ETV Bharat / entertainment

ಕಿಚ್ಚ ಸುದೀಪ್ ಸಿನಿ ಪಯಣಕ್ಕೆ 27 ವಸಂತ..ಪ್ಯಾನ್​ ಇಂಡಿಯಾ ಸ್ಟಾರ್​ ಜರ್ನಿ ಇಲ್ಲಿದೆ

author img

By

Published : Jan 31, 2023, 1:55 PM IST

1996 ಜನವರಿ 31ರಂದು ಆರಂಭವಾದ ಕಿಚ್ಚ ಸುದೀಪ್ ಸಿನಿ ಪಯಣಕ್ಕೆ 27 ವರ್ಷಗಳು ತುಂಬಿವೆ.

Actor Sudeep film journey
ಸುದೀಪ್ ಸಿನಿ ಪಯಣಕ್ಕೆ 27 ವರ್ಷಗಳು

ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಸಖತ್​ ಸ್ಟಾರ್ ಡಮ್ ಹೊಂದಿರುವ ಮಲ್ಟಿ ಟ್ಯಾಲೆಂಟೆಡ್ ನಟ ಎಂದರೆ ಅದು ಕಿಚ್ಚ ಸುದೀಪ್. ಅಭಿನಯ ಚಕ್ರವರ್ತಿ, ಕಿಚ್ಚ, ಬಾದ್ ಷಾ, ಹೆಬ್ಬುಲಿ, ಪೈಲ್ವಾನ್ ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಕನ್ನಡದ ಏಕೈಕ ನಟ ಇವರು. ಚಿತ್ರರಂಗದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಕಿಚ್ಚ ಸುದೀಪ್​ಗೆ ಇಂದು ವಿಶೇಷ ದಿನ. 1996 ಜನವರಿ 31ರಂದು ಕಂಠೀರವ ಸ್ಟುಡಿಯೋದಿಂದ ಆರಂಭವಾದ ಅವರ ಸಿನಿ ಪಯಣಕ್ಕೆ 27ವರ್ಷಗಳು ತುಂಬಿವೆ.

Actor Sudeep film journey
ಕಿಚ್ಚ ಸುದೀಪ್ ಸಿನಿ ಪಯಣಕ್ಕೆ 27 ವರ್ಷಗಳು

ಪ್ಯಾನ್ ಇಂಡಿಯಾ ಸ್ಟಾರ್: ಮಲೆನಾಡಿನ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ದೀಪು ಅಂದರೆ ಕಿಚ್ಚ ಸುದೀಪ್ ತಾನೊಬ್ಬ ಕ್ರಿಕೆಟ್ ಸ್ಟಾರ್ ಆಗಬೇಕು ಅಂತ ಕನಸು ಕಂಡಿದ್ದ ಹ್ಯಾಂಡ್​ಸಮ್ ಯುವಕ. ಆದ್ರೀಗ ಯಾವುದೇ ಸಿನಿಮಾ ಗಾಡ್ ಫಾದರ್ ಇಲ್ಲದೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿರೋದು ಇತಿಹಾಸ.

Actor Sudeep film journey
ಅಭಿನಯ ಚಕ್ರವರ್ತಿ ಸುದೀಪ್​

ಪ್ರತಿಭಾವಂತ ಕಲಾವಿದ: ಸುದೀಪ್​ ನಟನಾಗಿ,‌ ನಿರ್ದೇಶಕನಾಗಿ, ನಿರ್ಮಾಪಕನಾಗಿ, ಗಾಯಕನಾಗಿ, ನಿರೂಪಕನಾಗಿ ಮತ್ತು ಕ್ರಿಕೆಟ್ ಆಟಗಾರನಾಗಿ ಸಕ್ಸಸ್ ಕಂಡಿರುವ ಹೆಬ್ಬುಲಿ ಕನ್ನಡ ಚಿತ್ರರಂಗಕ್ಕೆ ಬಂದು ಎರಡುವರೆ ದಶಕಗಳಾಗಿದೆ. ಸದ್ಯ ಕಿಚ್ಚನ ಅಭಿಮಾನಿಗಳು 27ನೇ ವರ್ಷದ ಡಿಪಿ ರಿವೀಲ್ ಮಾಡುವ ಮೂಲಕ ತಮ್ಮ ಅಚ್ಚುಮೆಚ್ಚಿನ ನಟನಿಗೆ ಶುಭ ಹಾರೈಸುತ್ತಿದ್ದಾರೆ.

