ETV Bharat / entertainment

'ತೋತಾಪುರಿ 2' ಟ್ರೇಲರ್ ಬಿಡುಗಡೆಗೊಳಿಸಿದ ಶಿವ ರಾಜ್‌ಕುಮಾರ್: ಜಗ್ಗೇಶ್-ಡಾಲಿ ಜುಗಲ್​ಬಂದಿಗೆ ಏನಂದ್ರು?

author img

By ETV Bharat Karnataka Team

Published : Sep 18, 2023, 12:50 PM IST

Updated : Sep 18, 2023, 2:23 PM IST

'ತೋತಾಪುರಿ 2' ಟ್ರೇಲರ್​ ಮೆಚ್ಚಿದ ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್‌, ಸಿನಿಮಾ ತಂಡಕ್ಕೆ ಶುಭ ಹಾರೈಸಿದರು.

Thotapuri 2 film Poster
ತೋತಾಪುರಿ 2 ಸಿನಿಮಾದ ಪೋಸ್ಟರ್​

ತೋತಾಪುರಿ. ಇದು ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಕೆಲವು ಡೈಲಾಗ್‌ಗಳ ಕಾರಣಗಳಿಗೆ ಹುಬ್ಬೇರಿಸಿದ ಸಿನಿಮಾ. ನವರಸ ನಾಯಕ ಜಗ್ಗೇಶ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್ ಹಾಗು ಡಾಲಿ ಧನಂಜಯ್ ಮುಖ್ಯಭೂಮಿಕೆಯಲ್ಲಿದ್ದ ಸಿನಿಮಾ 'ಜಗತ್ತೇ ಒಂದು ಮನೆ, ನಾವೆಲ್ಲ ಒಂದೇ ಸೂರಿನಡಿ ಬದುಕುತ್ತಿರುವವರು' ಎನ್ನುವ ಸಂದೇಶ ಸಾರಿತ್ತು. ಇದರ ಮುಂದುವರಿದ ಭಾಗವಾಗಿ ತೋತಾಪುರಿ 2 ಚಿತ್ರ ಬರ್ತಿದೆ. ತೋತಾಪುರಿ‌ ಎರಡನೇ ಭಾಗ ಮಾಡುತ್ತಿರುವುದಾಗಿ ನಿರ್ದೇಶಕ ವಿಜಯ ಪ್ರಸಾದ್ ಈ ಮೊದಲೇ ಸೂಚನೆ ನೀಡಿದ್ದರು. ಅದರಂತೆ ತೋತಾಪುರಿ ಭಾಗ 2 ನಿರ್ಮಾಣವಾಗಿದೆ. ಚಿತ್ರಕ್ಕೆ ನಟ ಶಿವ ರಾಜ್‌ಕುಮಾರ್ ಸಾಥ್ ಸಿಕ್ಕಿದೆ.

ತೋತಾಪುರಿ 2 ಚಿತ್ರದ ಟ್ರೇಲರ್ ಅನ್ನು ಶಿವ ರಾಜ್‌ಕುಮಾರ್ ಅನಾವರಣ ಮಾಡಿದ್ದಾರೆ. "ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಜಗ್ಗೇಶ್ ಹಾಗು ಧನಂಜಯ್ ಕಾಂಬಿನೇಷನ್ ಅದ್ಭುತವಾಗಿದೆ. ಸುರೇಶ್ ಪ್ರೊಡಕ್ಷನ್ ಸಂಸ್ಥೆ ನಮ್ಮ ಸಂಸ್ಥೆಯಂತೆ. ಈ ಸಿನಿಮಾ ಸುರೇಶ್​ಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಡಲಿ" ಎಂದು ಶಿವ ರಾಜ್‌ಕುಮಾರ್ ಹರಸಿದರು.

