ETV Bharat / headlines

ಕೊರೊನಾ ಸಾವುಗಳೆಲ್ಲವೂ "ಬಿಜೆಪಿ ಪ್ರಾಯೋಜಿತ ಮಾರಣಹೋಮ": ಕಾಂಗ್ರೆಸ್ ಆಕ್ರೋಶ

author img

By

Published : Apr 22, 2021, 10:16 PM IST

ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಸೋಂಕಿತ ಸರ್ಕಾರ ಸೋಂಕು ನಿಯಂತ್ರಣಕ್ಕೆ ಸ್ಪಷ್ಟ ರೂಪುರೇಷೆ ಸಿದ್ಧಪಡಿಸಿಲ್ಲ, ನಿಮ್ಮ ನೈಟ್ ಕರ್ಫ್ಯೂ ಸೋಂಕು ತಡೆಯದು. ರಾಜ್ಯ ಬಿಜೆಪಿ ಒಂದಿಡೀ ವರ್ಷದಲ್ಲಿ ನೀವು ಕಲಿತ ಪಾಠವೇನು? ಮಾಡಿಕೊಂಡ ಸಿದ್ಧತೆ ಏನು? ಪಿಎಂ ಕೇರ್ಸ್​ನಲ್ಲಿ ರಾಜ್ಯಕ್ಕೆ ಹೆಚ್ಚಿನ ವೆಂಟಿಲೇಟರ್​​​​ಗಳಿಗೆ ಏಕೆ ಬೇಡಿಕೆ ಇಟ್ಟಿಲ್ಲ? ಎಂದು ಪ್ರಶ್ನಿಸಿದೆ.

congress
congress

ಬೆಂಗಳೂರು: ಕೊರೊನಾ ಸಾವುಗಳೆಲ್ಲವೂ "ಬಿಜೆಪಿ ಪ್ರಾಯೋಜಿತ ಮಾರಣಹೋಮ" ಎಂದು ಕಾಂಗ್ರೆಸ್ ಪಕ್ಷ ಅಭಿಪ್ರಾಯ ಪಟ್ಟಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸುತ್ತಾ ಬಂದಿರುವ ಕಾಂಗ್ರೆಸ್ ಇಂದು ಸೋಂಕಿತ ಸರ್ಕಾರ ಅಡಿ ಸರಣಿ ಟ್ವೀಟ್ ಮಾಡಿ ತನ್ನ ಆಕ್ರೋಶ ಹೊರಹಾಕಿದೆ.

ಕೊರೊನಾ ಬಂದು ಒಂದು ವರ್ಷವಾದರೂ ಸೂಕ್ತ ವೈದ್ಯಕೀಯ ವ್ಯವಸ್ಥೆಗಳನ್ನು ರೂಪಿಸದೇ, ಆಂತರಿಕ ಕಚ್ಚಾಟ, ಖಾತೆ ಕಿತ್ತಾಟ, ಸಿಡಿ ಚೆಲ್ಲಾಟ, ವರ್ಗಾವಣೆ ದಂಧೆ, ಭ್ರಷ್ಟಾಚಾರದಲ್ಲಿ ಮುಳುಗಿದ ಈ ಸೋಂಕಿತ ಸರ್ಕಾರದ ನಿರ್ಲಕ್ಷ್ಯ, ಬೇಜವಾಬ್ದಾರಿತನ, ಭ್ರಷ್ಟಾಚಾರಗಳೇ ಇಂದಿನ ಭೀಕರ ಸ್ಥಿತಿಗೆ ಕಾರಣ ಎಂದಿದೆ.