ಸುದೀಪ್​ ಸಿನಿ ಪಯಣ: ಕಿಚ್ಚನ ಸಿನಿ ಪಯಣದ ಹಲವು ಏಳು ಬೀಳುಗಳಿಂದ ಕೂಡಿತ್ತು‌. ಹೌದು, ಸುದೀಪ್ ಮೊದಲು ಬಣ್ಣ ಹಚ್ಚಿದ್ದು ಬ್ರಹ್ಮ ಚಿತ್ರಕ್ಕಾದರೂ, ಈ ಸಿನಿಮಾ ಪೂರ್ತಿಯಾಗಲಿಲ್ಲ. ನಂತರ 1997ರಲ್ಲಿ ತಾಯವ್ವ ಚಿತ್ರದಲ್ಲಿ ನಟಿಸುತ್ತಾರೆ. ಆದರೆ, ಇದು ಸುದೀಪ್​​​​ಗೆ ಹೇಳಿಕೊಳ್ಳುವಂತಹ ಹೆಸರು ನೀಡುವುದಿಲ್ಲ. ಬಳಿಕ ಪ್ರತ್ಯರ್ಥ ಚಿತ್ರ ಮಾಡ್ತಾರೆ. ಈ ಚಿತ್ರ ಕೂಡಾ ಬ್ರೇಕ್ ನೀಡಲಿಲ್ಲ. ಸುದೀಪ್ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿರುವ ಹಾಗೆ, ಸುದೀಪ್ ಅವರನ್ನು ಐರನ್ ಲೆಗ್ ಅಂತಾ ಕನ್ನಡ ಚಿತ್ರರಂಗದಲ್ಲಿ ಕರೆಯೋದಿಕ್ಕೆ ಶುರು ಮಾಡ್ತಾರೆ. ಆಗ ಸುದೀಪ್ ಚಿತ್ರರಂಗದ ಸಹವಾಸವೇ ಸಾಕು ಎಂದು ನಿರ್ಧರಿಸುತ್ತಾರೆ.

Actor Sudeep film journey
ಕನ್ನಡ ಚಿತ್ರರಂಗದ ನಟ ಸುದೀಪ್​

ಸ್ಪರ್ಶ ಸಿನಿಮಾ ಯಶಸ್ಸು: ಆ ಸಮಯದಲ್ಲಿ ಅವರಿಗೆ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಸ್ಪರ್ಶ ಸಿನಿಮಾ ಸ್ವಲ್ಪ ಮಟ್ಟಿಗೆ ಹೆಸರು ನೀಡುತ್ತದೆ. ಸುದೀಪ್ ತಂದೆ ಸಂಜೀವ್​​ ಸರೋವರ್ 1999ರಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ಬಜೆಟ್​​​ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದರು. ಕ್ಯೂಟ್ ಲವ್ ಸ್ಟೋರಿ ಜೊತೆ ಸುಂದರ ಹಾಡುಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದ್ದವು. ಸುದೀಪ್ ಮತ್ತು ರೇಖಾ ಕೆಮಿಸ್ಟ್ರಿ ಸಖತ್​ ವರ್ಕ್ ಔಟ್ ಆಗಿ ಈ ಸಿನಿಮಾ ಯಶಸ್ಸು ಕಾಣುತ್ತದೆ. ಆ ಕಾಲದಲ್ಲಿ ಸ್ಪರ್ಶ ಸಿನಿಮಾ ಸುಮಾರು 4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಕಿಚ್ಚನಿಗೆ ಸ್ಟಾರ್ ಪಟ್ಟ ತಂದುಕೊಡುತ್ತೆ. ಈ ಚಿತ್ರದಲ್ಲಿ ಆ್ಯಕ್ಟರ್, ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ಆಗಿ ಕೂಡಾ ಗುರುತಿಸಿಕೊಂಡರು.

