ETV Bharat / entertainment

ಶ್ರೇಷ್ಠ ಸಾಹಿತಿ ರವೀಂದ್ರನಾಥ್​ ಠಾಗೋರ್​ ಪಾತ್ರದಲ್ಲಿ ಅನುಪಮ್​ ಖೇರ್​: ಹಿರಿಯ ನಟನ 538ನೇ ಸಿನಿಮಾ!

author img

By

Published : Jul 9, 2023, 10:54 AM IST

ಬಾಲಿವುಡ್​ ಖ್ಯಾತ ನಟ ಅನುಪಮ್​ ಖೇರ್​ ಅವರು ಖ್ಯಾತ ಬೆಂಗಾಲಿ ಸಾಹಿತಿ ರವೀಂದ್ರನಾಥ್​ ಠಾಗೋರ್​ ಅವರ ಪಾತ್ರದ ಕುರಿತ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

anupam-kher-to-play-rabindranath-tagore-role-in-his-538-film
ನೋಬೆಲ್​ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ರವೀಂದ್ರನಾಥ್​ ಠಾಗೋರ್​ ಪಾತ್ರದಲ್ಲಿ ಅನುಪಮ್​ ಖೇರ್​

ಬಾಲಿವುಡ್‌ನ ಖ್ಯಾತ ನಟ ಅನುಪಮ್​ ಖೇರ್​ ಅವರು ತಮ್ಮ ಹೊಚ್ಚ ಹೊಸ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ದಿ ಕಾಶ್ಮೀರ್​ ಫೈಲ್ಸ್ ಸಿನಿಮಾದಲ್ಲಿ ಮನೋಜ್ಞವಾಗಿ ನಟಿಸಿ ಮನೆ ಮಾತಾಗಿದ್ದ ಖೇರ್,​ ಇದೀಗ ತಮ್ಮ 538ನೇ ಸಿನಿಮಾದ ಬಗ್ಗೆ ಸುಳಿವು ನೀಡಿದ್ದಾರೆ.

ವಿಶೇಷ ಪಾತ್ರದ ಮೂಲಕ ಬಾಲಿವುಡ್​ ಲೋಕದಲ್ಲಿ ತಮ್ಮದೇ ಆದ ವಿಶಿಷ್ಠ ಛಾಪು ಮೂಡಿಸಿರುವ ಅನುಪಮ್​ ಖೇರ್​ ತಮ್ಮ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಸಿನಿಮಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಭಾರತ ರಾಷ್ಟ್ರಗೀತೆಯನ್ನು ರಚಿಸಿದ, ನೊಬೆಲ್​ ಪ್ರಶಸ್ತಿ ವಿಜೇತ ರವೀಂದ್ರನಾಥ್​ ಠಾಗೋರ್​ ಅವರ ಪಾತ್ರದ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ.

ಪೋಸ್ಟ್​ನಲ್ಲಿ, ಖೇರ್​ ಅವರು ರವೀಂದ್ರನಾಥ್​ ಠಾಗೋರ್ ಪಾತ್ರದ ವಿಡಿಯೋ ಲಗತ್ತಿಸಿದ್ದಾರೆ. ಇದರಲ್ಲಿ ಠಾಗೋರ್‌ ರೀತಿಯಲ್ಲಿಯೇ ಉಡುಪು ಧರಿಸಿದ್ದಾರೆ. ಇದರ ಜೊತೆಗೆ ಠಾಗೋರ್​ ಅವರ ರಚನೆಯ ಸೋಖಿಯ ಹಾಡಿನ ವಾದ್ಯಗಳ ಸಂಗೀತ ಪ್ರಕಟಿಸಿದ್ದಾರೆ.