ಇದು "ಕೊಲೆಗಡುಕ ಸರ್ಕಾರ" ಸಚಿವರು ಹೆಣವನ್ನು ಕುಕ್ಕಿ ತಿನ್ನುವ ರಣ ಹದ್ದುಗಳಂತೆ ಭಾಸವಾಗುತ್ತಿದ್ದಾರೆ. ರಾಜ್ಯ ಅತೀ ಭಯಂಕರವಾಗಿ ನರಳುತ್ತಿರುವಾಗಲೇ ಕುಂದುಕೊರತೆಗಳನ್ನು ನೋಡಬೇಕಿದ್ದ ಸಚಿವರಾದ ಶ್ರೀರಾಮುಲು ಒಂದು ಕಡೆ, ಡಿಸಿಎಂ ಡಾ. ಅಶ್ವತ್ಥನಾರಾಯಣ ಮತ್ತೊಂದು ಕಡೆ ಚುನಾವಣಾ ಪ್ರಚಾರಕ್ಕೆ ತೆರಳುತ್ತಾರೆ. ಇದು ಸೋಂಕಿತ ಸರ್ಕಾರ ಅಲ್ಲದೇ ಇನ್ನೇನು? ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ವಿಚಾರ ಪ್ರಸ್ತಾಪಿಸಿರುವ ಕಾಂಗ್ರೆಸ್, ಆಕ್ಸಿಜನ್ ಪೂರೈಕೆಯಲ್ಲಿ ನಿರ್ಲಕ್ಷ್ಯ ವಹಿಸಿದ ಟೆಲಿಪ್ರಾಂಪ್ಟರ್ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿದೆ. ದೇಶದೆಲ್ಲೆಡೆ ಹಾಹಾಕಾರವೆದ್ದಿದ್ದರೂ ಅವಿವೇಕಿ ರಾಷ್ಟ್ರೀಯ ಬಿಜೆಪಿ ಸರ್ಕಾರದಿಂದ ಜೀವ ರಕ್ಷಣೆ ಸಾಧ್ಯವಿಲ್ಲ ಎಂದು ಕೋರ್ಟ್​ಗೂ ಅರಿವಾದಂತಿದೆ. ಕೋರ್ಟ್​ನಿಂದ ಉಗಿಸಿಕೊಳ್ಳುವ ಆಡಳಿತಕ್ಕೆ ಏನಂತೀರಿ ಬಿಜೆಪಿ ನಾಯಕರೇ ಎಂದು ಕೇಳಿದೆ.

ಸೋಂಕಿತರ ಆಕ್ರಂದನ ಮುಗಿಲು ಮುಟ್ಟಿದೆ

ರಾಜ್ಯಾದ್ಯಂತ ಚಿಕಿತ್ಸೆ, ಲಸಿಕೆ, ಆಕ್ಸಿಜನ್, ಬೆಡ್ ಎಲ್ಲದರ ಕೊರತೆಯಿಂದ ಸೋಂಕಿತರ ಆಕ್ರಂದನ ಮುಗಿಲು ಮುಟ್ಟಿದೆ. ಎಲ್ಲಾ ಸಚಿವರು ಸಮರೋಪಾದಿಯಲ್ಲಿ ಸಂಕಷ್ಟ ನೀಗಿಸುವ ಕೆಲಸ ಮಾಡುವುದನ್ನು ಬಿಟ್ಟು ಸಚಿವ ಶ್ರೀರಾಮುಲು ಜನ ಸೇರಿಸಿ ಚುನಾವಣಾ ಪ್ರಚಾರದ ಮೆರವಣಿಗೆ ಮೂಲಕ ಸೂಪರ್ ಸ್ಪ್ರೆಡರ್ ಆಗಿದ್ದಾರೆ. ಅಧಿಕೃತವಾಗಿ ಆದೇಶ ಹೊರಡಿಸದೆ ಯಾವ ಆಧಾರದಲ್ಲಿ ಲಾಕ್​ಡೌನ್ ಮಾಡಿಸಲಾಗುತ್ತಿದೆ? ಹೇಳಿಕೆಗಳು, ನಿರ್ಧಾರಗಳು ಅಶೋಕ್​ ಅವರದ್ದೊಂದು, ಸುಧಾಕರ್ ಅವರದ್ದೊಂದು, ಯಡಿಯೂರಪ್ಪ ಅವರದ್ದು ಮತ್ತೊಂದು! ಬೆಳಗ್ಗೆವರೆಗೂ ಒಂದು, ಮಧ್ಯಾಹ್ನಕ್ಕೆ ಮತ್ತೊಂದು, ಸಂಜೆ ಇನ್ನೊಂದು! ಈ ಸೋಂಕಿತ ಸರ್ಕಾರಕ್ಕೆ ಸ್ಪಷ್ಟ ಕಾರ್ಯಸೂಚಿ, ಸಮನ್ವಯತೆ, ಇಲ್ಲದ್ದು ತಿಳಿಯುತ್ತದೆ ಎಂದು ಲೇವಡಿ ಮಾಡಿದೆ.

