ETV Bharat / entertainment

ಮೋದಿ ಔತಣಕೂಟದಲ್ಲಿ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು​: ಯಶ್, ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾಗಿ

author img

By

Published : Feb 13, 2023, 2:20 PM IST

Updated : Feb 13, 2023, 4:25 PM IST

ಬೆಂಗಳೂರಿಗೆ ಭೇಟಿ ನೀಡಿದ್ದ ನರೇಂದ್ರ ಮೋದಿ - ಸ್ಯಾಂಡಲ್​ವುಡ್​ನ ಖ್ಯಾತ ನಟ ನಟಿಯರ ಭೇಟಿ ಮಾಡಿದ ಪ್ರಧಾನಿ - ಸಾಮಾಜಿಕ ಜಾಲತಾಣದಲ್ಲಿ ಭೇಟಿಯ ಫೋಟೋಗಳನ್ನು ಹಂಚಿಕೊಂಡ ಸಂಸದ ಪಿಸಿ ಮೋಹನ್ ಮತ್ತು ಮಾಜಿ ಕ್ರಿಕೆಟಿಗ ಅನಿಲ್​ ಕುಂಬ್ಳೆ

PM hosts dinner for Kannada stars
PM hosts dinner for Kannada stars

ಇಂದಿನಿಂದ ಪ್ರಾರಂಭವಾದ ಐದು ದಿನಗಳ ಏರ್‌ಶೋ 2023 ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ ಸ್ಯಾಂಡಲ್​ವುಡ್​ನ ಖ್ಯಾತ ನಟ-ನಟಿಯರನ್ನು ಭೇಟಿ ಮಾಡಿ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಸಂಸದ ಪಿಸಿ ಮೋಹನ್ ಅವರು ನಟ ಯಶ್​ ಮತ್ತು ಪ್ರಧಾನಿ ಮೋದಿ ಕಾಣಿಸಿಕೊಂಡಿರುವ ಫೋಟೋವನ್ನು ತಮ್ಮ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ 'ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜೀ ಅವರು ರಾಕಿಂಗ್ ಸ್ಟಾರ್ ಯಶ್ ಮತ್ತು ಇತರ ಕಲಾವಿದರನ್ನು ಬೆಂಗಳೂರಿನಲ್ಲಿ ಭೇಟಿಯಾದರು' ಎಂದು ಅವರ ಫೋಟೋಗಳಿಗೆ ಶೀರ್ಷಿಕೆ ಕೂಡ ಹಾಕಿದ್ದಾರೆ. ಸದ್ಯ ಸೆಲೆಬ್ರಿಟಿಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಯಶ್, ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರ್ ಅವರನ್ನು ಪ್ರಧಾನಿ ಮೋದಿ ಔತಣಕೂಟಕ್ಕೆ ಆಹ್ವಾನಿಸಿದ್ದರು. ಇದೇ ವೇಳೆ ಅನೌಪಚಾರಿಕವಾಗಿ ಕೆಲಹೊತ್ತು ಅವರೊಂದಿಗೆ ಮಾತುಕತೆ ಸಹ ನಡೆಸಿದ್ದಾರೆ. ಸೆಲೆಬ್ರಿಟಿಗಳು ಅಷ್ಟೇ ಅಲ್ಲದೇ ಕೆಲವು ಕ್ರಿಕೆಟ್​ ತಾರೆಯರನ್ನೂ ಸಹ ಮೋದಿ ಭೇಟಿಯಾಗಿದ್ದಾರೆ. ಭೇಟಿಯಾದ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಅನಿಲ್​ ಕುಂಬ್ಳೆ ಟ್ವೀಟ್​ ಮಾಡಿದ್ದಾರೆ. 'ಭಾನುವಾರ ರಾತ್ರಿ ರಾಜಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು ತುಂಬಾ ಗೌರವದ ವಿಚಾರವಾಗಿದೆ. ಬೆಂಗಳೂರಿನಲ್ಲಿ ನನ್ನ ಸಹ ಕ್ರಿಕೆಟಿಗರೊಂದಿಗೆ ಪ್ರಧಾನಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಚಿರಕಾಲ ನೆನಪಿನಲ್ಲಿ ಉಳಿಯಲಿದೆ. ಧನ್ಯವಾದಗಳು' ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಅನಿಲ್ ಕುಂಬ್ಳೆ ತಮ್ಮ ಪತ್ನಿ ಚೇತನಾ ಹಾಗೂ ಪ್ರಧಾನಿ ಮೋದಿ ಜತೆಗಿರುವ ಫೋಟೋವನ್ನು ಕಾಣಬಹುದು.