ಟ್ವಿಟರ್​ನಲ್ಲಿ, "ನನ್ನ 538ನೇ ಪ್ರಾಜೆಕ್ಟ್‌ನಲ್ಲಿ ಗುರುದೇವರಾದ ರವೀಂದ್ರನಾಥ ಠಾಗೋರ್ ಅವರ ಪಾತ್ರವನ್ನು ಮಾಡುತ್ತಿದ್ದೇನೆ. ಸಿನಿಮಾದ ಬಗ್ಗೆ ಸೂಕ್ತ ಸಮಯದಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುತ್ತೇನೆ. ಗುರುದೇವನನ್ನು ತೆರೆಯ ಮೇಲೆ ಸಾಕಾರಗೊಳಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಚಿತ್ರದ ಕುರಿತ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.

ಯಾವುದೇ ಪಾತ್ರವನ್ನು ನೀಡಿದರೂ ಅದಕ್ಕೆ ಜೀವ ತುಂಬಬಲ್ಲ ಸಾಮರ್ಥ್ಯವನ್ನು ಖೇರ್​ ಹೊಂದಿದ್ದಾರೆ. ತಮ್ಮ ಅಭಿನಯ ಚಾತುರ್ಯಕ್ಕಾಗಿ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿರುವ ಅವರು, ಎಲ್ಲ ಪಾತ್ರಗಳನ್ನು ಸುಲಿಲತವಾಗಿ ನಿರ್ವಹಿಸುವುದನ್ನು ತೆರೆಯಲ್ಲಿ ಕಾಣಬಹುದು. ರವೀಂದ್ರನಾಥ್​ ಠಾಗೋರ್​ ಅವರ ಪಾತ್ರವು ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ರವೀಂದ್ರನಾಥ್​ ಠಾಗೋರ್​ ಅವರು​ ಖ್ಯಾತ ಬೆಂಗಾಲಿ ಸಾಹಿತಿ. ಬೆಂಗಾಲಿ ಸಾಹಿತ್ಯ ಸೇರಿದಂತೆ ಜಾಗತಿಕ ಸಾಹಿತ್ಯ ಪರಂಪರೆಗೆ ಅಪಾರ ಕೊಡುಗೆ ನೀಡಿದವರು. ಅಪಾರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ನೊಬೆಲ್​ ಪ್ರಶಸ್ತಿಯನ್ನೂ ನೀಡಲಾಗಿದೆ. ನೊಬೆಲ್​ ಪ್ರಶಸ್ತಿ ಪಡೆದ ಮೊದಲ ಯೂರೋಪ್‌ ಹೊರತಾದ ವ್ಯಕ್ತಿ ಎಂಬ ಹೆಗ್ಗಳಿಕೆ ಠಾಗೋರ್​ ಪಾತ್ರರಾಗಿದ್ದರು.

ಅನುಪಮ್​ ಖೇರ್ ಅವರು, ತಮ್ಮ ಬಹುನಿರೀಕ್ಷಿತ "ಎಮರ್ಜೆನ್ಸಿ" ಮತ್ತು "ದ ವಾಕ್ಸಿನ್​ ವಾರ್"​ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಶಿವರಾಜ್​ ಕುಮಾರ್​ ಅಭಿನಯದ ಘೋಸ್ಟ್​ ಸಿನಿಮಾದಲ್ಲಿಯೂ ಪಾತ್ರ ಮಾಡಿದ್ದಾರೆ. ಘೋಸ್ಟ್​ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಶ್ರೀನಿ, ಘೋಸ್ಟ್​ ಸೆಟ್​ನಲ್ಲಿ ಅನುಪಮ್​ ಖೇರ್​ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, "ನಿಮಗೆ ನಮ್ಮ ಊರಿಗೆ, ನಮ್ಮ ಸಿನಿಮಾಗೆ ಸ್ವಾಗತ" ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ : ಶಿವಣ್ಣನ 'ಘೋಸ್ಟ್'​ ಅಡ್ಡಕ್ಕೆ ಬಾಲಿವುಡ್​ ನಟ ಅನುಪಮ್​ ಖೇರ್​ ಎಂಟ್ರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.