ಬಿಜೆಪಿಯಲ್ಲಿ ಸಾಮರಸ್ಯದ ಕೊರತೆ:

ರಾಜ್ಯ ಬಿಜೆಪಿ ಸರ್ಕಾರದೊಳಗೆ ಸಮನ್ವಯತೆ, ಸಾಮರಸ್ಯದ ಕೊರತೆ ಇದೆ. ಹೀಗಿರುವಾಗ ಕೋವಿಡ್ ಕೊರತೆಗಳ ಬಗ್ಗೆ ಗಮನ ಹರಿಸುವ ಇಚ್ಛಾಶಕ್ತಿ ಒಬ್ಬರಿಗೂ ಇಲ್ಲ. ಸಚಿವರಲ್ಲಿನ ಮುನಿಸು, ಭಿನ್ನಾಭಿಪ್ರಾಯ ಎದ್ದು ಕಾಣುತ್ತಿದೆ. ಅವರೇನಾದ್ರೂ ಮಾಡಿಕೊಳ್ಳಲಿ ಎನ್ನುವ ಧೋರಣೆಗಳು ಕಾಣುತ್ತಿವೆ. ಕಿತ್ತಾಟದ ಸೋಂಕಿತ ಸರ್ಕಾರ ಕೊರೊನಾ ಸೋಂಕನ್ನು ನಿರ್ವಹಿಸಲಾಗದು. ಬಿಎಸ್​ವೈ ಅವರೇ, ಕೊರೊನಾ ನಿರ್ವಹಣೆಯಲ್ಲಿ ನಿಮ್ಮ ಸೋಂಕಿತ ಸರ್ಕಾರ ಸಂಪೂರ್ಣ ಸೋತಿದೆ. ಬೆಡ್, ಆಕ್ಸಿಜನ್, ರೆಮ್ಡೆಸಿವಿರ್, ಅಂತ್ಯಕ್ರಿಯೆ, ಹೀಗೆ ಹಲವು ಬಿಕ್ಕಟ್ಟುಗಳನ್ನ ನಿರ್ವಹಿಸಲು ಮಂತ್ರಿಗಳನ್ನು ನೇಮಿಸಿ ಜವಾಬ್ದಾರಿಯನ್ನು ನೀಡಿ. ಇಡೀ ರಾಜ್ಯವನ್ನು 6 ವಿಭಾಗವನ್ನಾಗಿಸಿ ಪ್ರತ್ಯೇಕ ಸಮಿತಿಗಳನ್ನು ರಚಿಸಿ, ಮಂತ್ರಿಗಳಿಗೆ ಉಸ್ತುವಾರಿ ನೀಡಿ. ಕೊರೊನಾ ನಿಗ್ರಹಿಸುವಿಕೆಯ ಭಾಗವಾದ ಟ್ರೀಟಿಂಗ್​ನಲ್ಲಿ ಅಧೋಗತಿಗೆ ಇಳಿದಿದ್ದು ನಿತ್ಯ ಕಾಣುತ್ತಿದೆ. ಟ್ರಾಕಿಂಗ್​ನಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದು ಲೇವಡಿ ಮಾಡಿದೆ.

ಯಾರೂ ಐಸೋಲೇಶನ್​ ನಿಯಮ ಪಾಲಿಸಿಲ್ಲ:

ಯಡಿಯೂರಪ್ಪ ಸೇರಿದಂತೆ, ಮಂತ್ರಿಗಳು, ಶಾಸಕರಿಗೆ ಸೋಂಕು ತಗುಲಿತ್ತು. ಅವರ ಸಂಪರ್ಕಕ್ಕೆ ಬಂದವರಿಗೆ ಯಾವುದೇ ಕಟ್ಟುನಿಟ್ಟಿನ ಐಸೋಲೇಶನ್ ನಿಯಮ ಪಾಲಿಸಲಿಲ್ಲ. ರಾಜ್ಯ ಸರ್ಕಾರ ಅಘೋಷಿತ ಲಾಕ್​ಡೌನ್ ಜಾರಿಗೊಳಿಸಿದೆ. ಬಡವರಿಗೆ, ಸ್ವ -ಉದ್ಯೋಗಿಗಳಿಗೆ, ಕಾರ್ಮಿಕರಿಗೆ ಸೇರಿದಂತೆ ಎಲ್ಲ ಅರ್ಹರಿಗೆ ಕೂಡಲೇ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಬೇಕು. ಈಗಾಗಲೇ ತೀವ್ರ ಸಂಕಷ್ಟದಲ್ಲಿರುವ ಸಣ್ಣ ಹಾಗೂ ಮಧ್ಯಮ ಉದ್ಯಮ, ಕೈಗಾರಿಕೆಗಳ ನೆರವಿಗೆ ಅಗತ್ಯ ಕ್ರಮ ಕೈಗೊಂಡು ಉದ್ಯೋಗ ಹಾಗೂ ಆರ್ಥಿಕ ನಷ್ಟವಾಗದಂತೆ ನೋಡಿಕೊಳ್ಳಬೇಕು. ಕೇಂದ್ರ ಸರ್ಕಾರಕ್ಕೆ ಸುಮಾರು 10 ಕೋಟಿಗೂ ಹೆಚ್ಚು ಡೋಸ್​ಗಳನ್ನು 150 ರೂ ಗಳಿಗೆ ನೀಡಿದ್ದ ಲಸಿಕೆ ಕಂಪನಿಗಳು ಹೊಸದಾಗಿ ಪರಿಷ್ಕರಣೆ ಮಾಡಿ ರಾಜ್ಯಗಳಿಗೆ 400 ರೂ. ದರ ನಿಗದಿಪಡಿಸಿವೆ. ರಾಜ್ಯದ ಸೋಂಕಿತ ಸರ್ಕಾರ ಸರ್ವರಿಗೂ ಉಚಿತ ಲಸಿಕೆ ನೀಡುವ ಘೋಷಣೆಯನ್ನೇಕೆ ಮಾಡುತ್ತಿಲ್ಲ? ಲಸಿಕೆ ಖರೀದಿಗೆ ಹಣ ಕ್ರೋಢೀಕರಣದ ಬಗ್ಗೆ ಏಕೆ ಯೋಚಿಸುತ್ತಿಲ್ಲ? ಹೊರ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವವರಿಗೆ ನಿರ್ಬಂಧವಿಲ್ಲ, ಗಡಿಗಳನ್ನು ಬಂದ್ ಮಾಡಿಲ್ಲ, ಹೀಗಿರುವಾಗ ಸೋಂಕಿತರನ್ನು ಸೋಂಕನ್ನು ನಿಯಂತ್ರಿಸುವುದು ಹೇಗೆ ಯಡಿಯೂರಪ್ಪ ಅವರೇ? ಎಂದು ಕೇಳಿದೆ.

