ETV Bharat / city

ಶಿವಮೊಗ್ಗದಲ್ಲಿ ಮಳೆ ಆರ್ಭಟ : ಗದ್ದೆಗೆ ತೆರಳಿದ್ದ ವ್ಯಕ್ತಿ ಸಾವು, ರಾಜಕಾಲುವೆಯಲ್ಲಿ ಶಿಶುವಿನ ಶವ ಪತ್ತೆ

author img

By

Published : May 21, 2022, 9:25 AM IST

Updated : May 21, 2022, 12:08 PM IST

ಶಿವಮೊಗ್ಗದಲ್ಲಿ ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚು ಮಳೆಯಾಗಿದ್ದು, ಹಲವು ಅವಾಂತರಗಳನ್ನು ಸೃಷ್ಟಿಸಿದೆ..

MP Raghavendra city rounds in shivamogga due to rain
ಸಂಸದ ರಾಘವೇಂದ್ರ ಶಿವಮೊಗ್ಗ ಸಿಟಿ ರೌಂಡ್ಸ್

ಶಿವಮೊಗ್ಗ: ರಾಜ್ಯದಲ್ಲಿ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆ ಹಿನ್ನೆಲೆ ಹೊಲ, ಗದ್ದೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ. ಇದರ ಮಧ್ಯೆ ಗದ್ದೆಗೆ ತೆರಳಿದ್ದ ರೈತನೋರ್ವ ಸಾವನ್ನಪ್ಪಿದ್ದಾರೆ. ಆರ್​ಎಂಎಲ್ ಬಡಾವಣೆಯ ರಾಜಕಾಲುವೆಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.

ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವೆಡೆ ಸಮಸ್ಯೆ ಸೃಷ್ಟಿಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. ಶಿವಮೊಗ್ಗ ನಗರದ ಹಾನಿಗೊಳಗಾದ ಪ್ರದೇಶಗಳಿಗೆ ಸಂಸದರು ಭೇಟಿ ನೀಡಿ ಮಾತನಾಡಿದರು. 220 ಎಂಎಂ ಅಂದರೆ ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚು ಮಳೆಯಾಗಿದೆ. ಸ

ಹಜವಾಗಿ ತಗ್ಗು ಪ್ರದೇಶಗಳಲ್ಲಿ‌ ನೀರು ನುಗ್ಗಿದೆ. ನಗರದ 10 ವಾರ್ಡ್​ಗಳು ಜಲಾವೃತವಾಗಿವೆ. 4 ಸಾವಿರ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ಹಾನಿಯಾಗಿದೆ. ಈ ಹಿನ್ನೆಲೆ ಜಿಲ್ಲೆಯ ಎಲ್ಲಾ ಶಾಸಕರ ಜೊತೆ ಸಭೆ ನಡೆಸಲಾಗುವುದೆಂದು ತಿಳಿಸಿದರು.

ಶಿವಮೊಗ್ಗದಲ್ಲಿ ಮಳೆ ಆರ್ಭಟ..

ಶಿಕಾರಿಪುರ ತಾಲೂಕಿನಲ್ಲಿ 80 ಸಾವಿರ ಕ್ವಿಂಟಾಲ್ ಮೆಕ್ಕೆಜೋಳ ಹಾನಿಯಾಗಿದೆ. 1,500 ಹೆಕ್ಟೇರ್ ಬೆಳೆ ಹಾನಿಯಾಗಿದೆ. 150 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಜಿಲ್ಲಾಡಳಿತ, ಪಾಲಿಕೆ ಹಾಗೂ ಇತರೆ ಅಧಿಕಾರಿಗಳು ಕೇಂದ್ರ ಪ್ರದೇಶದಲ್ಲಿಯೇ ಇರಬೇಕು ಎಂದು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಅದರಂತೆ ಎಲ್ಲರೂ‌ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಸಂಸದರಿಂದ ಸಿಟಿ ರೌಂಡ್ಸ್ : ಪ್ರವಾಹ ಸ್ಥಳಗಳಿಗೆ ಸಂಸದರು, ಜಿಲ್ಲಾಧಿಕಾರಿ ಸೇರಿದಂತೆ ಮಹಾನಗರ ಪಾಲಿಕೆ ಆಯುಕ್ತರ ಜೊತೆಗೆ ಭೇಟಿ ನೀಡಿದಾಗ ಜನರು ಮಹಾನಗರ ಪಾಲಿಕೆ ಹಾಗೂ ಕಂದಾಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಜನರನ್ನು ಸಮಾಧಾನ ಪಡಿಸಲಾಯಿತು. ಪ್ರವಾಹದಿಂದ ಸಂತ್ರಸ್ತರಾದವರಿಗೆ ಆಹಾರ ಪೂಟ್ಟಣ ನೀಡಿದರು. ನಂತರ ಶಿಕಾರಿಪುರ ತಾಲೂಕಿನ ಹಾರೂಗೊಪ್ಪ, ಅತ್ತಿಬೈಲು, ಎಳನೀರುಕೊಪ್ಪ ಗ್ರಾಮಗಳಿಗೆ ಮುರುಗಣ್ಣನ ಕೆರೆ ಒಡೆದು ಹೋದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಗಂಜಿಕೇಂದ್ರ ಪರಿಶೀಲಿಸಿದ ಡಿಸಿ : ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಗಂಜಿ ಕೇಂದ್ರಕ್ಕೆ ತೆರಳಿ ಆಹಾರ ವ್ಯವಸ್ಥೆ ಬಗ್ಗೆ ಪರಿಶೀಲಿಸಿದ್ದಾರೆ. ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಲ್ಲಿಗೆನಗರ ಜಲಾವೃತವಾಗಿದ್ದ ಕಾರಣ ಅಲ್ಲಿನ ನಿವಾಸಿಗಳನ್ನು ಹೊಳೆಹೂನ್ನೂರು ಪಟ್ಟಣದ ಬಿಸಿಎಂ ಹಾಸ್ಟೆಲ್​ನ ಗಂಜಿ ಕೇಂದ್ರಕ್ಕೆ ರವಾನೆ ಮಾಡಲಾಗಿತ್ತು. 50ಕ್ಕೂ ಅಧಿಕ ಜನರು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅಡುಗೆ ಮನೆಗೆ ತೆರಳಿ ಪಾತ್ರೆಗಳನ್ನು ಪರಿಶೀಲಿಸಿದರು. ಗಂಜಿಕೇಂದ್ರದಲ್ಲಿ ಆಶ್ರಯ ಪಡೆದವರ ಬಳಿ ತೆರಳಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು.