ಹುಚ್ಚ ಸಿನಿಮಾ: ಸ್ಪರ್ಶ ಚಿತ್ರದ ಬಳಿಕ‌ ಸುದೀಪ್ ಸಿನಿಮಾ ಕೆರಿಯರ್ ಮಹತ್ವದ ತಿರುವು ನೀಡಿದ ಚಿತ್ರ ಹುಚ್ಚ. ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರ, 2001ರಲ್ಲಿ ತೆರೆ ಕಂಡು ಕಿಚ್ಚನ ಇಡೀ ಜೀವನ ಬದಲಿಸಿ ಬಿಡುತ್ತದೆ. ಹುಚ್ಚ ಚಿತ್ರದ ಮೂಲಕ ಇಡೀ ಕನ್ನಡನಾಡಿನ ಕನ್ನಡಿಗರಿಗೆ ಕಿಚ್ಚ ಪರಿಚಯ ಆದರು. ಈ ಚಿತ್ರದ ಅಭಿನಯ ನಿಜಕ್ಕೂ ಕಿಚ್ಚನಲ್ಲಿರೋ ಅಷ್ಟೂ ಪ್ರತಿಭೆಯನ್ನು ತೋರಿಸಿತ್ತು ಎಂದರೆ ತಪ್ಪಿಲ್ಲ. ಅಲ್ಲಿಂದ ಕಿಚ್ಚ ಸುದೀಪ್ ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ.

ದೊಡ್ಡ ಅಭಿಮಾನಿಗಳ ಬಳಗ: ಈ ಚಿತ್ರಗಳ ಬಳಿಕ ಸುದೀಪ್ ನಟನೆಯ ವೀರ ಮದಕರಿ, ಕೆಂಪೇಗೌಡ, ತೆಲುಗಿನ ಈಗ, ಮಾಣಿಕ್ಯ, ರನ್ನ, ಕೋಟಿಗೊಬ್ಬ 2, ಹೆಬ್ಬುಲಿ, ಪೈಲ್ವಾನ್, ವಿಕ್ರಾಂತ್ ರೋಣ ಸೇರಿದಂತೆ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಿಚ್ಚ ಅಭಿನಯಿಸಿ ವಿಶ್ವಾದ್ಯಂತ ದೊಡ್ಡ ಅಭಿಮಾನಿಗಳ ಬಳಗ ಹೊಂದಿದ್ದಾರೆ.

ಬಹುಭಾಷೆಗಳಲ್ಲಿ ನಟನೆ: ಇನ್ನೂ ಮೈ ಆಟೋಗ್ರಾಫ್, ವೀರಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ, ಮಾಣಿಕ್ಯ ಹೀಗೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿ ಕಿಚ್ಚ ಸಕ್ಸಸ್ ಕಾಣ್ತಾರೆ. ಇದರ ಜೊತೆಗೆ ಎಸ್.ಎಸ್. ರಾಜಮೌಳಿ ನಿರ್ದೇಶನದ "ಈಗ" ಚಿತ್ರ ಕನ್ನಡದ ಕಿಚ್ಚನ ಇಮೇಜ್ ಬದಲಿಸಿತ್ತು. ಕನ್ನಡಕ್ಕೆ ಮಾತ್ರ ಸೀಮಿತ ಆಗಿದ್ದ ಕಿಚ್ಚ ಸುದೀಪ್ 'ಈಗ' ಚಿತ್ರದ ಮೂಲಕ ಎಲ್ಲರಿಗೂ ಪರಿಚಯ ಆಗಿದ್ದರು. 'ಈಗ' ಚಿತ್ರ ಆದ್ಮೇಲೆ ಕಿಚ್ಚ ಸುದೀಪ್ ಬಾಹುಬಲಿ ಚಿತ್ರದಲ್ಲಿ ಅಸ್ಲಮ್ ಖಾನ್ ಪಾತ್ರದಲ್ಲಿ ಅಭಿನಯಿಸಿದ್ದರು.

