ETV Bharat / entertainment

ಸಿನಿಮಾ ಲೋಕಕ್ಕೆ ಕಾಲಿಟ್ಟ ಬರಗೂರು ರಾಮಚಂದ್ರಪ್ಪನವರ ಮೊಮ್ಮಗ ಆಕಾಂಕ್ಷ್ ಬರಗೂರು

author img

By

Published : Apr 5, 2023, 8:12 PM IST

ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ತಾವೇ ರಚಿಸಿ, ನಿರ್ದೇಶಿಸಿರುವ ಚಿಣ್ಣರ ಚಂದ್ರ ಎಂಬ ಸಿನಿಮಾ ಮೂಲಕ ಮೊಮ್ಮಗ ಆಕಾಂಕ್ಷ್​ ಬರಗೂರು ಅವರನ್ನು ಬೆಳ್ಳಿ ತೆರೆಗೆ ಪರಿಚಯಿಸಲು ಸಿದ್ಧರಾಗಿದ್ದಾರೆ.

baraguru-ramachandrappas-grandson-akanksh-baraguru-acted-in-chinnara-chandra
ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿರುವ ಬರಗೂರು ರಾಮಚಂದ್ರಪ್ಪ ಮೊಮ್ಮಗ ಆಕಾಂಕ್ಷ್ ಬರಗೂರು

ಕನ್ನಡದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಕ್ಕಳ ಸಿನಿಮಾವೊಂದನ್ನು ಸದ್ದಿಲ್ಲದೆ ಸಿದ್ಧ ಮಾಡಿದ್ದಾರೆ. ತಮ್ಮ ರಚನೆಯ ‘ಅಡಗೂಲಜ್ಜಿ’ ಎಂಬ ಕಾದಂಬರಿ ಆಧರಿಸಿದ ಚಿತ್ರಕ್ಕೆ ಚಿಣ್ಣರ ಚಂದ್ರ ಎಂದು ಹೆಸರಿಡಲಾಗಿದೆ. ಬರಗೂರು ಮೊಮ್ಮಗ ಆಕಾಂಕ್ಷ್ ಬರಗೂರು ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಹಿಂದೆ ಬಯಲಾಟದ ಭೀಮಣ್ಣ ಮತ್ತು ತಾಯಿ ಕಸ್ತೂರ್ ಗಾಂಧಿ ಚಿತ್ರಗಳಲ್ಲಿ ಪುಟ್ಟ ಪಾತ್ರ ನಿರ್ವಹಿಸಿದ್ದ ಆಕಾಂಕ್ಷ್​​ ‘ಚಿಣ್ಣರ ಚಂದ್ರ’ ಚಿತ್ರದಲ್ಲಿ ನಾಯಕ ಪಾತ್ರ ನಿರ್ವಹಿಸಿದ್ದಾರೆ.

ಆಕಾಂಕ್ಷ್ ಬರಗೂರು ಜೊತೆಗೆ ಈಶಾನ್ ಪಾಟೀಲ್, ನಿಕ್ಷೇಪ್, ಅಭಿನವ್ ನಾಗ್, ಷಡ್ಜ ಹೆಗ್ಡೆ ಮುಂತಾದ ಬಾಲ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಹಿರಿಯ ಕಲಾವಿದರಾದ ಸುಂದರರಾಜ್, ರೇಖಾ, ರಾಧಾ ರಾಮಚಂದ್ರ ಅವರಲ್ಲದೆ ರಾಘವ್, ಸುಂದರರಾಜ ಅರಸು, ಹಂಸ, ವೆಂಕಟರಾಜು, ಗೋವಿಂದರಾಜು, ವತ್ಸಲಾ ಮೋಹನ್, ರಾಜಪ್ಪ ದಳವಾಯಿ ಮುಂತಾದ ಕಲಾವಿದರ ದಂಡೇ ಇದೆ.

baraguru-ramachandrappas-grandson-akanksh-baraguru-acted-in-chinnara-chandra
ಆಕಾಂಕ್ಷ್ ಬರಗೂರು ಮತ್ತು ಸಹ ಕಲಾವಿದರು

ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಜನ್ಮದಿನಕ್ಕೆ ಶುಭಾಶಯ ಕೋರಿದ ರಕ್ಷಿತ್​ ಶೆಟ್ಟಿ

ಚಿಣ್ಣರ ಚಂದ್ರ ಪ್ರಮುಖವಾಗಿ ಮಕ್ಕಳಿಗೆ ಅಗತ್ಯವಾದ ಉತ್ತಮ ಶಿಕ್ಷಣ, ಕ್ರೀಡೆ ಮುಂತಾದ ಆಶಯಗಳ ಜೊತೆಗೆ ಸಮಾನತೆ ಮತ್ತು ಸೌಹಾರ್ದತೆಯ ಸಂದೇಶ ನೀಡುತ್ತದೆ. ಈ ಸಿನಿಮಾದಲ್ಲಿ ಅಡಗೂಲಜ್ಜಿಯ ಪಾತ್ರದ ಮೂಲಕ ಮಕ್ಕಳಿಗೆ ಜನಪದ ಕತೆಗಳ ಪರಿಚಯವಾಗುತ್ತದೆ. ಊರಿಗೆ ಟೂರಿಂಗ್ ಟಾಕೀಸ್ ಬಂದು ಸಿನಿಮಾಗಳಿಂದ ಜನಪದ ಕತೆಗಳಿಗೆ ಧಕ್ಕೆ ಬರುತ್ತದೆ ಎಂದುಕೊಂಡಾಗ ಅಡಗೂಲಜ್ಜಿಯು ಸಿನಿಮಾ ಕತೆಗಳನ್ನೇ ಜನಪದ ಕತೆಗಳನ್ನಾಗಿಸಿ ಮಕ್ಕಳು ಮತ್ತು ಹಿರಿಯರಿಗೆ ಹೇಳುತ್ತಾಳೆ. ಈ ಮೂಲಕ ಕಥನದ ಮಹತ್ವದ ಜೊತೆಗೆ ಜಾನಪದವು ಆಧುನಿಕ ರೂಪ ಪಡೆಯುವ ಹೊಸ ವಿಧಾನವನ್ನು ನಿರೂಪಿಸಲಾಗಿದೆ. ಜಾನಪದಕ್ಕೆ ಅಂತ್ಯವಿಲ್ಲವೆಂದು ಧ್ವನಿಸಲಾಗಿದೆ. ಸಿನಿಮಾ ಕೂಡ ಒಂದು ಜಾನಪದವಾಗುವುದನ್ನು ಸಾಂಕೇತಿಕವಾಗಿ ಚಿತ್ರದಲ್ಲಿ ಹೇಳಲಾಗಿದೆ. ಮಕ್ಕಳು ಉತ್ತಮ ಅಭಿರುಚಿಯ ಸಿನಿಮಾಗಳಿಗಾಗಿ ಒತ್ತಾಯಿಸಿ ನೈತಿಕ ಮೌಲ್ಯವನ್ನು ಮೆರೆಯುತ್ತಾರೆ.

ಹೀಗೆ ಶಿಕ್ಷಣ, ಸಿನಿಮಾ, ಜನಪದ ಕಥನ ವಿಶಿಷ್ಟತೆಯನ್ನು ಈ ಸಿನಿಮಾದಲ್ಲಿ ಕಾಣಬಹುದು. ಚಿಣ್ಣರ ಚಂದ್ರ ಸಿನಿಮಾವನ್ನು ಶ್ರೀ ಗೋವಿಂದರಾಜ್ ಅಲಿಯಾಸ್ ಜಿಗಣಿ ರಾಜಶೇಖರ್ ಅವರು ನಿರ್ಮಾಣ ಮಾಡಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರು ಚಿತ್ರಕಥೆ, ಸಂಭಾಷಣೆ, ಗೀತರಚನೆ ಮಾಡಿ ಸಿನೆಮಾ ನಿರ್ದೇಶನ ಮಾಡಿದ್ದಾರೆ. ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಇದನ್ನೂ ಓದಿ : ಮಗನ ಮದುವೆಗೆ ಪ್ರಧಾನಿಯನ್ನು ಆಹ್ವಾನಿಸಿದ ಸಂಸದೆ ಸುಮಲತಾ ಅಂಬರೀಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.