ಸೋಂಕಿತರ ಸಂಖ್ಯೆ ಹೆಚ್ಚಳ

ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಸೋಂಕಿತ ಸರ್ಕಾರ ಸೋಂಕು ನಿಯಂತ್ರಣಕ್ಕೆ ಸ್ಪಷ್ಟ ರೂಪುರೇಷೆ ಸಿದ್ಧಪಡಿಸಿಲ್ಲ, ನಿಮ್ಮ ನೈಟ್ ಕರ್ಫ್ಯೂ ಸೋಂಕನ್ನು ತಡೆಯದು. ರಾಜ್ಯ ಬಿಜೆಪಿ ಒಂದಿಡೀ ವರ್ಷದಲ್ಲಿ ನೀವು ಕಲಿತ ಪಾಠವೇನು? ಮಾಡಿಕೊಂಡ ಸಿದ್ಧತೆ ಏನು? ಪಿಎಂ ಕೇರ್ಸ್​ನಲ್ಲಿ ರಾಜ್ಯಕ್ಕೆ ಹೆಚ್ಚಿನ ವೆಂಟಿಲೇಟರ್ಗಳಿಗೆ ಏಕೆ ಬೇಡಿಕೆ ಇಟ್ಟಿಲ್ಲ? ಕಳೆದ ನವೆಂಬರ್​ನಲ್ಲಿಯೇ ತಜ್ಞರು ಎಚ್ಚರಿಕೆ ನೀಡಿದ್ದಾಗ್ಯೂ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ? ಬೆಡ್, ಚಿಕಿತ್ಸೆ ಸಿಗದೇ ಸೋಂಕಿತರು ಹಾದಿ ಬೀದಿಗಳಲ್ಲಿ ನರಳುತ್ತಿದ್ದಾರೆ. ಸಮುದಾಯ ಭವನಗಳು, ಕಲ್ಯಾಣ ಮಂಟಪಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಾಡಿಗೆ ಪಡೆದು ಸೋಂಕಿನ ತೀವ್ರತೆ ಕಡಿಮೆ ಇರುವವರಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಬಹುದಿತ್ತು, ಏಕಿನ್ನೂ ಮಾಡಿಲ್ಲ? ಸೋಂಕಿತರು ಬೆಡ್ ಸಿಗದೆ ಪರದಾಡುತ್ತಿದ್ದಾರೆ. ಸರ್ಕಾರ ಕಳೆದ ಬಾರಿ 10 ಸಾವಿರ ಹಾಸಿಗೆಗಳ ಕೋವಿಡ್ ಸೆಂಟರ್​ ಅನ್ನು ಬಳಕೆಯೇ ಮಾಡದೆ ಮುಚ್ಚಿದಿರಿ, ಅದೊಂದು ಲೂಟಿ ಕಾರ್ಯಕ್ರಮವಾಗಿತ್ತಲ್ಲವೇ? ಈಗ ಏಕೆ ಅಂತಹ ಸೆಂಟರ್ ನಿರ್ಮಿಸಲು ಮುಂದಾಗುತ್ತಿಲ್ಲ? ಎಂದು ಪ್ರಶ್ನಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.