ETV Bharat / entertainment

Raj Cup 2023: ಮತ್ತೆ ಶುರುವಾಗಲಿದೆ ಸಿನಿತಾರೆಗಳ ಕ್ರಿಕೆಟ್​ ಹಬ್ಬ; ಶೀಘ್ರದಲ್ಲೇ ಡಾ.ರಾಜ್ ಕಪ್ ಟೂರ್ನಿ

author img

By

Published : Jun 13, 2023, 1:51 PM IST

Raj Cup 2023
ಡಾ.ರಾಜ್ ಕಪ್ ಟೂರ್ನಿ

ಡಾ.ರಾಜ್ ಕಪ್ ಸೀಸನ್ 6ಗೆ ಮುಹೂರ್ತ ಫಿಕ್ಸ್ ಆಗಿದ್ದು, ಇದೇ ಜೂನ್ 17 ರಂದು ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಸ್ಯಾಂಡಲ್​ವುಡ್​ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ ಶುರುವಾಗ್ತಿದೆ. ಸಿಸಿಎಲ್ ಕ್ರಿಕೆಟ್ ಲೀಗ್ ಬೆನ್ನಲ್ಲೇ ಡಾ.ರಾಜ್ ಕಪ್ ಸೀಸನ್ 6ಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಇದಕ್ಕಾಗಿ ತಾರೆಯರು ತಯಾರಿ ಆರಂಭಿಸಿದ್ದಾರೆ. ಪುನೀತ್ ರಾಜ್​ಕುಮಾರ್ ಅವರ ಸ್ಮರಣಾರ್ಥವಾಗಿ ರಾಜ್ ಕಪ್ ಆಯೋಜಿಸಲಾಗಿದ್ದು, ಇದೇ ಜೂನ್ 17 ರಂದು ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ, ಆಯೋಜಕರಾದ ರಾಜೇಶ್ ಬ್ರಹ್ಮಾವರ, ಅನಿರುದ್ಧ್​, ಮಣಿಕಾಂತ್ ಕದ್ರಿ, ಸಿಂಪಲ್ ಸುನಿ, ರವಿಶಂಕರ್ ಗೌಡ, ಜೇಮ್ಸ್ ಚೇತನ್, ಪವನ್ ಒಡೆಯರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಈ ವೇಳೆ ರಾಜೇಶ್ ಬ್ರಹ್ಮಾವರ ಮಾತನಾಡಿ, "ಇದೇ 17ಕ್ಕೆ ದುಬೈನಲ್ಲಿ ರಾಜ್ ಕಪ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಕಳೆದ ಬಾರಿ 8 ತಂಡ ಇತ್ತು. ಈ ಬಾರಿ 12 ತಂಡಗಳಾಗಿವೆ. 1000ಕ್ಕೂ ಹೆಚ್ಚು ಅಪ್ಲೀಕೇಷನ್ ಬಂದಿತ್ತು. ಅವುಗಳಲ್ಲಿ ರೂಲ್ಸ್​​ಗೆ ತಕ್ಕಂತೆ ಆಯ್ಕೆ ಮಾಡಲಾಗಿದೆ. 12 ತಂಡಗಳಿಗೆ 12 ಕ್ಯಾಪ್ಟನ್, 12 ವೈಸ್ ಕ್ಯಾಪ್ಟನ್, ಸ್ಟಾರ್ ಕ್ಯಾಪ್ಟನ್ ಇರಲಿದ್ದಾರೆ. ರಾಜ್ ಕಪ್ ಸೀಸನ್ 6ನ್ನು ಆರು ದೇಶಗಳಲ್ಲಿ ಮಾಡುವ ಪ್ಲಾನ್ ನಡೆದಿದೆ. ಶ್ರೀಲಂಕಾ, ಸಿಂಗಾಪುರ್, ಮಲೇಷ್ಯಾ, ಬ್ಯಾಂಕಾಕ್ ಮತ್ತು ದುಬೈನಲ್ಲಿ ಪಂದ್ಯ ನಡೆಯಲಿವೆ. ಇನ್ನೊಂದು ದೇಶ ಬಾಕಿ ಉಳಿದಿದೆ. ದುಬೈನಲ್ಲಿ ನಡೆಯುವ ಆಟಗಾರರ ಹರಾಜಿನಲ್ಲಿ ಮುಖ್ಯ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಭಾಗಿಯಾಗಲಿದ್ದಾರೆ" ಎಂದು ತಿಳಿಸಿದರು.

