ETV Bharat / international

ದ್ವೇಷ ತೀರಿಸಿಕೊಳ್ಳಲು ಟ್ರಂಪ್​​ ವಿರುದ್ಧ ದೋಷಾರೋಪಣೆ; ವಕೀಲ ವ್ಯಾನ್ ಡೆರ್ ವೀನ್ ಪ್ರತಿಪಾದನೆ

author img

By

Published : Feb 13, 2021, 8:09 PM IST

ನೀ ಎನ್ನ ಬಿಟ್ಟರು, ನಾ ನಿನ್ನ ಬಿಡೆನು ಎಂಬಂತೆ, ಅಮೆರಿಕ ಅಧ್ಯಕ್ಷ ಸ್ಥಾನ ಟ್ರಂಪ್​ರಿಂದ ಕೈ ತಪ್ಪಿದ್ದರೂ ಸಹ, ಅಧಿಕಾರದ ವೇಳೆ ಮಾಡಲಾಗಿದೆ ಎಂಬ ತಪ್ಪುಗಳಿಂದ ಟ್ರಂಪ್​ ದೋಷಾರೋಪಣಗೆ ಒಳಗಾಗಿದ್ದಾರೆ. ಆದರೆ ಇದೊಂದು ಉದ್ದೇಶ ಪೂರ್ವಕವಾಗಿ ಮಾಡಿರುವ ಕೆಲಸ, ಇದರ ಹಿಂದೆ ಡೆಮಾಕ್ರಟಿಕರ ದ್ವೇಷ, ರಾಜಕೀಯ ವೈಷಮ್ಯ ಅಡಗಿದೆ ಎಂದು ಸೆನೆಟ್​ನಲ್ಲಿ ವಕೀಲ ಮೈಕೆಲ್​​ ವ್ಯಾನ್ ಡೆರ್ ವೀನ್ ಟ್ರಂಪ್​ ಪರವಾಗಿ ಹೇಳಿಕೆ ನೀಡಿದ್ದಾರೆ.

File photo
ಸಂಗ್ರಹ ಚಿತ್ರ

ವಾಷಿಂಗ್ಟನ್ (ಅಮೆರಿಕ): ಶತಾಯ ಗತಾಯ ಪ್ರಯತ್ನದ ನಂತರವೂ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷ ಗಾದಿ ಹಿಡಿಯುವಲ್ಲಿ ವಿಫಲಾರಾಗಿರುವ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ವಾಗ್ದಂಡನೆ ಎಂಬುದು ಶನಿ ಹೆಗಲೇರಿದಂತಾಗಿದೆ. ಈ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡರೂ ಸಹ, ವಾಗ್ದಂಡನೆ ಎಂಬ ತೂಗುಗತ್ತಿ ಟ್ರಂಪ್​ ತಲೆ ಮೇಲೆ ನೇತಾಡುತ್ತಲೇ ಇದೆ.

ಜನವರಿ 6ರಂದು ಟ್ರಂಪ್​​ ಬೆಂಬಲಿಗರು ಕ್ಯಾಪಿಟಲ್​ ಕಟ್ಟಡದ ಮೇಲೆ ನಡೆಸಿದ ದಾಳಿಯೇ ಟ್ರಂಪ್​​ರನ್ನು ದೋಷಾರೋಪಣೆಗೆ ಒಳಪಡಿಸಲು ಪ್ರಮುಖ ಕಾರಣ ಎನ್ನಲಾಗಿದೆ. ಈ ಎಲ್ಲದರ ನಡುವೆ, ಡೊನಾಲ್ಡ್​​ ಟ್ರಂಪ್​ ಹಲವಾರು ಬಾರಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಹೌಸ್​ ಆಫ್​ ರೆಪ್ರಸೆಂಟೇಟಿವ್ಸ್​​ (ಅಮೆರಿಕ ಸಂಸತ್ತಿನ ಕೆಳಮನೆ) ಟ್ರಂಪ್​ ವಿರುದ್ಧ ವಾಗ್ದಂಡನೆ ನಿರ್ಣಯ ಅಂಗೀಕರಿಸಲು ಮುಂದಾಗಿದ್ದು, ಈ ವೇಳೆ ಟ್ರಂಪ್​ ಪರ ವಕೀಲ ಮೈಕೆಲ್​ ವ್ಯಾನ್ ಡೆರ್ ವೀನ್, ಟ್ರಂಪ್​ರನ್ನು ದೋಷಾರೋಪಣೆಗೆ ಒಳಪಡಿಸುವುದರಲ್ಲಿ ಯಾವುದೇ ಹುರುಳಿಲ್ಲ, ಇದು ಡೆಮಾಕ್ರಟಿಕ್​ ಪಕ್ಷ ಅವರ ಮೇಲೆ ದ್ವೇಷ ತೀರಿಸಿಕೊಳ್ಳಲು ಮಾಡುತ್ತಿರುವ ಕಾರ್ಯವಾಗಿದೆ ಎಂದು ಸೆನೆಟ್​ನಲ್ಲಿ ಹೇಳಿದ್ದಾರೆ.

