ETV Bharat / city

ಶಿವಮೊಗ್ಗ ಜಿಲ್ಲೆಯಾದ್ಯಂತ ಮೆಕ್ಕೆಜೋಳ ನಾಶ, ರೈತ ಕಂಗಾಲು

author img

By

Published : Jul 28, 2022, 1:25 PM IST

Rain destroys maize
ಮಳೆಗೆ ಮೆಕ್ಕೆಜೋಳ ನಾಶ

ಜೋಳ ಬಿತ್ತಿ ಗಿಡ ಬೆಳೆಯುತ್ತಿದ್ದಂತೆ ಪ್ರಾರಂಭವಾದ ರಣ ಮಳೆಯಿಂದಾಗಿ ರೈತನ ಶ್ರಮ ನೀರಲ್ಲಿ ಕೊಚ್ಚಿಹೋಗಿದ್ದು, ಅಳಿದುಳಿದ ಬೆಳೆಯಿಂದಲೂ ಲಾಭ ಪಡೆಯುವ ಆಸೆಯನ್ನು ಕೈಬಿಡುವ ಪರಿಸ್ಥಿತಿ ಶಿವಮೊಗ್ಗ ಜಿಲ್ಲೆಯ ರೈತರದ್ದು.

ಶಿವಮೊಗ್ಗ: ಜುಲೈಯಲ್ಲಿ ಸುರಿದ ಮಳೆಗೆ ಜಿಲ್ಲೆಯಲ್ಲಿ ಮಳೆಗೂ ಮುನ್ನ ರೈತರು ಬಿತ್ತಿ ಅರ್ಧ ಅಡಿಯಷ್ಟು ಬೆಳೆದು ನಿಂತಿದ್ದ ಜೋಳದ ಗಿಡಗಳು ನಾಶವಾಗಿವೆ. ಅದಾಗಲೇ ಶೇ. 75ರಷ್ಟು ಬಿತ್ತನೆ ಕೆಲಸ ಮುಗಿಸಿದ್ದ ರೈತರೀಗ ಮಳೆ ನೀರಿನಿಂದ ಕೊಚ್ಚಿಹೋದ ಹಾಗೂ ಕೊಳೆತು ಹೋದ ಗಿಡಗಳನ್ನು ನೋಡಿ ತಲೆ ಮೇಲೆ ಕೈ ಇಡುವಂತಾಗಿದೆ. ಅಲ್ಪಸ್ವಲ್ಪ ಉಳಿದಿರುವ ಬೆಳೆಯೂ ಕಳೆಯಿಂದ ತುಂಬಿಹೋಗಿದ್ದು, ಚಿಂತೆಗೀಡು ಮಾಡಿದೆ.

ಶಿವಮೊಗ್ಗ ತಾಲೂಕು, ಶಿಕಾರಿಪುರ, ಸೊರಬ ಹಾಗೂ ಸಾಗರದ ಕೆಲವೆಡೆ ಅಧಿಕ ಪ್ರಮಾಣದಲ್ಲಿ ಜೋಳ ಬೆಳೆಯಲಾಗುತ್ತೆ. ಜೂನ್‌ ಕೊನೆಯ ವಾರ ಹಾಗೂ ಜುಲೈ ಮೊದಲ ವಾರ ಮಳೆ ನಿರೀಕ್ಷೆಯಲ್ಲಿ ಜೋಳ ಬಿತ್ತನೆಯಾಗಿದೆ. ಆದರೆ ವಾರದೊಳಗೆ ದಿಢೀರ್‌ ಆರಂಭವಾದ ಜಡಿಮಳೆ ಬೆಳೆ ನಾಶ ಮಾಡಿದೆ. ಶಿವಮೊಗ್ಗದ ಬಹುತೇಕ ಕೃಷಿ ಭೂಮಿ ಹಕ್ಕು ಪತ್ರಗಳು ಸಮಂಜಸವಾಗಿರದ ಕಾರಣ, ಸರ್ಕಾರದ ಬಿಡಿಗಾಸೂ ಕೂಡ ರೈತರಿಗೆ ಸಿಗುವುದಿಲ್ಲ.


ಅದಲ್ಲದೆ ರೈತರು ಬೆಳೆ ಹಾನಿಯಾದ ಭೂಮಿಯಲ್ಲಿ ಬದಲಿ ಬೇಸಾಯ ಮಾಡುವುದಕ್ಕೂ ಸಮಯ ಮೀರಿ ಹೋಗಿದೆ. ಅಳಿದುಳಿದ ಜೋಳದಿಂದ ಬೆಳೆ ಲಾಭ ನಿರೀಕ್ಷೆ ಮಾಡುವ ಸ್ಥಿತಿಯೂ ಅವರ ಪಾಲಿಗಿಲ್ಲದಾಗಿದೆ. ಶಿಕಾರಿಪುರದ, ಈಸೂರು, ಹಿತ್ಲಾ-ಕಲ್ಮನೆ, ಚುರ್ಚಿಗುಂಡಿ ಗ್ರಾಮಗಳ ಆಸುಪಾಸಿನಲ್ಲಿ ಸಾವಿರಾರು ಹೆಕ್ಟೇರ್‌ ಜೋಳ ನಾಶವಾಗಿದೆ. ಆದರೆ ಅಧಿಕಾರಿಗಳು ಯಾರೂ ಸಹ ಇತ್ತ ಕಡೆ ಸುಳಿದಿಲ್ಲ.