ಬಳಿಕ ನಟ ಅನಿರುದ್ಧ್ ಮಾತನಾಡಿ, "ಡಾ.ರಾಜ್ ಕಪ್ ಹೆಸರಲ್ಲೇ ಸಕಾರಾತ್ಮಕತೆ ಇದೆ. ಆ ಒಂದು ವ್ಯಕ್ತಿಗೆ ಮಹಾನ್ ಕಲಾವಿದರಿಗೆ ಅವ್ರ ಹೆಸರಲ್ಲಿ ಅವರ ಸ್ಮರಣಾರ್ಥವಾಗಿ ಕ್ರಿಕೆಟ್ ಪಂದ್ಯಾವಳಿ ಆಡುತ್ತಿರುವುದು ನಿಜಕ್ಕೂ ಸಂತೋಷ. ಅದರಲ್ಲಿ ನಾನು ಭಾಗಿಯಾಗಿದ್ದು, ರಾಜೇಶ್ ಅವಕಾಶ ಕಲ್ಪಿಸಿಕೊಟ್ಟಿದ್ದು, ನನಗೆ ವೈಯಕ್ತಿಕವಾಗಿ ಬಹಳ ಸಂತೋಷವಾಗಿದೆ. ರಾಜೇಶ್ ನನಗೆ ಆತ್ಮೀಯರು. ನನ್ನ ಮೊದಲ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದೇವೆ. ಕ್ರಿಕೆಟ್ ಅನ್ನೋದು ನಿಮಿತ್ತ ಅಷ್ಟೇ. ನಮ್ಮ ಕನ್ನಡ ಚಿತ್ರರಂಗ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಬಾಂಧವ್ಯ ಇದೆ ಅನ್ನೋದನ್ನು ತೋರಿಸಿಕೊಡುತ್ತದೆ. ಈ ಪಂದ್ಯಾವಳಿ ಯಶಸ್ವಿಯಾಗಲಿ" ಎಂದು ಶುಭಹಾರೈಸಿದ್ರು.

ಡಾ.ರಾಜ್ ಕಪ್ ಸೀಸನ್ 6 ನಲ್ಲಿ ಒಟ್ಟು 12 ತಂಡಗಳು ಭಾಗಿಯಾಗಲಿದ್ದು, 27 ಮ್ಯಾಚ್​ಗಳು ನಡೆಯಲಿದೆ. ಡಾಲಿ ಧನಂಜಯ್, ಅನಿರುದ್ದ್, ಡಾರ್ಲಿಂಗ್ ಕೃಷ್ಣ , ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಪಾಲ್ಗೊಳ್ಳಲಿವೆ.

ಇನ್ನು, ರಾಜ್ ಕಪ್ ಸೀಸನ್ 6ರ ಲೀಗ್ ಮ್ಯಾಚ್ ಗಳು ವಿದೇಶದಲ್ಲಿ ನಡೆಯಲಿದೆ. ಈ ಬಾರಿ ಲೀಗ್ ಪಂದ್ಯಗಳು ಶ್ರೀಲಂಕಾ, ಸಿಂಗಾಪುರ್, ಮಲೇಷ್ಯಾ ಬ್ಯಾಂಕಾಕ್ ಮತ್ತು ದುಬೈನಲ್ಲಿ ನಡೆಯಲಿವೆ. ಈ ಮಹತ್ವದ ರಾಜ್ ಕಫ್ ಟೂರ್ನಿಗಾಗಿ ಸ್ಯಾಂಡಲ್​ವುಡ್ ತಾರೆಯರು, ತಂತ್ರಜ್ಞರು, ರಾಜಕಾರಣಿಗಳು, ಮಾಧ್ಯಮದವರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: Shivanna Meets CM Siddaramaiah: ಸಿಎಂ ಸಿದ್ದರಾಮಯ್ಯ ಭೇಟಿಯಾದ ನಟ ಶಿವರಾಜ್ ಕುಮಾರ್ ದಂಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.