shivamogga rain
ಸಾವನ್ನಪ್ಪಿದ ರೈತ

ಮಳೆಗೆ ಮೊದಲ ಬಲಿ : ಗದ್ದೆಗೆ ಹೋಗಿದ್ದ ರೈತನೋರ್ವ ಮಳೆಯ‌ ನೀರಿನಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ತೂದೂರು ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ಶಂಕರಪ್ಪ(57) ಮೃತರು. ಮನೆಗೆ ರಾತ್ರಿಯಾದರೂ ಬಾರದ ಕಾರಣ ಮನೆಯವರು ಹುಡುಕಿಕೊಂಡು ಹೋಗಿದ್ದು, ಶಂಕರಪ್ಪ ಸಾವನ್ನಪ್ಪಿರುವ ಬಗ್ಗೆ ತಿಳಿದಿದೆ. ತೂದೂರು ಗ್ರಾಮಕ್ಕೆ ತೀರ್ಥಹಳ್ಳಿ ತಹಶೀಲ್ದಾರ್ ಶ್ರೀಪಾದ್ ಅವರು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.

MP Raghavendra city rounds in shivamogga due to rain
ನವಜಾತ ಶಿಶುವಿನ ಶವ ಪತ್ತೆ

ನವಜಾತ ಶಿಶುವಿನ ಶವ ಪತ್ತೆ : ರಾಜಕಾಲುವೆಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿರುವ ಘಟನೆ ನಗರದ ಆರ್​ಎಂಎಲ್ ಬಡಾವಣೆಯಲ್ಲಿ ನಡೆದಿದೆ. ಅಂದಾಜು ಒಂದು ತಿಂಗಳ ಗಂಡು ನವಜಾತ ಶಿಶು ಎಂದು ತಿಳಿದು ಬಂದಿದೆ. ನಿನ್ನೆ ಸಂಜೆ ಆರ್​ಎಂಎಲ್ ನಗರದಲ್ಲಿ ಜಲಾವೃತಗೊಂಡ ಮನೆಗಳ ಸರ್ವೇ ಕಾರ್ಯವನ್ನು ಎಸ್​ಡಿಪಿಐ ನಗರ ಘಟಕ ನಡೆಸುವಾಗ ಎಸ್​ಡಿಪಿಐ ಕಾರ್ಯಕರ್ತರಿಗೆ ಸ್ಥಳೀಯ ಮಹಿಳೆಯೊಬ್ಬರು ಮಾಹಿತಿ ತಿಳಿಸಿದ್ದು, ಹುಡುಕಾಟ ನಡೆಸಿದಾಗ ಭಾರತ್ ಫೌಂಡ್ರಿ ಬಳಿಯ ರಾಜಕಾಲುವೆಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಭೇಟಿ‌ ನೀಡಿ, ಶಿಶುವಿನ ಶವವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಇದನ್ನೂ ಓದಿ: ಧಾರಾಕಾರ ಮಳೆಗೆ ಬೆಸ್ಕಾಂನ 4 ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬ, 261 ಟ್ರಾನ್ಸಫಾರ್ಮರ್​ಗಳಿಗೆ ಹಾನಿ

Last Updated : May 21, 2022, 12:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.