ಕಂಗನಾ, ಮಾಧವನ್ ಪ್ರಾಜೆಕ್ಟ್ ಶುರು: ಸೆಟ್‌ಗೆ 'ಸಿನಿಮಾ ದೇವರು' ತಲೈವಾ ಭೇಟಿ

ಕಂಗನಾ, ಮಾಧವನ್ ಪ್ರಾಜೆಕ್ಟ್ ಶುರು: ಸೆಟ್‌ಗೆ 'ಸಿನಿಮಾ ದೇವರು' ತಲೈವಾ ಭೇಟಿ
ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಮುಂದಿನ ಚಿತ್ರ ಇಂದು ಶುಭಾರಂಭ ಮಾಡಿದೆ. ಶೂಟಿಂಗ್ ಸೆಟ್‌ಗೆ ಜನಪ್ರಿಯ ನಟ ರಜನಿಕಾಂತ್ ಭೇಟಿ ಕೊಟ್ಟಿದ್ದಾರೆ.
ಚಂದ್ರಮುಖಿ 2, ತೇಜಸ್ ಸಿನಿಮಾಗಳ ಬಳಿಕ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ತಮ್ಮ ಹೊಸ ಪ್ರಾಜೆಕ್ಟ್ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಇಂದು ಕೆಲಸಗಳು ಆರಂಭವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ನಟಿ ತಮ್ಮ ಮುಂದಿನ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಇದೊಂದು 'ಅತ್ಯಂತ ಅಸಾಮಾನ್ಯ ಮತ್ತು ಅತ್ಯಾಕರ್ಷಕ' ಸ್ಕ್ರಿಪ್ಟ್‌ನ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಎಂದು ತಿಳಿಸಿದ್ದಾರೆ.
-
On our first day of the shoot God of Indian cinema Thalaivar himself thrilled us with a surprise visit on our set.
— Kangana Ranaut (@KanganaTeam) November 18, 2023
What a lovely day!! Missing Maddy @ActorMadhavan as he joins us soon ❤️ @Tridentartsoffc @rajinikanth @sanjayragh pic.twitter.com/DNE87M9Uru
ನಟಿ ಕಂಗನಾ ರಣಾವತ್ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಹಿಂದಿನ ತನು ವೆಡ್ಸ್ ಮನು ಚಿತ್ರದ ಸಹ-ನಟ ಆರ್ ಮಾಧವನ್ ಅವರೊಂದಿಗೆ ಮತ್ತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಆಗಮಿಸಿದ್ದು, ನಟಿಗೆ ಒಂದೊಳ್ಳೆ ಸರ್ಪ್ರೈಸ್ ಸಿಕ್ಕಂತಾಗಿದೆ.
ಮುಂದಿನ ಪ್ರಾಜೆಕ್ಟ್ ಬಗ್ಗೆ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ನಟಿ ಕಂಗನಾ ರಣಾವತ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. "ನಾವಿಂದು ಚೆನ್ನೈನಲ್ಲಿ ನಮ್ಮ ಹೊಸ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಶೂಟಿಂಗ್ ಪ್ರಾರಂಭಿಸಿದ್ದೇವೆ. ಇತರ ವಿವರಗಳನ್ನ ಶೀಘ್ರದಲ್ಲೇ ಕೊಡಲಿದ್ದೇವೆ. ಸದ್ಯ ಈ ಅಸಾಮಾನ್ಯ ಮತ್ತು ರೋಮಾಂಚಕ ಕಥೆಗೆ ನಿಮ್ಮೆಲ್ಲರ ಬೆಂಬಲ, ಆಶೀರ್ವಾದದ ಅಗತ್ಯವಿದೆ" ಎಂದು ಬರೆದಿದ್ದಾರೆ. ಚಿತ್ರೀಕರಣ ಶುಭಾರಂಭದ ಫೋಟೋವನ್ನೂ ಸಹ ಹಂಚಿಕೊಂಡು ಅಭಿಮಾನಿಗಳಿಂದ ಆಶೀರ್ವಾದ ಕೋರಿದ್ದಾರೆ. ಎ.ಎಲ್ ವಿಜಯ್ ನಿರ್ದೇಶನದ ಈ ಚಿತ್ರದಲ್ಲಿ ನಟ ಆರ್ ಮಾಧವನ್ ಕೂಡ ಇದ್ದಾರೆ.
ಬಳಿಕ ಸಿನಿಮಾ ದಿಗ್ಗಜ ರಜನಿಕಾಂತ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ಮೂಡಿಸಿದ್ದಾರೆ. ತಲೈವಾ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡ ನಟಿ, "ನಮ್ಮ ಚಿತ್ರೀಕರಣದ ಮೊದಲ ದಿನ 'ಭಾರತೀಯ ಚಿತ್ರರಂಗದ ದೇವರು ತಲೈವರ್' ಅವರೇ ನಮ್ಮ ಸೆಟ್‌ಗೆ ಸರ್ಪ್ರೈಸ್ ಭೇಟಿ ನೀಡಿ ನಮ್ಮನ್ನು ರೋಮಾಂಚನಗೊಳಿಸಿದರು. ಎಂಥ ಸುಂದರ ದಿನ. ಮ್ಯಾಡಿ ಮಿಸ್ ಯೂ. ನಟ ಆರ್ ಮಾಧವನ್ ಅವರು ಶೀಘ್ರದಲ್ಲೇ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ'' ಎಂದು ಬರೆದುಕೊಂಡಿದ್ದಾರೆ.
ಇನ್ನೂ ನಟಿ ಕಂಗನಾ ರಣಾವತ್ ಕೊನೆಯದಾಗಿ ಸರ್ವೇಶ್ ಮೇವಾರಾ ನಿರ್ದೇಶನದ 'ತೇಜಸ್' ಸಿನಿಮಾದಲ್ಲಿ ಕಾಣಿಸಿಕೊಂಡರು. ಅಕ್ಟೋಬರ್ 27 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಅದಕ್ಕೂ ಮುನ್ನ ಸೆಪ್ಟೆಂಬರ್ 28ರಂದು ಪಿ ವಾಸು ನಿರ್ದೇಶನದ ಚಂದ್ರಮುಖಿ 2 ತೆರೆಕಂಡಿತು. ರಾಘವ ಲಾರೆನ್ಸ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು ಈ ಚಿತ್ರ ಕೂಡ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಇನ್ನೂ ನಟಿಯ ಕೈಯಲ್ಲಿ ಎಮರ್ಜೆನ್ಸಿ ಸಿನಿಮಾ ಇದ್ದು, ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ.
