ETV Bharat / entertainment

ಇಂದು ವಿಷ್ಣು, ಉಪ್ಪಿ, ಶ್ರುತಿ ಜನ್ಮದಿನ: ಅಭಿಮಾನಿಗಳ ಶುಭಹಾರೈಕೆ

author img

By ETV Bharat Karnataka Team

Published : Sep 18, 2023, 11:03 AM IST

ಇಂದು ನಾಡಿನೆಲ್ಲೆಡೆ ಗಣೇಶೋತ್ಸವ ಸಂಭ್ರಮ ಮನೆ ಮಾಡಿದೆ. ಇದೇ ದಿನ ಸಾಹಸಸಿಂಹ ವಿಷ್ಣುವರ್ಧನ್​, ರಿಯಲ್​ ಸ್ಟಾರ್​ ಉಪೇಂದ್ರ ಹಾಗೂ ಹಿರಿಯ ನಟಿ ಶ್ರುತಿ ಜನ್ಮದಿನವೂ ಹೌದು.

Vishnuvardhan Upendra Shruthi birthday  Vishnuvardhan Upendra Shruthi birthday today  Vishnuvardhan birthday today  Shruthi birthday today  Upendra birthday today  ಇಂದು ತ್ರಿಬಲ್​ ಸ್ಟಾರ್​ಗಳ ಜನ್ಮದಿನ ಸಂಭ್ರಮ  ಅಭಿಮಾನಿಗಳ ಹೃದಯದಲ್ಲಿ ವಿಷ್ಣು ದಾದಾ ಇನ್ನು ಜೀವಂತ
ಇಂದು ತ್ರಿಬಲ್​ ಸ್ಟಾರ್​ಗಳ ಜನ್ಮದಿನ ಸಂಭ್ರಮ

ಇಂದು ದೇಶಾದ್ಯಂತ ಗಣೇಶ ಹಬ್ಬದ ಸಡಗರ. ಈ ದಿನ ಸ್ಯಾಂಡಲ್​ವುಡ್ ಅಭಿಮಾನಿಗಳ ಪಾಲಿಗೂ ವಿಶೇಷವಾಗಿದೆ. ಹೌದು, ಸಾಹಸಸಿಂಹ ವಿಷ್ಣುವರ್ಧನ್​, ರಿಯಲ್​ ಸ್ಟಾರ್​ ಉಪೇಂದ್ರ ಹಾಗೂ ಹಿರಿಯ ನಟಿ ಶ್ರುತಿ ಜನ್ಮದಿನವೂ ಸೆಪ್ಟೆಂಬರ್​ 18 ರಂದೇ ಇದೆ. ವಿಶೇಷ ದಿನವನ್ನು ನಟರ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡು ಸಂಭ್ರಮಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಜನ್ಮದಿನದ ಶುಭಾಶಯಗಳು ಹರಿದುಬರುತ್ತಿವೆ.

ಅಭಿಮಾನಿಗಳ ಹೃದಯದಲ್ಲಿ 'ದಾದಾ' ಜೀವಂತ: ಸಾಹಸಸಿಂಹ ಪ್ರಸಿದ್ಧಿಯ ನಟ ವಿಷ್ಣುವರ್ಧನ್ ಹೆಸರು ಕನ್ನಡ ಚಿತ್ರರಂಗದಲ್ಲಿ ಶಾಶ್ವತವಾಗಿದೆ. ಸ್ಯಾಂಡಲ್​ವುಡ್​ಗೆ ಅನೇಕ ಸೂಪರ್‌ಹಿಟ್ ಸಿನಿಮಾಗಳ ಕೊಡುಗೆ ನೀಡಿರುವ ವಿಷ್ಣು ದಾದಾಗೆ ಅಪಾರ ಅಭಿಮಾನಿ ಬಳಗವಿದೆ. ಇಂದು ವಿಷ್ಣುವರ್ಧನ್​ ನಮ್ಮೊಂದಿಗಿದ್ದಿದ್ದರೆ 73ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಗೂ ಕುಟುಂಬಸ್ಥರ ಜೊತೆ ಆಚರಿಸಿಕೊಳ್ಳುತ್ತಿದ್ದರು. ವಿಷ್ಣು 30 ಡಿಸೆಂಬರ್ 2009ರಲ್ಲಿ ವಿಧಿವಶರಾದರು. ಹಿರಿಯ ನಟ ಇಹಲೋಕ ತ್ಯಜಿಸಿ ಇಂದಿಗೆ 14 ವರ್ಷಗಳಾಗಿವೆ.

ಡಾ.ವಿಷ್ಣುವರ್ಧನ್ ಸುಮಾರು 200ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ವಿಷ್ಣು ಅವರು ದಕ್ಷಿಣ ಭಾರತದ ಖ್ಯಾತ ನಟಿ ಭಾರತಿ ಅವರನ್ನು ವಿವಾಹವಾಗಿದ್ದಾರೆ.