ಕ್ಯಾಪಿಟಲ್​​ ಕಟ್ಟಡದ ಮೇಲಿನ ದಾಳಿಗೂ ಮುಂಚಿತವಾಗಿಯೇ ಡೆಮೊಕ್ರಾಟ್ ಪಕ್ಷದವರು ಮಾಜಿ ಅಧ್ಯಕ್ಷ ಟ್ರಂಪ್​​ ವಿರುದ್ಧ ದ್ವೇಷದ ಅಭಿಯಾನ ನಡೆಸುತ್ತಿದ್ದರು. ಸಂದರ್ಭಕ್ಕೆ ಸರಿಯಾದಂತೆ ಜನವರಿ 6ರಂದು ಅದೊಂದು ದಾಳಿ ನಡೆದಿದ್ದು, ಡೆಮೊಕ್ರಾಟ್​ಗಳು ಅಲ್ಲಿ ನಡೆದ ಸನ್ನಿವೇಶದ ಚಿತ್ರಣವನ್ನೇ ಬದಲಿಸಿದ್ದಾರೆ. ಕೆಲವೇ ಕೆಲವು ವಿಡಿಯೋ ತುಣುಕುಗಳನ್ನು ತೋರಿಸುವ ಮೂಲಕ ಡೆಮೊಕ್ರಾಟ್​​ ಪಕ್ಷವು ಟ್ರಂಪ್​ ವಿರುದ್ಧ ಆಪಪ್ರಚಾರವೆಸಗಿದೆ ಎಂದಿದ್ದಾರೆ.

ಟ್ರಂಪ್‌ ಅವರ ನೇರ, ದಿಟ್ಟ ಮಾತುಗಳು ಹಾಗೂ ಅತಿಯಾದ ವಾಕ್ಚಾತುರ್ಯ ಡೆಮಾಕ್ರಟಿಕರ ಹೊಟ್ಟೆ ಕಿಚ್ಚಿಗೆ ಕಾರಣವಾಗಿತ್ತು. ಮೊದಲಿನಿಂದಲೂ ಟ್ರಂಪ್​ ವಿರುದ್ದ ಕಿಡಿಕಾರುತ್ತಿದ್ದ ಅವರು, ಹೇಗಾದರೂ ಮಾಡಿ ಅಧ್ಯಕ್ಷ ಗಾದಿಯನ್ನು ಟ್ರಂಪ್​ರಿಂದ ಕಿತ್ತುಕೊಳ್ಳಬೇಕೆಂದು ಹೊಂಚು ಹಾಕಿದ್ದರು. ಅದಲ್ಲದೆ ದೋಷಾರೋಪಣೆ ಮೂಲಕ ಮುಂದಿನ ಚುನಾವಣೆಯಲ್ಲಿಯೂ ಸಹ ಟ್ರಂಪ್​ ಸ್ಪರ್ಧಿಸಬಾರದು ಎಂಬ ಹುನ್ನಾರ ಅವರದ್ದಾಗಿದೆ ಎಂದು ಡೆಮಾಕ್ರಟಿಕ್​ ಸದಸ್ಯರ ವಿರುದ್ದ ವಕೀಲ ಮೈಕೆಲ್​​ ವ್ಯಾನ್ ಡೆರ್ ವೀನ್ ಕಿಡಿಕಾರಿದ್ದಾರೆ.

ಅಸಂಖ್ಯಾತ ರಾಜಕಾರಣಿಗಳು ತಮ್ಮ ತತ್ವಗಳಿಗಾಗಿ ಹೋರಾಡಿರುವ ಉದಾಹರಣೆಗಳಿವೆ. ಆದರೆ ಎದುರಾಳಿಯ ವಾಕ್ಚಾತುರ್ಯತೆ ಹಾಗೂ ನೇರ ನುಡಿಗಳನ್ನು ಸಹಿಸದಿರುವ ಕಾರಣದಿಂದಾಗಿ ದ್ವೇಷ ಸಾಧಿಸಿರುವುದು ನಾನು ಇದೇ ಮೊದಲ ಬಾರಿಗೆ ನೋಡಿದ್ದೇನೆ ಎಂದು ವಕೀಲ ವೀನ್​, ಡೆಮಾಕ್ರೆಟ್ ಸದಸ್ಯರಿಗೆ ಟಾಂಗ್​ ನೀಡಿದ್ದಾರೆ.

