ETV Bharat / entertainment

ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಮಾಧುರಿ ದೀಕ್ಷಿತ್​ಗೆ 'ವಿಶೇಷ ಮನ್ನಣೆ'

author img

By ETV Bharat Karnataka Team

Published : Nov 21, 2023, 8:11 AM IST

International Film Festival of India: ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಬಾಲಿವುಡ್​ ನಟಿ ಮಾಧುರಿ ದೀಕ್ಷಿತ್ ಅವರಿಗೆ 'ವಿಶೇಷ ಮನ್ನಣೆ ಪ್ರಶಸ್ತಿ' ನೀಡಿ ಗೌರವಿಸಲಾಯಿತು.

54th IFFI
IFFI 2023: ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಮಾಧುರಿ ದೀಕ್ಷಿತ್​ಗೆ 'ವಿಶೇಷ ಮನ್ನಣೆ'

ಗೋವಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 54ನೇ ವರ್ಷದ ಇಂಟರ್​ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್​ ಆಫ್​ ಇಂಡಿಯಾ 2023ಕ್ಕೆ ಸೋಮವಾರ ಚಾಲನೆ ಸಿಕ್ಕಿದೆ. ಈ ಸಿನಿಮೋತ್ಸವದಲ್ಲಿ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಬಾಲಿವುಡ್​ ನಟಿ ಮಾಧುರಿ ದೀಕ್ಷಿತ್ ಅವರಿಗೆ 'ವಿಶೇಷ ಮನ್ನಣೆ ಪ್ರಶಸ್ತಿ'ಯನ್ನು ನೀಡಿ ಗೌರವಿಸಲಾಯಿತು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್​ ಠಾಕೂರ್​ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಡಾ.ಎಲ್.ಮುರುಗನ್​, ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಸಂತಸ ವ್ಯಕ್ತಪಡಿಸಿದ ಮಾಧುರಿ ದೀಕ್ಷಿತ್​, "ಈ ಪ್ರಶಸ್ತಿಯನ್ನು ಅತ್ಯಂತ ಗೌರವದಿಂದ ಸ್ವೀಕರಿಸುತ್ತೇನೆ. ಇಂತಹ ಪ್ರಶಸ್ತಿಗಳು ಯಾವಾಗಲೂ ನಮ್ಮನ್ನು ಪ್ರೋತ್ಸಾಹಿಸುತ್ತವೆ. ಇನ್ನಷ್ಟು ಉತ್ತಮ ಹಾಗೂ ಒಳ್ಳೆಯ ಕೆಲಸ ಮಾಡಲು ಸ್ಫೂರ್ತಿ ನೀಡುತ್ತವೆ" ಎಂದು ಹೇಳಿದರು.

ಅನುರಾಗ್​ ಠಾಕೂರ್​ ಶ್ಲಾಘನೆ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್​ ಠಾಕೂರ್ ಅವರು ಮಾಧುರಿ ದೀಕ್ಷಿತ್​ ಅವರ ನಟನಾ ಕೌಶಲ್ಯ ಮತ್ತು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. "ಮಾಧುರಿ ದೀಕ್ಷಿತ್​ ಯುಗಯುಗಾಂತರಕ್ಕೂ ಒಂದು ಐಕಾನ್​. ನಾಲ್ಕು ದಶಕಗಳಿಂದ ತಮ್ಮ ಅದ್ಭುತ ಮತ್ತು ಅಪ್ರತಿಮ ಪ್ರತಿಭೆಯೊಂದಿಗೆ ಪರದೆಯನ್ನು ಅಲಂಕರಿಸಿದ್ದಾರೆ. ನಿಶಾದಿಂದ ಹಿಡಿದು ಮನಮೋಹಕ ಚಂದ್ರಮುಖಿಯವರೆಗೆ, ಬೇಗಂ ಪಾರಾದಿಂದ ರಜ್ಜೋವರೆಗೆ, ಅವರ ಬಹುಮುಖ ಪ್ರತಿಭೆಗೆ ಯಾವುದೇ ಮಿತಿಯಿಲ್ಲ" ಎಂದು ತಿಳಿಸಿದರು.

  • An icon across the ages, @MadhuriDixit has graced our screens with unparalleled talent for four incredible decades.

    From the effervescent Nisha to the captivating Chandramukhi, the majestic Begum Para to the indomitable Rajjo, her versatility knows no bounds.

    Today, we are… pic.twitter.com/HlYUWHsWRY

    — Anurag Thakur (@ianuragthakur) November 20, 2023 " class="align-text-top noRightClick twitterSection" data=" ">

"ಇಂತಹ ಅಮೋಘ ನಟಿ ಮಾಧುರಿ ದೀಕ್ಷಿತ್​ ಅವರಿಗೆ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಗಾಗಿ ವಿಶೇಷ ಮನ್ನಣೆ ಪ್ರಶಸ್ತಿಯನ್ನು ನೀಡುವಾಗ ನಮಗೆ ಹೆಮ್ಮೆಯಾಗಿದೆ. ಅಸಾಧಾರಣ ಪ್ರಯಾಣದ ಆಚರಣೆ, ಶಾಶ್ವತ ಪರಂಪರೆಗೆ ಗೌರವ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