ಉಪೇಂದ್ರ ಹುಟ್ಟುಹಬ್ಬ: ಎಂಟು ವರ್ಷಗಳ ಬಳಿಕ ಆ್ಯಕ್ಷನ್ ಕಟ್​ ಹೇಳಿರುವ ಉಪೇಂದ್ರ, ಇಂದು ತಮ್ಮ ಬರ್ತ್‌ಡೇ ದಿನವೇ ಹೊಸ ಚಿತ್ರ 'ಯುಐ' ಟೀಸರ್​ ಲಾಂಚ್​ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಹೀಗಾಗಿ ಉಪ್ಪಿ ಫುಲ್​ ಬ್ಯುಸಿಯಾಗಿರುತ್ತಾರೆ. ​ಇದೇ ಕಾರಣಕ್ಕಾಗಿ ಇತ್ತೀಚೆಗೆ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದರು.

"ನಿಮಗೆಲ್ಲರಿಗೂ ಗೊತ್ತಿರುವಂತೆ ಸೆಪ್ಟೆಂಬರ್​ 18 ಈ ವರ್ಷ ಬಾರಿ ವಿಶೇಷವಾಗಿದೆ. ಯಾಕಂದ್ರೆ ಗಣೇಶ ಚತುರ್ಥಿ ಹಬ್ಬ ಆ ದಿನಾನೇ. ಅಭಿಮಾನಿಗಳ ಹಬ್ಬನೂ ಅದೇ ದಿನ. ನಿಮ್ಮೆಲ್ಲರ ಬಹುನಿರೀಕ್ಷಿತ 'ಯುಐ' ಸಿನಿಮಾದ ಟೀಸರ್​ ಕೂಡ ಅಂದೇ ಲಾಂಚ್​ ಮಾಡುತ್ತಿದ್ದೇವೆ. ಈ ಪ್ರಯುಕ್ತ ನಾನು ತುಂಬಾ ಬ್ಯುಸಿ ಇರುತ್ತೇನೆ. ಸೆ​ 17ರ ರಾತ್ರಿ ಅಥವಾ 18ರ ಬೆಳಗ್ಗೆ ಕತ್ರಿಗುಪ್ಪೆ ಹಾಗೂ ಸದಾಶಿವನಗರದ ಮನೆಯಲ್ಲಿ ಸಿಗುವುದಿಲ್ಲ. ನನಗೆ ತುಂಬಾ ಕೆಲಸಗಳಿರುವುದರಿಂದ ಸೆ​ 18ರಂದು ಮಧ್ಯಾಹ್ನ 2 ಗಂಟೆಯ ಮೇಲೆ ಊರ್ವಶಿ ಥಿಯೇಟರ್​ನಲ್ಲಿ ನಿಮಗಾಗಿ ಕಾಯುತ್ತಿರುತ್ತೇನೆ. ನೀವೆಲ್ಲರೂ ಅಲ್ಲೇ ಬನ್ನಿ. ಕೇಕ್​ ಕತ್ತರಿಸೋಣ. ಎಲ್ಲರೂ ಸಂಭ್ರಮ ಆಚರಿಸೋಣ. 2 ಗಂಟೆಯಿಂದ 8 ಗಂಟೆಯವರೆಗೂ ಈ ಸಂಭ್ರಮಾಚರಣೆ ಇರುತ್ತದೆ. 6 ಗಂಟೆಯ ನಂತರ ಥಿಯೇಟರ್​ ಒಳಗಡೆ 'ಯುಐ' ಟೀಸರ್​ ಲಾಂಚ್ ಮಾಡುತ್ತೇವೆ. ಬನ್ನಿ, ಎಲ್ಲರೂ ಪಾಲ್ಗೊಳ್ಳೋಣ" ಎಂದು ತಿಳಿಸಿದ್ದರು.

ನಟಿ ಶ್ರುತಿಗೆ ಬರ್ತ್‌ಡೇ ಖುಷಿ: ಅಮೋಘ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ವಿಶೇಷ ಛಾಪು ಮೂಡಿಸಿರುವ ಹಿರಿಯ ನಟಿ‌ ಶ್ರುತಿ ಅವರಿಗೂ ಇಂದು ಜನ್ಮದಿನದ ಸಂಭ್ರಮ. ಶ್ರುತಿ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಕಾಲಿಟ್ಟ ನಟಿ ಮತ್ತೆ ತಿರುಗಿ ನೋಡಲಿಲ್ಲ. ಕನ್ನಡ ಸೇರಿದಂತೆ ಬಹು ಭಾಷೆಗಳ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಅನೇಕ ಸೂಪರ್​ ಹಿಟ್​ ಚಿತ್ರಗಳನ್ನು ನೀಡಿರುವ ಶ್ರುತಿ ಕನ್ನಡ ಚಿತ್ರರಂಗದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕಿರುತೆರೆಗೂ ಎಂಟ್ರಿ ಕೊಟ್ಟಿರುವ ಅವರು ರಿಯಾಲಿಟಿ ಶೋ ಜಡ್ಜ್ ಆಗಿ ವೀಕ್ಷಕರ ಮನ ಗೆದ್ದಿದ್ದಾರೆ. ಪೋಷಕ ಪಾತ್ರಗಳ ಮೂಲಕ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಳ್ತಿದ್ದಾರೆ.

ಇದನ್ನೂ ಓದಿ: 'ಪ್ರೀತಿ' ಪ್ರಣಯವನ್ನು ಮೀರಿದ್ದು.. ತಮನ್ನಾರನ್ನು 'ಜಾನೆ ಜಾನ್​' ಎಂದು ಕರೆದ ವಿಜಯ್​ ವರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.