ಡೆಮಾಕ್ರಟಿಕರು ರಾಜಕೀಯ ವೈಷಮ್ಯ ಸಾಧಿಸುತ್ತಿದ್ದು, ಟ್ರಂಪ್‌ರನ್ನು ಒಬ್ಬ ರಾಜಕಾರಣಿ ಅಥವಾ ಅಧ್ಯಕ್ಷನಾಗಿ ನೋಡುವ ಬದಲು, ಚುನಾವಣೆ ವೇಳೆ ಸುಳ್ಳುಗಳನ್ನು ಹರಡುವ ಪ್ರಚೋದಕ ಎಂದು ಬಿಂಬಿಸುತ್ತಿದ್ದಾರೆ ಎಂದಿದ್ದಾರೆ.

ಒಟ್ಟಾರೆಯಾಗಿ ಡೊನಾಲ್ಡ್​ ಟ್ರಂಪ್​ರ ರಾಜಕೀಯ ಜೀವನವನ್ನು ಅಂತ್ಯಗೊಳಿಸಲು ಡೆಮಾಕ್ರಟಿಕ್​​ ಪಕ್ಷದವರು ಮಾಡಿದ ಹುನ್ನಾರವಿದು. ಚುನಾವಣೆ ಬಳಿಕ ಅಧ್ಯಕ್ಷ ಗಾದಿಯಿಂದ ಕೆಳಗಿಳಿದರೂ ಸಹ ಎದುರಾಳಿಗಳು ಅವರನ್ನು ಬೆಂಬಿಡದೆ ಕಾಡತೊಡಗಿದ್ದು, ದೋಷಾರೋಪಗೊಳಿಸುವ ಮೂಲಕ ಮುಂದಿನ ಚುನಾವಣೆಯಲ್ಲಿಯೂ ಸಹ ಟ್ರಂಪ್​ಗೆ ಅವಕಾಶ ದೊರೆಯಬಾರದು ಎಂಬ ಕಾರಣಕ್ಕೆ ಈ ರೀತಿಯಾಗಿ ಮಾಡಲಾಗಿದೆ ಎಂದು ವಕೀಲರು ಸೆನೆಟ್​ನಲ್ಲಿ ತಮ್ಮ ವಾದ ಮಂಡಿಸಿದ್ದಾರೆ.

ಟ್ರಂಪ್​ ದೋಷಾರೋಪ ಪ್ರಕರಣವು ಮತದಾನದ ಮೂಲಕ ಶನಿವಾರದಂದು (ಅಮೆರಿಕ ಸಮಯದ ಪ್ರಕಾರ) ಖುಲಾಸೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದ್ದು, ಅಪರಾಧ ಸಾಬೀತಾಗಲು ಮೂರನೇ ಎರಡರಷ್ಟು ಬಹುಮತ ಬೇಕಾಗುತ್ತದೆ. ಸೆನೆಟ್​​ನಲ್ಲಿ ಟ್ರಂಪ್ ಬದಲಾಗಿ ವಕೀಲರಾದ ಮೈಕೆಲ್​ ವ್ಯಾನ್ ಡೆರ್ ವೀನ್ ಸಂಕ್ಷಿಪ್ತವಾಗಿ ಈ ಬಗ್ಗೆ ನಿಗದಿಪಡಿಸಿದ 16 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ವಾದ ಮಂಡಿಸಿದ್ದಾರೆ.

ಡಿಸೆಂಬರ್​ 2019ರಲ್ಲಿಯೂ ಸಹ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ದೋಷಾರೋಪಣೆ ಮಾಡಲಿದೆ ಎಂದು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಪ್ರಕಟಿಸಿದ್ದರು. ಇದಕ್ಕೆ ಹೌಸ್​ ಆಫ್​​ ​ರೆಪ್ರೆಸೆಂಟೇಟಿವ್ಸ್​​ ಒಪ್ಪಿಗೆ ಪಡೆದು, ಈ ನಿರ್ಣಯವನ್ನ ಸೆನೆಟ್​​ ಅಂಗೀಕಾರಕ್ಕೆ ಕಳುಹಿಸಲಾಗಿತ್ತು. ಆದರೆ ಸೆನೆಟ್​​ನಲ್ಲಿ ಟ್ರಂಪ್​ಗೆ ಬಹುಮತವಿದ್ದಿದ್ದರಿಂದ ದೋಷಾರೋಪಣೆ ಅಂಗೀಕಾರಗೊಂಡಿರಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.