ಈಸೂರಿನ ರೈತ ಜಯಣ್ಣ ಮಾತನಾಡಿ, "ಶಿಕಾರಿಪುರದಲ್ಲಿ ಈ ವರ್ಷ ಮೆಕ್ಕೆಜೋಳ ಹಾಕಿದ ರೈತರೆಲ್ಲ ಕೈ ಸುಟ್ಟುಕೊಂಡಂತಾಗಿದೆ. ಈ ಸಲದ ಮಳೆಗೆ ಅರ್ಧ ಬೆಳೆ ಕೊಚ್ಚಿಕೊಂಡು ಹೋದರೆ ಇನ್ನರ್ಧ ಹುಲ್ಲು ಆವರಿಸಿಕೊಂಡು ಬಿಟ್ಟಿದೆ. ಅಳಿದುಳಿದ ಜೋಳವನ್ನೇ ಇಟ್ಟುಕೊಂಡು ಬದುಕಬೇಕು. ಪುನಃ ಅಳಿಸಿ ಜೋಳ ಬಿತ್ತಲು ಸಾಧ್ಯವಿಲ್ಲ. ಈ ಭಾಗದ ಹೊಲಗಳು ಮಳೆಯಾಶ್ರಿತ. ಸದ್ಯ ಹುಲುಸಾಗಿ ಬೆಳೆಯುತ್ತಿರುವ ಕಳೆಯನ್ನೂ ಸಹ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದರು.

"ಬೆಳೆಯ ಮಧ್ಯೆ ಹುಟ್ಟುವ ಮುಳ್ಳುಸೊಪ್ಪು ಎಂದು ಕರೆಯುವ ಕಳೆ ಬೆಳೆಗಳಿಗೆ ಮಾರಣಾಂತಿಕವಾದದ್ದು. ಯಾವುದೇ ಕಳೆನಾಶಕ ಹೊಡೆದರೂ ಅದು ನಿಯಂತ್ರಣಕ್ಕೆ ಬರೋದಿಲ್ಲ. ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಸಂಶೋಧಕರು ಮಲೆನಾಡಿಗೆ ಅಪ್ರಯೋಜಕರು. ಇದುವರೆಗೆ ಕಳೆ ನಾಶಕ್ಕೂ ಔಷಧ ಕಂಡು ಹಿಡಿದಿಲ್ಲ. ನಮ್ಮ ಹಕ್ಕು ಪತ್ರಗಳು ಸರಿ ಇರೋದಿಲ್ಲ. ತಂದೆ ಕಾಲದಿಂದಲೇ ದಾಖಲೆಗಳು ಹೆಚ್ಚು ಕಡಿಮೆಯಾಗಿರುತ್ತವೆ. ಹಾಗಾಗಿ ಅಧಿಕಾರಿಗಳೇ ಸ್ಥಳಕ್ಕೆ ಬಂದು ಸಮಸ್ಯೆ ಅರಿಯಬೇಕು ಹಾಗೂ ನಿಜವಾಗಿಯೂ ಬೆಳೆ ಕಳೆದುಕೊಂಡವರನ್ನು ಗುರುತಿಸಿ ಪರಿಹಾರ ನೀಡಬೇಕು" ಎಂದು ಜಯಣ್ಣ ಅಳಲು ತೋಡಿಕೊಂಡರು.

ಶಿವಮೊಗ್ಗ ಜಿಲ್ಲೆಯಲ್ಲಿ 2022ರ ಮುಂಗಾರು ಹಂಗಾಮಿನಲ್ಲಿ ಕಳೆದ ಒಂದು ವಾರದಲ್ಲಿ ಸರಾಸರಿ 183 ಮಿ.ಮೀ. ವಾಡಿಕೆ ಮಳೆಗೆ 288 ಮಿ.ಮೀ ಮಳೆಯಾಗಿದ್ದು, ಶೇಕಡಾ 58 ರಷ್ಟು ಹೆಚ್ಚು ಮಳೆಯಾಗಿದೆ. ವಿವಿಧ ಹಂತದಲ್ಲಿರುವ ಮೆಕ್ಕೆಜೋಳ ಬೆಳೆಗೆ ರೈತರಿಗೆ ಸಕಾಲದಲ್ಲಿ ಅಂತರ ಬೇಸಾಯ ಮತ್ತು ಯೂರಿಯಾ ಮೇಲುಗೊಬ್ಬರ ನೀಡಲು ಕೂಡ ಸಾಧ್ಯವಾಗಿಲ್ಲ.

ಇದನ್ನೂ ಓದಿ: ಬೆಳಗಾವಿಯಲ್ಲಿ ಮಳೆ ಆರ್ಭಟಕ್ಕೆ 37 ಮನೆ, 2 ಹೆಕ್ಟೇರ್ ಬೆಳೆ ನಾಶ: ಡಿಸಿ ನಿತೇಶ್ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.