'ಕೆಜಿಎಫ್'​ ಮತ್ತು 'ಕಾಂತಾರ' ಚಿತ್ರಗಳು ದೇಶಾದ್ಯಂತ ಹೊಸ ಇತಿಹಾಸ ಬರೆದ ಚಿತ್ರಗಳಾಗಿದ್ದು ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದವು. 'ಕೆಜಿಎಫ್' ಚಿತ್ರದ ಬಳಿಕ ನಟ ಯಶ್​ ಪ್ಯಾನ್​ ಇಂಡಿಯಾ ಸ್ಟಾರ್ ಆದರೆ, 'ಕಾಂತಾರ' ಚಿತ್ರದ ಮೂಲಕ ನಟ ರಿಷಬ್ ಶೆಟ್ಟಿ ರಾತ್ರೋರಾತ್ರಿ ದೇಶಾದ್ಯಂತ ದೊಡ್ಡ ಅಭಿಮಾನಿಗಳ ಬಳಗವನ್ನೇ ಸಂಪಾದಿಸಿದವರು. ಇನ್ನು ನಟ ಪುನೀತ್​ ರಾಜ್​ಕುಮಾರ್ ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ನುಂಗಲಾರದ ತುತ್ತಾದರೆ, ಹೊಸಬರಿಗೆ ಅವಕಾಶ ಮಾಡಿಕೊಡುವ ಮೂಲಕ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಸ್ಥಾನವನ್ನು ತುಂಬುತ್ತಿದ್ದಾರೆ. ಈ ಕಾರಣದಿಂದ ಪ್ರಧಾನಿ ಮೋದಿ ಅವರು ಯಶ್, ರಿಷಬ್ ಶೆಟ್ಟಿ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಡಿನ್ನರ್ ಪಾರ್ಟಿಗೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.

  • ಕ್ರಿಕೆಟ್‌ ಆಟದಲ್ಲಿ ತಮ್ಮ ಛಾಪು ಮೂಡಿಸಿ ದೇಶಕ್ಕೆ ಕೀರ್ತಿ ತಂದ ಕರ್ನಾಟಕದ ಹೆಮ್ಮೆಯ ಕ್ರೀಡಾ ಸಾಧಕರು ಅವರ ಕುಟುಂಬದವರೊಂದಿಗೆ ಪ್ರಧಾನಿ ಶ್ರೀ @narendramodi ಅವರನ್ನು ಭೇಟಿಯಾದರು. pic.twitter.com/a4lznA5dOU

    — BJP Karnataka (@BJP4Karnataka) February 13, 2023 " class="align-text-top noRightClick twitterSection" data=" ">

ಕೆಲಹೊತ್ತು ಮಾತುಕತೆ ನಡೆಸಿರುವ ಪ್ರಧಾನಿ ಮೋದಿ ಅವರು, ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ತಮ್ಮ ಸರ್ಕಾರ ಎಲ್ಲ ರೀತಿಯ ಸಹಾಯವನ್ನು ನೀಡಲಿದೆ ಎಂದು ಸಹ ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ, 'ಕಾಂತಾರ' ಚಿತ್ರ ಬಿಡುಗಡೆ ಬಳಿಕ ಅನೇಕ ಸಂದರ್ಶನಗಳಲ್ಲಿ, ನಟ ರಿಷಬ್ ಶೆಟ್ಟಿ ಅವರು ಪ್ರಧಾನಿ ಮೋದಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು ಇಲ್ಲಿ ಸ್ಮರಿಸಿಕೊಳ್ಳಬಹುದು.

ಇದಕ್ಕೂ ಮುನ್ನ ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೆಚ್​ಎಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಸಚಿವ ಭೈರತಿ ಬಸವರಾಜ್, ಶಾಸಕರಾದ ಅರವಿಂದ ಲಿಂಬಾವಳಿ, ಎ.ಕೃಷ್ಣಪ್ಪ, ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ, ಡಿಜಿ ಮತ್ತು ಐಜಿಪಿ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ: ಭಾರತ ವಿಶ್ವ ಗುರುವಾಗಲು ಕರ್ನಾಟಕದಿಂದ ದೊಡ್ಡ ಕೊಡುಗೆ: ಸಿಎಂ ಬಸವರಾಜ ಬೊಮ್ಮಾಯಿ

Last Updated : Feb 13, 2023, 4:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.