಷಿತನಾದ ಭಯೋತ್ಪಾದಕ ಮತ್ತು ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ, 26/11 ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನ ಸೋದರ ಮಾವ.

1267 ರ ಐಎಸ್ಐಎಲ್ ಅಡಿ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್ ಖೈದಾ ನಿರ್ಬಂಧಗಳ ಸಮಿತಿ ಅಡಿ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕ ಎಂದು ಹೆಸರಿಸಲು ನವದೆಹಲಿ ಮತ್ತು ವಾಷಿಂಗ್ಟನ್ ಜಂಟಿ ಪ್ರಸ್ತಾವನೆಯನ್ನು ಮಂಡಿಸಿದ್ದವು. ಆದರೆ, ಬೀಜಿಂಗ್ ಕೊನೆಯ ಕ್ಷಣದಲ್ಲಿ ಈ ಪ್ರಸ್ತಾಪವನ್ನು ತಡೆಹಿಡಿದಿತ್ತು. ಅಮೆರಿಕದ ಖಜಾನೆ ಇಲಾಖೆಯು ಡಿಸೆಂಬರ್ 2010 ರಲ್ಲಿ, ಜೈಶ್-ಎ ಮೊಹಮ್ಮದ್ ಹಿರಿಯ ನಾಯಕ ಅಬ್ದುಲ್ ರವೂಫ್ ಅಜರ್ ಈತ ಜೆಇಎಂ ಪರವಾಗಿ ಅಥವಾ ಅದಕ್ಕಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಘೋಷಿಸಿತ್ತು.

ಅಬ್ದುಲ್ ರವೂಫ್ ಅಜರ್ ಪಾಕಿಸ್ತಾನಿಯರನ್ನು ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರಚೋದಿಸುತ್ತಿದ್ದಾನೆ ಎಂದು ಅಮೆರಿಕ ಹೇಳಿದೆ. ಈತ 2007 ರಲ್ಲಿ ಜೈಶ್​ನ ಹಂಗಾಮಿ ಮುಖ್ಯಸ್ಥನಾಗಿ, ಭಾರತದಲ್ಲಿ ಅದರ ಅತ್ಯಂತ ಹಿರಿಯ ಕಮಾಂಡರ್‌ಗಳಲ್ಲಿ ಒಬ್ಬನಾಗಿ ಮತ್ತು ಗುಪ್ತಚರ ಸಂಯೋಜಕನಾಗಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದ. 2008 ರಲ್ಲಿ ಭಾರತದಲ್ಲಿ ಆತ್ಮಾಹುತಿ ದಾಳಿಗಳನ್ನು ನಡೆಸಲು ಅಜರ್​ನನ್ನು ನೇಮಿಸಲಾಗಿತ್ತು.

ಬೀಜಿಂಗ್ ಇತ್ತೀಚಿನ ಈ ಪ್ರಸ್ತಾವನೆಯನ್ನು ನಿರ್ಬಂಧಿಸುವ ಒಂದು ದಿನ ಮೊದಲು, ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಭದ್ರತಾ ಮಂಡಳಿಯ ಖಾಯಂ ಸದಸ್ಯ ಮತ್ತು ಮಂಡಳಿಯ ಅಧ್ಯಕ್ಷ ಚೀನಾ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ್ದರು.

ಯಾವುದೇ ಸಮರ್ಥನೆಯನ್ನು ನೀಡದೆ ಪಟ್ಟಿ ಮಾಡುವ ವಿನಂತಿಗಳನ್ನು ತಡೆಹಿಡಿಯುವ ಕ್ರಮಗಳನ್ನು ನಿಲ್ಲಿಸಬೇಕು. ಹೀಗೆ ಮಾಡುವುದರಿಂದ ನಿರ್ಬಂಧಗಳನ್ನು ವಿಧಿಸುವ ಆಡಳಿತದ ವಿಶ್ವಾಸಾರ್ಹತೆ ಸಾರ್ವಕಾಲಿಕವಾಗಿ ಕಡಿಮೆಯಾಗುತ್ತದೆ ಎಂದು ಪ್ರತಿಪಾದಿಸಿದ್ದರು.

ಇದನ್ನು ಓದಿ:ಉಕ್ರೇನ್​ ಆಹಾರ ಕೊರತೆ ನೀಗಿಸಲು ಹಲವು ದೇಶಗಳ ನೆರವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.