ರಿವೀಲ್ ಆಗಿರುವ ಟ್ರೇಲರ್​ನಲ್ಲಿ ಧನಂಜಯ್, ಸುಮನ್ ರಂಗನಾಥ್ ಲವ್ ಸ್ಟೋರಿ ನೋಡುಗರನ್ನು ಇಂಪ್ರೆಸ್ ಮಾಡುವಂತಿದೆ.‌ ಜಗ್ಗೇಶ್ ಮುಸ್ಲಿಂ ಹುಡುಗಿಯನ್ನು ಒಲಿಸಿಕೊಳ್ಳಲು ಮಾಡುವ ಸರ್ಕಸ್ ನಗು ತರಿಸುತ್ತೆ. ನಿರ್ಮಾಪಕ ಕೆ. ಎ. ಸುರೇಶ್ ಹೇಳುವಂತೆ ಪ್ರೇಕ್ಷಕರಿಗೆ ಇಷ್ಟವಾಗುವ ಮನರಂಜನಾತ್ಮಕ ಕಂಟೆಂಟ್ ಇದೆ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಉತ್ತಮ ಮನರಂಜನೆಯ ಜೊತೆ ಕಾಮಿಡಿ ಪಂಚಿಂಗ್ ಅನ್ನು ಸಿನಿಮಾ ನೀಡಲಿದೆ. ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಹೀಗೆ ದೊಡ್ಡ ತಾರಾ ಬಳವೇ ಇದೆ. ನಿರ್ಮಾಪಕ ಸುರೇಶ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

ಪಂಚಿಂಗ್​ ಡೈಲಾಗ್​ಗಳ ಮೂಲಕವೇ ಸಿನಿಪ್ರಿಯರ ಮನಸು ಗೆದ್ದಿದ್ದ ಸಿನಿಮಾ ತೋತಾಪುರಿ. ಮೊದಲ ಭಾಗದ ಕೊನೆಯಲ್ಲೇ ತೋತಾಪುರಿ 2 ಚಿತ್ರ ಬರುವುದರ ಕುರಿತು ನಿರ್ದೇಶಕ ವಿಜಯ್​ ಪ್ರಸಾದ್​ ಹೇಳಿದ್ದರು. ತೋತಾಪುರಿ ಸಿನಿಮಾದ ಕೊನೆಯಲ್ಲಿ ಭಾಗ ಎರಡರ ದೃಶ್ಯಗಳನ್ನು ತೋರಿಸಲಾಗಿತ್ತು. ಡಾಲಿ ಧನಂಜಯ್​ ಅವರ ಪಾತ್ರ ಭಾಗ ಒಂದರಲ್ಲಿ ಕೇವಲ ಎಂಟ್ರಿಯಾಗಿತ್ತಷ್ಟೇ. ಭಾಗ ಎರಡರ ಶೇ. 50ರಷ್ಟು ಕಥೆ ಧನಂಜಯ್​ ಪಾತ್ರದ ಮೇಲೆಯೇ ಇದೆ ಎನ್ನುವ ಸುಳಿವನ್ನು ನಿರ್ದೇಶಕರು ನೀಡಿದ್ದರು.

ಇದೀಗ ಟ್ರೇಲರ್​ ನೋಡಿದರೆ, ಮತ್ತದೇ ಪಂಚಿಂಗ್​ ಡೈಲಾಗ್​ಗಳಿಗೆ ಯಾವುದೇ ಮೋಸವಿಲ್ಲ ಎನಿಸುತ್ತದೆ. ನಗುವಿನ ಜೊತೆಗೆ ಭಾವನಾತ್ಮಕವಾಗಿ ಸಿನಿಮಾ ಪ್ರೇಕ್ಷರನ್ನು ತಲುಪುವ ಸೂಚನೆಯಿದೆ. ಭಾಗ ಒಂದರಲ್ಲಿ ಬರುವ ಸುಮನ್​ ರಂಗನಾಥ್​ ಪಾತ್ರದ ಹಿಂದಿನ ಕಥೆ ಇದರಲ್ಲಿ ರಿವೀಲ್​ ಆಗುವಂತಿದೆ. ಜೊತೆಗೆ ಭಾಗ ಒಂದರಲ್ಲಿ ದಡ ಸೇರದ ಜಗ್ಗೇಶ್​ ಹಾಗೂ ಅದಿತಿ ಪ್ರಭುದೇವ್​ ಪ್ರೇಮ್​ ಕಹಾನಿ ಇದರಲ್ಲಾದರೂ ದಡ ಸೇರುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಇಂದು ವಿಷ್ಣು, ಉಪ್ಪಿ, ಶ್ರುತಿ ಜನ್ಮದಿನ: ಅಭಿಮಾನಿಗಳ ಶುಭಹಾರೈಕೆ

Last Updated : Sep 18, 2023, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.