IFFI 2023: ನವೆಂಬರ್​ 20ರಿಂದ ಗೋವಾದಲ್ಲಿ ಬಹುನಿರೀಕ್ಷಿತ ಭಾರತೀಯ ಅಂತರರಾಷ್ಟ್ರೀಯ ಸಿನಿಮೋತ್ಸವ ಆರಂಭವಾಗಿದೆ. ಎಂಟು ದಿನಗಳ ಕಾಲ ನಡೆಯುವ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಬಾಲಿವುಡ್​ ನಟ, ನಿರ್ದೇಶಕರು ಮತ್ತು ಗಾಯಕರು ಭಾಗಿಯಾಗಲಿದ್ದು, ತಮ್ಮ ಕಲಾ ಪ್ರದರ್ಶನವನ್ನು ಕೂಡ ನೀಡಲಿದ್ದಾರೆ. 'ಪಠಾಣ್​​' ಚಿತ್ರದ 'ಜೂಮೆ ಜೋ ಪಠಾಣ್'​ ಹಾಡಿನ ಪ್ರದರ್ಶನ ಕೂಡ ನಡೆಯಲಿದೆ. ಪುಷ್ಪ ಚಿತ್ರದ 'ಸಾಮಿ ಸಾಮಿ' ಮತ್ತು ಆಸ್ಕರ್​ ವಿಜೇತ 'ನಾಟು ನಾಟು' ಹಾಡು ಕೂಡ ನೆರೆದವರನ್ನು ಮೋಡಿ ಮಾಡಲಿದೆ.

ನಟಿ ಶ್ರೀಯಾ ಶರಣ್​ 'ಹೂ ಅಂಟಾವಾ' ಮತ್ತು 'ರಾಕಿ ಔರ್​ ರಾಣಿ' ಚಿತ್ರದ 'ಜುಮಕಾ' ಹಾಡಿಗೆ ನಡು ಬಳುಕಿಸಲಿದ್ದಾರೆ. ನಟಿ ಮಾಧುರಿ ದೀಕ್ಷಿತ್​​ ತಮ್ಮದೇ ಜನಪ್ರಿಯ ಹಾಡುಗಳಾದ 'ಮಾರು ಡಾಲಾ', 'ಡೋಲಾ ರೆ ಡೋಲ್'​ ಮತ್ತು 'ಅಜಾ ನಚ್​ ಲೆ' ಹಾಡಿಗೆ ನೃತ್ಯ ಮಾಡಲಿದ್ದಾರೆ. ಪಂಕಜ್​ ತ್ರಿಪಾಠಿ ಕೂಡ ಪ್ರದರ್ಶನ ಮಾಡಲು ಸಜ್ಜಾಗಿದ್ದಾರೆ. ನಿರ್ದೇಶಕ ವಿರ್ಫ್​ ಸರ್ಕಾರಿ ನಿರ್ದೇಶನದ ತಮ್ಮ ಚಿತ್ರ 'ಕಡಕ್​ ಸಿಂಗ್'​ನ ಪರಿಚಯ ಮಾಡಲಿದ್ದು, ಕವನ ವಾಚಿಸಲಿದ್ದಾರೆ. ಗಾಯಕಿ ಶ್ರೇಯಾ ಘೋಷಲ್​ ಮತ್ತು ಶಾಂತನು ಮೊಯಿತ್ರ ಕೂಡ ಜೊತೆಯಾಗಲಿದ್ದಾರೆ.

ಇವರ ಹೊರತಾಗಿ ನಟ ಶಾಹೀದ್​​ ಕಪೂರ್​, ಹಿನ್ನೆಲೆ ಗಾಯಕ ಸುಖ್ವಿಂದರ್​ ಸಿಂಗ್​​ ಕೂಡ ಕಾರ್ಯಕ್ರಮ ಗಮನಿಸಲಿದ್ದಾರೆ. ಶಾಹೀದ್​​ ತಮ್ಮ ಹಿಟ್​​ ಚಿತ್ರಗಳಾದ 'ಜಬ್​ ವಿ ಮೆಟ್'​​, 'ನಗಡ ನಗಡ', 'ಕಮಿನೆ' ಮತ್ತು 'ಧನ್​ ತೆ ನಾ' ಚಿತ್ರದ ಹಾಡಿಗೆ ಪ್ರದರ್ಶನ ನೀಡಲಿದ್ದಾರೆ. ಇತ್ತ ಸುಖ್ವಿಂದರ್​ ಸಿಂಗ್​ ದೇಶ ಭಕ್ತಿ ಗೀತೆ 'ಹೇ ವತನ್​ ಹೇ ವತನ್'​ ಹಾಡಿನ ಮೂಲಕ ಮೋಡಿ ಮಾಡಲಿದ್ದಾರೆ. ನಟಿ ಸಾರಾ ಆಲಿಖಾನ್​ ಕೂಡ ಮನರಂಜಿಸಲಿದ್ದು, ನಟ ಸನ್ನಿ ಡಿಯೋಲ್​ ಕೂಡ ಇದೇ ಮೊದಲ ಬಾರಿಗೆ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.

ಇದನ್ನೂ ಓದಿ: 54th IFFI: ಗೋವಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಚಲನಚಿತ್ರೋತ್ಸವದ ಮಾಹಿತಿ ನಿಮಗಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.