ಕಿಚ್ಚ ಸುದೀಪ್ ಸಿನಿಮಾ ಜೀವನದಲ್ಲಿ ಬಾಲಿವುಡ್​ ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಕಿಚ್ಚ ಸುದೀಪ್ ಡೈರೆಕ್ಟರ್ ರಾಮ್​ಗೋಪಾಲ್​ ವರ್ಮಾ ಅವರ "ಫೂಂಕ್" ಚಿತ್ರದ ಮೂಲಕ ಬಾಲಿವುಡ್​ಗೂ ಎಂಟ್ರಿ ಕೊಟ್ಟರು. ಈ ಚಿತ್ರದ ಎರಡೂ ಸರಣಿಯ ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸಿದರು. ತೆಲುಗು ಆದ್ಮಲೇ ತಮಿಳಿನಲ್ಲಿ ವಿಜಯ್ ಹಾಗೂ ಬಾಲಿವುಡ್ ನಟಿ ಶ್ರೀದೇವಿ ಜೊತೆ ಕಿಚ್ಚ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಇನ್ನೂ ಅಭಿನಯ ಚಕ್ರವರ್ತಿ ಸುದೀಪ್ ಬಿಗ್ ಬಿ ಅಮಿತಾಭ್ ಅವರ ಜೊತೆಯೂ ಭೇಷ್ ಎನಿಸಿಕೊಂಡರು. ಬಳಿಕ ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಸಿನಿಮಾದಲ್ಲಿ ಕಿಚ್ಚ ಖಳನಟನಾಗಿ ಅಬ್ಬರಿಸಿದರು.

ಇದನ್ನೂ ಓದಿ: 'ದೀಪಿಕಾ ಅಮರ್​​, ಜಾನ್​ ಅಬ್ರಾಹಂ ಅಕ್ಬರ್​, ನಾನು ಅಂಥೋನಿ': ಪಠಾಣ್‌ ಬಗ್ಗೆ ಶಾರುಖ್​ ಒಗ್ಗಟ್ಟಿನ ವ್ಯಾಖ್ಯಾನ

ಹೀಗೆ ಸಿನಿಮಾ ರಂಗದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡು, ಕಷ್ಟದ ದಿನಗಳನ್ನು ಮೆಟ್ಟಿ ಸ್ಯಾಂಡಲ್​​ವುಡ್​ ಬಾದ್ ​ಷಾ ಎನಿಸಿಕೊಂಡಿರುವ ಕಿಚ್ಚ ಸುದೀಪ್ ಸಿನಿಮಾ ಜರ್ನಿಗೆ 27 ವರ್ಷ. ಈ ಖುಷಿಯನ್ನು ಕಿಚ್ಚ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನನ್ನ ಜರ್ನಿಯ ಯಶಸ್ಸಿನಲ್ಲಿ ಭಾಗಿಯಾಗಿರೋ ಪ್ರತಿಯೊಬ್ಬರಿಗ ನನ್ನ ಹೃದಯಪೂರ್ವಕ ಕೃತಜ್ಞತೆಗಳನ್ನು ಹೇಳುವ ಮೂಲಕ ಅವಿಸ್ಮರಣೀಯ ಕ್ಷಣಗಳು ಅಂತಾ ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.