ETV Bharat / international

2023ರಲ್ಲಿ ಪಾಕಿಸ್ತಾನದಲ್ಲಿ 29 ಆತ್ಮಾಹುತಿ ದಾಳಿ, 329 ಸಾವು; 2014ರ ನಂತರ ಅತ್ಯಧಿಕ

author img

By ETV Bharat Karnataka Team

Published : Dec 25, 2023, 2:18 PM IST

ಪಾಕಿಸ್ತಾನದಲ್ಲಿ 2023ರಲ್ಲಿ ಅತ್ಯಧಿಕ ಆತ್ಮಾಹುತಿ ದಾಳಿಗಳು ನಡೆದಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ.

Pakistan witnesses highest number of suicide attacks since 2014
Pakistan witnesses highest number of suicide attacks since 2014

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಈ ವರ್ಷ 2014ರಿಂದೀಚೆಗೆ ಅತಿ ಹೆಚ್ಚು ಆತ್ಮಾಹುತಿ ದಾಳಿಗಳು ನಡೆದಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಪಾಕಿಸ್ತಾನ ಸಂಘರ್ಷ ಮತ್ತು ಭದ್ರತಾ ಅಧ್ಯಯನ ಸಂಸ್ಥೆ (ಪಿಐಎಸ್ಎಸ್) ಬಿಡುಗಡೆ ಮಾಡಿದ ಅಂಕಿ - ಅಂಶಗಳ ಪ್ರಕಾರ 2023 ರಲ್ಲಿ ಆತ್ಮಾಹುತಿ ದಾಳಿಗಳ ಸಂಖ್ಯೆ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗಿದೆ. ಇದು 2014 ರ ನಂತರದ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಡಾನ್ ವರದಿ ಮಾಡಿದೆ.

ಆತ್ಮಾಹುತಿ ದಾಳಿಗಳಲ್ಲಿ ಸಾವಿಗೀಡಾದವರ ಪೈಕಿ ಕನಿಷ್ಠ 48 ಪ್ರತಿಶತದಷ್ಟು ಮತ್ತು ಗಾಯಗೊಂಡವರ ಪೈಕಿ 58 ಪ್ರತಿಶತದಷ್ಟು ಜನ ಭದ್ರತಾ ಪಡೆಗಳ ಸಿಬ್ಬಂದಿಯಾಗಿದ್ದಾರೆ. ಈ ವರ್ಷ ಒಟ್ಟು 29 ಆತ್ಮಾಹುತಿ ದಾಳಿಗಳು ನಡೆದಿದ್ದು, ಇದರ ಪರಿಣಾಮವಾಗಿ 329 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 582 ಜನ ಗಾಯಗೊಂಡಿದ್ದಾರೆ.

2013ರಲ್ಲಿ ನಡೆದ 47 ಆತ್ಮಾಹುತಿ ಬಾಂಬ್ ದಾಳಿಗಳಲ್ಲಿ 683 ಮಂದಿ ಪ್ರಾಣ ಕಳೆದುಕೊಂಡ ಬಳಿಕ ಇದು ಗರಿಷ್ಠ ಸಾವಿನ ಸಂಖ್ಯೆಯಾಗಿದೆ ಎಂದು ಡಾನ್ ವರದಿ ಮಾಡಿದೆ. ಹಿಂದಿನ ವರ್ಷ 2022 ಕ್ಕೆ ಹೋಲಿಸಿದರೆ, ಆತ್ಮಾಹುತಿ ದಾಳಿಗಳ ಸಂಖ್ಯೆಯಲ್ಲಿ ಶೇಕಡಾ 93 ರಷ್ಟು ಹೆಚ್ಚಳವಾಗಿದೆ ಹಾಗೂ ಸಾವಿನ ಪ್ರಮಾಣ ಆಘಾತಕಾರಿ ಶೇಕಡಾ 226 ರಷ್ಟು ಏರಿಕೆಯಾಗಿದೆ. ಗಾಯಗೊಂಡ ವ್ಯಕ್ತಿಗಳ ಸಂಖ್ಯೆಯಲ್ಲಿ ಶೇಕಡಾ 101 ರಷ್ಟು ಏರಿಕೆಯಾಗಿದೆ ಎಂದು ವರದಿ ಬಹಿರಂಗಪಡಿಸಿದೆ.

ಇದಲ್ಲದೇ, ಒಟ್ಟು ಭಯೋತ್ಪಾದಕ ದಾಳಿಗಳ ಸಂಖ್ಯೆಯಲ್ಲಿ ಆತ್ಮಾಹುತಿ ದಾಳಿಗಳ ಪಾಲು 2022 ರಲ್ಲಿ ಶೇಕಡಾ 3.9 ರಿಂದ 2023 ರಲ್ಲಿ ಶೇಕಡಾ 4.7 ಕ್ಕೆ ಏರಿದೆ. ಇದು ಪರಿಸ್ಥಿತಿಯ ತೀವ್ರತೆಯನ್ನು ಒತ್ತಿ ಹೇಳುತ್ತದೆ.

ಪ್ರಾದೇಶಿಕವಾಗಿ ನೋಡಿದರೆ- ಖೈಬರ್ ಪಖ್ತುನಖ್ವಾ (ಕೆಪಿ)ದಲ್ಲಿ ಅತಿ ಹೆಚ್ಚು ಅಂದರೆ 23 ದಾಳಿಗಳು ನಡೆದಿವೆ. ಈ ಪ್ರದೇಶದಲ್ಲಿ ಈ ದಾಳಿಗಳಿಂದ 254 ಸಾವು ಸಂಭವಿಸಿದ್ದು, 512 ಜನ ಗಾಯಗೊಂಡಿದ್ದಾರೆ. ಕೆಪಿಯೊಳಗೆ ಹೊಸದಾಗಿ ವಿಲೀನಗೊಂಡ ಜಿಲ್ಲೆಗಳು ಅಥವಾ ಹಿಂದಿನ ಫೆಡರಲಿ ಅಡ್ಮಿನಿಸ್ಟ್ರೇಟೆಡ್ ಟ್ರೈಬಲ್ ಏರಿಯಾಸ್ (ಫಾಟಾ)ದಲ್ಲಿ 13 ಆತ್ಮಾಹುತಿ ದಾಳಿ ನಡೆದಿವೆ. ಬಲೂಚಿಸ್ತಾನದಲ್ಲಿ ನಡೆದ 5 ಆತ್ಮಾಹುತಿ ದಾಳಿಗಳಲ್ಲಿ 67 ಜನ ಸಾವಿಗೀಡಾಗಿ, 52 ಜನ ಗಾಯಗೊಂಡಿದ್ದಾರೆ. ಸಿಂಧ್ ನಲ್ಲಿ ನಡೆದ ಒಂದು ದಾಳಿಯಲ್ಲಿ ಎಂಟು ಜನ ಸಾವಿಗೀಡಾಗಿ 18 ಜನರು ಗಾಯಗೊಂಡಿದ್ದರು. (IANS)

ಇದನ್ನೂ ಓದಿ : ಹಿಂದೂ ಮಹಾಸಾಗರದಲ್ಲಿ ರಾಸಾಯನಿಕ ಟ್ಯಾಂಕರ್ ಮೇಲೆ ಇರಾನ್ ಕ್ಷಿಪಣಿ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.